ಸೋಮವಾರ, ಮೇ 17, 2021
23 °C
‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಸಲಹೆ

ಜಯಂತಿಗಳ ಹಣ ಜನಕಲ್ಯಾಣಕ್ಕೆ ಬಳಕೆಯಾಗಲಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಸರ್ಕಾರ ಯಾವುದೇ ಜಯಂತಿಗಳನ್ನು ಆಚರಿಸುವ ಅಗತ್ಯವಿಲ್ಲ. ಜಯಂತಿಗಳಿಗಾಗಿ ಬಳಸುವ ಹಣವನ್ನೇ ನೀರು ಪೂರೈಕೆಗೆ, ಕೆರೆಗಳನ್ನು ಹೂಳೆತ್ತುವಂತಹ ಜನಕಲ್ಯಾಣ ಕೆಲಸಗಳಿಗೆ ಬಳಕೆ ಮಾಡಲಿ’ ಎಂದು ಸಾಣೇಹಳ್ಳಿ ತರಳಬಾಳು ಶಾಖಾ ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ಸಹಮತ ವೇದಿಕೆ ವತಿಯಿಂದ ನಗರದಲ್ಲಿ ಮಂಗಳವಾರ ಆಯೋಜಿಸಿದ್ದ ‘ಮತ್ತೆ ಕಲ್ಯಾಣ’ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸುತ್ತ ಅವರು ಮಾತನಾಡಿದರು.

‘ಹಿಂದೆ ಶರಣರು ಮತಿಯ ಸಾಮರಸ್ಯ ಉಳಿಸಿಕೊಂಡು ಬಂದಿದ್ದರು. ಆದರೆ ಸರ್ಕಾರಗಳು ಶರಣರಿಗೆ ಜಾತಿ ಲೇಪನ ಅಂಟಿಸುತ್ತ, ಜಾತಿಗೊಂದು ಜಯಂತಿ ಕೊಟ್ಟ ಪರಿಣಾಮ ಶರಣರು ಕಾಪಿಟ್ಟುಕೊಂಡು ಬಂದಿದ್ದ ಸಾಮರಸ್ಯ ಇಂದು ಉಳಿದಿಲ್ಲ. ಇವತ್ತು ಜಾತಿಗಳ ಉಲ್ಭಣಗಳಿಂದ ಮಾನವೀಯ ಸಂಬಂಧಗಳು ಕಳೆದು ಹೋಗುತ್ತಿವೆ. ಜನರು ಜಾತಿ ಶ್ರೇಷ್ಠತೆಯ ಅಹಂಕಾರ ಕಳೆದು ಒಂದಾಗಿ ಬಾಳುವ ಗುಣ ರೂಢಿಸಿಕೊಳ್ಳಬೇಕಿದೆ’ ಎಂದು ತಿಳಿಸಿದರು.

‘ಇವತ್ತು ವೈಜ್ಞಾನಿಕ ಯುಗದಲ್ಲಿ ಕೂಡ ಮನುಷ್ಯ ಮೌಢ್ಯದಿಂದ ಮುಕ್ತಿ ಹೊಂದಿಲ್ಲ. ಇಂದಿಗೂ ಮರ ಸುತ್ತುವುದು, ನೀರಲ್ಲಿ ಮುಳುಗುವುದು ಮುಂದುವರಿದಿದೆ. ಆದರೆ ನಮ್ಮ ವಿಚಾರ–ಆಚಾರಗಳ ನಡುವೆ ಹೊಂದಾಣಿಕೆ ಕಾಣುತ್ತಿಲ್ಲ. ಹೀಗಾಗಿ ನಾವು ಶರಣರ ಮಟ್ಟಕ್ಕೆ ಮುಟ್ಟಲು ಆಗುತ್ತಿಲ್ಲ. ಮೌಢ್ಯಗಳ ಬಗ್ಗೆ ವಿದ್ಯಾರ್ಥಿ ಸಮುದಾಯ ಎಚ್ಚೆತ್ತು ನೆರೆಹೊರೆಯವರಲ್ಲಿ ಅರಿವು ಮೂಡಿಸುವ ಕೆಲಸ ಮಾಡಬೇಕು’ ಎಂದರು.

‘ರಾಜ್ಯದಲ್ಲಿ ಅನೇಕ ಜಿಲ್ಲೆಯಲ್ಲಿ ಮಳೆ ಪ್ರವಾಹ ಪರಿಸ್ಥಿತಿ ನಿರ್ಮಿಸಿದ ಕಾರಣಕ್ಕೆ ಜನ, ಜಾನುವಾರಗಳು ಸತ್ತು ಜನರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಜನರು ಮನೆ, ದನಕರುಗಳು, ಪ್ರಾಣ ಕಳೆದುಕೊಂಡಿದ್ದಾರೆ. ಒಂದು ಹೊತ್ತಿನ ಊಟಕ್ಕೂ ಗತಿ ಇಲ್ಲದ ಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಂದರ್ಭದಲ್ಲಿ ಸಂಕಷ್ಟದಲ್ಲಿರುವವರಿಗೆ ಸ್ಪಂದಿಸುವ ಗುಣ ನಮ್ಮಲ್ಲಿ ಬರಬೇಕು. ಪುಣ್ಯದ ಕಾರ್ಯಕ್ಕೆ ನೆರವು ನೀಡುವ ಸಂಕಲ್ಪ ಪ್ರತಿಯೊಬ್ಬರೂ ಮಾಡಬೇಕು’ ಎಂದು ಹೇಳಿದರು.

‘ಕಲ್ಯಾಣ ಎಂದರೆ ಬರೀ ಮದುವೆಯಲ್ಲ. ನೋವಿನಲ್ಲಿರುವವರಿಗೆ ನೆರವು ನೀಡುವುದು, ಎಲ್ಲರೂ ಸಂತೋಷದಿಂದ ಬಾಳುವುದು, ಕತ್ತಲಲಲ್ಲಿ ಇರುವವರನ್ನು ಬೆಳಕಿನ ಕಡೆ ಕರೆದುಕೊಂಡು ಬರುವುದೇ ಕಲ್ಯಾಣ. ಈ ನಿಟ್ಟಿನಲ್ಲಿ 12ನೇ ಶತಮಾನದ ಶರಣರು ಅಜ್ಞಾನ ತೊಡೆಯುವ ಕೆಲಸ ಮಾಡಿದ್ದರು. ಇದೀಗ ಅಂತಹದೊಂದು ಧ್ಯೇಯದೊಂದಿಗೆ ಈ ಕಾರ್ಯಕ್ರಮ ನಡೆಯುತ್ತಿದೆ’ ಎಂದು ತಿಳಿಸಿದರು.

‘ಅಜ್ಞಾನ ನಿವಾರಣೆಗೆ ಶಾಲಾ, ಕಾಲೇಜುಗಳಿಗೆ ಸೇರಿದರೆ ಸಾಲದು. ಅಲ್ಲಿ ವಿದ್ಯೆ ಕಲಿಸಬಹುದು. ನಿಜವಾದ ಅರಿವು ಅನುಭವದಿಂದ ಮೂಡುತ್ತದೆ. ಅನುಭವ ಹೆಚ್ಚಿದಾಗ ವ್ಯಕ್ತಿತ್ವ ವಿಕಾಸವಾಗಿ ಎಲ್ಲರನ್ನೂ ನಮ್ಮಂತೆ ಕಾಣುವ ಭಾವನೆ ಬೆಳೆಯುತ್ತದೆ. ವಿದ್ಯಾರ್ಥಿಗಳು ಮುಖ್ಯವಾಗಿ ಪ್ರಶ್ನಿಸುವ ಗುಣ ಬೆಳೆಸಿಕೊಳ್ಳಬೇಕು’ ಎಂದರು.

ಜಚನಿ ಕಾಲೇಜಿನ ಆಡಳಿತಾಧಿಕಾರಿ ಶಿವಜ್ಯೋತಿ, ಆಂದೋಲನದ ಸಂಚಾಲಕ ಅನಂತನಾಯಕ್, ಮತ್ತೆ ಕಲ್ಯಾಣ ಚಿಕ್ಕಬಳ್ಳಾಪುರ ವೇದಿಕೆ ಸಮಿತಿ ಅಧ್ಯಕ್ಷ ನರಸಪ್ಪ, ಟಿ.ಆರ್.ಕೃಷ್ಣಪ್ಪ, ಎಂ.ಎ.ಮಂಜುನಾಥ್, ಮುನೀಂದ್ರ ಉಪಸ್ಥಿತರಿದ್ದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು