ಶನಿವಾರ, ಮೇ 28, 2022
21 °C

ಕೊತ್ತನೂರಿನಲ್ಲಿ ಕಪಿಲಾ ಗೋವು ಸಾಕಣೆ: ಬಯಲುಸೀಮೆಗೆ ಬಂದ ಕೊಂಕಣ ಪ್ರದೇಶದ ತಳಿ

ಡಿ.ಜಿ.ಮಲ್ಲಿಕಾರ್ಜುನ Updated:

ಅಕ್ಷರ ಗಾತ್ರ : | |

Prajavani

ಶಿಡ್ಲಘಟ್ಟ: ‘ಕೊಂಕಣ ಕಪಿಲಾ’ ಭಾರತದ ಕೊಂಕಣ ಪ್ರಾಂತ್ಯದ ಹಸುವಿನ ತಳಿ. ಮಹಾರಾಷ್ಟ್ರ ಮತ್ತು ಗೋವಾ ರಾಜ್ಯದ ಕೊಂಕಣ ಪ್ರದೇಶ ಇದರ ಮೂಲ ಸ್ಥಾನವಾಗಿದೆ. ಕಪಿಲೆಯ ಹಾಲು, ಗೋಮೂತ್ರ, ಗೋಮಯ ಹೀಗೆ ಪ್ರತಿಯೊಂದೂ ಔಷಧೀಯ ಗುಣ ಹೊಂದಿದೆ.

ಇಂಥ ದೇಸಿ ತಳಿಯನ್ನು ಕೊತ್ತನೂರು ಪಂಚಾಕ್ಷರಿ ರೆಡ್ಡಿ ಅವರು ಸಾಕುತ್ತಿದ್ದಾರೆ. ಅದಕ್ಕೆ ‘ಶಾರ್ವರಿ’ ಎಂದು ಹೆಸರಿಟ್ಟು ಮನೆಯ ಮಗಳ ರೀತಿಯಲ್ಲಿ ಕಾಣುತ್ತಿದ್ದಾರೆ. ಮೂರು ವರ್ಷಗಳಿಂದ ಈ ಹಸು ಸಾಕುತ್ತಿದ್ದಾರೆ. ಈಗಾಗಲೇ, ಒಂದು ಗಂಡು ಕರುವನ್ನು ಹೆತ್ತಿರುವ ಈ ಆಕಳು ಈಗ ಮತ್ತೆ ಗರ್ಭಿಣಿಯಾಗಿದೆ.

ಕಪಿಲಾ ತಳಿಯ ಗೋವಿನ ಹಾಲನ್ನು ಅಮೃತಕ್ಕೆ ಹೋಲಿಸುತ್ತಾರೆ. ಈ ಕ್ಷೀರವು ವಾತ, ಪಿತ್ತ, ಕಫ ದೋಷ ನಿವಾರಿಸುವ ಸಾಮರ್ಥ್ಯ ಹೊಂದಿದೆ. ಕಪಿಲೆಯ ಹಾಲು ವಿವೇಕವನ್ನೂ, ಬುದ್ಧಿಯನ್ನೂ ಬೆಳೆಸುತ್ತದೆ. ಅಂಗಸೌಷ್ಟವ ವೃದ್ಧಿಗೂ ಸಹಕಾರಿಯಾಗಿದೆ ಎಂದು ‘ಕಪಿಲಾ ದರ್ಶನ’ ಪುಸ್ತಕದಲ್ಲಿ ವಿಶ್ವನಾಥ ಮಂ. ಭಟ್ಟ ವಿವರಿಸುತ್ತಾರೆ.

ಈ ತಳಿಯಲ್ಲಿರುವ ಗೌರಶಬಲಾ, ಗೌರಪಿಂಗಲಾ, ರಕ್ತಕಪಿಲಾ, ನೀಲಪಾಟಲಾ, ನೀಲಪಿಂಗಾಕ್ಷಿ, ರಕ್ತಪಿಂಗಲಾ, ಬಹುಪಿಂಗಾಕ್ಷಿ, ನೀಲರೋಹಿಣಿ, ಶ್ವೇತಪಿಂಗಾಕ್ಷಿ, ಶ್ವೇತಪಿಂಗಲಾ ಪ್ರಭೇದಗಳ ಸಚಿತ್ರ ಮಾಹಿತಿಯನ್ನೂ ಅವರು ನೀಡಿದ್ದಾರೆ.

ಕಪಿಲೆಯನ್ನು ಮಹಾಭಾರತದಲ್ಲಿ ‘ಯಥಾಹಿ ಗಂಗಾ ಸರಿತಾಂ ವರಿಷ್ಠಾ ತಥಾರ್ಜುನೀನಾಂ ಕಪಿಲಾ ವರಿಷ್ಠಾಣ’ ಎಂದು ವರ್ಣಿಸಲಾಗಿದೆ. ಅಂದರೆ ನದಿಗಳ ಪೈಕಿ ಗಂಗೆ, ಗೋವುಗಳ ಪೈಕಿ ಕಪಿಲೆ ಶ್ರೇಷ್ಠಳು ಎಂದರ್ಥ. ಶಿವನ ಹಣೆಗಣ್ಣಿನ ತೇಜಸ್ಸಿನ ಪ್ರಭಾವಕ್ಕೆ ಒಳಗಾಗಿ 10 ಬೇರೆ ಬೇರೆ ಬಣ್ಣದ ಕಪಿಲೆಗಳಾಗಿ ಕಾಣಿಸಿಕೊಂಡವು ಎಂದು ಶಾಸ್ತ್ರಗಳಲ್ಲಿ ವಿವರಿಸಲಾಗಿದೆ.

ಶಾಸ್ತ್ರಜ್ಞರು ನಿರ್ದಿಷ್ಟಪಡಿಸಿದ ಗೋವುಗಳ ಚರ್ಮದ ಬಣ್ಣವನ್ನಾಧರಿಸಿ ಏಳು ಕಪಿಲೆಗಳನ್ನೂ, ಅಂಗಗಳ ಮೇಲಿನ ಕಪಿಲನ್ನು ಆಧರಿಸಿ, ಚರ್ಮದ ರೋಮಗಳ ಬಣ್ಣವನ್ನು ಆಧರಿಸಿದ ಕಪಿಲಾ ಧೇನುಗಳು, ಅದೇ ರೀತಿ ಕಣ್ಣಿನ ಕಪಿಲತ್ವದ ಮೇಲೆ ಕೆಲವು ಕಪಿಲೆಗಳನ್ನು ಗುರುತಿಸಲಾಗಿದೆ.

ಗುಣಲಕ್ಷಣಗಳು: ಇವು ಬೇರೆ ಬೇರೆ ಬಣ್ಣಗಳನ್ನು ಹೊಂದಿದ್ದು ಮುಖ್ಯವಾಗಿ ಕೆಂಪು ಕಂದು ಅಥವಾ ಕೆಂಪುಕಪ್ಪು, ಬಿಳಿ–ಬೂದು ಹಾಗೂ ಮಿಶ್ರಬಣ್ಣಗಳಲ್ಲಿರುತ್ತವೆ. ಕೆಲವು ಕಂದು ಬಣ್ಣ ಅಥವಾ ನಸುಗೆಂಪು ಮಿಶ್ರಿತ ಕಂದು ಬಣ್ಣದಲ್ಲಿರುತ್ತವೆ. ಈ ಹಸುಗಳು ಸಣ್ಣಗಾತ್ರದಿಂದ ಮಧ್ಯಮ ಗಾತ್ರದ ದೇಹದ್ದಾಗಿರುತ್ತವೆ. ಮುಖ ನೇರವಾಗಿರುತ್ತದೆ. ಸಣ್ಣ ಗಾತ್ರದಿಂದ ಮಧ್ಯಮ ಗಾತ್ರದ ಡುಬ್ಬ ಮತ್ತು ಗೋಮಾಳೆ ಹೊಂದಿರುತ್ತವೆ. ಸಾಮಾನ್ಯವಾಗಿ ನೇರವಾದ ಮತ್ತು ಸಣ್ಣ ಗಾತ್ರದ ಕೊಂಬುಗಳಿದ್ದು, ಮೇಲ್ಮುಖವಾಗಿ ಮತ್ತು ಕೊಂಚ ಹಿಂಭಾಗಕ್ಕೆ ಬಾಗಿಕೊಂಡಿದ್ದು ಚೂಪಾಗಿರುತ್ತದೆ.

‘ಮೂರು ವರ್ಷಗಳ ಹಿಂದೆ ಕುಕ್ಕೆ ಸುಬ್ರಮಣ್ಯದ ಬಳಿಯ ಗುತ್ತಿಗಾರು ಗ್ರಾಮದಿಂದ ಕಪಿಲಾ ತಳಿಯ ಗೋವನ್ನು ತಂದಿದ್ದೇನೆ. ಜಿಲ್ಲೆಯಲ್ಲಿ ಬಹುತೇಕರು ಹೈನುಗಾರಿಕೆ ಅವಲಂಬಿಸಿದ್ದಾರೆ. ಅನುಕೂಲವಿರುವ ರೈತರು ಕನಿಷ್ಠ ಒಂದಾದರೂ ದೇಸಿ ತಳಿ ಹಸು ಹೊಂದಿರಬೇಕು’ ಎನ್ನುತ್ತಾರೆ ಕೊತ್ತನೂರು ಪಂಚಾಕ್ಷರಿ ರೆಡ್ಡಿ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು