ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಚಿಮುಲ್: ಕಾಂಗ್ರೆಸ್ ಶಾಸಕರಿಗೆ ಹಿನ್ನಡೆ

ಜಿಲ್ಲೆಯ ಹೈನುಗಾರರ ಬೇಡಿಕೆ ಈಡೇರಿಕೆ: ಬಿಜೆಪಿ ಮುಖಂಡರ ಪ್ರಶಂಸೆ
Last Updated 10 ನವೆಂಬರ್ 2021, 6:42 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಕೋಚಿಮುಲ್ ವಿಭಜಿಸಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ ರಚನೆಗೆ ಕೋಲಾರ ಮತ್ತು ಚಿಕ್ಕಬಳ್ಳಾಪುರ ಜಿಲ್ಲೆಯ ಕಾಂಗ್ರೆಸ್ ಶಾಸಕರು ಅಡ್ಡಿ ಮಾಡಿದ್ದರು. ಈಗ ಕೋಚಿಮುಲ್ ವಿಭಜನೆಯಾಗಿದ್ದು ಇದು ಕಾಂಗ್ರೆಸ್ ಶಾಸಕರಿಗಾದ ಸೋಲು ಎಂದು ಇಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಬಿಜೆಪಿ ಮುಖಂಡರು ಪ್ರತಿಪಾದಿಸಿದರು.

ಜಿಲ್ಲಾ ಬಿಜೆಪಿ ಅಧ್ಯಕ್ಷ ರಾಮಲಿಂಗಪ್ಪ ಮಾತನಾಡಿ,15 ವರ್ಷಗಳ ಹಿಂದೆ ಚಿಕ್ಕಬಳ್ಳಾಪುರ ಜಿಲ್ಲೆ ರಚನೆ ಆಯಿತು. ಅಂದಿನಿಂದಲೂ ಜಿಲ್ಲೆಯ ಕಷ್ಟಗಳಿಗೆ ಸಮಸ್ಯೆಗಳಿಗೆ ಯಾವ ರಾಜಕೀಯ ನಾಯಕರು ಸ್ಪಂದಿಸಲಿಲ್ಲ. ರಾಜಕೀಯ ವಿರೋಧಿಗಳು ಡಿಸಿಸಿ ಬ್ಯಾಂಕ್, ಕೋಚಿಮುಲ್ ವಿಭಜನೆ ಆಗಲು ಬಿಡಲಿಲ್ಲ ಎಂದು ಹೇಳಿದರು.

ಇಲ್ಲಿಯವರೆಗೆ ನಮಗೆ ಸಮರ್ಥ ನಾಯಕ ಸಿಕ್ಕಿರಲಿಲ್ಲ. ಆದ ಕಾರಣ ವಿಭಜನೆ ಸಾಧ್ಯವಾಗಲಿಲ್ಲ. ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅವರ ಅವಿರತ ಕೆಲಸದಿಂದ ಪ್ರತ್ಯೇಕಕ್ಕೆ ವಿರೋಧ ವ್ಯಕ್ತಪಡಿಸಿದ್ದ ಶಾಸಕರಾದ ಕೆ.ಆರ್.ರಮೇಶ್ ಕುಮಾರ್, ಶಿವಶಂಕರರೆಡ್ಡಿ ಅವರಿಗೆ ಸೋಲು ಆಗಿದೆ. ಅವರ ವಿರುದ್ಧದ ಸಮರದಲ್ಲಿ ಸುಧಾಕರ್ ಗೆಲುವು ಕಂಡಿದ್ದಾರೆ’ ಎಂದು ಹೇಳಿದರು.

ಕಾಂಗ್ರೆಸ್ ಶಾಸಕರಿಗೆ ಜನಸಾಮಾನ್ಯರಿಗೆ ಅನುಕೂಲ ಆಗಬೇಕು ಎನ್ನುವ ಉದ್ದೇಶ ಇಲ್ಲ. ಸುಧಾಕರ್ ಅವರು ರಾಜಕೀಯವಾಗಿಬೆಳೆಯಬಾರದು ಎನ್ನುವುದಷ್ಟೇ ಅವರ ಉದ್ದೇಶ. ಕಾಂಗ್ರೆಸ್ ನಾಯಕರು ಅಭಿವೃದ್ಧಿ ವಿರೋಧಿಗಳು ಎಂದು ಆರೋಪಿಸಿದರು.

ಜಿಲ್ಲೆಯಲ್ಲಿ ಸಾವಿರಾರು ಹೈನುಗಾರರು ತಮ್ಮ ಬದುಕಿಗೆ ಹಾಲು ಉತ್ಪಾದನೆಯನ್ನು ನೆಚ್ಚಿಕೊಂಡಿದ್ದಾರೆ. ಹೈನೋದ್ಯಮವನ್ನು ದೊಡ್ಡ ಮಟ್ಟದಲ್ಲಿ ಬೆಳೆಸಬೇಕು ಎನ್ನುವುದು ಸಚಿವ ಡಾ.ಕೆ.ಸುಧಾಕರ್ ಅವರ ಕನಸು. ಕೋಚಿಮುಲ್ ವಿಭಜನೆಗೆ ಸಹಕರಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಸಹಕಾರ ಸಚಿವ ಎಸ್‌.ಟಿ.ಸೋಮಶೇಖರ್ ಅವರಿಗೆ ಅಭಿನಂದನೆಗಳು ಎಂದು ಹೇಳಿದರು.

ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಮರಳುಕುಂಟೆ ಕೃಷ್ಣಮೂರ್ತಿ ಮಾತನಾಡಿ, ಈ ಭಾಗಕ್ಕೆ ಶಾಶ್ವತವಾಗಿ ಉಳಿಯುವ ಕೆಲಸಗಳನ್ನು ಮಾಡಬೇಕು ಎನ್ನುವ ದೃಷ್ಟಿಯಿಂದ ಸಚಿವರು ಕೆಲಸ ಮಾಡುತಿದ್ದಾರೆ. ವೈದ್ಯಕೀಯ ಶಿಕ್ಷಣ ಕಾಲೇಜು ತಂದರು. ಹಾಲು ಒಕ್ಕೂಟ ಮತ್ತು ಡಿಸಿಸಿ ಬ್ಯಾಂಕ್ ಪ್ರತ್ಯೇಕಕ್ಕೆ ಕಾಂಗ್ರೆಸ್ ಮುಖಂಡರು ವಿರೋಧ ಮಾಡಿದ್ದರು. ಆದರೆ ನಮ್ಮ‌ನಾಯಕರ ದಿಟ್ಟ ಹೋರಾಟದ ಕಾರಣದಿಂದ ಕೋಚಿಮುಲ್ ವಿಭಜನೆ ಆಗಿದೆ ಎಂದು ಹೇಳಿದರು.

ನ.18ರಂದು ಮುಖ್ಯಮಂತ್ರಿ ಹಾಗೂ ವಿವಿಧ ಸಚಿವರು ಜಿಲ್ಲೆಗೆ ಬರುತ್ತಿದ್ದಾರೆ. ಆ ಸಂದರ್ಭದಲ್ಲಿ ಜಿಲ್ಲೆಯ ರೈತರ ಪರವಾಗಿ ಅವರನ್ನು ಅಭಿನಂದಿಸಲಾಗುವುದು ಎಂದು ಹೇಳಿದರು.

ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ಮಂಡಳಿ ಅಧ್ಯಕ್ಷ ಕೆ.ವಿ.ನಾಗರಾಜ್ ಮಾತನಾಡಿ, ಅಭಿವೃದ್ಧಿ ವಿಚಾರಗಳಲ್ಲಿ ಪಕ್ಷ ರಾಜಕಾರಣವನ್ನು ತರಬಾರದು. ಕೋಚಿಮುಲ್ ವಿಭಜನೆಯನ್ನು ಕಾಂಗ್ರೆಸ್ ಮುಖಂಡರು ವಿರೋಧಿಸಿದ್ದರು. ಕೆಲವು ಅಧಿಕಾರಿಗಳು ವಿರೋಧಿಸಿದರೂಮೆಗಾ ಡೇರಿಗೆ ಯಡಿಯೂರಪ್ಪ ಅವರು 15 ಎಕರೆ ಜಮೀನು ಕೊಟ್ಟರು.‌ ಅವರು ಅಭಿವೃದ್ಧಿ ವಿಚಾರದಲ್ಲಿ ರಾಜಕೀಯ ಮಾಡಲಿಲ್ಲ. ರಮೇಶ್ ಕುಮಾರ್, ಶಿವಶಂಕರ ರೆಡ್ಡಿ ಸೇರಿದಂತೆ ಕಾಂಗ್ರೆಸ್ ಶಾಸಕರು ಅಭಿವೃದ್ಧಿ ವಿಚಾರದಲ್ಲಿಯೂ ರಾಜಕೀಯ ಮಾಡುತ್ತಿದ್ದಾರೆ ಎಂದು ದೂರಿದರು.

ಕೋಚಿಮುಲ್ ವಿಭಜನೆ ಸಂಬಂಧ ಈ ಹಿಂದಿನ ಎರಡು ಸಾಮಾನ್ಯ ಸಭೆಯಲ್ಲಿ ಸರ್ವಾನುಮತದಿಂದ ನಿರ್ಣಯ ಆಗಿತ್ತು. ಸಾಮಾನ್ಯ ಸಭೆಗೆ ಹೆಚ್ಚಿನ ಅಧಿಕಾರ ಇದೆ. ಯಾರೂ ವಿಭಜನೆ ತಪ್ಪಿಸಲು ಸಾಧ್ಯವಿಲ್ಲ. ಮುಂದಿನ ದಿನಗಳಲ್ಲಿ ಡಿಸಿಸಿ ಬ್ಯಾಂಕ್ ಸಹ ಪ್ರತ್ಯೇಕ ಆಗುತ್ತದೆ. ವಿಭಜನೆ ವಿರುದ್ಧಕಾನೂನು ಹೋರಾಟ ಮಾಡುತ್ತೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಕಾಂಗ್ರೆಸ್‌ನವರನ್ನು ಜನರು ಕ್ಷಮಿಸುವುದಿಲ್ಲ ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಕೇಶವರೆಡ್ಡಿ, ಕೋಚಿಮುಲ್ ವಿಭಜನೆಯಿಂದ ರೈತರಿಗೆ, ಹೈನುಗಾರರಿಗೆ ಅನುಕೂಲ ಆಗುತ್ತದೆ. ವಿಭಜನೆ ಜಿಲ್ಲೆಯ ರೈತರಿಗೆ ಹಿತವನ್ನು ತರಲಿದೆ ಎಂದು ಹೇಳಿದರು.

ಬಿಜೆಪಿ ವಕ್ತಾರ ರಮೇಶ್ ಬಾಯರಿ ಮಾತನಾಡಿದರು. ಬಿಜೆಪಿ ಮುಖಂಡರಾದ ‌ನಾರಾಯಣಸ್ವಾಮಿ, ಸತೀಶ್ ರೆಡ್ಡಿ, ರಾಮಣ್ಣ, ಬೈರೇಗೌಡ, ರಾಜಣ್ಣ, ಲಕ್ಷ್ಮಿನಾರಾಯಣ ಗುಪ್ತ, ಕಣಜೇನಹಳ್ಳಿ ಶ್ರೀನಿವಾಸ್ ಗೋಷ್ಠಿಯಲ್ಲಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT