ಭಾನುವಾರ, 5 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ | ಮಾವು: ಉತ್ತಮ ಫಸಲಿನ ನಿರೀಕ್ಷೆ

ಸಮೃದ್ಧ ಹೂಗಳಿಂದ ಕಂಗೊಳಿಸುತ್ತಿರುವ ಮರಗಳು
Published 19 ಫೆಬ್ರುವರಿ 2024, 6:32 IST
Last Updated 19 ಫೆಬ್ರುವರಿ 2024, 6:32 IST
ಅಕ್ಷರ ಗಾತ್ರ

ಚಿಂತಾಮಣಿ: ಮಾವಿನ ಮರ ಈ ವರ್ಷ ಸಮೃದ್ಧವಾಗಿ ಹೂ ಬಿಟ್ಟಿದ್ದು ರೈತರಲ್ಲಿ ಉತ್ತಮ ಫಸಲಿನ ನಿರೀಕ್ಷೆ ಮೂಡಿಸಿದೆ.

ಸಾಮಾನ್ಯವಾಗಿ ಡಿಸೆಂಬರ್ ಕೊನೆಯ ವಾರದಿಂದ ಹೂ ಬಿಡಲು ಆರಂಭವಾಗಿ ಜನವರಿ ಆರಂಭದಲ್ಲಿ ಬಂಗಾರದ ಬಣ್ಣ ಸೂಸುವ ಹೂಗಳಿಂದ ಮೈದುಂಬಿಕೊಳ್ಳುವ ಮಾವು ಬೆಳೆಗಾರರ ಸಂತಸಕ್ಕೆ ಕಾರಣವಾಗುತ್ತದೆ.

ಕಳೆದ 2 ವರ್ಷ ಅಕಾಲಿಕ ಮಳೆಯಿಂದ ಮಾವಿನ ತೋಟಗಳಲ್ಲಿ ಪೂರ್ಣವಾಗಿ ಹೂವಿನಿಂದ ಕಂಗೊಳಿಸದೆ ಮಾವು ಬೆಳೆಗಾರರಲ್ಲಿ ಆತಂಕ ಮೂಡಿಸಿತ್ತು. ಮಳೆಯಿಂದಾಗಿ ಭೂಮಿಯಲ್ಲಿ ಅಧಿಕ ತೇವಾಂಶ, ವಾತಾವರಣದ ಏರು-ಪೇರಿನಿಂದಾಗಿ ರೋಗ ಕಾಟವೂ ವಿಪರೀತವಾಗಿತ್ತು. ಹೀಗಾಗಿ ಎರಡು ವರ್ಷಗಳಿಂದ ಇಳುವರಿ ಕುಂಠಿತವಾಗಿತ್ತು.

ಪ್ರಸಕ್ತ ಸಾಲಿನಲ್ಲಿ ಒಟ್ಟಾರೆ ಶೇ 70ರಷ್ಟು ಹೂ ಬಿಟ್ಟಿದೆ. ಅಕಾಲಿಕ ಮಳೆ ಇಲ್ಲದಿರುವುದರಿಂದ ಭೂಮಿಯಲ್ಲಿ ತೇವಾಂಶ ಸಮತೋಲನ ಕಾಯ್ದುಕೊಂಡು ಮಾವಿನ ತೋಟಗಳು ಹೂಗಳಿಂದ ಕಂಗೊಳಿಸುತ್ತಿವೆ. ಇನ್ನೂ 15 ದಿನಗಳ ಕಾಲ ಕೆಲವು ತೋಟಗಳಲ್ಲಿ ಹೂ ಕಟ್ಟುತ್ತವೆ. ತೋತಾಪುರಿ, ನೀಲಂ ಮರಗಳು ತಡವಾಗಿ ಹೂ ಬಿಡುತ್ತವೆ. ಬಾದಾಮಿ, ಮಲ್ಲಿಕಾ, ಬೆನಿಷಾ ತಳಿಗಳು ಉತ್ತಮವಾಗಿ ಹೂ ಬಿಟ್ಟಿವೆ. ಕೆಲವು ತಳಿಗಳು ಒಂದು ವರ್ಷ ಫಸಲು ನೀಡಿದರೆ ಮತ್ತೊಂದು ವರ್ಷ ಫಸಲು ಬರುವುದಿಲ್ಲ.

ರಾಜ್ಯದಲ್ಲಿ ಸುಮಾರು 1.65 ಲಕ್ಷ ಹೆಕ್ಟೇರ್ ಪ್ರದೇಶದಲ್ಲಿ ಮಾವು ಬೆಳೆಯಲಾಗುತ್ತಿದೆ. ಅದರಲ್ಲಿ ಶೇ 40ರಷ್ಟು ಚಿಕ್ಕಬಳ್ಳಾಪುರ ಮತ್ತು ಕೋಲಾರ ಜಿಲ್ಲೆಗಳ ಕೊಡುಗೆಯಾಗಿದೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಚಿಂತಾಮಣಿ ಹಾಗೂ ಕೋಲಾರ ಜಿಲ್ಲೆಯಲ್ಲಿ ಶ್ರೀನಿವಾಸಪುರ ತಾಲ್ಲೂಕು ಪ್ರಥಮ ಸ್ಥಾನದಲ್ಲಿದ್ದು ಮಾವಿನ ಮಡಿಲುಗಳಾಗಿವೆ. ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ ಮಾವು ಬೆಳೆಯುವ ಪ್ರದೇಶ 9,881 ಹೆಕ್ಟೇರ್‌ನಷ್ಟು ಇದ್ದರೆ, ಚಿಂತಾಮಣಿ ತಾಲ್ಲೂಕಿನಲ್ಲಿ 7,222 ಹೆಕ್ಟೇರ್ ಪ್ರದೇಶವಿದೆ.

ವ್ಯಾಪಾರಸ್ಥರು ಮರದಲ್ಲಿನ ಹೂ ಪ್ರಮಾಣವನ್ನು ಗಮನಿಸಿ 2 ವರ್ಷದವರೆಗೆ ಗುತ್ತಿಗೆ ಫಸಲು ಪಡೆಯುತ್ತಾರೆ. ಇತ್ತೀಚಿನ ವರ್ಷಗಳಲ್ಲಿ ಮಾವು ಹೆಚ್ಚಿನ ಲಾಭ ತಂದುಕೊಡುತ್ತಿಲ್ಲ. ಬೆಲೆ ಇದ್ದರೆ ಇಳುವರಿ ಇರುವುದಿಲ್ಲ. ಉತ್ತಮ ಇಳುವರಿ ಇದ್ದರೆ ಬೆಲೆ ಕುಸಿತವಾಗಿರುತ್ತದೆ ಎನ್ನುತ್ತಾರೆ ಮಾವು ಬೆಳೆಗಾರ ಸೀಕಲ್ ರಮಣಾರೆಡ್ಡಿ.

ಮಾವಿನ ಹೂ ತೆನೆ ಹೊರಡುವ ಹಾಗೂ ಹೂ ಅರಳುವ ಹಂತದಲ್ಲಿ ಕಂಡುಬರುವಂತಹ ಕೀಟ ಹಾಗೂ ರೋಗಗಳ ಹತೋಟಿಗೆ ಬೆಳೆಗಾರರು ಗಮನಹರಿಸಬೇಕು. ಜಿಗಿ ಹುಳು, ಥ್ರಿಪ್ಸ್, ಬೂದಿರೋಗ, ಹೂತೆನೆ ಒಣಗುವ ರೋಗಗಳು ಕಂಡುಬರುತ್ತವೆ ಎಂದು ತೋಟಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕಿ ಎಂ.ಗಾಯಿತ್ರಿ ಹೇಳುತ್ತಾರೆ.

ಬೂದು ರೋಗದ ಹತೋಟಿಗಾಗಿ ಡೆಲ್ಟಾಮೆಥ್ರಿನ್ 1 ಗ್ರಾಂ ಮತ್ತು ಹೆಕ್ಸಾಕೋನೋಜೋಲ್ 1 ಗ್ರಾಂಪ್ರತಿ ಲೀಟರ್ ನೀರಿನಲ್ಲಿ ಬೆರೆಸಿ ಹೂವಾಡುವ ಸಮಯದಲ್ಲಿ, ಹೂವಾಡಿದ ನಂತರ ಮತ್ತು ಮಾವು ಬಟಾಣಿ ಗಾತ್ರದ ಪಿಂಧೆ ಹಂತದಲ್ಲಿ ಸಿಂಪಡಿಸಬೇಕು.

ಮಾವು ಹೂ ಬಿಡುತ್ತಿರುವ ಸಮಯದಲ್ಲಿ ಪರಾಗಸ್ಪರ್ಶ ಆಗುತ್ತಿರುವ ಕಾಲದಲ್ಲಿ ಗಂಧಕ ಸಿಂಪಡಿಸಬಾರದು. ಕಚ್ಚಿದ ಕಾಯಿಗಳು ಉದುರದಂತೆ ಸಸ್ಯ ಬೆಳವಣಿಗೆಗೆ ಚೋದಕ ಎನ್.ಎ.ಎ(ಫ್ಲನೊಫಿಕ್ಸ್) 50 ಪಿಪಿಎಂ ಪ್ರಮಾಣದಲ್ಲಿ ಸಿಂಪಡಿಸಬೇಕು. ಒಂದು ಲೀಟರ್ ನೀರಿಗೆ 0.5 ಎಂ.ಎಲ್ ಬೆರೆಸಿ ಸಿಂಪಡಿಸಬೇಕು ಎಂದು ಮಂಡಳಿ ಅಧಿಕಾರಿಗಳು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT