ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಶಾಂತಿಯುತ ಚುನಾವಣೆ, ಶೇ79.50 ರಷ್ಟು ಮತದಾನ

ಮಂದಗತಿಯಲ್ಲಿ ಆರಂಭಗೊಂಡು ಮಧ್ಯಾಹ್ನದ ವೇಳೆ ಬಿರುಸು ಪಡೆದ ಮತದಾನ
Last Updated 28 ಅಕ್ಟೋಬರ್ 2020, 15:51 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಜಿಲ್ಲೆಯಲ್ಲಿ ಬುಧವಾರ ಆಗ್ನೇಯ ಪದವೀಧರರ ಕ್ಷೇತ್ರದ ಚುನಾವಣೆ ಮತದಾನ ಶಾಂತಿಯುತವಾಗಿ ನಡೆಯಿತು. ಶೇ79.50 ರಷ್ಟು ಮತದಾನವಾಯಿತು.

ಜಿಲ್ಲೆಯಲ್ಲಿ ಮತದಾನಕ್ಕಾಗಿ 23 ಮತಗಟ್ಟೆ ಸ್ಥಾಪಿಸಲಾಗಿತ್ತು. ಬೆಳಿಗ್ಗೆ 8 ಗಂಟೆಯಿಂದ ಸಂಜೆ 5ರವರೆಗೆ ಮತದಾನ ನಡೆಯಿತು. ಮಂದಗತಿಯಲ್ಲಿ ಆರಂಭವಾದ ಮತದಾನ ಮಧ್ಯಾಹ್ನದ ವೇಳೆ ಬಿರುಸು ಪಡೆದುಕೊಂಡಿತು.

ಜಿಲ್ಲೆಯಲ್ಲಿ ಬೆಳಿಗ್ಗೆ 8 ಗಂಟೆಯಿಂದ 10ರ ಅವಧಿಯಲ್ಲಿ ಶೇ 8.61 ‌‌ರಷ್ಟು ಮತದಾನವಾಗಿತ್ತು. ಮಧ್ಯಾಹ್ನ 12 ಗಂಟೆ ವರೆಗೆ ಶೇ 25.56, ಮಧ್ಯಾಹ್ನ 2ರ ಹೊತ್ತಿಗೆ ಶೇ 49.43, ಸಂಜೆ 4 ಗಂಟೆಗೆ ಶೇಕಡ 71.18 ಹಾಗೂ 5 ಗಂಟೆಗೆ ಶೇಕಡ 79.50 ರಷ್ಟು ಮತದಾನ ದಾಖಲಾಯಿತು.

ಈ ಚುನಾವಣೆಯಲ್ಲಿ ಜಿಲ್ಲೆಯಲ್ಲಿ 10,150 ಪುರುಷರು ಮತ್ತು 6,052 ಮಹಿಳೆಯರು ಸೇರಿದಂತೆ ಒಟ್ಟು 16,205 ಪದವೀಧರ ಮತದಾರರಿಗೆ ಹಕ್ಕು ಚಲಾಯಿಸಲು ಅವಕಾಶವಿತ್ತು. ಈ ಪೈಕಿ 8,408 ಪುರುಷರು, 4,468 ಮಹಿಳೆಯರು ಸೇರಿದಂತೆ 12,876 ಮತದಾರರು ಮತ ಚಲಾಯಿಸಿದರು.

ಜೆಜೆಪಿ, ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಮುಖಂಡರು ಮತ್ತು ಕಾರ್ಯಕರ್ತರು ಮತಗಟ್ಟೆಗಳ ಸಮೀಪ ಟೆಂಟ್‌ ಹಾಕಿ ಕುಳಿತು ಮತದಾರರಿಗೆ ಮತಗಟ್ಟೆ ಸಂಖ್ಯೆ ಹಾಗೂ ಮತದಾರ ನೋಂದಣಿ ಸಂಖ್ಯೆಯನ್ನು ಬರೆದುಕೊಟ್ಟರು. ಬಹುತೇಕ ಕಾರ್ಯಕರ್ತರು ಮಾಸ್ಕ್‌ ಮುಖಕ್ಕೆ ಧರಿಸದೆ ಗದ್ದ ಹಾಗೂ ಕುತ್ತಿಗೆಗೆ ಹಾಕಿಕೊಂಡಿದ್ದರು. ಸುರಕ್ಷಿತ ಅಂತರವನ್ನೂ ಕಾಯ್ದುಕೊಂಡಿರಲಿಲ್ಲ.

ಬಹುತೇಕ ಎಲ್ಲ ಮತಗಟ್ಟೆಗಳಲ್ಲಿ ಸ್ಯಾನಿಟೈಸರ್‌ ವ್ಯವಸ್ಥೆ ಮಾಡಲಾಗಿತ್ತು. ವೈದ್ಯಕೀಯ ಸಿಬ್ಬಂದಿ ಮತಗಟ್ಟೆಗೆ ಬಂದ ಪ್ರತಿಯೊಬ್ಬ ಮತದಾರರ ಥರ್ಮಲ್‌ ಸ್ಕ್ಯಾನಿಂಗ್‌ ಮಾಡಿದ ನಂತರ ಒಳಗೆ ಹೋಗಲು ಅವಕಾಶ ಕಲ್ಪಿಸಿದರು. ಮತಗಟ್ಟೆ ಒಳಗೆ ಹೋಗುವ ಮೊದಲೇ ಮತದಾರರು ಕೈಗಳಿಗೆ ಸ್ಯಾನಿಟೈಸರ್‌ ಹಚ್ಚಿಕೊಳ್ಳುತ್ತಿದದ್ದು ಕಂಡುಬಂತು.

ಜೆಡಿಎಸ್‌ ಅಭ್ಯರ್ಥಿ ತೂಪಲ್ಲಿ ಚೌಡರೆಡ್ಡಿ, ಕಾಂಗ್ರೆಸ್‌ ಅಭ್ಯರ್ಥಿ ರಮೇಶ್‌ ಬಾಬು ಸೇರಿದಂತೆ ಅನೇಕ ಅಭ್ಯರ್ಥಿಗಳು ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿದರು. ಜಿಲ್ಲಾಧಿಕಾರಿ ಆರ್.ಲತಾ, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್‌ ಕುಮಾರ್ ಅವರು ಜಿಲ್ಲೆಯ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ವ್ಯವಸ್ಥೆ ಪರಿಶೀಲಿಸಿದರು. ಎಲ್ಲ ಮತಗಟ್ಟೆಗಳ ಬಳಿ ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು.

ಬುಧವಾರ ಮುನ್ನೆಚ್ಚರಿಕೆ ಕ್ರಮವಾಗಿ ಮತಗಟ್ಟೆಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಜಿಲ್ಲೆಯಾದ್ಯಂತ ಸೋಮವಾರ (ಅ.26) ಸಂಜೆಯಿಂದಲೇ ಮದ್ಯ ಮಾರಾಟ ನಿಷೇಧಿಸಲಾಗಿದೆ. ಗುರುವಾರ (ಅ.29) ಬೆಳಿಗ್ಗೆ 6 ಗಂಟೆವರೆಗೆ ಎಲ್ಲಾ ಬಗೆಯ ಮದ್ಯದ ಮಾರಾಟ ಮತ್ತು ಸಾಗಣೆ, ಶಸ್ತ್ರಾಸ್ತ್ರ ಸಾಗಣೆ, ಪ್ರದರ್ಶನ ಹಾಗೂ ಬಳಕೆ ಸಹ ನಿರ್ಬಂಧಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT