ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ‘ಜಾತಿ’ ಪ್ರಧಾನ; ಮೊಯಿಲಿ ಹೆಸರು ಗೌಣ?

Published 18 ಮಾರ್ಚ್ 2024, 7:14 IST
Last Updated 18 ಮಾರ್ಚ್ 2024, 7:14 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಗಳಲ್ಲಿ ಮಾಜಿ ಸಂಸದ ಎಂ.ವೀರಪ್ಪ ಮೊಯಿಲಿ ಅವರ ಹೆಸರು ಹಿನ್ನೆಲೆಗೆ ಸರಿದಿದೆ. ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ  ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಮತ್ತು ಮಾಜಿ ಸಚಿವ ಎನ್‌.ಎಚ್.ಶಿವಶಂಕರ ರೆಡ್ಡಿ ಅವರ ಹೆಸರು ಇದೆ. ರಕ್ಷಾ ರಾಮಯ್ಯ ಅವರ ಹೆಸರು ಘೋಷಣೆಯಾಗುವ ಸಾಧ್ಯತೆ ಖಚಿತ ಎನ್ನುತ್ತವೆ ಮೂಲಗಳು. 

ಎರಡು ಬಾರಿ ಸಂಸದರಾಗಿದ್ದ ಮೊಯಿಲಿ ಅವರ ಹೆಸರು ಹಿನ್ನಲೆಗೆ ಸರಿಯಲು ‘ಜಾತಿ’ ವಿಚಾರವೂ ಪ್ರಮುಖವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಹ ರಕ್ಷಾ ರಾಮಯ್ಯ ಅವರ ಪರ ನಿಲುವು ತಾಳಿದ್ದಾರೆ ಎನ್ನುತ್ತಾರೆ ಕಾಂಗ್ರೆಸ್ ನಾಯಕರು.  

ಕಾಂಗ್ರೆಸ್‌ನ ಕೇಂದ್ರ ಚುನಾವಣಾ ಸಮಿತಿಯ ಸಭೆಯು ಮಾ.18ಕ್ಕೆ ನಿಗದಿಯಾಗಿದೆ. ಅಂದು ಕರ್ನಾಟಕ ಸೇರಿದಂತೆ ಹಲವು ರಾಜ್ಯಗಳ ಅಭ್ಯರ್ಥಿಗಳ ಹೆಸರು ಅಂತಿಮಗೊಳ್ಳಲಿದೆ. ಈಗಾಗಲೇ ರಾಜ್ಯದ ಏಳು ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಕಾಂಗ್ರೆಸ್ ಪ್ರಕಟಿಸಿದೆ. ಉಳಿದ ಕ್ಷೇತ್ರಗಳಿಗೆ ಸಂಭವನೀಯ ಅಭ್ಯರ್ಥಿಗಳನ್ನು ಕಾಂಗ್ರೆಸ್ ರಾಜ್ಯ ಘಟಕವು ಹೈಕಮಾಂಡ್‌ಗೆ ಈಗಾಗಲೇ ಕಳುಹಿಸಿದೆ. 

ಈ ಪಟ್ಟಿಯಲ್ಲಿ ವೀರಪ್ಪ ಮೊಯಿಲಿ ಅವರ ಹೆಸರು ಹಿನ್ನೆಲೆಗೆ ಸರಿದಿದೆ. ಸಂಭವನೀಯ ಅಭ್ಯರ್ಥಿಗಳ ಪಟ್ಟಿಯಲ್ಲಿ ಮೊಯಿಲಿ ಅವರ ಹೆಸರು ಇಲ್ಲ ಎನ್ನಲಾಗುತ್ತಿದೆ. ಆದರೆ ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ ವ್ಯಾಪ್ತಿಯ ಮೊಯಿಲಿ ಅವರ ಬೆಂಬಲಿಗರು ಟಿಕೆಟ್ ದೊರೆಯುತ್ತದೆ ಎನ್ನುವ ಅಚಲ ವಿಶ್ವಾಸ ವ್ಯಕ್ತಪಡಿಸುತ್ತಾರೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ಅವರತ್ತ ಬೆರಳು ತೋರುತ್ತಾರೆ.

ಸೋನಿಯಾ ಗಾಂಧಿ ಅವರ ಆಪ್ತವಲಯದಲ್ಲಿ ವೀರಪ್ಪ ಮೊಯಿಲಿ ಗುರುತಿಸಿಕೊಂಡಿದ್ದಾರೆ. ಈ ಕಾರಣದಿಂದ ಟಿಕೆಟ್ ದೊರೆಯುತ್ತದೆ ಎನ್ನುತ್ತಾರೆ ಬೆಂಬಲಿಗರು.

ಮಾಜಿ ಮುಖ್ಯಮಂತ್ರಿ ವೀರಪ್ಪ ಮೊಯಿಲಿ ಅವರು ಲೋಕಸಭಾ ಚುನಾವಣೆಯಲ್ಲಿ ಮಂಗಳೂರು ಕ್ಷೇತ್ರದಲ್ಲಿ ಸರಣಿಯಾಗಿ ಸೋಲು ಕಂಡ ನಂತರ ರಾಜಕೀಯ ಪುನರ್ಜನ್ಮ ನೀಡಿದ್ದು ಚಿಕ್ಕಬಳ್ಳಾಪುರ ಲೋಕಸಭಾ ಕ್ಷೇತ್ರ. 2009 ಹಾಗೂ 2014ರ ಚುನಾವಣೆಯಲ್ಲಿ ಗೆಲುವು ಸಾಧಿಸಿದ ಅವರು ಕೇಂದ್ರದಲ್ಲಿ ಸಚಿವರೂ ಆದರು. ಇಲ್ಲಿಂದ ಅವರ ರಾಜಕೀಯ ಮಜಲು ಮತ್ತೊಂದು ಹಾದಿಗೆ ಹೊರಳಿತು. ಮುಸುಕಾಗುತ್ತಿದ್ದ ರಾಜಕಾರಣ ಮತ್ತೆ ಪ್ರಬಲವಾಯಿತು.

ಎರಡು ಬಾರಿ ಗೆಲುವು ಕಂಡಿದ್ದ ಮೊಯಿಲಿ ಅವರು 2019ರ ಚುನಾವಣೆಯಲ್ಲಿ ಸೋಲು ಅನುಭವಿಸಿದರು. ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಅಭ್ಯರ್ಥಿಯಾಗಿ ಅವರು ಕಣಕ್ಕೆ ಇಳಿದಿದ್ದರು. 

2024ರ ಲೋಕಸಭೆ ಚುನಾವಣೆಯ ಕಾವು ಹೆಚ್ಚಿದಂತೆ ಯುವ ಕಾಂಗ್ರೆಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಕ್ಷಾ ರಾಮಯ್ಯ ಸಹ ಚಿಕ್ಕಬಳ್ಳಾಪುರ ಕ್ಷೇತ್ರದ ಟಿಕೆಟ್ ಆಕಾಂಕ್ಷಿಯಾದರು. ನಂತರದ ದಿನಗಳಲ್ಲಿ ಎನ್.ಎಚ್.ಶಿವಶಂಕರ ರೆಡ್ಡಿ ಅವರು ಸಹ ಅಭ್ಯರ್ಥಿಯಾಗುವ ಇಚ್ಛೆ ವ್ಯಕ್ತಪಡಿಸಿದರು.

ಹಿಂದುಳಿದ ವರ್ಗಗಳ ನಾಯಕ ಎನಿಸಿರುವ ವೀರಪ್ಪ ಮೊಯಿಲಿ ಅವರು ದೇವಾಡಿಗ ಸಮುದಾಯಕ್ಕೆ ಸೇರಿದವರು. ಈ ದೇವಾಡಿಗ ಸಮುದಾಯವು ಕ್ಷೇತ್ರದಲ್ಲಿ ನಗಣ್ಯವಾಗಿದೆ. ಅಹಿಂದ ಮತಗಳ ಧ್ರುವೀಕರಣದ ಕಾರಣದಿಂದ ಮೊಯಿಲಿ ಎರಡು ಬಾರಿ ಗೆಲುವು ಕಂಡರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬಹುಸಂಖ್ಯೆಯ ಒಕ್ಕಲಿಗರ ಮತಗಳು ಬಿಜೆಪಿಯತ್ತ ವಾಲಿದ ಪರಿಣಾಮ ಮೊಯಿಲಿ ಸೋಲು ಅನುಭವಿಸಿದರು.

ಕಳೆದ ಬಾರಿಯ ಚುನಾವಣೆಗಿಂತಲೂ ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಜಾತಿ ಆಧಾರಿತ ಮತ್ತು ಮತ ಧ್ರುವೀಕರಣಗಳ ಚರ್ಚೆ ಈಗಲೇ ಜೋರಾಗಿದೆ. ಜಾತಿಯ ಆಧಾರಿತ ಚರ್ಚೆ ಜೋರಾದಂತೆ ಮೊಯಿಲಿ ಅವರಿಗೆ ಟಿಕೆಟ್ ದೊರೆಯುತ್ತದೆಯೊ ಇಲ್ಲವೊ ಎನ್ನುವ ಸ್ಥಿತಿ ಸಹ ಇತ್ತು.

ರಕ್ಷಾ ರಾಮಯ್ಯ ಬಲಿಜ ಸಮುದಾಯಕ್ಕೆ ಸೇರಿದ್ದು ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ ಅಂದಾಜು 1.80 ಲಕ್ಷ ಮತದಾರರು ಇದ್ದಾರೆ. ಮತ್ತೊಂದು ಕಡೆ ಒಕ್ಕಲಿಗ ಸಮುದಾಯದ 7 ಲಕ್ಷ ಮತದಾರರು ಇದ್ದಾರೆ. ಒಕ್ಕಲಿಗರಿಗೆ ಟಿಕೆಟ್ ನೀಡುವುದಾದರೆ ನನ್ನ ಪರಿಗಣಿಸಿ ಎಂದು ಮಾಜಿ ಸಚಿವ ಎನ್.ಎಚ್.ಶಿವಶಂಕರ ರೆಡ್ಡಿ ಸಹ ಆಗ್ರಹಿಸುತ್ತಿದ್ದಾರೆ. 

ಹೀಗೆ ಜಾತಿ ಲೆಕ್ಕಾಚಾರಗಳು ಜೋರಾದ ಕಾರಣ ಮೊಯಿಲಿ ಅವರ ಹೆಸರು ಗೌಣವಾಗಿದೆ ಎನ್ನುವ ಚರ್ಚೆಗಳು ಸಹ ಜೋರಾಗಿದೆ.

ಸಂಭಾವ್ಯ ಅಭ್ಯರ್ಥಿಯಿಂದ ಟಿವಿ ಉಡುಗೊರೆ!

ಚುನಾವಣೆ ನೀತಿ ಸಂಹಿತೆ ಘೋಷಣೆಗೂ ಪೂರ್ವದಲ್ಲಿ ಅಂದರೆ ಶುಕ್ರವಾರ ರಾತ್ರಿ ಚಿಕ್ಕಬಳ್ಳಾಪುರದ ಆಯ್ದ ಮಾಧ್ಯಮ ಪ್ರತಿನಿಧಿಗಳಿಗೆ ಸಂಭಾವ್ಯ ಅಭ್ಯರ್ಥಿಯೊಬ್ಬರು ಟಿ.ವಿ ಉಡುಗೊರೆ ನೀಡಿದ್ದಾರೆ. ಚಿಕ್ಕಬಳ್ಳಾಪುರ ಹೊರ ವಲಯದ ಚದುಲಪುರ ಕ್ರಾಸ್ ಮತ್ತು ನಗರದಲ್ಲಿ ಟಿ.ವಿ ಹಂಚಲಾಗಿದೆ. ಈ ಹಿಂದೆಯೂ ಇವರ ಕಡೆಯಿಂದ ಆಯ್ದ ಮುಖಂಡರಿಗೆ 32 ಇಂಚಿನ ಎಲ್‌ಇಡಿ ಟಿ.ವಿ ಉಡುಗೊರೆ ನೀಡಲಾಗಿತ್ತು. ಅವರ ಉಡುಗೊರೆ ಪರ್ವ ನೋಡಿದರೆ ಟಿಕೆಟ್ ದೊರೆಯುವುದು ಖಚಿತ ಎನ್ನುವ ಸ್ಥಿತಿಯಲ್ಲಿದೆ.

ಕ್ಷೇತ್ರದಲ್ಲಿ ಕಾಣದ ಮಾಜಿ ಸಂಸದ

ಮಾ.2ರಂದು ಚಿಕ್ಕಬಳ್ಳಾಪುರದಲ್ಲಿ ಎಂ.ವೀರಪ್ಪ ಮೊಯಿಲಿ ಅವರ  ‘ವಿಶ್ವಸಂಸ್ಕೃತಿ ಮಹಾಯಾನ’ ಗದ್ಯಕಾವ್ಯದ ಮೊದಲ ಸಂಪುಟ ಬಿಡುಗಡೆ ಆಗಿತ್ತು. ಆ ಕಾರ್ಯಕ್ರಮದ ನಂತರ ಮೊಯಿಲಿ ಅವರು ಚಿಕ್ಕಬಳ್ಳಾಪುರದಲ್ಲಿ ಹೆಚ್ಚು ಕಾಣಿಸಿಕೊಂಡಿಲ್ಲ.  ದೇವನಹಳ್ಳಿ ಮತ್ತು ನೆಲಮಂಗಲದಲ್ಲಿ ಇತ್ತೀಚೆಗೆ ನಡೆದ ಗ್ಯಾರಂಟಿ ಸಮಾವೇಶದಲ್ಲಿ ಮಾಜಿ ಸಂಸದರು ಭಾಗಿಯಾಗಿದ್ದರು. ಚುನಾವಣೆ ಹತ್ತಿರ ಬಂದಂತೆ ಮೊಯಿಲಿ ಅವರು ಕ್ಷೇತ್ರಕ್ಕೆ ಅಪರೂಪವಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT