ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ತ್ರೀಯರನ್ನು ಗೌರವಿಸಲು ಸಲಹೆ

ಎಸ್‌ಜೆಸಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮಹಿಳಾ ದಿನಾಚರಣೆ
Last Updated 9 ಮಾರ್ಚ್ 2021, 3:16 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಮಹಿಳೆಯರನ್ನು ಗೌರವಿಸುವುದು ಸಮಾಜದ ಕರ್ತವ್ಯ. ಮಹಿಳೆ ಸಮಾಜ ಮತ್ತು ಕುಟುಂಬಕ್ಕಾಗಿ ತನ್ನನ್ನು ಅರ್ಪಿಸಿಕೊಂಡಿದ್ದಾಳೆ ಎಂದು ಆದಿಚುಂಚನಗಿರಿ ಆಯುರ್ವೇದ ವೈದ್ಯಕೀಯ ಶಿಕ್ಷಣ ಕಾಲೇಜಿನ ಡಾ.ವೀಣಾ ನುಡಿದರು.

ನಗರದ ಎಸ್‌ಜೆಸಿ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸೋಮವಾರ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯಲ್ಲಿ ಮಾತನಾಡಿದ ಅವರು, ‘ಹೆಣ್ಣು ವಿವಿಧ ಪಾತ್ರಗಳನ್ನು ಬದುಕಿನಲ್ಲಿ ನಿರ್ವಹಿಸುತ್ತಾಳೆ’ ಎಂದರು.

ದುರ್ಗೆಯಾಗಿ, ಕಾಳಿಯಾಗಿ, ಪಾರ್ವತಿಯಾಗಿ, ಅನ್ನಪೂರ್ಣೆಯಾಗಿ ಬದುಕಿನ ನಾನಾ ಹಂತದಲ್ಲಿ ಜವಾಬ್ದಾರಿಯನ್ನು ಮಹಿಳೆಯರು ನಿರ್ವಹಿಸುವರು. ಕಿಶೋರಾವಸ್ಥೆಯಿಂದ ವೃದ್ಧಾಪ್ಯದವರೆಗೂ ವಿವಿಧ ರೀತಿಯ ಬದಲಾವಣೆಗಳನ್ನು ಅನುಭವಿಸುತ್ತಾಳೆ ಎಂದು ಹೇಳಿದರು.

ಮಹಿಳೆಯರು ಇಂದಿನ ದಿನಗಳಲ್ಲಿ ಎಲ್ಲ ಕ್ಷೇತ್ರಗಳಲ್ಲಿಯೂ ಕಾಲಿಟ್ಟಿದ್ದಾರೆ. ಅವರ ಸಾಧನೆಗೆ ಜಗತ್ತು ಬೆರಗಾಗಿದೆ. ಮಹಿಳೆಯ ಸಾಧನೆಯನ್ನು ವರ್ಣಿಸಲು ಅಸಾಧ್ಯ. ಪ್ರತಿ ಮಹಿಳೆಯೂ ದಿನದಲ್ಲಿ ಒಂದು ಗಂಟೆಯನ್ನಾದರೂ ತನಗಾಗಿ ಮೀಸಲಿಡಬೇಕು ಎಂದು ಕಿವಿಮಾತು ಹೇಳಿದರು. ‌‌

ಎಸ್‌ಜೆಸಿಐಟಿ ಪ್ರಾಂಶುಪಾಲ ಡಾ.ಜಿ.ಟಿ. ರಾಜು ಮಾತನಾಡಿ, ‘ಮಹಿಳೆಯರಿಗೆ ಅಗಾಧವಾದ ಸೈರಣೆಯ ಶಕ್ತಿ ಇರುತ್ತದೆ. ಎಲ್ಲ ಕ್ಷೇತ್ರಗಳಲ್ಲಿಯೂ ಸಾಧನೆಗೈಯುತ್ತಿರುವ ಅವರ ಶಕ್ತಿಯು ಪ್ರಶಂಸೆಗೆ ಪಾತ್ರವಾದುದು’ ಎಂದು ಹೇಳಿದರು.

ಮಹಿಳೆಯರನ್ನು ಗೌರವಿಸಲು ಒಂದು ದಿನ ಸಾಲದು. 365 ದಿನ ಗೌರವಿಸಬೇಕು ಎಂದರು.

ರೈತರಾದ ಗೌರಮ್ಮ, ದೇಶಕ್ಕೆ ಯೋಧರು ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ರೈತರು. ರೈತರನ್ನು ಗೌರವಿಸೋಣ. ಭೂಮಿಯನ್ನು ನಂಬಿ ಕೃಷಿ ಮಾಡಿದರೆ ದೇಶದ ಪ್ರಗತಿ ಸಾಧ್ಯ ಎಂದು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಇಂದಿರಾ ಕೆ., ಆರೋಗ್ಯ ಇಲಾಖೆಯ ಡಾ.ಎಸ್. ವಿಜಯ, ರೈತರಾದ ಗೌರಮ್ಮ, ಪೊಲೀಸ್ ಇಲಾಖೆಯ ಸುನೀತಾ, ಆಶಾ ಕಾರ್ಯಕರ್ತೆ ಪದ್ಮಾ, ಯುವ ಉದ್ಯಮಿ ಆರ್. ಅಂಕಿತಾ ಅವರನ್ನು ಕಾರ್ಯಕ್ರಮದಲ್ಲಿ
ಸನ್ಮಾನಿಸಲಾಯಿತು.

ಡಾ.ಎಸ್‌.ವಿ. ಮಧುಸೂಧನ್, ಜೆ. ಸುರೇಶ್‌, ಸತೀಶ್ ವೈ.ಎ., ಬಿ.ಎನ್‌. ಶೋಭಾ, ನಾಗೇಂದ್ರ ಕುಮಾರ್, ಟಿ. ಚಂದನ್, ಡಾ.ಸುಮಾ ಮತ್ತು ರೋಟರಿ ಸದಸ್ಯರು, ಎಲ್ಲ ವಿಭಾಗದ ಮುಖ್ಯಸ್ಥರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT