ಶನಿವಾರ, 18 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ ‘ಕೈ’ ಟಿಕೆಟ್‌ಗಾಗಿ ಜಟಾಪಟಿ

Published 1 ಡಿಸೆಂಬರ್ 2023, 23:30 IST
Last Updated 1 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ಬೆಂಗಳೂರು: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್‌ನ ಸಂಭವನೀಯ ಅಭ್ಯರ್ಥಿಗಳ ಕುರಿತು ಅಭಿಪ್ರಾಯ ಸಂಗ್ರಹಿಸಲು ವಸತಿ ಸಚಿವ ಬಿ.ಝೆಡ್‌. ಜಮೀರ್ ಅಹಮದ್ ಖಾನ್‌ ಅಧ್ಯಕ್ಷತೆಯಲ್ಲಿ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ನಡೆದ ಸಭೆಯಲ್ಲಿ ಯುವ ಮುಖಂಡ ರಕ್ಷಾ ರಾಮಯ್ಯ ಮತ್ತು ಮಾಜಿ ಸಂಸದ ಎಂ. ವೀರಪ್ಪ ಮೊಯಿಲಿ ಬೆಂಬಲಿಗರ ಮಧ್ಯೆ ಜಟಾಪಟಿ ನಡೆಯಿತು.

ಉನ್ನತ ಶಿಕ್ಷಣ ಸಚಿವ ಡಾ.ಎಂ.ಸಿ. ಸುಧಾಕರ್‌, ಲೋಕಸಭಾ ಕ್ಷೇತ್ರದ ವ್ಯಾಪ್ತಿಯ ಕಾಂಗ್ರೆಸ್ ಶಾಸಕರು, ವಿಧಾನಸಭೆ ಚುನಾವಣೆಯ ಪರಾಜಿತ ಅಭ್ಯರ್ಥಿಗಳು, ಜಿಲ್ಲಾ ಕಾಂಗ್ರೆಸ್‌ ಸಮಿತಿ ಮತ್ತು ಬ್ಲಾಕ್‌ ಕಾಂಗ್ರೆಸ್‌ ಸಮಿತಿಗಳ ಪ್ರಮುಖ ಪದಾಧಿಕಾರಿಗಳು ಸಭೆಯಲ್ಲಿದ್ದರು.

ಸಭೆಯ ಆರಂಭಕ್ಕೂ ಮೊದಲೇ ಕೆಪಿಸಿಸಿ ಕಚೇರಿ ಎದುರು ಸೇರಿದ್ದ ಯುವ ಕಾಂಗ್ರೆಸ್‌ ಕಾರ್ಯಕರ್ತರು, ರಕ್ಷಾ ರಾಮಯ್ಯ ಅವರಿಗೆ ಟಿಕೆಟ್‌ ನೀಡುವಂತೆ ಆಗ್ರಹಿಸಿ ಶಕ್ತಿ ಪ್ರದರ್ಶನ ನಡೆಸಿದರು. ರಕ್ಷಾ ರಾಮಯ್ಯ ಅವರ ಭಾವಚಿತ್ರವುಳ್ಳ ಭಿತ್ತಿಪತ್ರ ಹಿಡಿದು ಘೋಷಣೆ ಕೂಗಿದರು.

ಬಾಗೇಪಲ್ಲಿ ಶಾಸಕ ಎಸ್‌.ಎನ್‌. ಸುಬ್ಬಾರೆಡ್ಡಿ ಸೇರಿದಂತೆ ಕೆಲವರು ವೀರಪ್ಪ ಮೊಯಿಲಿ ಅವರಿಗೆ ಟಿಕೆಟ್‌ ನೀಡುವಂತೆ ಆಗ್ರಹಿಸಿದರು. ಇನ್ನು ಕೆಲವರು ರಕ್ಷಾ ರಾಮಯ್ಯ ಪರ ಸಭೆಯಲ್ಲಿ ಮಾತನಾಡಿದರು. ತಾವೂ ಟಿಕೆಟ್‌ ಆಕಾಂಕ್ಷಿ ಎಂದು ಮಾಜಿ ಶಾಸಕ ಎನ್‌.ಎಚ್‌. ಶಿವಶಂಕರ ರೆಡ್ಡಿ ಹೇಳಿದರು.

ಅರ್ಧದಲ್ಲೇ ಸಭೆಯಿಂದ ನಿರ್ಗಮನ: ಸಭೆ ಮುಗಿಯುವ ಮುನ್ನವೇ ವೀರಪ್ಪ ಮೊಯಿಲಿ ಅವರು ನಿರ್ಗಮಿಸಿದರು. ತಮಗೆ ಅನ್ಯ ಕಾರ್ಯಕ್ರಮ ಇರುವುದರಿಂದ ಸಭೆಯಿಂದ ಹೊರ ಹೋಗುತ್ತಿರುವುದಾಗಿ ತಿಳಿಸಿದರು.

ಸುದ್ದಿಗಾರರ ಜತೆ ಮಾತನಾಡಿದ ಅವರು, ‘ನಾನು ಈ ಬಾರಿ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತೇನೆ. ರಕ್ಷಾ ಅವರು ಟಿಕೆಟ್‌ ಕೇಳುವುದು ತಪ್ಪಲ್ಲ. ಪಕ್ಷದ ಹೈಕಮಾಂಡ್‌ ಅಭ್ಯರ್ಥಿಯನ್ನು ತೀರ್ಮಾನಿಸುತ್ತದೆ’ ಎಂದರು.

ಸಭೆಯ ಬಳಿಕ ಪ್ರತಿಕ್ರಿಯಿಸಿದ ರಕ್ಷಾ ರಾಮಯ್ಯ, ‘ನಾನು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಟಿಕೆಟ್‌ ಆಕಾಂಕ್ಷಿ. ಎರಡೂವರೆ ವರ್ಷಗಳಿಂದ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಕ್ಷೇತ್ರದ ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ’ ಎಂದು ಹೇಳಿದರು.

‘ಪಕ್ಷ ಯಾರಿಗೇ ಟಿಕೆಟ್‌ ನೀಡಿದರೂ ಅವರ ಪರ ಕೆಲಸ ಮಾಡುತ್ತೇವೆ. ಆದರೆ, ವೀರಪ್ಪ ಮೊಯಿಲಿ ಅವರಿಗೆ ಟಿಕೆಟ್‌ ನೀಡುವುದು ಹೆಚ್ಚು ಸೂಕ್ತ’ ಎಂದು ಸುಬ್ಬಾರೆಡ್ಡಿ ಹೇಳಿದರು.

ವೀರಪ್ಪ ಮೊಯಿಲಿ
ವೀರಪ್ಪ ಮೊಯಿಲಿ
‘ಐವರ ಹೆಸರಿನೊಂದಿಗೆ ವರದಿ’
‘ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ವೀರಪ್ಪ ಮೊಯಿಲಿ ರಕ್ಷಾ ರಾಮಯ್ಯ ಎನ್‌.ಎಚ್‌. ಶಿವಶಂಕರ ರೆಡ್ಡಿ ಮಾಜಿ ಶಾಸಕ ವೆಂಕಟರಮಣಯ್ಯ ಮತ್ತು ಮುಖಂಡ ಕೆಂಚೇಗೌಡ ಅವರ ಹೆಸರುಗಳೊಂದಿಗೆ ಪಕ್ಷದ ವರಿಷ್ಠರಿಗೆ ವರದಿ ಸಲ್ಲಿಸಲಾಗುವುದು’ ಎಂದು ಅಭ್ಯರ್ಥಿ ಆಯ್ಕೆಗೆ ಉಸ್ತುವಾರಿಯಾಗಿರುವ ಬಿ.ಝೆಡ್. ಜಮೀರ್‌ ಅಹಮದ್ ಖಾನ್ ತಿಳಿಸಿದರು. ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಐವರು ಆಕಾಂಕ್ಷಿಗಳ ಪರ ಹಲವರು ಮಾತನಾಡಿದ್ದಾರೆ. ಎಲ್ಲ ವಿವರಗಳೊಂದಿಗೆ ವರದಿ ಸಲ್ಲಿಸುತ್ತೇವೆ. ಅಂತಿಮವಾಗಿ ಪಕ್ಷದ ಹೈಕಮಾಂಡ್‌ ಅಭ್ಯರ್ಥಿ ಆಯ್ಕೆ ಮಾಡಲಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT