ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮಹಾಶಿವರಾತ್ರಿ: ನಂದಿಯಲ್ಲಿ ಶಿವೋತ್ಸವದ ವೈಭವ

ಇಂದು ಮಹಾಶಿವರಾತ್ರಿ; ಸಂಜೆ ಆರು ಗಂಟೆಯಿಂದ ಬುಧವಾರ ಬೆಳಿಗ್ಗೆಯವರೆ ಸಾಂಸ್ಕೃತಿಕ ರಸದೌತಣ
Last Updated 28 ಫೆಬ್ರುವರಿ 2022, 14:52 IST
ಅಕ್ಷರ ಗಾತ್ರ

ನಂದಿ (ಚಿಕ್ಕಬಳ್ಳಾಪುರ): ತಾಲ್ಲೂಕಿನ ನಂದಿ ಗ್ರಾಮ ಮತ್ತು ನಂದಿಗಿರಿಧಾಮ ಐತಿಹಾಸಿಕ ಮತ್ತು ಪ್ರಾಕೃತಿಕವಾಗಿ ಸಿರಿವಂತಿಕೆ ಹೊಂದಿವೆ.ಕಲಾ ಮತ್ತು ಪ್ರಾಕೃತಿಕ ಸಿರಿವಂತಿಕೆಯನ್ನು ನಂದಿ ಗ್ರಾಮ ಹಾಗೂ ಸುತ್ತಲಿನ ವಾತಾವರಣ ಹೊದ್ದು ಮಲಗಿದೆ.

ನಂದಿ ಗ್ರಾಮದಲ್ಲಿ ಪ್ರತಿ ವರ್ಷ ಶಿವರಾತ್ರಿ ಹಬ್ಬದ ಮರುದಿನ ಭೋಗ ನಂದೀಶ್ವರ ದೇಗುಲದ ಆವರಣದಲ್ಲಿ ಭೋಗ ಮತ್ತು ಯೋಗ ನಂದೀಶ್ವರರ ಜೋಡಿ ರಥೋತ್ಸವ ಜರುಗುತ್ತದೆ.ಜಾತ್ರೆ ಚಿಕ್ಕಬಳ್ಳಾಪುರ ಜಿಲ್ಲೆಗಷ್ಟೇ ಅಲ್ಲ ನೆರೆಯ ಆಂಧ್ರಪ್ರದೇಶದಲ್ಲಿಯೂ ಕಂಪು ಹರಡುತ್ತದೆ. ಪ್ರತಿ ವರ್ಷ ಮಹಾಶಿವರಾತ್ರಿ, ಜಾಗರಣೆ ಮತ್ತು ರಥೋತ್ಸವ ಪ್ರಮುಖ ಆಕರ್ಷಣೆ ಆಗಿರುತ್ತಿದ್ದವು.

ಆದರೆ ಈ ಬಾರಿಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ನಂದಿ ಜಾತ್ರೆ ಅಂಗವಾಗಿಡಾ.ಕೆ.ಸುಧಾಕರ್ ಫೌಂಡೇಶನ್ ನೇತೃತ್ವದಲ್ಲಿ ಜಿಲ್ಲಾಡಳಿತದ ಸಹಯೋಗದಲ್ಲಿ ಶಿವೋತ್ಸವವನ್ನು ಸಂಘಟಿಸಿದ್ದಾರೆ.ಇದು ಈ ಬಾರಿಯ ಶಿವರಾತ್ರಿಯಲ್ಲಿ ನಂದಿಯು ಮತ್ತಷ್ಟು ಕಳೆಯಿಂದ ಹೊಳೆಯಲು ಕಾರಣವಾಗಿದೆ.

ಶಿವೋತ್ಸವ ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಮತ್ತು ಅಂತರರಾಷ್ಟ್ರೀಯ ಕಲಾವಿದರು ಸಾಂಸ್ಕೃತಿಕ ರಸದೌತಣವನ್ನು ಭಕ್ತರಿಗೆ, ಕಲಾ ರಸಿಕರಿಗೆ ಉಣಬಡಿಸುವರು.

ಮಾರ್ಚ್ 1ರ ಸಂಜೆ 6 ಗಂಟೆಯಿಂದ ಮಾ.2ರ ಬೆಳಿಗ್ಗೆ 6ರವರೆಗೆ ಭೋಗನಂದೀಶ್ವರ ದೇವಾಲಯದ ಆವರಣದಲ್ಲಿ ಶಿವೋತ್ಸವ ಜರುಗಲಿದೆ.ಖ್ಯಾತ ಗಾಯಕರಾದ ಅನನ್ಯ ಭಟ್, ರಘುದೀಕ್ಷಿತ್, ನಾಟ್ಯ ಕಲಾವಿದೆ ಲಕ್ಷ್ಮಿ ಗೋಪಾಲಸ್ವಾಮಿ ಸೇರಿದಂತೆ 25 ಹೆಸರಾಂತ ಕಲಾ ತಂಡಗಳು ಕಾರ್ಯಕ್ರಮಗಳು ಭಾಗವಹಿಸಲಿವೆ. ಪ್ರೊ.ಕೃಷ್ಣೇಗೌಡರಿಂದ ‘ನಗೆ ಹಬ್ಬ’ ನಡೆಯಲಿದೆ. ಕಲಾ ಶ್ರೀಮಂತಿಕೆ ನಂದಿ ಗ್ರಾಮದಲ್ಲಿ ಮೇಳೈಸಲಿದೆ. ನಂದಿಬೆಟ್ಟದಲ್ಲಿಯೂ ದೀಪಾಲಂಕಾರ ಮಾಡಲಾಗುತ್ತದೆ. ಬೆಟ್ಟದಲ್ಲಿ ಲೇಸರ್ ಶೋ ಇರಲಿದೆ.

ಶಿವೋತ್ಸವ ಮತ್ತು ರಥೋತ್ಸವದಲ್ಲಿ ಪಾಲ್ಗೊಳ್ಳಲು ಬರುವ ಭಕ್ತರಿಗೆ ಊಟದ ವ್ಯವಸ್ಥೆ ಸಹ ಕಲ್ಪಿಸಲಾಗಿದೆ.ಕಾರ್ಯಕ್ರಮದಲ್ಲಿ ಒಂದು ಲಕ್ಷ ‌ಜನರು ಭಾಗಿಯಾಗುವ ನಿರೀಕ್ಷೆ ಇದೆ. 20 ರಿಂದ 25 ಸಾವಿರ ಆಸನ ವ್ಯವಸ್ಥೆ ಮಾಡಲಾಗಿದೆ. ಊಟದ ವ್ಯವಸ್ಥೆಗೆ 25 ರಿಂದ 30 ಕೌಂಟರ್ ತೆರೆಯಲಾಗಿದೆ.

ಜೋಡಿ ತೇರಿನ ಸಂಭ್ರಮ:ಜಿಲ್ಲೆಯ ವಿವಿಧ ಭಾಗಗಳಿಂದಷ್ಟೇ ಅಲ್ಲದೆ ತುಮಕೂರು, ಬೆಂಗಳೂರು ಗ್ರಾಮಾಂತರ ಜಿಲ್ಲೆ, ನೆರೆಯ ಆಂಧ್ರಪ್ರದೇಶದ ಕಡಪ, ಹಿಂದೂಪುರ, ಕದರಿ, ಅನಂತಪುರ ಮತ್ತಿತರ ಭಾಗಗಳಿಂದ ಭಕ್ತರು ದೊಡ್ಡ ಮಟ್ಟದಲ್ಲಿ ನಂದಿ ಜಾತ್ರೆ ಕಣ್ತುಂಬಿಕೊಳ್ಳಲು ಭಕ್ತರು ಬರುವರು. ಭಕ್ತರು ತಮ್ಮ ಇಷ್ಟಾರ್ಥಗಳಿಗೆ ಪ್ರಾರ್ಥಿಸಿ ರಥಕ್ಕೆ ಬಾಳೆಹಣ್ಣು ಎಸೆಯುವರು.

ಶಿವರಾತ್ರಿಯ ದಿನವಾದ ಮಂಗಳವಾರ ಬೆಳಿಗ್ಗೆಯಿಂದಲೇ ಭೋಗ ನಂದೀಶ್ವರ ದೇಗುಲದತ್ತ ಭಕ್ತರು ಧಾವಿಸುವರು. ದೇವರ ದರ್ಶನ ಪಡೆಯುವರು. ಬೆಳಿಗ್ಗೆಯಿಂದಲೇ ದೇಗುಲದಲ್ಲಿ ನಂದೀಶ್ವರನಿಗೆ ರುದ್ರಾಭಿಷೇಕ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಭಕ್ತರು ಸರದಿಯಲ್ಲಿ ಭೋಗ ನಂದೀಶ್ವರನ ದರ್ಶನ ಮಾಡಲು ವ್ಯವಸ್ಥೆ ಸಹ ಮಾಡಲಾಗಿದೆ. ರಾತಿ ಜಾಗರಣೆ ನಡೆಸಿ ಬುಧವಾರ ರಥೋತ್ಸವದಲ್ಲಿ ಪಾಲ್ಗೊಳ್ಳುವರು.

ಕಣ್ಮನ ಸೆಳೆಯುತ್ತಿದೆ ಹೂ ಅಲಂಕಾರ: ಭೋಗ ನಂದೀಶ್ವರನ ದೇಗುಲವನ್ನು ಹೂಗಳಿಂದ ಅಲಂಕರಿಸಲಾಗಿದೆ. ದೇಗುಲದ ಪ್ರವೇಶದಿಂದ ಹಿಡಿದು ಇಡೀ ಆವರಣದಲ್ಲಿ ಹೂವಿನ ತೋರಣಗಳನ್ನು ಕಟ್ಟಲಾಗಿದೆ. ಕಂಬ ಕಂಬಗಳಿಗೂ ಹೂವನ್ನು ಸುತ್ತಲಾಗಿದೆ.

ಶಿವೋತ್ಸವ ಮತ್ತು ರಥೋತ್ಸವದ ಹಿನ್ನೆಲೆಯಲ್ಲಿ ನಂದಿ ಗ್ರಾಮಕ್ಕೆ ನವ ಕಳೆ ಮೂಡಿದೆ. ಭೋಗ ನಂದೀಶ್ವರ ದೇಗುಲದ ಆವರಣದಲ್ಲಿ ವೇದಿಕೆ ಕಾರ್ಯಕ್ರಮ ನಡೆಯಲಿದೆ. ಜಿಲ್ಲಾ ಮಟ್ಟದ ಅಧಿಕಾರಿಗಳೆಲ್ಲರೂ ನಂದಿಯಲ್ಲಿದ್ದು ಕಾರ್ಯಕ್ರಮ ಸಾಂಗವಾಗಿ ನೆರವೇರಲು ಶ್ರಮಿಸುತ್ತಿದ್ದಾರೆ.

********

ದಸರಾ ಮಾದರಿಯಲ್ಲಿ ನಂದಿ ಉತ್ಸವ

ಭೋಗನಂದೀಶ್ವರ ದೇವಸ್ಥಾನವು ನಾಡಿನ ಪರಂಪರೆಯನ್ನು ಮುಂದುವರಿಸುವ ಕೇಂದ್ರವಾಗಿ ಬೆಳೆಯುತ್ತಿದೆ. ನಂದಿ ಬೆಟ್ಟದಲ್ಲಿ ರೋಪ್-ವೇ ನಿರ್ಮಾಣದಿಂದಾಗಿ ಈ ಕ್ಷೇತ್ರ ಕೆಲವೇ ವರ್ಷಗಳಲ್ಲಿ ಮತ್ತಷ್ಟು ಪ್ರಸಿದ್ಧಿ ಪಡೆಯಲಿದೆ. ಮಹಾಶಿವರಾತ್ರಿಯ ಪ್ರಯುಕ್ತ ನಡೆಯುವ ಶಿವೋತ್ಸವ ಆಚರಣೆ ಕೂಡ ಜಾಗತಿಕ ಮಟ್ಟದಲ್ಲಿ ಪ್ರವಾಸಿಗರ ಗಮನಸೆಳೆಯಲಿದೆ. ಮುಂದಿನ ವರ್ಷದಿಂದ ಹಂಪಿ ಉತ್ಸವ ಹಾಗೂ ಮೈಸೂರು ದಸರಾ ಮಾದರಿಯಲ್ಲಿ ನಂದಿ ಉತ್ಸವ ಆಚರಿಸಲಾಗುವುದು.

-ಡಾ.ಕೆ.ಸುಧಾಕರ್, ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ

*****

ರಾಸುಗಳ ಜಾತ್ರೆಯೂ ಜೋರು

ನಂದಿ ಜಾತ್ರೆ ಅಂಗವಾಗಿ ರಾಸುಗಳ ಜಾತ್ರೆಯೂ ನಡೆಯುತ್ತದೆ. ಜಾತ್ರೆ ಅಂಗವಾಗಿ ಮಾ.2ರಂದು ರಾಸುಗಳ ಮೆರವಣಿಗೆ ಮತ್ತು 3ರಂದು ದನಗಳ ಜಾತ್ರೆ ನಡೆಯುತ್ತದೆ. ಈಗಾಗಲೇ ರೈತರು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ರಾಸುಗಳನ್ನು ರೈತರು ಕರೆ ತಂದಿದ್ದಾರೆ.ಜಾತ್ರೆಗೆ ಚಿಕ್ಕಬಳ್ಳಾಪುರ ಜಿಲ್ಲೆ ಮತ್ತು ಸುತ್ತಮುತ್ತಲಿನ ಜಿಲ್ಲೆಗಳಿಂದ ಉತ್ತಮ ಹೋರಿಗಳು ಮತ್ತು ಎತ್ತುಗಳು ಬಂದಿವೆ. ಜಾತ್ರೆಯಲ್ಲಿ ಪಾಲ್ಗೊಂಡಿರುವ ರಾಸುಗಳಲ್ಲಿ ಅತ್ಯುತ್ತಮ ರಾಸುಗಳನ್ನು ಆಯ್ಕೆ ಮಾಡಿ ಮಾ.3ರಂದು ಬಹುಮಾನಗಳನ್ನು ವಿತರಿಸಲಾಗುತ್ತದೆ.

****

900 ಪೊಲೀಸರ ನಿಯೋಜನೆ

ಶಿವೋತ್ಸವ ಮತ್ತು ರಥೋತ್ಸವದ ಅಂಗವಾಗಿ 900 ಪೊಲೀಸರನ್ನು ಭದ್ರತೆಗೆ ನಿಯೋಜಿಸಲಾಗಿದೆ. ವೇದಿಕೆಯಲ್ಲಿ 9 ಮಂದಿ ಗಣ್ಯರು ಆಸೀನರಾಗಲಿದ್ದಾರೆ.

‘ನಾಲ್ಕು ಕೆಎಸ್‌ಆರ್‌ಪಿ ತುಕಡಿಗಳು, ಕೇಂದ್ರ ವಲಯದ ಸಿಬ್ಬಂದಿ ಹಾಗೂ 22 ಇನ್‌ಸ್ಪೆಕ್ಟರ್‌ಗಳು, 40 ಮಂದಿ ಪಿಎಸ್‌ಐಗಳು, ನಾಲ್ಕು ಮಂಡಿ ಡಿವೈಎಸ್‌ಪಿಗಳು ಸೇರಿ 900 ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

‘ವೇದಿಕೆ ಮುಂಭಾಗದಲ್ಲಿ 450 ಮಂದಿ ಅತಿ ಗಣ್ಯರು ಹಾಗೂ ಗಣ್ಯರು ಆಸೀನರಾಗಲು ವ್ಯವಸ್ಥೆ ಕಲ್ಪಿಸಲಾಗಿದೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT