ಗುರುವನ್ನು ಅರಸಿ.. ಶಿಷ್ಯರನು ಹರಸಿ...

7
ಸೆ.5ರಂದು ವಿದ್ಯೆ ಕಲಿಸಿದ ಗುರುಗಳ ಭೇಟಿಯಾಗಿ, ಆಶೀರ್ವಾದ ಪಡೆಯುವುದ ರೂಢಿಸಿಕೊಂಡ ಬಿಎಂಟಿಸಿ ಚಾಲಕ ಕೆ. ಧನಪಾಲ್‌

ಗುರುವನ್ನು ಅರಸಿ.. ಶಿಷ್ಯರನು ಹರಸಿ...

Published:
Updated:
Deccan Herald

ಚಿಕ್ಕಬಳ್ಳಾಪುರ: ಬದಲಾದ ಕಾಲಘಟ್ಟದಲ್ಲಿ ಸಾಮಾಜಿಕ ಸಂಬಂಧಗಳು ಶಿಥಿಲಗೊಳ್ಳುತ್ತಿದ್ದು ಎಲ್ಲ ಸಂಬಂಧಗಳಂತೆ ಗುರು- ಶಿಷ್ಯರ ಸಂಬಂಧವೂ ಮೊದಲಿನಷ್ಟು ಮಹೋನ್ನತವಾಗಿ ಉಳಿದಿಲ್ಲ ಎನ್ನುವುದು ಅನೇಕ ಪ್ರಜ್ಞಾವಂತರ ಕೊರಗು.

ವಿದ್ಯೆ ಕಲಿಸಿದ ಗುರು ಎದುರಿಗೆ ಬಂದರೂ ಕನಿಷ್ಠ ಸೌಜನ್ಯ ತೋರದವರು ‘ಶಿಕ್ಷಕರ ದಿನಾಚರಣೆ’ ದಿನ ಮಾತ್ರ ವಾಟ್ಸ್‌ಆ್ಯಪ್‌, ಫೇಸ್‌ಬುಕ್‌ಗಳಲ್ಲಿ ದಂಡಿಯಾಗಿ ಶುಭ ಕೋರುತ್ತಾರೆ ಎನ್ನುವುದು ಶಿಕ್ಷಕ ಸಮೂಹದ ಒಡಲಾಳದ ಮಾತು.

ಆದರೆ, ಇಲ್ಲೊಬ್ಬರು ‘ವರ್ಣ ಮಾತ್ರಂ ಕಲಿಸಿದಾತನೇ ಗುರು’ ಎಂಬ ಉಕ್ತಿಯನ್ನು ಎದೆಯಾಳದಲ್ಲಿ ಇಳಿಸಿಕೊಂಡು, 35 ವರ್ಷಗಳ ಹಿಂದೆ ತನಗೆ ಓದು, ಬರೆಯಲು ಕಲಿಸಿದ ಗುರುಗಳನ್ನು ಮರೆಯದೆ, ಪ್ರತಿ ವರ್ಷ ಶಿಕ್ಷಕರ ದಿನಾಚರಣೆಯಂದು (ಸೆ. 5) ಅವರ ಮನೆಗಳನ್ನು ಹುಡುಕಿಕೊಂಡು ಹೋಗಿ ಹಣ್ಣು– ಹಂಪಲು ನೀಡಿ, ಆಶೀರ್ವಾದ ಪಡೆದು ಬರುವುದನ್ನು ರೂಢಿಸಿಕೊಳ್ಳುವ ಮೂಲಕ ಯುವಜನರಿಗೆ ಮಾದರಿಯಾಗಿದ್ದಾರೆ.

ಬೆಂಗಳೂರಿನ ಬಿಎಂಟಿಸಿಯಲ್ಲಿ ಚಾಲಕರಾಗಿರುವ ಕೆ. ಧನಪಾಲ್‌ ಅವರು ಕಳೆದ ಎಂಟು ವರ್ಷಗಳಿಂದ ಪ್ರತಿ ವರ್ಷ ಸೆ. 5ರಂದು ರಜೆ ತೆಗೆದುಕೊಂಡು, ತನಗೆ ವಿದ್ಯೆ ಕಲಿಸಿದ ಗುರುಗಳನ್ನು ಹುಡುಕಿಕೊಂಡು ಹೋಗುವುದನ್ನು ಒಂದು ‘ವ್ರತ’ದಂತೆ ಪಾಲಿಸಿಕೊಂಡು ಬರುತ್ತಿದ್ದಾರೆ. ಅಂತೆಯೇ ಅವರು ಬುಧವಾರ ನಗರದ ವಾಪಸಂದ್ರದ ತಮ್ಮ ಗುರು ಪಿಳ್ಳಸ್ವಾಮಿ ಅವರನ್ನು ನಿವಾಸಕ್ಕೆ ಭೇಟಿ ನೀಡಿ, ಕುಶಲೋಪರಿ ವಿಚಾರಿಸಿ ಆಶೀರ್ವಾದ ಪಡೆದರು.

ಕಲೆಯುವ ಹುಚ್ಚು, ಗುರುಗಳ ಮೆಚ್ಚು

ಮಾತಿಗೆ ಸಿಕ್ಕ ಧನಪಾಲ್ ಅವರನ್ನು ಮಾತನಾಡಿಸಿದಾಗ ತೆರೆದಿಟ್ಟ ತಮ್ಮ ಈ ‘ಹೊಸ ಪಯಣ’ದ ಹಿಂದಿನ ಕಥೆ ಇಲ್ಲಿದೆ.. ‘ನಮ್ಮದು ಮೂಲತಃ ಕೇರಳ. ತಂದೆ ಗಂಗಾಧರ್ ನಾಯರ್, ತಾಯಿ ಶಾರದಮ್ಮ ತ್ರಿಶೂರ್‌ ಬಳಿ ಚಾಲಕುಡಿಯವರು. ತಂದೆ 1955ರಲ್ಲಿ ವಿಧಾನಸೌಧದಲ್ಲಿ ಚಾಲಕರಾಗಿ ಕೆಲಸ ಸೇರಿದರು. ಆ ಕೆಲಸ ಇಷ್ಟವಾಗದೆ 1960ರ ಹೊತ್ತಿಗೆ ಗೌರಿಬಿದನೂರು ತಾಲ್ಲೂಕಿನ ಮಂಚೇನಹಳ್ಳಿ ಶಾಲೆಯಲ್ಲಿ ಅಟೆಂಡರ್‌ ಆಗಿ ಕೆಲಸಕ್ಕೆ ಸೇರಿದರು’ ಎಂದು ಜಿಲ್ಲೆಯ ಜೊತೆಗಿನ ತಮ್ಮ ನಂಟಿನ ಬುತ್ತಿ ಬಿಚ್ಚಿದರು.

‘ನಾನು ಹುಟ್ಟಿದ್ದು, ಬೆಳೆದದ್ದು ಮಂಚೇನಹಳ್ಳಿಯಲ್ಲಿ. 1969ರಿಂದ 1981ರ ವರೆಗೆ ಇಲ್ಲಿಯೇ ಎಸ್‌ಎಸ್‌ಎಸ್‌ಸಿ ವರೆಗೆ ಶಿಕ್ಷಣ ಮುಗಿಸಿದೆ. ಬಳಿಕ ಬೆಂಗಳೂರಿಗೆ ಹೋಗಿ ಖಾಸಗಿ ಕಂಪೆನಿಯಲ್ಲಿ ಕೆಲಸ ಮಾಡುತ್ತಲೇ ಡ್ರೈವಿಂಗ್ ಕಲಿತು ಕೆಲ ವರ್ಷ ಕೆಲಸ ಮಾಡಿದೆ. ಬಳಿಕ 1987ರಲ್ಲಿ ಬಿಎಂಟಿಸಿಯಲ್ಲಿ ಚಾಲಕನಾಗಿ ಕೆಲಸಕ್ಕೆ ಸೇರಿದೆ. ಇದೀಗ ಬೆಂಗಳೂರಿಗನೇ (ಯಲಹಂಕ ನಿವಾಸಿ) ಆಗಿ ಹೋಗಿದ್ದೇನೆ. ಆದರೆ ಮಂಚೇನಹಳ್ಳಿಯ ಮಣ್ಣಿನ ವಾಸನೆ ಮರೆಯಲು ಆಗುತ್ತಿಲ್ಲ’ ಎಂದು ಬಾಲ್ಯದ ಮೆಲುಕು ಹಾಕಿದರು.

‘ಬೆಂಗಳೂರಿನಲ್ಲಿದ್ದರೂ ನನಗೆ ಮಂಚೇನಹಳ್ಳಿಯಲ್ಲಿ ಬಾಲ್ಯದ ಗೆಳೆಯರೊಂದಿಗೆ ಕಳೆದ ದಿನಗಳು ಕಾಡುತ್ತಲೇ ಇದ್ದವು. ಅಲ್ಲಿಗೆ ಹೋಗಬೇಕೆಂಬ ಹಂಬಲ ಆಗಾಗ ಆಗುತ್ತಿತ್ತು. 2007ರಲ್ಲಿ ನಾನು ಮತ್ತು ನನ್ನ ಗೆಳೆಯ, ಶಿಕ್ಷಕ ಸಿ. ಜಗನ್ನಾಥ್ ಭೇಟಿ ಮಾಡಿ ಮಾತನಾಡುತ್ತಿದ್ದ ವೇಳೆ ಬಾಲ್ಯದ ಗೆಳೆಯರನ್ನು ಮತ್ತು ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ ಕಲಿಸಿದ ಶಿಕ್ಷಕರನ್ನು ಒಂದೆಡೆ ಸೇರಿಸುವ ಹುಚ್ಚು ಆಸೆ ಗರಿಗೆದರಿತು’ ಎಂದು ಹೇಳಿದರು.

‘ಆರಂಭದ ಎರಡು ವರ್ಷ ಕೆಲ ಸಹಪಾಠಿಗಳೊಂದಿಗೆ ಮಂಚೇನಹಳ್ಳಿ ಶಾಲೆಗೆ ಭೇಟಿ ನೀಡಿದೆವು. ಬಳಿಕ 2010ರಲ್ಲಿ ಮಂಚೇನಹಳ್ಳಿಯ ಸರ್ಕಾರಿ ಶಾಲೆಯಲ್ಲಿ 1969ರಿಂದ 1979ರವರೆಗೆ ಓದಿರುವ ಸುಮಾರು 40 ಸಹಪಾಠಿಗನ್ನು ಸಂಪರ್ಕಿಸುವ ಕೆಲಸ ಮಾಡಿದೆವು. ಜತೆಗೆ ಶಾಲೆಯಲ್ಲಿ ‘ಪಿನಾಕಿನಿ ಹಳೆ ವಿದ್ಯಾರ್ಥಿಗಳ ಸಂಘ’ ರಚಿಸಿದೆವು. 2010ರಲ್ಲಿ ಶಾಲೆಯಲ್ಲಿ ಅದ್ಧೂರಿಯಾಗಿ ಗುರುವಂದನಾ ಕಾರ್ಯಕ್ರಮ ಆಯೋಜಿಸಿದೆವು’ ಎಂದು ತಿಳಿಸಿದರು.

‘ನಾವು ಓದಿದ ಶಾಲೆಯಲ್ಲಿ ಶಿಕ್ಷಕರಾಗಿದ್ದವರನ್ನು ಕೋಲಾರ, ಬೆಂಗಳೂರು, ಚಿಕ್ಕಬಳ್ಳಾಪುರ, ಗೌರಿಬಿದನೂರಿನಲ್ಲಿ ಪತ್ತೆ ಮಾಡಿ ಗುರುವಂದನಾ ಕಾರ್ಯಕ್ರಮಕ್ಕೆ ಕರೆದುಕೊಂಡು ಬಂದು ಗೌರವಿಸಿದೆವು. ಅಂದು ಬಹುತೇಕ ಎಲ್ಲ ಶಿಕ್ಷಕರ ಮತ್ತು ಹಳೆ ವಿದ್ಯಾರ್ಥಿಗಳ ಸಮಾಗಮವಾಗಿತ್ತು. ಆಗ ಎಲ್ಲರ ಮನೆ ವಿಳಾಸ, ಸಂಪರ್ಕ ಸಂಖ್ಯೆಯನ್ನು ಸಂಗ್ರಹಿಸಿಟ್ಟುಕೊಂಡೆ’ ಎನ್ನುವಾಗ ಅವರಲ್ಲಿ ಸಾರ್ಥಕತೆಯ ಭಾವ ಮಿಂಚಿತು.

‘ಅಂದಿನಿಂದ ವರ್ಷಕ್ಕೊಮ್ಮೆಯಾದರೂ ಶಿಕ್ಷಕರನ್ನು ಭೇಟಿ ಮಾಡಬೇಕು ಎಂದು ನಿರ್ಧರಿಸಿದೆ. ಅದಕ್ಕಾಗಿ ವರ್ಷಕ್ಕೊಮ್ಮೆ ಸೆ. 5ರಂದು ಕೆಲಸಕ್ಕೆ ರಜೆ ಹಾಕಿ, ಗುರುಗಳನ್ನು ಖುದ್ದು ಭೇಟಿಯಾಗಲು ಅವರ ಮನೆಗಳಿಗೆ ಹೋಗುವ ಹವ್ಯಾಸ ಬೆಳೆಸಿಕೊಂಡೆ. ನನಗೆ ಕಲಿಸಿದ 11 ಶಿಕ್ಷಕರಿದ್ದರು. ಆ ಪೈಕಿ ನಾಲ್ಕು ಜನರು ತೀರಿಕೊಂಡಿದ್ದಾರೆ. ಬದುಕಿರುವ ಏಳು ಜನರನ್ನೂ ನಾನು ಭೇಟಿ ಮಾಡುತ್ತೇನೆ’ ಎಂದು ಹೇಳಿದರು.

‘ಗುರುಗಳ ಭೇಟಿಗೆ ಹೊರಡುವ ಮುನ್ನ ಸಹಪಾಠಿಗಳ ವಾಟ್ಸ್‌ಆ್ಯಪ್‌ ಗ್ರೂಪ್‌ನಲ್ಲಿ ಆ ಮಾಹಿತಿ ಹಾಕುತ್ತೇನೆ. ಆಸಕ್ತಿ ಇರುವವರು, ಬಿಡುವಾಗಿದ್ದವರು ನನ್ನೊಂದಿಗೆ ಬಂದು ಗುರುಗಳನ್ನು ಭೇಟಿ ಮಾಡುತ್ತಾರೆ. ಸದ್ಯ ನಾನು ಶಿಕ್ಷಕರ ದಿನದಂದು ಚಿಕ್ಕಬಳ್ಳಾಪುರ, ಮಂಚೇನಹಳ್ಳಿ, ಜರಬಂಡಹಳ್ಳಿ, ಉಪ್ರಹಳ್ಳಿ, ಹಳೇಹಳ್ಳಿ, ಗೌರಿಬಿದನೂರು ಸೇರಿದಂತೆ ಬೆಂಗಳೂರಿನಲ್ಲಿರುವ ಕೆಲ ಶಿಕ್ಷಕರನ್ನು ಭೇಟಿ ಮಾಡುತ್ತಿರುವೆ’ ಎಂದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !