ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹೊಸವರ್ಷ: ದೇಗುಲಗಳಿಗೆ ಜನರ ದಾಂಗುಡಿ

Last Updated 2 ಜನವರಿ 2023, 5:14 IST
ಅಕ್ಷರ ಗಾತ್ರ

ಚಿಂತಾಮಣಿ: ಹೊಸ ವರ್ಷದ ಹಿನ್ನೆಲೆಯಲ್ಲಿ ಜನರು ನಗರ ಹಾಗೂ ತಾಲ್ಲೂಕಿನ ವಿವಿಧ ದೇವಾಲಯಗಳಿಗೆ ಸಾಗರೋಪಾದಿಯಲ್ಲಿ ತೆರಳಿ, ದರ್ಶನ, ಪೂಜೆ ಮಾಡಿಸುತ್ತಿದ್ದ ದೃಶ್ಯಗಳು ಕಂಡುಬಂದವು. ದೇವಾಲಯಗಳಲ್ಲಿ ಭಾನುವಾರ ಬೆಳಿಗಿನಿಂದ ಸಂಜೆವರೆಗೆ ಜನಜಂಗುಳಿ ಕಂಡುಬಂತು.

ದೇವಾಲಯಗಳ ನಗರಿ ಕೈವಾರದಲ್ಲಿ ಅಮರನಾರೇಯಣಸ್ವಾಮಿದೇವಾಲಯ, ಭೀಮಲಿಂಗೇಶ್ವರ ಸ್ವಾಮಿ ದೇಗುಲ, ಸದ್ಗುರು ಯೋಗಿ ನಾರೇಯಣ ಮಠದಲ್ಲಿ ವಿಶೇಷ ಅಲಂಕಾರ, ಪೂಜಾ ಕೈಂಕರ್ಯ ನೆರವೇರಿಸಲಾಯಿತು. ತಳಿರು ತೋರಣ ಹಾಗೂ ಹೂಗಳಿಂದ ದೇವಾಲಯಗಳನ್ನು ಶೃಂಗರಿಸಲಾಗಿತ್ತು. ಸ್ಥಳೀಯ ಹಾಗೂ ರಾಜ್ಯದ ವಿವಿಧೆಡೆಗಳಿಂದ ಕೈವಾರಕ್ಕೆ ಜನಸಾಗರವೇ ಹರಿದು ಬಂದಿತ್ತು. ಭಕ್ತರು ಸರದಿ ಸಾಲಿನಲ್ಲಿ ನಿಂತು ಹೊಸವರ್ಷದ ಮೊದಲನೆಯ ದಿನ ದೇವರ ದರ್ಶನ ಪಡೆದರು.

ಸದ್ಗುರು ಯೋಗಿನಾರೇಯಣ ಮಠದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಬೆಳಿಗ್ಗೆ ಘಂಟನಾದ, ಸುಪ್ರಭಾತ, ಗೋಪೂಜೆ, ವಿಶೇಷ ಅಭಿಷೇಕ, ಅಷ್ಟಾವಧಾನ ಸೇವೆ ಸಮರ್ಪಿಸಲಾಯಿತು. ತಾತಯ್ಯನವರ ಜೀವ ಸಮಾಧಿಯ ಮೂಲ ಬೃಂದಾವನವನ್ನು ವಿವಿಧ ಪುಷ್ಪಗಳಿಂದ ಅಲಂಕರಿಸಲಾಗಿತ್ತು. ಧರ್ಮಾಧಿಕಾರಿ ಡಾಎಂ.ಆರ್. ಜಯರಾಮ್ ನೇತೃತ್ವದಲ್ಲಿ ಸಾಮೂಹಿಕ ನಾಮ ಸಂಕೀರ್ತನೆ ಸಮರ್ಪಿಸಲಾಯಿತು.

ನಗರದ ಮುಖ್ಯ ರಸ್ತೆಗಳಲ್ಲಿ ಭಜನೆ ಮತ್ತು ಮಂಗಳ ವಾದ್ಯದೊಂದಿಗೆ ಯೋಗಿನಾರೇಯಣ ಉತ್ಸವ ಮೂರ್ತಿಯ ಮೆರವಣಿಗೆ ನಡೆಯಿತು. ಮಠದ ನಾದಸುಧಾರಸ ವೇದಿಕೆಯಲ್ಲಿ ವಿಶೇಷ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.

ಗ್ರಾಮಸ್ಥರಿಂದ ಕೈವಾರ ಬೆಟ್ಟದ ಮೆಟ್ಟಿಲುಗಳಿಗೆ ದೀಪಾರಾಧನೆ ಏರ್ಪಡಿಸಲಾಗಿತ್ತು. ಬೆಟ್ಟದ ಮೇಲಿರುವ ಚಾಮುಂಡೇಶ್ವರಿ ದೇವಿಗೆ ವಿಶೇಷ ಅಭಿಷೇಕ ಮತ್ತು ಪೂಜಾ ವ್ಯವಸ್ಥೆ ಮಾಡಲಾಗಿತ್ತು.

ಮಹಾಕೈಲಾಸಗಿರಿ: ನಗರದ ಹೊರವಲಯದ ಅಂಬಾಜಿದುರ್ಗ ಬೆಟ್ಟದ ಪ್ರಕೃತಿಯ ಮಡಿಲಲ್ಲಿರುವ ಮಹಾ ಕೈಲಾಸಗಿರಿ ಕ್ಷೇತ್ರಕ್ಕೂ ಭಕ್ತ ಸಮೂಹ ಹರಿದು ಬಂದಿತ್ತು.

ಆಲಂಬಗಿರಿಯಲ್ಲಿ ವಿಶೇಷ ಪೂಜೆ: ತಾಲ್ಲೂಕಿನ ಪುರಾಣ ಪ್ರಸಿದ್ಧ ಪುರಾತನ ಆಲಂಬಗಿರಿ ಕಲ್ಕಿ ಲಕ್ಷ್ಮಿ ವೆಂಕಟರಮಣಸ್ವಾಮಿ ದೇವಾಲಯ ಮತ್ತು ಆಂಜನೇಯಸ್ವಾಮಿ ದೇವಾಲಯಗಳಲ್ಲಿ ವಿಶೇಷ ಪೂಜೆ ನೆರವೇರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT