ಗುರುವಾರ , ಜುಲೈ 7, 2022
25 °C
ದಲಿತ ಸಂಘಟನೆಗಳ ಒಕ್ಕೂಟ ಪ್ರತಿಭಟನೆ

ಬೌದ್ಧ ಧರ್ಮ ಅವಹೇಳನ ಆರೋಪ: ಸಚಿವ ಸುಧಾಕರ್ ವಿರುದ್ಧ ಆಕ್ರೋಶ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್ ಬೌದ್ಧ ಧರ್ಮವನ್ನು ಅವಹೇಳನ ಮಾಡಿದ್ದಾರೆ ಎಂದು ಆರೋಪಿಸಿ ದಲಿತ ಸಂಘಟನೆಗಳ ಒಕ್ಕೂಟದ ಮುಖಂಡರು ಹಾಗೂ ಕಾರ್ಯಕರ್ತರು ನಗರದಲ್ಲಿ ಗುರುವಾರ ಪ್ರತಿಭಟನಾ ಮೆರವಣಿಗೆ ನಡೆಸಿದರು. 

ಎಂ.ಜಿ. ರಸ್ತೆಯ ಅಂಬೇಡ್ಕರ್ ವಸತಿ ನಿಲಯದ ಆವರಣದಲ್ಲಿ ಅಂಬೇಡ್ಕರ್ ಪ್ರತಿಮೆಗೆ ಮಾಲಾರ್ಪಣೆ ಮಾಡಿದ ಮುಖಂಡರು ಅಲ್ಲಿಂದ ಎಂ.ಬಿ. ರಸ್ತೆ, ಗಂಗಮ್ಮನ ಗುಡಿ ರಸ್ತೆ ಮಾರ್ಗವಾಗಿ ಬಿಬಿ ರಸ್ತೆಯಲ್ಲಿ ಮೆರವಣಿಗೆ ನಡೆಸಿದರು. ಈ ವೇಳೆ ಸಚಿವ ಸುಧಾಕರ್ ವಿರುದ್ಧ ಘೋಷಣೆಗಳನ್ನು ಮೊಳಗಿಸಿದರು. ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಬೇಕು ಎಂದು ಆಗ್ರಹಿಸಿದರು. 

ಉಪ ವಿಭಾಗಾಧಿಕಾರಿ ಕಚೇರಿ ಬಳಿ ಸಮಾವೇಶಗೊಂಡರು. ಉಪ ವಿಭಾಗಾಧಿಕಾರಿ ಸಂತೋಷ್ ಕುಮಾರ್ ಅವರ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.

ಹರಿರಾಮ್ ಮಾತನಾಡಿ, ‘ಭಾರತವನ್ನು ಬುದ್ಧನ ನಾಡು ಎಂದು ಜಗತ್ತಿನಲ್ಲಿ ಗುರುತಿಸಲಾಗುತ್ತದೆ. ಅಂತಹ ಬೌದ್ಧ ಧರ್ಮದ ಬಗ್ಗೆ ಸಚಿವ ಸುಧಾಕರ್ ಅವಹೇಳನಕಾರಿಯಾಗಿ ಮಾತನಾಡಿದ್ದಾರೆ. ಅವರು ನೈತಿಕ ಹೊಣೆ ಹೊತ್ತ ರಾಜೀನಾಮೆ ಕೊಡಬೇಕು’ ಎಂದು ಆಗ್ರಹಿಸಿದರು.

ಸಂವಿಧಾನದ ಮೇಲೆ ಪ್ರಮಾಣ ಮಾಡಿ ಅವರು ಸಚಿವರಾಗಿದ್ದಾರೆ. ಅವರ ಹೇಳಿಕೆ ವಿರುದ್ಧ ಸಮುದಾಯಗಳ ಭಾವನೆಗಳಿಗೆ ಧಕ್ಕೆ ತರುವ ಆರೋಪದಡಿ ಜಿಲ್ಲಾಡಳಿತ ಮತ್ತು ಪೊಲೀಸರು ಸ್ವಯಂ ಪ್ರೇರಿತವಾಗಿ ದೂರು ದಾಖಲಿಸಬೇಕಾಗಿತ್ತು. ಆದರೆ ಇಲ್ಲಿನ ಆಡಳಿತ ದಲಿತರ ವಿರುದ್ಧವಿದೆ ಎಂದು ಆಕ್ರೋಶ
ವ್ಯಕ್ತಪಡಿಸಿದರು.

ಮುಖಂಡ ಎನ್. ವೆಂಕಟೇಶ್ ಮಾತನಾಡಿ, ಜಿಲ್ಲೆಯಲ್ಲಿ ಒಂದೇ ಜಾತಿಯ ಅಧಿಕಾರಿಗಳು ಇದ್ದಾರೆ. ಸಾಮಾಜಿಕ ನ್ಯಾಯ ಪಾಲನೆ ಆಗುತ್ತಿಲ್ಲ. ಬಿಜೆಪಿ ಆಡಳಿತದಲ್ಲಿ ನಮ್ಮ ಮೇಲೆ ದೌರ್ಜನ್ಯಗಳು ಹೆಚ್ಚುತ್ತಿವೆ. ಸಚಿವರು ಬೌದ್ಧ ಧರ್ಮ ಅಧ್ಯಯನ ಮಾಡದೆ ಹೇಳಿಕೆ ನೀಡಿರುವುದು ಖಂಡನೀಯ ಎಂದು ಹೇಳಿದರು.

ತಿಪ್ಪೇರುದ್ರ ಸ್ವಾಮೀಜಿ ಮಾತನಾಡಿ, ಬೌದ್ಧ ಧರ್ಮ ಅವಹೇಳನ ಮಾಡುವ ಮೂಲಕ ಬುದ್ಧ, ಬಸವ ಮತ್ತು ಅಂಬೇಡ್ಕರ್ ಅವರ ಅನುಯಾಯಿಗಳಿಗೆ ಅವಮಾನ ಮಾಡಿದ್ದಿರಿ. ಇಲ್ಲಿಗೆ ಬಂದು ಕ್ಷಮೆ ಕೇಳಬೇಕಿತ್ತು. ಇದಕ್ಕೆ ಮುಂದಿನ ಚುನಾವಣೆಯಲ್ಲಿ ತಕ್ಕಪಾಠ ಕಲಿಯುತ್ತೀರಿ‌ ಎಂದು
ಹೇಳಿದರು.

ಆರ್‌ಪಿಐ ಪಕ್ಷದ ಅಧ್ಯಕ್ಷ ಎಂ. ವೆಂಕಟಸ್ವಾಮಿ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೆ.ಸಿ. ರಾಜಾಕಾಂತ್, ಸಾಹಿತಿ ಗೊಲ್ಲಹಳ್ಳಿ ಶಿವಪ್ರಸಾದ್, ವೆಂಕಟರಮಣ, ಮಲ್ಲಿಕಾರ್ಜುನ ಬಾಲ್ಕಿ, ಎಚ್.ಆರ್. ಸುರೇಂದ್ರ, ಹೊಸಕೋಟೆ ಶಶಿಧರ್, ಗಡ್ಡಂ ವೆಂಕಟೇಶ್, ಕಿರಣ್ ಕಮಲಪ್ರಸಾದ್, ಮೇಲೂರು ಮಂಜುನಾಥ್, ಸಂದೀಪ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು