ಶನಿವಾರ, 13 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಪದವಿ ಕಾಲೇಜುಗಳಲ್ಲಿ ಉದ್ಯೋಗಾಧಾರಿತ ಕೋರ್ಸ್‌: ಎಂ.ಸಿ. ಸುಧಾಕರ್

Published 24 ಜೂನ್ 2024, 15:51 IST
Last Updated 24 ಜೂನ್ 2024, 15:51 IST
ಅಕ್ಷರ ಗಾತ್ರ

ಚಿಂತಾಮಣಿ: ಕೇಂದ್ರ ಸರ್ಕಾರದ ನಿವೃತ್ತ ಐಎಎಸ್ ಅಧಿಕಾರಿಗಳು ಸ್ಥಾಪಿಸಿರುವ ಕ್ರಿಸ್ಥ್‌ ಸಂಸ್ಥೆಯ ಮೂಲಕ ದೇಶದಲ್ಲೇ ಪ್ರಥಮವಾಗಿ ರಾಜ್ಯದ ಪದವಿ ಕಾಲೇಜುಗಳಲ್ಲಿ ಉದ್ಯೋಗಾಧಾರಿತ ಕೋರ್ಸ್‌ಗಳನ್ನು ತೆರೆದು, ಉನ್ನತ ಶಿಕ್ಷಣದಲ್ಲಿ ಕ್ರಾಂತಿಕಾರಿಕ ಬದಲಾವಣೆಯನ್ನು ಮಾಡಲಾಗುತ್ತಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ.ಸುಧಾಕರ್ ತಿಳಿಸಿದರು.

ಅವರು ನಗರದ ಪ್ರಥಮದರ್ಜೆ ಕಾಲೇಜು ಹಾಗೂ ಸ್ನಾತಕೋತ್ತರ ಕೇಂದ್ರದಲ್ಲಿ ಕಾಲೇಜು ಅಭಿವೃದ್ಧಿ ಸಮಿತಿ ಸಭೆಯ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.

ರಾಜ್ಯದಲ್ಲಿ 239 ಪದವಿ ಕಾಲೇಜುಗಳಲ್ಲಿ ಮೂರು ವರ್ಷಗಳ ಉದ್ಯೋಗಾಧಾರಿತ ಐಟಿ, ಇ-ಕಾಮರ್ಸ್, ಲಾಜಿಸ್ಟಿಕ್ಸ್ ಮತ್ತಿತರ ಹೊಸ ಕೋರ್ಸ್‌ಗಳನ್ನು ಕ್ರಿಸ್ಥ್ ಸಹಕಾರದಿಂದ ಪ್ರಾರಂಭಿಸಲಾಗುತ್ತಿದೆ. ಅಂತಿಮ ವರ್ಷದಲ್ಲಿ ತರಬೇತಿಯನ್ನು ನೀಡಲಾಗುತ್ತದೆ. ತರಬೇತಿ ಅವಧಿಯಲ್ಲಿ ₹ 11ರಿಂದ ₹ 17 ಸಾವಿರದವರೆಗೆ ಸ್ಟೈಫಂಡ್ ನೀಡಲಾಗುತ್ತದೆ. ತರಬೇತಿ ಪಡೆದವರಿಗೆ ಶೇ 100ಕ್ಕೆ 100ರಷ್ಟು ಉದ್ಯೋಗ ಲಭಿಸುತ್ತದೆ ಎಂದು ತಿಳಿಸಿದರು.

ಕೇಂದ್ರ ಸರ್ಕಾರದ ಶಿಕ್ಷಣ ಇಲಾಖೆಯ ನಿವೃತ್ತ ಕಾರ್ಯದರ್ಶಿ ಈ ಯೋಜನೆಯನ್ನು ರೂಪಿಸಿದ್ದಾರೆ. ಅದನ್ನು ಪ್ರಥಮವಾಗಿ ರಾಜ್ಯದಲ್ಲಿ ಅನುಷ್ಠಾನಗೊಳಿಸಲಾಗುತ್ತದೆ ಎಂದರು.

ನಗರದ ಕಾಲೇಜುಗಳಿಗೆ ಶೀಘ್ರದಲ್ಲೇ ನ್ಯಾಕ್ ಸಮಿತಿ ಭೇಟಿ ನೀಡಿ ವಿವಿಧ ಶೈಕ್ಷಣಿಕ ಹಾಗೂ ಇತರೆ ವಿಷಯಗಳ ಪರಿಶೀಲನೆ ನಡೆಸಿ ಗ್ರೇಡ್ ನೀಡುತ್ತದೆ. ಕಳೆದ ಬಾರಿ ’ಬಿ’ ಗ್ರೇಡ್ ಬಂದಿದೆ. ಈ ವರ್ಷ ‘ಎ’ ಗ್ರೇಡ್ ಅಥವಾ ‘ಬಿ’ ಪ್ಲಸ್ ಪಡೆಯಲು ಪ್ರಯತ್ನಗಳನ್ನು ನಡೆಸಲಾಗುತ್ತಿದೆ. ಗ್ರೇಡ್ ಅನ್ನು ಅನುಸರಿಸಿ ಯುಜಿಸಿಯಿಂದ ಹೆಚ್ಚಿನ ಅನುದಾನ ಪಡೆಯಲು ಅನುಕೂಲವಾಗುತ್ತದೆ ಎಂದು ಹೇಳಿದರು.

ಸುಮಾರು ₹ 11 ಕೋಟಿ ವೆಚ್ಚದಲ್ಲಿ ಬಾಕಿ ಇರುವ ಕಟ್ಟಡ ನಿರ್ಮಾಣಕ್ಕಾಗಿ ಟೆಂಡರ್ ಪ್ರಕ್ರಿಯೆ ನಡೆಯುತ್ತಿದೆ. ಒಂದು ತಿಂಗಳಿನಲ್ಲಿ ಕಾಮಗಾರಿಗೆ ಚಾಲನೆ ನೀಡಲಾಗುವುದು. ಉಳಿದ ಹಳೆಯ ಕಟ್ಟಡವನ್ನು ಬದಲಾಯಿಸಿ ನೂತನ ಕಟ್ಟಡವನ್ನು ಕಟ್ಟಲಾಗುವುದು. ಅಲ್ಲಿ ಗ್ರಂಥಾಲಯ, ಆಡಿಟೋರಿಯಂ ಸ್ಥಾಪಿಸಲಾಗುತ್ತದೆ. ಇಂದಿನ ಕಾಲಕ್ಕೆ ತಕ್ಕಂತೆ ನೂತನ ಆಧುನಿಕವಾದ ವಿಸ್ತೃತ ವಿನ್ಯಾಸವನ್ನು ರೂಪಿಸಲಾಗಿದೆ ಎಂದು ನುಡಿದರು.


ಶೈಕ್ಷಣಿಕ ವಿಷಯಕ್ಕೆ ಸಂಬಂಧಿಸಿದಂತೆ ಯಾವ ಯಾವ ವಿಭಾಗಕ್ಕೆ ಏನೇನು ಅವಶ್ಯಕತೆಯಿದೆ ಎಂಬುದನ್ನು ಚರ್ಚೆ ನಡೆಸಲಾಗಿದೆ. ಖಾಸಗಿ ಕಾಲೇಜುಗಳಂತೆ ಎಲ್ಲ ಸೌಲಭ್ಯಗಳನ್ನು ಒದಗಿಸುವ ಪ್ರಯತ್ನ ಮಾಡುತ್ತೇವೆ. ಸರ್ಕಾರ ಮತ್ತು ಖಾಸಗಿ ಉದ್ದಿಮೆಗಳ ಅನುದಾನವನ್ನು ಪಡೆಯಲಾಗುವುದು ಎಂದು ಮಾಹಿತಿ ನೀಡಿದರು.

ವಿಶ್ವೇಶ್ವರಯ್ಯ ಸಭಾಂಗಣವನ್ನು ಉದ್ಘಾಟಿಸಿದರು. ಕಾಲೇಜು ಅಭಿವೃದ್ಧಿ ಸಮಿತಿ ಸದಸ್ಯರು, ಪ್ರಾಂಶುಪಾಲರು ಭಾಗವಹಿಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT