ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರೈತರ ಹೋರಾಟ ಹತ್ತಿಕ್ಕುತ್ತಿರುವ ಕೇಂದ್ರ

ಕೃಷಿ ಕಾಯ್ದೆ ವಿರುದ್ಧ ಜಿ.ವಿ. ಶ್ರೀರಾಮರೆಡ್ಡಿ ಚಾಟಿ
Last Updated 19 ಜನವರಿ 2021, 2:24 IST
ಅಕ್ಷರ ಗಾತ್ರ

ಬಾಗೇಪಲ್ಲಿ: ಕೇಂದ್ರ ಸರ್ಕಾರದ ಮೂರು ಕೃಷಿ ಕಾಯ್ದೆಗಳ ಜಾರಿ ಖಂಡಿಸಿ ದೆಹಲಿಯ ಗಡಿಭಾಗದಲ್ಲಿ ರೈತರು ಹೋರಾಟ ಮಾಡುತ್ತಿದ್ದಾರೆ. ಪ್ರಧಾನಿ ನರೇಂದ್ರ ಮೋದಿ ರೈತರ ಬೇಡಿಕೆ ಈಡೇರಿಸದೆ ಹೋರಾಟವನ್ನು ದಮನ ಮಾಡಲು ಹೊರಟಿದ್ದಾರೆ ಎಂದು ಪ್ರಜಾ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಜಿ.ವಿ. ಶ್ರೀರಾಮರೆಡ್ಡಿ ಆರೋಪಿಸಿದರು.

ಪಟ್ಟಣದ ಡಾ.ಬಿ.ಆರ್. ಅಂಬೇಡ್ಕರ್ ಪುತ್ಥಳಿ ಮುಂದೆ ಸೋಮವಾರ ಪ್ರಜಾ ಸಂಘರ್ಷ ಸಮಿತಿ(ಪಿಎಸ್‌ಎಸ್)ಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದ ಜನ ಹಾಗೂ ರೈತ ವಿರೋಧಿ ನೀತಿಗಳನ್ನು ವಿರೋಧಿಸಿ ಹಮ್ಮಿಕೊಂಡಿದ್ದ ರಾಜಕೀಯ ಪ್ರಚಾರಾಂದೋಲನಕ್ಕೆ ಚಾಲನೆ ನೀಡಿ ಮಾತನಾಡಿದರು.

ರೈತರು ಸಂವಿಧಾನಬದ್ಧವಾಗಿ ತಮ್ಮ ಹಕ್ಕುಗಳನ್ನು ಕೇಳಲು ಶಾಂತಿಯುತ ಹೋರಾಟ ಮಾಡುತ್ತಿದ್ದಾರೆ. ಕೇಂದ್ರ ಸರ್ಕಾರ ರೈತ ನಾಯಕರ ಜೊತೆ ಒಂಬತ್ತು ಸುತ್ತಿನ ಮಾತುಕತೆ ನಡೆಸಿದೆ. ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುವರಿಗೂ ರೈತರು ಪಟ್ಟುಸಡಿಸದೆ ಪ್ರತಿಭಟನೆ ಮುಂದುವರಿಸಿದ್ದಾರೆ. ಮೋದಿ ಅವರು ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿದ್ದಾರೆ. ಕೊರೊನಾ ಲಸಿಕೆ ಬಗ್ಗೆ ವ್ಯಾಪಕವಾಗಿ ಪ್ರಚಾರ ಮಾಡಿಸುತ್ತಿದ್ದಾರೆ. ಆದರೆ ರೈತರ ಬೇಡಿಕೆಗಳನ್ನು ಮಾತ್ರ ಈಡೇರಿಸದೆ ಹೋರಾಟ ಹತ್ತಿಕ್ಕಲು ಹುನ್ನಾರ ರೂಪಿಸುತ್ತಿದ್ದಾರೆ ಎಂದರು.

ಕೃಷಿ ಕಾಯ್ದೆಗಳ ವಿರುದ್ಧ ಸಂಸದರು, ಸಚಿವರು ಹಾಗೂ ಶಾಸಕರು ಸೇರಿದಂತೆ ವಿರೋಧ ಪಕ್ಷದ ಮುಖಂಡರು ತುಟಿ ಬಿಚ್ಚಿಲ್ಲ. ಜನಪ್ರತಿನಿಧಿಗಳು ಜನರಿಗೆ ಉತ್ತರ ನೀಡಬೇಕಾಗಿದೆ. ಈ ಕೃಷಿ ಕಾಯ್ದೆಗಳಿಂದ ಇಡೀ ಕೃಷಿ ರಂಗವೇ ದಿವಾಳಿ ಆಗುತ್ತದೆ. ಕೇಂದ್ರ ಹಾಗೂ ರಾಜ್ಯ ಸರ್ಕಾರ ಖಾಸಗಿ ಕಂಪನಿಗಳಿಗೆ ಅನುಕೂಲ ಮಾಡಲು ಕಾಯ್ದೆಗಳನ್ನು ಜಾರಿ ಮಾಡಲು ಹೊರಟಿದೆ ಎಂದು ದೂರಿದರು.

ಡೀಸೆಲ್, ಪೆಟ್ರೋಲ್, ವಿದ್ಯುತ್ ಬಿಲ್ ಏರಿಕೆ ಸೇರಿದಂತೆ ಅಗತ್ಯವಸ್ತುಗಳ ಬೆಲೆ ಏರಿಕೆ ಮಾಡಿರುವುದರಿಂದ ಸಾಮಾನ್ಯ ಜನರಿಗೆ ತೊಂದರೆ ಆಗುತ್ತದೆ. ಗೋಹತ್ಯೆ ನಿಷೇಧ ಕಾಯ್ದೆ ರೈತ ವಿರೋಧಿ ನೀತಿಯಾಗಿದೆ. ಕೂಡಲೇ ಈ ಕಾಯ್ದೆಯನ್ನು ವಾಪಸ್‌ ಪಡೆಯಬೇಕು ಎಂದು ಒತ್ತಾಯಿಸಿದರು.

ರೈತರ ಹೋರಾಟ ಬೆಂಬಲಿಸಿ ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯಬೇಕು ಎಂದು ಪ್ರಜಾ ಸಂಘರ್ಷ ಸಮಿತಿಯಿಂದ ಜಿಲ್ಲೆಯಾದ್ಯಂತ ರಾಜಕೀಯ ಪ್ರಚಾರೋಂದಲನ ಹಮ್ಮಿಕೊಳ್ಳಲಾಗಿದೆ. ಜ. 26ರಂದು ಪಟ್ಟಣದಲ್ಲಿ ಸಮಿತಿಯ ನೇತೃತ್ವದಲ್ಲಿ ರೈತರು, ಕೂಲಿಕಾರ್ಮಿಕರಿಂದ ಟ್ರ್ಯಾಕ್ಟರ್, ದ್ವಿಚಕ್ರವಾಹನಗಳ ಪರೇಡ್ ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

ಪ್ರಜಾ ಸಂಘರ್ಷ ಸಮಿತಿಯ ಜಿಲ್ಲಾ ಸಹ ಸಂಚಾಲಕ ಚನ್ನರಾಯಪ್ಪ, ಮುಖಂಡರಾದ ಜಿ.ಎಂ. ರಾಮಕೃಷ್ಣಪ್ಪ, ಜುಬೇರ್ ಅಹಮದ್, ಎಸ್.ಎನ್. ಚಂದ್ರಶೇಖರ ರೆಡ್ಡಿ, ಆರ್. ಚಂದ್ರಶೇಖರ ರೆಡ್ಡಿ, ಅಶ್ವಥ್ಥ ರೆಡ್ಡಿ, ನರಸಿಂಹಪ್ಪ, ವೆಂಕಟೇಶ್, ನರಸಿಂಹಪ್ಪ, ನಾರಾಯಣಸ್ವಾಮಿ, ವೆಂಕಟೇಶ್, ಜೈನಾಭೀ, ಇ.ಟಿ. ನರಸಿಂಹಾರೆಡ್ಡಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT