ಭಾನುವಾರ, ಡಿಸೆಂಬರ್ 8, 2019
25 °C

ನಾನು ಯಾರಿಗೂ ಛತ್ರಿ ಹಿಡಿದಿಲ್ಲ: ಬಿಜೆಪಿ ವಿರುದ್ಧ ಗುಡುಗಿದ ಎಚ್‌ಡಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಈವರೆಗೆ ನಾನು ಛತ್ರಿ ಹಿಡಿದುಕೊಂಡು ಯಾರ ಮನೆ ಬಾಗಿಲಿಗೆ ಹೋಗಿಲ್ಲ. ಬದಲು, ನಿಮ್ಮ ಛತ್ರಿ ತೆರೆಯಿರಿ ಎಂದು ಕಾಂಗ್ರೆಸ್ ಮತ್ತು ಬಿಜೆಪಿಯವರೇ ನಮ್ಮ ಬಳಿಯೇ ಬಂದಿದ್ದರು’ ಎಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಅವರು ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಹೇಳಿಕೆಗೆ ತಿರುಗೇಟು ನೀಡಿದರು.

ನಗರದಲ್ಲಿ ಸೋಮವಾರ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ‘ಜೆಡಿಎಸ್‌ನವರು ಎಲ್ಲೆಂದರಲ್ಲಿ ಛತ್ರಿ ಹಿಡಿಯುತ್ತಾರೆ ಎಂದು ಶ್ರೀನಿವಾಸ್ ಪ್ರಸಾದ್ ಹೇಳಿದ್ದಾರೆ. ಆದರೆ ನಾವು ಅಂತಹ ಕೆಲಸ ಮಾಡಿಲ್ಲ. 2006ರಲ್ಲಿ ಸರ್ಕಾರ ರಚಿಸಲು ನಾನು ಯಡಿಯೂರಪ್ಪನ ಮನೆ ಬಾಗಿಲಿಗೆ ನಾನು ಹೋಗಿರಲಿಲ್ಲ. ಆಗ ಯಡಿಯೂರಪ್ಪ, ಶೋಭಾ ಕರಂದ್ಲಾಜೆಯವರು ನಮಗೆ ಸಚಿವ ಸ್ಥಾನ ಕೊಟ್ಟರೆ ಬಿಜೆಪಿಗೆ ರಾಜೀನಾಮೆ ಕೊಟ್ಟು ಬರುತ್ತೇವೆ ಎಂದಿದ್ದರು. ಆ ಸಮಯದಲ್ಲಿ ಸುಮಾರು 50 ಶಾಸಕರು ಬಿಜೆಪಿ ಬಿಡಲು ಸಿದ್ಧರಾಗಿದ್ದರು. ಅವತ್ತು ನಾನು ಮನಸ್ಸು ಮಾಡಿದ್ದರೆ ಬಿಜೆಪಿ ಹಾಳು ಮಾಡಬಹುದಿತ್ತು. ಆದರೆ ಅಂತಹ ಭಾವನೆ ನನ್ನಲ್ಲಿ ಇರಲಿಲ್ಲ’ ಎಂದು ಹೇಳಿದರು.

‘ಮುಖ್ಯಮಂತ್ರಿ ಯಡಿಯೂರಪ್ಪ ಅವರು ಜಾತಿ ರಾಜಕಾರಣ ಮಾಡುತ್ತಿದ್ದಾರೆ. ಆದರೆ ನಾನು ಅಂತಹ ಕೀಳುಮಟ್ಟದ ರಾಜಕಾರಣ ಮಾಡುವುದಿಲ್ಲ. ಗೋಕಾಕ್‌ನಲ್ಲಿ ಗೂಂಡಾಗಿರಿ ಮಾಡುವ ಅನರ್ಹ ಶಾಸಕರನ್ನು ಉಳಿಸಿಕೊಳ್ಳಲು ಯಡಿಯೂರಪ್ಪ ಅವರು ನನ್ನ ಪ್ರಾಣ ಬೇಕಾದರೂ ಕೊಡುತ್ತೇನೆ ಎಂದು ಹೇಳುತ್ತಿದ್ದಾರೆ. ಉತ್ತರ ಕರ್ನಾಟಕದಲ್ಲಿ ನೆರೆ ಬಂದು ಜನ ಬೀದಿಯಲ್ಲಿ ನಿಂತಾಗ ಯಡಿಯೂರಪ್ಪ ಅವರು ಸಂತ್ರಸ್ತರ ಕಣ್ಣೀರು ಒರೆಸಲಿಲ್ಲ, ಅವರಿಗಾಗಿ ಪ್ರಾಣ ಕೊಡುತ್ತೇನೆ ಎನ್ನಲಿಲ್ಲ. ಈಗ ಭ್ರಷ್ಟರನ್ನು ಉಳಿಸಿಕೊಳ್ಳಲು ಪ್ರಾಣ ತ್ಯಾಗ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ’ ಎಂದು ತಿಳಿಸಿದರು.

‘ಗೋಕಾಕ್‌ನಲ್ಲಿ ಸಾಹುಕಾರರು ಮತದಾರ ಸ್ವಾತಂತ್ರ್ಯ ಕಸಿದುಕೊಂಡಿದ್ದಾರೆ. ಅಲ್ಲಿನ ಜನ ಭಯದಿಂದ ಮನೆಯಿಂದ ಹೊರಗೆ ಬರಲು ಹೆದರುತ್ತಿದ್ದಾರೆ. ಸಾಹುಕಾರರ ಆಟಗಳನ್ನು ನೋಡಿ ಜನ ಬೇಸತ್ತಿದ್ದಾರೆ. ಈ ಬಾರಿ ಗೋಕಾಕ್‌ನಲ್ಲಿ ಗೆಲುವು ನಮ್ಮದೆ. ಅಲ್ಲಿ ಲಿಂಗಾಯುತ ಸಮುದಾಯದ ರೈತನ ಮಗನನ್ನು ನಾವು ಕಣಕ್ಕೆ ಇಳಿಸಿದ್ದೇವೆ. ಹಾಗಾಗಿ, ಡಿ.9 ರ ಬಳಿಕ ಬೆಳಗಾವಿಯಯಲ್ಲಿ ಹೊಸ ರಾಜಕೀಯ ಪ್ರಾರಂಭವಾಗಲಿದೆ’ ಎಂದು ಕುಮಾರಸ್ವಾಮಿ ವಿಶ್ವಾಸ ವ್ಯಕ್ತಪಡಿಸಿದರು.

‘ಹುಣಸೂರಿನಲ್ಲಿ ಒಬ್ಬ ಮಹಾಮೇಧಾವಿ ಇದ್ದಾನೆ. ಅವನೊಬ್ಬ ಹಳ್ಳಿಹಕ್ಕಿಯಂತೆ. ಅವರ ಕಥೆ ಕೇಳಿ ಬಿಟ್ಟರೆ ಊಟವೇ ಸೇರುವುದಿಲ್ಲ. ಇಂತಹ ವ್ಯಕ್ತಿಗಳನ್ನು ಬಿಜೆಪಿಗೆ ಸೇರಿಸಿಕೊಂಡು ಯಡಿಯೂರಪ್ಪ ರಾಜ್ಯ ಕಟ್ಟುತ್ತಾರಂತೆ’ ಎಂದು ವ್ಯಂಗ್ಯವಾಡಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು