ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಂದಿಗಿರಿಧಾಮ: ಪಾರಂಪರಿಕ ಕಟ್ಟಡಗಳ ಮೇಲೆ ಪ್ರವಾಸಿಗರು!

ನಂದಿಗಿರಿಧಾಮದಲ್ಲಿ ಕಣ್ಮುಚ್ಚಿ ಕುಳಿತರೇ ಅಧಿಕಾರಿಗಳು, ಭದ್ರತಾ ಸಿಬ್ಬಂದಿ
Published 12 ಜೂನ್ 2023, 0:09 IST
Last Updated 12 ಜೂನ್ 2023, 0:09 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಐತಿಹಾಸಿಕ ಹಾಗೂ ಪ್ರಸಿದ್ಧ ಪ್ರವಾಸಿ ತಾಣ ನಂದಿಗಿರಿಧಾಮಕ್ಕೆ ಶನಿವಾರ ಮತ್ತು ಭಾನುವಾರ ಪ್ರವಾಸಿಗರು ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುತ್ತಾರೆ. ವಾರಾಂತ್ಯದ ದಿನಗಳಲ್ಲಿ ನಂದಿಬೆಟ್ಟ ಪ್ರವಾಸಿಗರ ಕಲರವದಲ್ಲಿ ಮೀಯ್ಯುತ್ತದೆ.

ಹೀಗೆ ಬರುವ ಪ್ರವಾಸಿಗರು ಗಿರಿಧಾಮದ ಸೌಂದರ್ಯವನ್ನು ಸವಿಲು ಬೆಟ್ಟದಲ್ಲಿರುವ ಐತಿಹಾಸಿಕ ಮತ್ತು ಪಾರಂಪರಿಕ ಕಟ್ಟಡಗಳ ಮೇಲೇರುತ್ತಿದ್ದಾರೆ. ಇದು ಅಪಾಯಕ್ಕೂ ಕಾರಣವಾಗುವ ಸಾಧ್ಯತೆ ಇದೆ. ಪ್ರವಾಸಿಗರ ಅತಿರೇಕದ ವರ್ತನೆಗಳಿಗೆ ಕಡಿವಾಣ ಹಾಕಬೇಕಾಗಿದ್ದ ನಂದಿಗಿರಿಧಾಮದ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿ ಮಾತ್ರ ಇದಕ್ಕೂ ತಮಗೂ ಸಂಬಂಧವೇ ಇಲ್ಲ ಎನ್ನುವಂತೆ ಕಣ್ಮುಚ್ಚಿ ಕುಳಿತಿದ್ದಾರೆ. 

ವ್ಯೂ ಪಾಯಿಂಟ್‌ ಹಾಗೂ ಯೋಗ ನಂದೀಶ್ವರ ದೇಗುಲದ ಹಿಂಭಾಗ ನಂದಿಗಿರಿಧಾಮದ ಸೌಂದರ್ಯವನ್ನು ಕಾಣಲು ಪ್ರವಾಸಿಗರಿಗೆ ನೆಚ್ಚಿನ ಸ್ಥಳಗಳಾಗಿವೆ. ಇಲ್ಲಿ ಹೆಚ್ಚು ಪ್ರವಾಸಿಗರು ಕಂಡು ಬರುತ್ತಾರೆ. 

ಆದರೆ ಪ್ರವಾಸಿಗರು ವ್ಯೂ ಪಾಯಿಂಟ್ ಅಲ್ಲದೆ ಯೋಗ ನಂದೀಶ್ವರ ದೇಗುಲದ ಮುಂಭಾಗದ ಹಳೇ ಕಟ್ಟಡಗಳ ಮೇಲೆಯೂ ಹತ್ತುವರು. ಒಬ್ಬ ಪ್ರವಾಸಿಗರು ಹತ್ತಿದ್ದನ್ನು ನೋಡಿ ಅವರ ಹಿಂದೆಯೇ ಬಹಳಷ್ಟು ಜನರು ಹಳೇ ಕಟ್ಟಡ ಏರುವ ದೃಶ್ಯ ವಾರಾಂತ್ಯದ ದಿನಗಳಲ್ಲಿ ಸಾಮಾನ್ಯ ಎನ್ನುವಂತಿದೆ. ಈ ಹಳೇ ಕಟ್ಟಡದ ಎದುರೇ ಪೊಲೀಸ್ ಉಪಠಾಣೆಯೂ ಇದೆ! ಈ ಹಳೇ ಕಟ್ಟಡದ ಸುತ್ತ ಯಾವುದೇ ತಡೆಗೋಡೆಯೂ ಇಲ್ಲ. ಪ್ರವಾಸಿಗರು ಸ್ವಲ್ಪ ಯಾಮಾರಿದರೂ ಅಪಾಯ ಖಚಿತ. 

ಗಿರಿಧಾಮದ ಪ್ರವೇಶದ್ವಾರದ ಸಮೀಪದಲ್ಲಿರುವ ಟಿಪ್ಪು ಬೇಸಿಗೆ ಅರಮನೆಯದ್ದೂ ಇದೇ ಕಥೆ. ಕಟ್ಟಡದ ಚಾವಣೆ, ಸಜ್ಜದ ಮೇಲೆ ಪ್ರವಾಸಿಗರು ಏರುವರು. ಟಿಪ್ಪು ಬೇಸಿಗೆ ಅರಮನೆ ಸೇರಿದಂತೆ ಬಹಳಷ್ಟು ಕಡೆಗಳಲ್ಲಿ ಪ್ರವಾಸಿಗರು ತಮ್ಮ ಹೆಸರುಗಳನ್ನು ಕಲ್ಲಿನಿಂದ ಕೆತ್ತಿರುವುದನ್ನೂ ಕಾಣಬಹುದು.

ಅಪಾಯಕಾರಿ ನಡೆ: ಶನಿವಾರ ಮತ್ತು ಭಾನುವಾರ ನಂದಿ ಬೆಟ್ಟಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಬರುವ ಪ್ರವಾಸಿಗರು ಇಲ್ಲಿನ ಪಾರಂಪರಿಕ ಕಟ್ಟಡಗಳ ಮೇಲೆ ಹತ್ತಿ ಹೆಸರುಗಳನ್ನು ಕೆತ್ತುವ ಮೂಲಕ ಹಾಳು ಮಾಡುತ್ತಿದ್ದಾರೆ. ಬೆಟ್ಟದ ಅಂಚಿನಲ್ಲಿರುವ ಈ ಕಟ್ಟಡಗಳ ಮೇಲೆ ನಿಂತು ಕೊಳ್ಳಲು ಯಾವುದೇ ಸುರಕ್ಷಿತೆಯು ಇಲ್ಲ. ಅತ್ಯಂತ ಅಪಾಯಕಾರಿಯಾಗಿದೆ. ಪ್ರವಾಸೋದ್ಯಮ ಇಲಾಖೆಗೆ ವಹಿಸಿದ ನಂತರ ಇಲ್ಲಿನ ಉಸ್ತುವಾರಿ ಸೂಕ್ತವಾಗಿಲ್ಲ ಎನ್ನುತ್ತಾರೆ ದೊಡ್ಡಬಳ್ಳಾಪುರದ ಚಾರಣಿಗ ರೋಹಿತ್.

ಟಿಪ್ಪು ಬೇಸಿಗೆ ಅರಮನೆಯ ಮೇಲೆ ಪ್ರವಾಸಿಗರು
ಟಿಪ್ಪು ಬೇಸಿಗೆ ಅರಮನೆಯ ಮೇಲೆ ಪ್ರವಾಸಿಗರು

ಯೋಗ ನಂದೀಶ್ವರ ದೇಗುಲದ ಮುಂಭಾಗದ ಹಳೇ ಕಟ್ಟದ, ಟಿಪ್ಪು ಬೇಸಿಗೆ ಅರಮನೆಯ ಮೇಲೆ ಪ್ರವಾಸಿಗರು ವಾರಾಂತ್ಯದ ದಿನಗಳಲ್ಲಿಯೇ ಇಂತಹ ಪ್ರಸಂಗ ಹೆಚ್ಚು ಐತಿಹಾಸಿಕ ‌ಕಟ್ಟಡಗಳ ಮೇಲೆ ಹೆಸರು ಕೆತ್ತುವ ಜನರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT