ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಸೂಚನೆ ಪಾಲಿಸದಿದ್ದರೆ ದಂಡ ಹಾಕಿ

ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಕೋವಿಡ್ ನಿಯಂತ್ರಣಕ್ಕೆ ಜಿಲ್ಲಾಡಳಿತದಿಂದ ನೋಡಲ್‌ ಅಧಿಕಾರಿಗಳ ತಂಡ ರಚನೆ
Last Updated 30 ಜೂನ್ 2020, 15:56 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಜಿಲ್ಲೆಯಲ್ಲಿ ಸಾರ್ವಜನಿಕರು ಕೋವಿಡ್‌ಗೆ ಸಂಬಂಧಿತ ಮಾರ್ಗಸೂಚಿ, ಮುಂಜಾಗ್ರತಾ ಕ್ರಮಗಳನ್ನು ಪಾಲಿಸದೆ ಇರುವುದರಿಂದ ಪುನಃ ಕೋವಿಡ್–19 ಪ್ರಕರಣಗಳು ಹೆಚ್ಚಳವಾಗುತ್ತಿವೆ. ಆದ್ದರಿಂದ, ನಿಯಮಗಳನ್ನು ಉಲ್ಲಂಘಿಸುವವರ ವಿರುದ್ಧ ಅಧಿಕಾರಿಗಳು ಮುಲಾಜಿಲ್ಲದೆ ದಂಡ ವಿಧಿಸಬೇಕು’ ಎಂದು ಜಿಲ್ಲಾಧಿಕಾರಿ ಆರ್.ಲತಾ ಹೇಳಿದರು.

ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿ ಮಂಗಳವಾರ ನಡೆದ ಕೊರೊನಾ ನಿಯಂತ್ರಣ ನೋಡಲ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.

‘ಜಿಲ್ಲೆಯಲ್ಲಿ ಹೋಟೆಲ್‍ಗಳು, ರಸ್ತೆ ಬದಿಯ ಅಂಗಡಿಯವರು ಮುಖಗವಸು ಧರಿಸುತ್ತಿಲ್ಲ. ಸಾಮಾಜಿಕ ಅಂತರ ಮತ್ತು ಸ್ವಚ್ಚತೆ ಕಾಪಾಡಿಕೊಳ್ಳುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಈ ಬಗ್ಗೆ ನೋಡೆಲ್ ಅಧಿಕಾರಿಗಳು ಗಮನಹರಿಸಬೇಕು. ಯಾರೂ ಮುಂಜಾಗ್ರತಾ ಕ್ರಮಗಳನ್ನು ಪಾಲಿಸುವುದಿಲ್ಲವೋ ಅಂತಹವರಿಗೆ ದಂಡ ವಿಧಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು. ‌

‘ಈ ಹಿಂದೆ ನಗರಗಳಿಗೆ ಮಾತ್ರ ಸೀಮಿತವಾಗಿದ್ದ ಕೊವೀಡ್ ಇದೀಗ ಹಳ್ಳಿಗಳಿಗೂ ವ್ಯಾಪಿಸುತ್ತಿದೆ. ಆದ್ದರಿಂದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಜವಾಬ್ದಾರಿಯಿಂದ ಕಾರ್ಯನಿರ್ವಹಿಸಬೇಕು. ನೋಡಲ್ ಅಧಿಕಾರಿಗಳು ಬೆಂಗಳೂರಿನಿಂದ ಬರುತ್ತಿರುವ ಪ್ರವಾಸಿಗರ ಮೇಲೆ ನಿಗಾ ಇಡುವ ಕೆಲಸ ಮಾಡಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ಮಾತನಾಡಿ, ‘ಎಲ್ಲಾ ಇಲಾಖೆಯ ಅಧಿಕಾರಿಗಳು ಸಮನ್ವಯತೆಯಿಂದ ಕಾರ್ಯನಿರ್ವಹಿಸಬೇಕು. ಗ್ರಾಮೀಣ ಪ್ರದೇಶಗಳಲ್ಲಿ ಪಿಡಿಒ ಅವರ ಮೂಲಕ ಸಾರ್ವಜನಿಕರಿಗೆ ಕೊರೊನಾ ಬಗ್ಗೆ ಅರಿವು ಮೂಡಿಸುತ್ತಿದ್ದಾರೆ’ ಎಂದು ಹೇಳಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಮಾತನಾಡಿ, ‘ಜಿಲ್ಲೆಯ ಎಲ್ಲಾ ಅಂಗಡಿಗಳ ಮಾಲಿಕರು ಸ್ವಯಂ ಪ್ರೇರಿತರಾಗಿ ಅಂಗಡಿಯ ಮುಂದೆ ಕೊರೊನಾ ಬಗ್ಗೆ ಜಾಗೃತಿ ಮೂಡಿಸುವ ಎಚ್ಚರಿಕೆ ಫಲಕಗಳನ್ನು ಕಡ್ಡಾಯವಾಗಿ ಅಳವಡಿಸಬೇಕು. ಹೊರಗಿನಿಂದ ಬರುವವರ ಮೇಲೆ ನಿಗಾ ವಹಿಸಬೇಕು’ ಎಂದು ತಿಳಿಸಿದರು.

ಹೆಚ್ಚುವರಿ ಜಿಲ್ಲಾಧಿಕಾರಿ ಆರತಿ ಆನಂದ್, ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಭಾಸ್ಕರ್, ಜಿಲ್ಲಾ ಆರೋಗ್ಯ ಅಧಿಕಾರಿ ಡಾ.ಬಿ.ಎಂ.ಯೋಗೇಶ್ ಗೌಡ, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಯಲ್ಲಾ ರಮೇಶ್ ಬಾಬು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT