ಮಂಗಳವಾರ, ಸೆಪ್ಟೆಂಬರ್ 21, 2021
21 °C
ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ಅಧಿಕಾರಿಗಳಿಗೆ ತಾಕೀತು

ಚಿಕ್ಕಬಳ್ಳಾಪುರ: ಗೊಬ್ಬರ ಕೊರತೆಯಾಗದಂತೆ ಸೂಚನೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಉತ್ತಮ ಮಳೆ ಆಗುತ್ತಿದೆ. ಕೃಷಿ ಚಟುವಟಿಕೆಗಳು ಉತ್ತಮವಾಗಿವೆ. ಆದರೆ ಡಿಎಪಿ ರಸಗೊಬ್ಬರದ ಕೊರತೆ ಇದೆ ಎಂದು ರೈತರು ಹೇಳುತ್ತಿದ್ದಾರೆ. ಯಾವುದೇ ರೀತಿಯಲ್ಲಿಯೂ ಡಿಎಪಿ ಕೊರತೆ ಆಗಬಾರದು. ಈ ಬಗ್ಗೆ ಜಿಲ್ಲಾಧಿಕಾರಿ, ಜಿ.ಪಂ ಸಿಇಒ ಮತ್ತು ಕೃಷಿ ಇಲಾಖೆ ಅಧಿಕಾರಿಗಳು ಎಚ್ಚರವಹಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ನಗರದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಭಾನುವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಮ್ಮಿಕೊಂಡಿದ್ದ ಕೊರೊನಾ ಉಚಿತ ಲಸಿಕೆ ಶಿಬಿರ, ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಹಾಗೂ ಕೃಷಿ ಪ್ರಚಾರ ರಥಕ್ಕೆ ಚಾಲನೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು

ಡಿಎಪಿ ರಸಗೊಬ್ಬರದ ಕೊರತೆಯಾದರೆ ನನಗೆ ತಿಳಿಸಿ. ರಸಗೊಬ್ಬರದ ಅಂಗಡಿಗಳಿಗೆ ಅಧಿಕಾರಿಗಳು ದಿಢೀರ್ ಭೇಟಿ ನೀಡಿ ಪರಿಶೀಲಿಸಬೇಕು. ಬೆಲೆ ಸಮರ್ಪಕವಾಗಿ ಇದೆಯೇ, ದಾಸ್ತಾನು ಹೇಗಿದೆ ಎಂದು ತಿಳಿಯಬೇಕು ಎಂದು ಹೇಳಿದರು.

ಜಿಲ್ಲೆಯಲ್ಲಿ ನೀರಾವರಿ ಸೇರಿದಂತೆ ಮೂಲ ಸೌಲಭ್ಯಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿದೆ. ಜಿಲ್ಲಾಧಿಕಾರಿ ಅವರು ಡಿಎಂಎಫ್‍ಟಿ ಯೋಜನೆಯಡಿ ₹ 50 ಕೋಟಿ ವೆಚ್ಚದಲ್ಲಿ ವಿವಿಧ ಯೋಜನೆಗಳನ್ನು ರೂಪಿಸಿದ್ದಾರೆ. ಸರ್ಕಾರವೂ ಜಿಲ್ಲೆಯಲ್ಲಿ ನೀರಾವರಿಗೆ ವಿಶೇಷ ಆಸಕ್ತಿ ತೋರುತ್ತಿದೆ ಎಂದರು.

ತಾಲ್ಲೂಕಿನ ನಂದಿ ಹೋಬಳಿಯಲ್ಲಿ ನೀರಿನ ಸಮಸ್ಯೆ ಇದೆ. ದೊಡ್ಡಮರಳಿ, ಅಂಗಟ್ಟ, ನಂದಿ ಕೆರೆಗಳಿಗೆ ನೀರು ಹರಿಸಲು ಕ್ರಮ ಕೈಗೊಳ್ಳಲಾಗಿದೆ. ವೃಷಭಾವತಿಯಿಂದ ಜಿಲ್ಲೆಗೆ ನೀರು ಹರಿಸಲು ಸರ್ಕಾರ ಚಿಂತಿಸುತ್ತಿದ್ದು ಯೋಜನೆಯಿಂದ 40ರಿಂದ 50 ಕೆರೆಗಳಿಗೆ ನೀರು ತುಂಬಿಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಎರಡು ತಿಂಗಳಲ್ಲಿ 5 ಕೋಟಿ ಜನರಿಗೆ ಲಸಿಕೆ: ಈಗ 3 ಕೋಟಿ ಜನರು ಕೋವಿಡ್ ಲಸಿಕೆ ಪಡೆದಿದ್ದಾರೆ. ಮುಂದಿನ ಎರಡು ಮೂರು ತಿಂಗಳಲ್ಲಿ ಒಟ್ಟು 5 ಕೋಟಿ ಜನರಿಗೆ ಕೋವಿಡ್ ಲಸಿಕೆ ಹಾಕಲಾಗುವುದು. ಎರಡು ಡೋಸ್ ಲಸಿಕೆ ಪಡೆದವರು ಕೊರೊನಾ ರೋಗದಿಂದ ರಕ್ಷಣೆ ಪಡೆಯಬಹುದು. ಇದುವರೆಗೂ ಎರಡು ಡೋಸ್ ಪಡೆದವರಲ್ಲಿ ಯಾರಿಗೂ ತೀವ್ರ ಸಮಸ್ಯೆ ಬಂದಿಲ್ಲ ಎಂದರು.

ಎಂಪಿಎಲ್ ಸ್ಫೋಟ್ಸ್ ಸಂಸ್ಥೆಯವರು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿ 10 ಸಾವಿರ ಜನರಿಗೆ ಉಚಿತವಾಗಿ ಲಸಿಕೆ ನೀಡುತ್ತಿದ್ದಾರೆ. ಮೊದಲ ಹಂತವಾಗಿ 2,500 ಲಸಿಕೆ ಕೊಟ್ಟಿದ್ದಾರೆ. ಇದರಲ್ಲಿ ಚಿಕ್ಕಬಳ್ಳಾಪುರ ನಗರದ ಜನರಿಗೆ 2000 ಲಸಿಕೆ ಹಾಗೂ ಮಂಚೇನಹಳ್ಳಿಯ 500 ಮಂದಿಗೆ ಇಂದು ಲಸಿಕೆ ನೀಡಿದ್ದಾರೆ ಎಂದರು.

ಸಂಸ್ಥೆಯು ಇಲ್ಲಿಯವರಿಗೆ ರಾಜ್ಯದಲ್ಲಿ 1 ಲಕ್ಷ ಜನರಿಗೆ ಉಚಿತವಾಗಿ ಲಸಿಕೆಯನ್ನು ನೀಡಿದೆ. ಇದೇ ರೀತಿ ಮತ್ತಷ್ಟು ಸ್ವಯಂ ಸೇವಾ ಸಂಸ್ಥೆಗಳು ಮುಂದೆ ಬಂದು ಸರ್ಕಾರದ ಜತೆಗೆ ಕೈಜೋಡಿಸಬೇಕು. ಲಸಿಕೆ ಖರೀದಿಸಿ ಜನರಿಗೆ ಉಚಿತವಾಗಿ ಕೊಡಬೇಕು ಎಂದು ಮನವಿ ಮಾಡಿದರು.

ಎತ್ತಿನಹೊಳೆ ಯೋಜನೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸಬೇಕು ಎಂದು ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಜಿಲ್ಲೆಯಲ್ಲಿ ಕೃಷಿ, ತೋಟಗಾರಿಕೆಗೆ ಸಂಬಂಧಿಸಿದ ಕೈಗಾರಿಕೆಗಳನ್ನು ತರಬೇಕು ಎನ್ನುವುದು ನನ್ನ ಬಯಕೆ. ಈ ಬಗ್ಗೆಯೂ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಿದ್ದೇನೆ. ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಕೇಂದ್ರ ಸಚಿವರನ್ನು ಭೇಟಿ ಮಾಡಿ ಈ ಬಗ್ಗೆ ಚರ್ಚಿಸಲಾಗುವುದು ಎಂದು ಹೇಳಿದರು.

ನಗರಸಭೆಯಿಂದ ಪ್ರೋತ್ಸಾಹಧನ: ನಗರಸಭೆಯ ಅನುದಾನದಲ್ಲಿ ಪರಿಶಿಷ್ಟ ಸಮುದಾಯದ 153 ಮಕ್ಕಳಿಗೆ ₹ 10.13 ಲಕ್ಷ ಪ್ರೋತ್ಸಾಹ ಧನವನ್ನು ಸಚಿವರು ವಿತರಿಸಿದರು. ಪ್ರಗತಿ ಪರ ರೈತರನ್ನು ಸನ್ಮಾನಿಸಿದರು.

‘ಸಚಿವರು ಜಿಲ್ಲೆಯಲ್ಲಿ ವಿವಿಧ ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದಾರೆ. ಚಿಕ್ಕಬಳ್ಳಾಪುರದ ಅಭಿವೃದ್ಧಿಗೆ ಮಹತ್ವದ ಯೋಜನೆಗಳನ್ನು ಹೊಂದಿದ್ದಾರೆ. ಅವರ ಮಾರ್ಗದರ್ಶನದಲ್ಲಿ ನಗರಸಭೆಯು ಕೆಲಸ ಮಾಡಲಿದೆ’ ಎಂದು ನಗರಸಭೆ ಅಧ್ಯಕ್ಷ ಡಿ.ಎಸ್.ಆನಂದರೆಡ್ಡಿ ಬಾಬು ಹೇಳಿದರು.

ಸಚಿವರ ಎದುರು ‌ಅಂತರ ಮರೆತರು!
ನಗರದ ಸರ್ಕಾರಿ ಪದವಿ ಪೂರ್ವ ‌‌ಕಾಲೇಜು ಆವರಣದಲ್ಲಿ ಭಾನುವಾರ ನಡೆದ ಕೋವಿಡ್ ಲಸಿಕೆ ಅಭಿಯಾನ, ಕೃಷಿ ಮಾಹಿತಿ ರಥಕ್ಕೆ ಚಾಲನೆ ಹಾಗೂ ಕಾರ್ಮಿಕ ಇಲಾಖೆಯಿಂದ ಕಾರ್ಮಿಕರಿಗೆ ದಿನಸಿ ಕಿಟ್ ವಿತರಣೆ ಕಾರ್ಯಕ್ರಮದಲ್ಲಿ ಜನರು ಅಂತರ ಕಾಯ್ದುಕೊಳ್ಳದೆ ಗುಂಪುಗೂಡಿದ್ದರು.

ಸಾವಿರಾರು ಜನರು ಸೇರಿದ್ದ ಈ ಕಾರ್ಯಕ್ರಮವು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಸಮ್ಮುಖದಲ್ಲಿಯೇ ನಡೆಯಿತು. ಸಚಿವರು ಲಸಿಕೆ ಅಭಿಯಾನ ಉದ್ಘಾಟಿಸುವ ವೇಳೆ ಲಸಿಕೆ ಪಡೆಯಲು ಬಂದವರು ಹಾಗೂ ಸಚಿವರ ಬೆಂಬಲಿಗರು ಹೇರಳ ಸಂಖ್ಯೆಯಲ್ಲಿ ನೆರೆದಿದ್ದರು. ಲಸಿಕೆ ಪಡೆಯಲು ಬಂದವರು ಒತ್ತೊತ್ತಾಗಿ ನಿಂತಿದ್ದರು.

ಅಲ್ಲಿಂದ ಕೃಷಿ ಮಾಹಿತಿ ರಥಕ್ಕೆ ಚಾಲನೆ ನೀಡಲು ಸಚಿವರು ತೆರಳುವ ವೇಳೆಯಲ್ಲಿಯೂ ಅವರ ಹಿಂದೆ ಮುಂದೆ ಜನರು ಮುತ್ತಿದ್ದರು. ವೇದಿಕೆಗೆ ಬಂದ ಸಚಿವರು ಭಾಷಣದಲ್ಲಿ, ‘ಇಷ್ಟು ಸಂಖ್ಯೆಯಲ್ಲಿ ಜನರು ಸೇರಿದ್ದರೂ ಮಾಸ್ಕ್ ಧರಿಸಿದ್ದೀರಿ’ ಎಂದರು.

ಸಚಿವರು ವೇದಿಕೆಯಿಂದ ನಿರ್ಗಮಿಸುವ ವೇಳೆಯಲ್ಲಿಯೂ ಅವರ ಬೆಂಬಲಿಗರು ಅವರನ್ನು ಸುತ್ತುವರಿದರು. ಕಿಟ್‌ಗಾಗಿ ಬಂದಿದ್ದ ಕಾರ್ಮಿಕರು ಗುಂಪು ಗೂಡಿದರು. ಸಚಿವರ‌ ನಿರ್ಗಮನದ ನಂತರ ಆಹಾರ ಕಿಟ್ ಪಡೆಯಲು ಬಂದಿದ್ದ ಕಾರ್ಮಿಕರನ್ನು ಉದ್ದೇಶಿಸಿ ಅಧಿಕಾರಿಗಳು ‘ಅಂತರ ಕಾಪಾಡಿಕೊಳ್ಳಿ. ದೂರ ನಿಲ್ಲಿ. ಪೊಲೀಸರು ದಯವಿಟ್ಟು ಜನರನ್ನು ದೂರ ನಿಲ್ಲಿಸಿ’ ಎಂದು ಪದೇ ಪದೇ ಹೇಳಿದ್ದರು. ಆದರೂ ಜನಸಮೂಹ ಮಾತ್ರ ದೊಡ್ಡ ಸಂಖ್ಯೆಯಲ್ಲಿಯೇ ಒತ್ತೊತ್ತಾಗಿತ್ತು.

ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪಂಚಾಯಿತಿ ಸಿಇಒ ಪಿ.ಶಿವಶಂಕರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್, ಕರ್ನಾಟಕ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ.ನಾಗರಾಜು, ಜಿಲ್ಲಾ ಆರೋಗ್ಯಾಧಿಕಾರಿ ಡಾ.ಇಂದಿರಾ ಆರ್.ಕಬಾಡೆ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಆರೋಗ್ಯಾಧಿಕಾರಿ ಶ್ರೀನಿವಾಸ್‍, ಎಂಪಿಎಲ್‍ ಸ್ಫೋಟ್ಸ್ ಫೌಂಡೇಶನ್ ಮುಖ್ಯಸ್ಥ ಸುರೇಶ್‍ ವೈದ್ಯನಾಥ್ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು