ಬುಧವಾರ, ಏಪ್ರಿಲ್ 14, 2021
23 °C
ಸಿರಿ ಹಬ್ಬ ಕಾರ್ಯಕ್ರಮ

ನೆಲದ ಮಾತು ಅಭಿಯಾನ: ಆರೋಗ್ಯ ವೃದ್ಧಿಗೆ ಸಿರಿಧಾನ್ಯ ಸಹಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ಸಿರಿಧಾನ್ಯ ಈ ನೆಲದ ಹಿರಿಧಾನ್ಯ ಇದ್ದಂತೆ. ಹತ್ತು ಸಾವಿರ ವರ್ಷಗಳ ಇತಿಹಾಸವಿರುವ ಸಿರಿಧಾನ್ಯಗಳು ಇತ್ತೀಚೆಗೆ ವಾಣಿಜ್ಯಮಯವಾಗುತ್ತಿವೆ. ಕಾರ್ಪೋರೇಟರ್‌ಗಳ ಹಿಡಿತದಲ್ಲಿರುವ ಸಿರಿಧಾನ್ಯದ ಯಾಂತ್ರೀಕರಣ ಸುಲಭವಾಗಿ ಸಾಮಾನ್ಯ ಜನರಿಗೆ ಸಿಗುವಂತಾಗಬೇಕು ಎಂದು ಜನಪರ ಫೌಂಡೇಷನ್ ಸಂಸ್ಥೆಯ ಸದಸ್ಯ ದ್ವಿಜಿಗುರು ಅಭಿಪ್ರಾಯಪಟ್ಟರು.

ತಾಲ್ಲೂಕಿನ ಬಂಡಕೋಟೆ ಗ್ರಾಮದಲ್ಲಿ ಜನಪರ ಫೌಂಡೇಷನ್, ಬಳ್ಳಿ ಬಳಗ ಸುಸ್ಥಿರ ಕೃಷಿಕರ ವೇದಿಕೆ ಹಾಗೂ ಕಾವೇರಿ ಮಹಿಳಾ ಸ್ವಸಹಾಯ ಸಂಘದ ಆಶ್ರಯದಲ್ಲಿ ಭಾನುವಾರ ಆಯೋಜಿಸಿದ್ದ ನೆಲದ ಮಾತು- ಸಿರಿ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದರು.

ಸಾಮಾನ್ಯ ಜನರಿಗೆ ಕೈಗೆಟುಕುವಂತೆ ಸಿರಿಧಾನ್ಯಗಳ ಸಂಸ್ಕರಣೆ ಮಾಡುವ ಯಂತ್ರಗಳ ಅಗತ್ಯವಿದೆ. ಪ್ರೋಟಿನ್‌ಯುಕ್ತ ಸಿರಿಧಾನ್ಯಗಳ ಬಗ್ಗೆ ಇತ್ತೀಚಿನ ವರ್ಷಗಳಲ್ಲಿ ಜನರು ಹೆಚ್ಚು ಜಾಗೃತಗೊಳ್ಳುತ್ತಿರುವುದು ಸಂತೋಷದ ಸಂಗತಿ. ಬೆಳೆ ಬೆಳೆದ ಬಳಿಕ ಸಂಸ್ಕರಣೆ ಮಾಡಲು ಸರಿಯಾದ ಮಾರ್ಗಗಳಿಲ್ಲ. ಸಿರಿಧಾನ್ಯ ಬೆಳೆಗಳ ಅಕ್ಕಿ ತೆಗೆಯುವುದೇ ಸವಾಲಿನ ಕೆಲಸ. ಸಾಮಾನ್ಯರಿಗೂ ಹತ್ತಿರದಲ್ಲಿಯೇ ಸಂಸ್ಕರಣ ಘಟಕ ಸಿಗುವಂತಾಗಬೇಕು. ಕೆಲವರ ಹಿಡಿತದಲ್ಲಿರುವ ಯಂತ್ರಗಳನ್ನು ಎಲ್ಲರಿಗೂ ಸಿಗುವಂತಾಗಬೇಕು ಎಂದು ನುಡಿದರು.

ಹಿಂದಿನ ಕಾಲದಲ್ಲಿ ಮಹಿಳೆಯರು ಸಿರಿಧಾನ್ಯಗಳನ್ನು ಕುಟ್ಟಿ, ಶುದ್ಧ ಮಾಡಿ ಅಡುಗೆಗೆ ಬಳಸುತ್ತಿದ್ದರು. ಇಂದಿನ ಕಾಲಘಟ್ಟದಲ್ಲಿ ಅಂತಹ ಪದ್ಧತಿ ಮರೆಯಾಗುತ್ತಿದೆ. ಈ ಹಿನ್ನೆಲೆಯಲ್ಲಿ ಸಿರಿಧಾನ್ಯ ಬೆಳೆಯುವವರ ಸಂಖ್ಯೆಯೂ ಅಧಿಕವಾಗಬೇಕಿದೆ. ಸಿರಿಧಾನ್ಯ ಆಹಾರ ಸೇವನೆಯು ಸಾಮಾನ್ಯ ಆಹಾರಕ್ಕಿಂತ ಭಿನ್ನವಾದುದು. ಅಲ್ಲದೆ ಹೆಚ್ಚು ಆರೋಗ್ಯಕರವಾಗಿದೆ ಎಂದರು.

ರೈತರು ಸಿರಿಧಾನ್ಯ ಬೆಳೆದು ಸಂಸ್ಕರಣೆ ಮಾಡಿ ಮಾರಾಟ ಮಾಡುವ ಬದಲಿಗೆ ತಾವೇ ತಮ್ಮ ಮನೆಗಳಲ್ಲಿ ಆಹಾರವಾಗಿ ಸೇವನೆ ಮಾಡಿಕೊಳ್ಳುವುದನ್ನು ರೂಢಿಸಿಕೊಳ್ಳಬೇಕು. ಇಂದಿನ ಆಹಾರ ಪದ್ಧತಿಯಲ್ಲಿ ಹಲವು ರೋಗಗಳಿಗೆ ತುತ್ತಾಗುತ್ತಿರುವುದು ವಾಸ್ತವ ಸಂಗತಿ. ಸಿರಿಧಾನ್ಯಗಳ ಸೇವನೆಯಿಂದ ಯಾವುದೇ ರೋಗಗಳಿಲ್ಲದೇ ಬದುಕುಬಹುದಾಗಿದೆ ಎಂದು ತಿಳಿಸಿದರು.

ಜನಪರ ಫೌಂಡೇಷನ್‌ ಕಾರ್ಯಕರ್ತ ಶಶಿರಾಜ್ ಹರತಲೆ ಮಾತನಾಡಿ, ಕೃಷಿ ಹಾಗೂ ಕೃಷಿ ಸುತ್ತಮುತ್ತಲಿನ ವಿಚಾರ ಕುರಿತು ಸುದೀರ್ಘವಾಗಿ ಚರ್ಚೆ ನಡೆಸಲು, ಮಣ್ಣು ಹಾಗೂ ಪರಿಸರ ವಿಷಯಗಳ ಬಗ್ಗೆ ಚರ್ಚೆ ನಡೆಸುವ ವೇದಿಕೆಯಾಗಿ ನೆಲದ ಮಾತು ಎಂಬ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಇದನ್ನು ಹಳ್ಳಿ ಹಳ್ಳಿಗೂ ತಲುಪಿಸಬೇಕಾಗಿದೆ ಎಂದು ಹೇಳಿದರು.

ದೇಶದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಯುವಜನರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ರಾಸಾಯನಿಕಗಳನ್ನು ಬಳಸದೇ ಬೆಳೆಯಬಹುದಾದ ಸಿರಿಧಾನ್ಯಗಳ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಸಿರಿಹಬ್ಬದ ಮೂಲಕ ಜನರಿಗೆ ಜಾಗೃತಿ ಮೂಡಿಸಲಾಗುತ್ತಿದೆ. ಸಿರಿಧಾನ್ಯಗಳ ಆಹಾರ ಉಳಿಸಲು, ಜನರ ಆರೋಗ್ಯ ಕಾಪಾಡುವ ಸದುದ್ದೇಶದಿಂದ ನೆಲದ ಮಾತು ಅಭಿಯಾನ ಎಲ್ಲೆಡೆಗೆ ವಿಸ್ತರಿಸಲಾಗುತ್ತದೆ ಎಂದು ಹೇಳಿದರು.

ಸಾವಯವ ಕೃಷಿಕ ಪ್ರಭಾಕರ್, ಕೃಷಿ ಮಹಿಳೆಯರಾದ ಗಾಯತ್ರಮ್ಮ, ಲಕ್ಷ್ಮಮ್ಮ, ರತ್ನಮ್ಮ ಹಾಗೂ ಏಕಾಂಗಿ ಹೋರಾಟಗಾರ ನಾಗರಾಜ್ ಅವರನ್ನು ಸನ್ಮಾನಿಸಲಾಯಿತು. ವೇದಿಕೆಯಲ್ಲಿ ಜನಪರ ಫೌಂಡೇಷನ್‌ನ ವತ್ಸಲಾ, ಗ್ರಾಮ ಪಂಚಾಯಿತಿ ಸದಸ್ಯ ಶಿವಾರೆಡ್ಡಿ ಉಪಸ್ಥಿತರಿದ್ದರು.

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.