ಬುಧವಾರ, 4 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶಿಡ್ಲಘಟ್ಟ | ಪ್ರತಿಯೊಬ್ಬರಿಗೆ ಮಾಸಿಕ 10 ಕೆ.ಜಿ. ಅಕ್ಕಿ: ಸಚಿವ ಕೆ.ಎಚ್. ಮುನಿಯಪ್ಪ

Published 2 ಜೂನ್ 2023, 16:38 IST
Last Updated 2 ಜೂನ್ 2023, 16:38 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ‘ಕಾಂಗ್ರೆಸ್ ಪಕ್ಷದ ಮೇಲಿನ ಅಭೂತಪೂರ್ವ ನಂಬಿಕೆಯಿಂದಾಗಿ ರಾಜ್ಯದ ಮತದಾರರು ಕಾಂಗ್ರೆಸ್ ಪಕ್ಷಕ್ಕೆ ನಿಶ್ಚಳವಾದ ಬಹುಮತ ನೀಡಿದ್ದಾರೆ. ಪಕ್ಷದ ಮೇಲಿನ ಜನರ ನಂಬಿಕೆಯನ್ನು ಸರ್ಕಾರ ಉಳಿಸಿಕೊಳ್ಳಲಿದೆ’ ಎಂದು ಸಚಿವ ಕೆ.ಎಚ್. ಮುನಿಯಪ್ಪ ತಿಳಿಸಿದರು. 

ಸಚಿವ ಸ್ಥಾನ ಅಲಂಕರಿಸಿದ ಬಳಿಕ ಇದೇ ಮೊದಲ ಬಾರಿಗೆ ತಮ್ಮ ಹುಟ್ಟೂರು ತಾಲ್ಲೂಕಿನ ಕಂಬದಹಳ್ಳಿಗೆ ಶುಕ್ರವಾರ ಭೇಟಿ ನೀಡಿದ ಕೆ.ಎಚ್. ಮುನಿಯಪ್ಪ ಅವರಿಗೆ ಗ್ರಾಮಸ್ಥರು ಸನ್ಮಾನ ಮಾಡಿದರು. 

ಬಳಿಕ ಮಾತನಾಡಿದ ಅವರು, ‘ಚುನಾವಣೆ ಸಮಯದಲ್ಲಿ ನಾಡಿನ ಜನತೆಗೆ ಪಕ್ಷ ನೀಡಿದ ಎಲ್ಲಾ ಗ್ಯಾರಂಟಿಗಳನ್ನು  ನಮ್ಮ ಸರ್ಕಾರ ಶೀಘ್ರವೇ ಜಾರಿಗೆ ತರಲಿದೆ. ನಾನು ನಿರ್ವಹಿಸುವ ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆಯಿಂದ ಬಿಪಿಎಲ್ ಪಡಿತರ ಚೀಟಿ ಹೊಂದಿದ ಪ್ರತಿ ಕುಟುಂಬದ ಪ್ರತಿಯೊಬ್ಬ ವ್ಯಕ್ತಿಗೆ ಮಾಸಿಕ ತಲಾ ಹತ್ತು ಕೆಜಿ ಅಕ್ಕಿ ಪೂರೈಸಲು ನಮ್ಮ ಸರ್ಕಾರ ಬದ್ಧವಾಗಿದೆ’ ಎಂದರು. 

ಸಚಿವ ಸಂಪುಟದಲ್ಲಿ ಈ ಬಗ್ಗೆ ವಿಸ್ತೃತವಾಗಿ ಚರ್ಚಿಸಲಾಗುತ್ತದೆ. ಈ ಕುರಿತು ರಾಜ್ಯದ ಮತದಾರರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ. ವಿರೋಧ ಪಕ್ಷಗಳು ವಿನಾಃಕಾರಣ ಜನ ಸಾಮಾನ್ಯರನ್ನು ಎತ್ತಿಕಟ್ಟುವ ಕೆಲಸ ಮಾಡಬಾರದು ಎಂದರು. 

ವಿರೋಧ ಪಕ್ಷಗಳು ತಮ್ಮ ಕೆಲಸವನ್ನು ತಾವು ನಿರ್ವಹಿಸಿಕೊಂಡು ಹೋಗಲಿ ನಮ್ಮದೇನು ಅಭ್ಯಂತರವಿಲ್ಲ. ವಿರೋಧ ಪಕ್ಷಗಳು ಆರೋಗ್ಯಯುತವಾಗಿ ಟೀಕಿಸುವುದರಿಂದ ಆಡಳಿತ ಪಕ್ಷ ಎಚ್ಚರಿಕೆಯಿಂದ ಇರಲು ಸಾಧ್ಯವಾಗಲಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು. 

‘ಹುಟ್ಟೂರು ಕಂಬದಹಳ್ಳಿ ಇರುವ ಚಿಕ್ಕಬಳ್ಳಾಪುರ ಜಿಲ್ಲೆ ಅಥವಾ ರಾಜಕೀಯವಾಗಿ ಗುರುತಿಸಿಕೊಂಡ ಕೋಲಾರ ಜಿಲ್ಲೆಯ ಉಸ್ತುವಾರಿ ವಹಿಸಿಕೊಳ್ಳುವಿರೇ ಎಂಬ ಪತ್ರಕರ್ತರ ಪ್ರಶ್ನೆಗೆ ಬೀದರ್ ಜಿಲ್ಲೆಯ ಉಸ್ತುವಾರಿ ಕೊಟ್ಟರೂ, ನಿರ್ವಹಿಸುತ್ತೇನೆ ಎಂದು ಉತ್ತರಿಸಿದರು. ನನಗೆ ಯಾವ ಜಿಲ್ಲೆಯ ಉಸ್ತುವಾರಿ ಕೊಡಬೇಕು ಎಂಬುದು ಮುಖ್ಯಮಂತ್ರಿಗಳ ವಿವೇಚನೆಗೆ ಬಿಟ್ಟಿದ್ದು, ನಾನು ಇಂತದ್ದೇ ಜಿಲ್ಲೆಯ ಉಸ್ತುವಾರಿ ಕೊಡಿ ಎಂದು ಕೇಳೊಲ್ಲ. ಯಾವ ಜಿಲ್ಲೆಯದ್ದಾದರೂ ಸರಿ’ ಎಂದರು. 

ವಕೀಲ ಕೆ.ಟಿ ನಂಜುಂಡ ಗೌಡ, ಕೆ. ಎಮ್. ಪಿಳ್ಳಪ್ಪ, ಕೆ.ಟಿ. ಮುನಿರೆಡ್ಡಿ, ಕೆ. ಗೋಪಾಲರೆಡ್ಡಿ, ಲಕ್ಷ್ಮಿಪತಿ ಜೆ, ಜೆ. ಕೃಷ್ಣಪ್ಪ, ಕೆ. ಮುನಿಸ್ವಾಮಿ ಗೌಡ, ಕೆ. ವಿ. ಮುನೇಗೌಡ, ಜಯರಾಮರೆಡ್ಡಿ, ಕೆ.ಬಿ. ಶ್ರೀನಿವಾಸ್, ಮಧು, ನೂತನ್, ಮೇಲೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಆರ್.ಎ. ಉಮೇಶ್, ತಾಲ್ಲೂಕು ಆರೋಗ್ಯ ಅಧಿಕಾರಿ ಡಾ.ವೆಂಕಟೇಶ್ ಮೂರ್ತಿ, ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಸತೀಶ್, ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ರವಿ ಹಾಜರಿದ್ದರು

ಸಚಿವ ಮುನಿಯಪ್ಪಗೆ ಅದ್ದೂರಿ ಸ್ವಾಗತ ಆಹಾರ ಮತ್ತು ನಾಗರಿಕರ ಪೂರೈಕೆ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಮೊದಲ ಬಾರಿಗೆ ಹುಟ್ಟೂರು ಕಂಬದಹಳ್ಳಿಗೆ ಆಗಮಿಸಿದ ಕೆ.ಎಚ್.ಮುನಿಯಪ್ಪ ಅವರನ್ನು ಗ್ರಾಮಸ್ಥರು ಅದ್ದೂರಿಯಾಗಿ ಸ್ವಾಗತಿಸಿ ಸನ್ಮಾನಿಸಿ ಬೀಳ್ಕೊಟ್ಟರು. ಗ್ರಾಮದಲ್ಲಿನ ದೇವಾಲಯಗಳಲ್ಲಿ ವಿಶೇಷ ಪೂಜೆ ಹಮ್ಮಿಕೊಂಡಿದ್ದು ಮಹಾ ಮಂಗಳಾರತಿ ಮಾಡಿ ತೀರ್ಥ ಪ್ರಸಾದ ವಿನಿಯೋಗಿಸಲಾಯಿತು. ಪತ್ನಿ ಸಮೇತರಾಗಿ ಆಗಮಿಸಿದ್ದ ಸಚಿವ ಮುನಿಯಪ್ಪ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ನಂತರ ಗ್ರಾಮದ ಕೆಲ ಹಿರಿಯರ ಪಾದ ಮುಟ್ಟಿ ನಮಸ್ಕರಿಸಿ ಆಶೀರ್ವಾದ ಪಡೆದರು. ನಂತರ ಗ್ರಾಮದ ಮದ್ಯೆ ಗ್ರಾಮಸ್ಥರೆಲ್ಲರೂ ಸೇರಿ ಕೆ.ಎಚ್. ಮುನಿಯಪ್ಪ ಅವರನ್ನು ಹೂವಿನ ಹಾರ ಹಾಕಿ ಶಾಲು ಹೊದಿಸಿ ಮೈಸೂರು ಪೇಟ ತೊಡಿಸಿ ಸನ್ಮಾನಿಸಿದರು. ಸಿಹಿ ಹಂಚಿ ಸಂಭ್ರಮಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT