ಬುಧವಾರ, 24 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಕೋಚಿಮುಲ್:₹130 ಕೋಟಿ ವೆಚ್ಚದ ಡಿಪಿಆರ್‌ಗೆ ಅನುಮೋದನೆ, ಮೆಗಾ ಡೇರಿಗೆ ಮತ್ತಷ್ಟು ಬಲ

Published 21 ಜೂನ್ 2024, 6:57 IST
Last Updated 21 ಜೂನ್ 2024, 6:57 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರದ ನಂದಿಕ್ರಾಸ್‌ನ ಮೆಗಾ ಡೇರಿ ಆವರಣದಲ್ಲಿ ಹಾಲು, ಮೊಸರು ಮತ್ತು ಸಿಹಿ ಉತ್ಪನ್ನಗಳ ಉತ್ಪಾದನಾ ಘಟಕ ನಿರ್ಮಾಣಕ್ಕೆ ಕಾಲ ಕೂಡಿದೆ. 

ಘಟಕ ನಿರ್ಮಾಣಕ್ಕೆ ಸಂಬಂಧಿಸಿದ ₹‌ 130 ಕೋಟಿ ವೆಚ್ಚದ ವಿಸ್ತೃತ ಯೋಜನಾ ವರದಿಗೆ (ಡಿಪಿಆರ್) ಇತ್ತೀಚೆಗೆ ನಡೆದ ಕೋಚಿಮುಲ್ ಸಭೆಯಲ್ಲಿ ಅನುಮೋದನೆ ದೊರೆತಿದೆ. 2023ರಲ್ಲಿ ಹಾಲಿನ ಪ್ಯಾಕೆಟ್ ಘಟಕ ನಿರ್ಮಿಸಲು ಕೋಲಾರ–ಚಿಕ್ಕಬಳ್ಳಾಪುರ ಹಾಲು ಒಕ್ಕೂಟವು (ಕೋಚಿಮುಲ್) ಡಿಪಿಆರ್ ಸಿದ್ಧಗೊಳಿಸಿತ್ತು.

ಚಿಕ್ಕಬಳ್ಳಾಪುರದಲ್ಲಿ ಮೆಗಾಡೇರಿ ನಿರ್ಮಾಣವಾಗಿ ದಶಕಗಳು ಕಳೆದ ನಂತರ ಹಾಲು ಪ್ಯಾಕಿಂಗ್ ಘಟಕ ನಿರ್ಮಾಣಕ್ಕೆ ನಿಶಾನೆ ದೊರೆತಿದೆ. ಈ ಮೂಲಕ ಜಿಲ್ಲೆಯ ಡೇರಿ ಚಟುವಟಿಕೆಗಳಿಗೆ ಹೆಚ್ಚಿನ ಬಲ ದೊರೆಯಲಿದೆ. ಕೋಚಿಮುಲ್ ವಿಭಜನೆ ಮತ್ತು ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ರಚನೆ ವಿಚಾರ ಬಂದಾಗ ಈ ಘಟಕ ನಿರ್ಮಾಣದ ವಿಚಾರಗಳು ಮುನ್ನಲೆಗೆ ಬರುತ್ತಿದ್ದವು.

2023ರ ನ.28ರಂದು ನಡೆದ ಕೋಚಿಮುಲ್ ಆಡಳಿತ ಮಂಡಳಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸಲಾಗಿತ್ತು. ಇದಕ್ಕೆ ಪೂರಕವಾಗಿ ಡಿಪಿಆರ್ ತಯಾರಿಸಿ ಮಂಡಿಸಲು ಸಹ ಸೂಚಿಸಲಾಗಿತ್ತು. ಆಡಳಿತ ಮಂಡಳಿಯ ನಿರ್ದೇಶನದಂತೆ ಚೆನ್ನೈನ ಖಾಸಗಿ ಸಂಸ್ಥೆಯೊಂದಕ್ಕೆ ಡಿಪಿಆರ್ ಸಿದ್ಧಗೊಳಿಸುವ ಜವಾಬ್ದಾರಿ ನೀಡಲಾಗಿತ್ತು.

ಮೆಗಾಡೇರಿಗೆ ಭೇಟಿ ನೀಡಿದ ತಾಂತ್ರಿಕ ಸಮಾಲೋಚಕರ ತಂಡ, ಅಧಿಕಾರಿಗಳ ಜೊತೆ ಚರ್ಚಿಸಿ ಯೋಜನಾ ವರದಿ ಸಿದ್ಧಗೊಳಿಸಿ ಕೋಚಿಮುಲ್‌ಗೆ ಸಲ್ಲಿಸಿತ್ತು.

ಪ್ರಸ್ತುತ ಕೋಲಾರ ಡೇರಿ ಆವರಣದಲ್ಲಿ ನಿರ್ಮಿಸುತ್ತಿರುವ ಎಂವಿಕೆ ಗೋಲ್ಡನ್ ಡೇರಿಯು ಕೋಲಾರ ಜಿಲ್ಲೆ ವ್ಯಾಪ್ತಿಯ ಮಾರುಕಟ್ಟೆ ಪರಿಮಾಣಕ್ಕೆ ಅನುಗುಣವಾಗಿ ನಿರ್ಮಿಸಲಾಗುತ್ತಿದೆ. ಚಿಕ್ಕಬಳ್ಳಾಪುರ ಜಿಲ್ಲೆ ವ್ಯಾಪ್ತಿಯ ಮಾರುಕಟ್ಟೆಗೆ ಸಂಬಂಧಿಸಿದಂತೆ ಮೆಗಾಡೇರಿಯಲ್ಲಿ ಯಾವುದೇ ಸೌಲಭ್ಯವಿಲ್ಲ. ಆದ್ದರಿಂದ ಒಕ್ಕೂಟದ ಮಾರುಕಟ್ಟೆ ಅಭಿವೃದ್ಧಿಗೆ ಅನುಗುಣವಾಗಿ ಉತ್ಪಾದನೆ ಕೈಗೊಂಡು ಸಕಾಲದಲ್ಲಿ ವಿತರಿಸಲು ‍ಪೂರಕವಾಗಿ ಮೆಗಾ ಡೇರಿ ಆವರಣದಲ್ಲಿ ನೂತನ ಪ್ಯಾಕಿಂಗ್ ಘಟಕ ಅಗತ್ಯ ಎಂದು ಕೋಚಿಮುಲ್ ತಿಳಿಸಿದೆ.

ಪ್ಯಾಕಿಂಗ್ ಘಟಕ ನಿರ್ಮಾಣಕ್ಕೆ ಜಾಗದ್ದೇ ಸಮಸ್ಯೆ ಆಗಿತ್ತು. ಮೆಗಾ ಡೇರಿ ಪಕ್ಕದಲ್ಲಿರುವ ತೋಟಗಾರಿಕಾ ಇಲಾಖೆಯಲ್ಲಿ ಜಮೀನು ಕೊಡುವಂತೆ ಜಿಲ್ಲೆಯ ಸಹಕಾರ ವಲಯ ಹಾಗೂ ಕೋಚಿಮುಲ್ ನಿರ್ದೇಶಕರು ಮುಖ್ಯಮಂತ್ರಿ ಮತ್ತು ಸಚಿವರಿಗೆ ಮನವಿ ಸಹ ಮಾಡಿದ್ದರು. ಆದರೆ ಈಗ ಮೆಗಾ ಡೇರಿ ಆವರಣದ ಪಿಳ್ಳಪ್ಪ ಅವರ ಪುತ್ಥಳಿ ಎದುರು ಒಂದೂವರೆಯಿಂದ ಎರಡು ಎಕರೆ ಜಾಗವಿದೆ. ಇಲ್ಲಿ ಘಟಕ ತಲೆ ಎತ್ತಲಿದೆ.

14 ಎಕರೆಯಲ್ಲಿ ನಿರ್ಮಾಣವಾಗಿರುವ ಮೆಗಾ ಡೇರಿಯಲ್ಲಿ ಟೆಟ್ರಾ ಪ್ಯಾಕ್, ಫ್ಲೆಕ್ಸಿ ಪ್ಯಾಕ್ ಘಟಕ, ತುಪ್ಪ ಮತ್ತು ಬೆಣ್ಣೆ ತಯಾರಿಕೆಯ ಘಟಕಗಳು ಮಾತ್ರ ಕಾರ್ಯನಿರ್ವಹಿಸುತ್ತಿವೆ. ಯಂತ್ರೋಪಕರಣಗಳನ್ನು ಅಳವಡಿಸಿದ್ದರೂ ಪನ್ನೀರ್ ಘಟಕ ಕಾರ್ಯನಿರ್ವಹಿಸುತ್ತಿಲ್ಲ. ಸಿಹಿ ತಿನಿಸು ತಯಾರಿಕೆ ಘಟಕಗಳು ಇಂದಿಗೂ ಕಾರ್ಯಾರಂಭವಾಗಿಲ್ಲ.

ಈಗ ₹ 130 ಕೋಟಿ ವೆಚ್ಚದಲ್ಲಿ ಸಿದ್ಧಗೊಳಿಸಿರುವ ಡಿಪಿಆರ್‌ನಲ್ಲಿ ಸಿಹಿ ಉತ್ಪನ್ನಗಳಾದ ಮೈಸೂರು ಪಾಕ್, ಪೇಡಾ ಸಿದ್ಧಗೊಳಿಸುವ ಘಟಕಗಳನ್ನು ಸಹ ನಿರ್ಮಿಸಲಾಗುತ್ತಿದೆ. ಈ ಮೂಲಕ ಜಿಲ್ಲೆಯಲ್ಲಿಯೇ ನಂದಿನಿ ಬ್ರಾಂಡ್‌ನ ಸಿಹಿ ಉತ್ಪನ್ನಗಳು ತಯಾರಾಗುತ್ತವೆ.

ಮೊಸರು, ಮಸಾಲ ಮಜ್ಜಿಗೆ, ನಿತ್ಯ ಜನರು ಬಳಸುವ ಹಾಲಿನ ಪ್ಯಾಕೆಟ್‌ಗಳನ್ನು ಸಹ ಇಲ್ಲಿ ಸಿದ್ಧಗೊಳಿಸಬಹುದು. ಅಲ್ಲದೆ ಭವಿಷ್ಯದ ಮತ್ತು ದೂರದೃಷ್ಟಿಯ ಕಾರಣದಿಂದ ಘಟಕಗಳ ಸಾಮರ್ಥ್ಯವನ್ನು ವಿಸ್ತರಿಸಲು ಡಿಪಿಆರ್‌ನಲ್ಲಿ ಅವಕಾಶಗಳಿವೆ.

ವಿಭಜನೆಗೆ ಪೂರಕ: ಕೋಚಿಮುಲ್ ವಿಭಜಿಸಿ ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (ಚಿಮುಲ್) ರಚನೆಯು ತರಾತುರಿಯಲ್ಲಿ ಆಗಬಾರದು. ಮೆಗಾ ಡೇರಿಯಲ್ಲಿ ಎಲ್ಲ ಸೌಲಭ್ಯಗಳನ್ನು ಹೊಂದಿದ ನಂತರವೇ ಚಿಕ್ಕಬಳ್ಳಾಪುರಕ್ಕೆ ಪ್ರತ್ಯೇಕ ಒಕ್ಕೂಟ ರಚಿಸಬೇಕು ಎಂದು ಕಾಂಗ್ರೆಸ್ ಬೆಂಬಲಿತ ನಿರ್ದೇಶಕರು ಈ ಹಿಂದಿನಿಂದಲೂ ಪ್ರತಿಪಾದಿಸುತ್ತಿದ್ದರು. ಹಾಲಿನ ಪ್ಯಾಕೆಟ್ ಘಟಕ ನಿರ್ಮಿಸಿದ ನಂತರವೇ ವಿಭಜಿಸಬೇಕು ಎಂದು ವಾದಿಸುತ್ತಿದ್ದರು.

ಹಾಲಿನ ಪ್ಯಾಕಿಂಗ್ ಘಟಕ ನಿರ್ಮಾಣದಿಂದ ಮೆಗಾಡೇರಿಗೆ ನಿತ್ಯವೂ ಉತ್ತಮ ಆದಾಯ ದೊರೆಯುತ್ತದೆ. ಈಗ ಪ್ಯಾಕಿಂಗ್ ಘಟಕಕ್ಕೆ ಡಿಪಿಆರ್ ಸಿದ್ಧಗೊಳಿಸಿರುವುದು ಮತ್ತು ಅನುಮೋದನೆ ದೊರೆತಿರುವುದು ಮುಂದಿನ ದಿನಗಳಲ್ಲಿ ಚಿಮುಲ್ ರಚನೆಯ ಆಶಾವಾದ ಗರಿಗೆದರುವಂತೆ ಮಾಡಿದೆ. 

ಮೆಗಾಡೇರಿ ಆವರಣದ ಪಿಳ್ಳಪ್ಪ ಪುತ್ಥಳಿ ಮುಂಭಾಗದ ಜಾಗದಲ್ಲಿ ನಿರ್ಮಾಣ ಚೆನ್ನೈ ಖಾಸಗಿ ಸಂಸ್ಥೆಯಿಂದ ಡಿಪಿಆರ್ ಸಿದ್ಧ ಹಾಲಿನ ಪ್ಯಾಕಿಂಗ್ ಘಟಕದಿಂದ ಉತ್ತಮ ಆದಾಯ
‘ವಿಭಜನೆಯ ದೃಷ್ಟಿ; ಘಟಕ ಅಗತ್ಯ’
ಮೆಗಾ ಡೇರಿ ಆರಂಭವಾದ ದಿನದಿಂದ ಇಲ್ಲಿಯವರೆಗೆ ಹಾಲಿನ ಪ್ಯಾಕೆಟ್ ಘಟಕವಿಲ್ಲ. ಈ ಕಾರಣದಿಂದಲೇ ವಿಭಜನೆಗೆ ಪ್ರಮುಖ ತೊಂದರೆ ಆಗಿತ್ತು ಎಂದು ಚಿಕ್ಕಬಳ್ಳಾಪುರ ಕೋಚಿಮುಲ್ ನಿರ್ದೇಶಕ ಎನ್.ಸಿ.ವೆಂಕಟೇಶ್ ‘ಪ್ರಜಾವಾಣಿ’ಗೆ ತಿಳಿಸಿದರು. ಡಿಪಿಆರ್‌ಗೆ ಅನುಮೋದನೆ ದೊರೆತಿದೆ. ಮುಂದಿನ ಒಂದು ತಿಂಗಳ ಒಳಗೆ ಟೆಂಡರ್ ಆಗುತ್ತದೆ. ನಂತರ ನಿರ್ಮಾಣ ಕಾರ್ಯಗಳು ನಡೆಯಲಿದೆ. ಒಂದು ವೇಳೆ ಕೋಚಿಮುಲ್ ವಿಭಜನೆಗೆ ಸರ್ಕಾರ ಮುಂದಾದರೆ ಘಟಕ ನಿರ್ಮಾಣ ಯೋಜನೆ ನಾಲ್ಕೈದು ತಿಂಗಳು ಮುಂದೆ ಹೋಗಬಹುದು. ಇಲ್ಲದಿದ್ದರೆ ಜುಲೈ 28ಕ್ಕೆ ಕೋಚಿಮುಲ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ ಎಂದು ಹೇಳಿದರು. ಪ್ಯಾಕಿಂಗ್ ಘಟಕ ನಿರ್ಮಾಣದಿಂದ ಜಿಲ್ಲೆಯಲ್ಲಿ ಡೇರಿ ಚಟುವಟಿಕೆಗಳು ಮತ್ತಷ್ಟು ವಿಸ್ತಾರಗೊಳ್ಳಲಿವೆ. ಮಾರುಕಟ್ಟೆ ಆರ್ಥಿಕ ಬಲವೂ ಹೆಚ್ಚುತ್ತದೆ. ಕೋಚಿಮುಲ್ ವಿಭಜನೆಯ ದೃಷ್ಟಿಯಿಂದ ಪ್ಯಾಕಿಂಗ್ ಘಟಕ ನಿರ್ಮಾಣ ಅತ್ಯಗತ್ಯ ಎಂದು ಹೇಳಿದರು.
ಯೋಜನಾ ವರದಿಯಲ್ಲಿನ ಪ್ರಮುಖ ಅಂಶಗಳು
* ಹಾಲು ಸಂಸ್ಕರಣಾ ಸಾಮರ್ಥ್ಯ ನಿತ್ಯ 7.5 ಲಕ್ಷ ಲೀಟರ್  * ಯೋಜನಾ ವೆಚ್ಚ; ಜಿಎಸ್‌ಟಿ ಸೇರಿ ₹ 130 ಕೋಟಿ * ಸ್ಯಾಚೆ ಹಾಲು ಪ್ಯಾಕಿಂಗ್; ದಿನವಹಿ 4 ಲಕ್ಷ ಲೀಟರ್ (6 ಲಕ್ಷ ಲೀಟರ್‌ಗೆ ವಿಸ್ತರಿಸಬಹುದು) * ಮೊಸರು ಉತ್ಪಾದನೆ ಮತ್ತು ಪ್ಯಾಕಿಂಗ್; ನಿತ್ಯ 1.5 ಲಕ್ಷ ಲೀಟರ್ (2 ಲಕ್ಷ ಲೀಟರ್‌ವರೆಗೆ ವಿಸ್ತರಿಸಬಹುದು) * ಮಸಾಲ ಮಜ್ಜಿಗೆ; ದಿನವಹಿ 25 ಸಾವಿರ ಲೀಟರ್ * ಸಿಹಿ ಉತ್ಪನ್ನಗಳು (ಮೈಸೂರು ಪಾಕ್ ಪೇಡಾ). ದಿನವಹಿ 1 ಟನ್.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT