ಶುಕ್ರವಾರ, 24 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜಯನಗರ ಕಾಲದ ತಾಮ್ರಶಾಸನ ರಕ್ಷಣೆ

ಸಾದಲಿಯಲ್ಲಿ 2ನೇ ದೇವರಾಯರ ಕಾಲದ ತಾಮ್ರಶಾಸನ
ಡಿ.ಜಿ.ಮಲ್ಲಿಕಾರ್ಜುನ
Published 3 ಮೇ 2024, 6:34 IST
Last Updated 3 ಮೇ 2024, 6:34 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ಸಾದಲಿಯ ನಾಗೇಶ್ ಅವರ ಮನೆಯಲ್ಲಿ ಐತಿಹಾಸಿಕ ಮಹತ್ವವುಳ್ಳ ವಿಜಯನಗರದ ಎರಡನೇ ದೇವರಾಯರ ಕಾಲದ (ಕ್ರಿಶ.1432) ತಾಮ್ರಫಲಕಗಳಿದ್ದು, ಅವುಗಳನ್ನು ರಕ್ಷಣೆ ಮಾಡಿ, ಜತನದಿಂದ ನೋಡಿಕೊಳ್ಳಲಾಗುತ್ತಿದೆ.

ಮುಂದಿನ ಪೀಳಿಗೆಗೂ ಅವುಗಳ ಮಹತ್ವ ತಿಳಿಸಬೇಕೆಂಬ ನಾಗೇಶ್‌ ಅವರ ಕುಟುಂಬ ತಾಮ್ರ ಶಾಸನಗಳನ್ನು ಕಾಪಾಡುತ್ತಾ ಬಂಡಿದ್ದಾರೆ.

‘ನಮ್ಮ ಹಿರಿಯ ವಂಶಿಕ ಶ್ರೀರಂಗಭಟ್ಟರ ಮಗ ಚೊಕ್ಕಂಡಭಟ್ಟ ಅವರಿಗೆ ವಿಜಯನಗರದ ಅರಸರು ಕೊಟ್ಟಿರುವ ದಾನಶಾಸನವಿದು.ವಿಶೇಷವೆಂದರೆ, ಈ ತಾಮ್ರಶಾಸನವನ್ನು ಬರೆದು ಇವರ ಕುಟುಂಬದವರಿಗೆ ಸಂದಿರುವುದು ಸೂರ್ಯೋದಯದ ಸಮಯದಲ್ಲಿ, ಅದೂ ಸಾಕ್ಷಾತ್ ವಿರೂಪಾಕ್ಷನ ಸನ್ನಿಧಿಯಲ್ಲಿ!’ ಎನ್ನುತ್ತಾರೆ ಸಾದಲಿ ನಾಗೇಶ್. 

ಈ ದಾನಶಾಸನದಲ್ಲಿ ಉಲ್ಲೇಖಿತವಾಗಿರುವ ಹಾಗೆ ಇವರಿಗೆ ಮೂರು ಗ್ರಾಮಗಳನ್ನು ದಾನವಾಗಿ ನೀಡಲಾಗಿದೆ. ಮಲ್ಲಸಮುದ್ರ, ಕೊಮ್ಮಸಮುದ್ರ ಮತ್ತು ವರಸಮುದ್ರ ಈ ಮೂರು ಗ್ರಾಮಗಳ ಹೆಸರು. ಈಗ ಮಲ್ಲಸಮುದ್ರವನ್ನು ಮಲ್ಲಿಶೆಟ್ಟಿಹಳ್ಳಿ ಎನ್ನುವರು. ಕೊಮ್ಮಸಮುದ್ರವು ಕೊಮ್ಮಸಂದ್ರವಾಗಿದ್ದರೆ, ವರಸಮುದ್ರವು ವರಸಂದ್ರವಾಗಿದೆ. ಈ ತಿಮ್ಮಸಂದ್ರದಿಂದ ಕೋರ್ಲಪರ್ತಿಗೆ ಹೋಗುವ ರಸ್ತೆಯಲ್ಲಿ ಈ ಮೂರೂ ಗ್ರಾಮಗಳು ಸಿಗುತ್ತವೆ.

ಅಲ್ಲದೆ ಪುರೋಹಿತಕ್ಕೆ ಸಂಬಂಧಿಸಿದಂತೆ ಅವರಿಗೆ ನಿಗದಿಪಡಿಸಿರುವ ಪ್ರದೇಶದ ಬಗ್ಗೆಯೂ ಶಾಸನದಲ್ಲಿ ಬರೆಯಲಾಗಿದೆ. ವರ್ಲಕೊಂಡದಿಂದ ಪ್ರಾರಂಭವಾಗಿ ಮಿಟ್ಟೇಮರಿ, ಬುರುಡುಗುಂಟೆ, ಕುಂದಲಗುರ್ಕಿ, ಸಾದಲಿ ನಡುವೆ ಬರುವ ಎಲ್ಲಾ ಗ್ರಾಮಗಳ ಪೌರೋಹಿತ್ಯ ಸ್ವಾಮ್ಯವನ್ನು ಇವರಿಗೆ ವಹಿಸಿರುವುದಾಗಿ ಬರೆಯಲಾಗಿದೆ.

‘ನಮ್ಮ ತಾತನ ಹೆಸರು ಗಡಿಯಾರಂ ವೆಂಕಣ್ಣ ಎಂದು. ಶಾಸನ ಪಿತಾಮಹ ಎಂದೇ ಹೆಸರಾದ ಬ್ರಿಟಿಷ್ ಅಧಿಕಾರಿ ಬೆಂಜಮಿನ್ ಲೂಯಿಸ್ ರೈಸ್ ಅವರು 19ನೇ ಶತಮಾನದ ಆರಂಭದಲ್ಲಿ ರಾಜ್ಯದ ಎಲ್ಲಾ ಶಾಸನಗಳನ್ನು ಅಧ್ಯಯನ ಮಾಡಿದ್ದರು. 1905ರಲ್ಲಿ ರೈಸ್ ಅವರು, ಗಡಿಯಾರಂ ವೆಂಕಣ್ಣ ಅವರ ಬಳಿ ತಾಮ್ರ ಶಾಸನಗಳಿವೆ ಎಂದು ಎಪಿಗ್ರಾಫಿಕಾ ಕರ್ನಾಟಿಕಾದ ಹತ್ತನೇ ಸಂಪುಟದಲ್ಲಿ ದಾಖಲಿಸಿದ್ದಾರೆ. ಇವು ಒಟ್ಟು ಮೂರು ತಾಮ್ರಶಾಸನಗಳು. ಜೊತೆಯಲ್ಲಿ ವರಾಹ ಮುದ್ರೆ(ವಿಜಯನಗರ ಅರಸರ ಲಾಂಛನ) ಕೂಡ ಇದೆ. ನಮ್ಮ ವಂಶಸ್ಥರು ಈ ತಾಮ್ರ ಶಾಸನವನ್ನು ದೇವರ ಮನೆಯಲ್ಲಿ ಪೂಜನೀಯವಾಗಿಟ್ಟು ಕೊಂಡಿದ್ದೇವೆ’ ಎಂದು ಸಾದಲಿ ನಾಗೇಶ್ ವಿವರಿಸಿದರು.

ಮೂರು ತಾಮ್ರಶಾಸನಗಳು
ಮೂರು ತಾಮ್ರಶಾಸನಗಳು
ವರಾಹಮುದ್ರೆ
ವರಾಹಮುದ್ರೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT