ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚುನಾವಣೆಯಲ್ಲಿ ಒಗ್ಗಟ್ಟಿನಿಂದ ಕೆಲಸ ಮಾಡಿ: ಶಾಸಕ ಡಾ.ಕೆ.ಸುಧಾಕರ್

ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ ಬ್ಯಾಂಕ್ ಚುನಾವಣೆ ಪೂರ್ವಭಾವಿ ಸಭೆ
Last Updated 29 ಜನವರಿ 2020, 13:41 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಸದ್ಯ ಕ್ಷೇತ್ರದಲ್ಲಿ ಚುನಾವಣೆ ಪರ್ವ ಪ್ರಾರಂಭವಾಗಿದೆ. ಮುಂಬರುವ ಎಲ್ಲ ಚುನಾವಣೆಗಳಿಗೆ ಪ್ರಾಥಮಿಕ ಸಹಕಾರ ಕೃಷಿ ಮತ್ತು ಗ್ರಾಮೀಣ ಅಭಿವೃದ್ಧಿ (ಪಿಎಲ್‌ಡಿ) ಬ್ಯಾಂಕ್ ಚುನಾವಣೆ ಭದ್ರ ಬುನಾದಿ ಆಗಲು ಅಡಿಪಾಯದಂತಿದೆ. ಹೀಗಾಗಿ, ಎಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು’ ಎಂದು ಶಾಸಕ ಡಾ.ಕೆ.ಸುಧಾಕರ್ ಹೇಳಿದರು.

ತಾಲ್ಲೂಕಿನ ಹೂನೇಗಲ್ಲು ಬಳಿಯ ಪಾಪಣ್ಣ ಎಸ್ಟೇಟ್‌ನಲ್ಲಿ ಬುಧವಾರ ನಡೆದ ಪಿಎಲ್‌ಡಿ ಬ್ಯಾಂಕ್ ಚುನಾವಣೆ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.

‘ಉಪ ಚುನಾವಣೆ ಬೆನ್ನಲ್ಲೇ ನಗರಸಭೆ, ಪಿಎಲ್‌ಡಿ ಬ್ಯಾಂಕ್ ಚುನಾವಣೆಗಳು ಘೋಷಣೆಯಾಗಿವೆ. ಇವು ಮುಗಿಯುತ್ತಿದ್ದಂತೆ ಗ್ರಾಮ ಪಂಚಾಯಿತಿ ಚುನಾವಣೆ ಬರುತ್ತದೆ. ಅದು ಮುಗಿಯುತ್ತಿದ್ದಂತೆ ತಾಲ್ಲೂಕು ಮತ್ತು ಜಿಲ್ಲಾ ಪಂಚಾಯಿತಿ ಚುನಾವಣೆಗಳು ಬರುತ್ತವೆ. ಆದ್ದರಿಂದ, ಮೊದಲು ಬರುತ್ತಿರುವ ಈ ಚುನಾವಣೆ ನಮಗೆ ಬಹಳ ಮುಖ್ಯ. ಹಿಂದಿನ ಉಪ ಚುನಾವಣೆಯಲ್ಲಿ ಅಸಾಧ್ಯವಾದದ್ದನ್ನು ಸಾಧಿಸಿದ್ದೇವೆ. ಜೆಡಿಎಸ್‌ನ ಹಿರಿಯ ನಾಯಕರು ಈಗ ನಮ್ಮೊಂದಿಗೆ ಇರುವುದರಿಂದ ಈ ಬಾರಿ ಚುನಾವಣೆ ಕಳೆದ ಬಾರಿಯಷ್ಟು ಕಷ್ಟವಾಗುವುದಿಲ್ಲ’ ಎಂದು ತಿಳಿಸಿದರು.

‘ಈ ಚುನಾವಣೆಯಲ್ಲಿ ಜೆಡಿಎಸ್‌ ಮತ್ತು ಕಾಂಗ್ರೆಸ್‌ನವರು ಒಳ ಒಪ್ಪಂದ ಮಾಡಿಕೊಂಡಿದ್ದಾರೆ. ಹಾಗಾಗಿ, ಹೊಸದಾಗಿ ಬಿಜೆಪಿಗೆ ಸೇರಿಕೊಂಡಿರುವ ನಮಗೆ ಈ ಚುನಾವಣೆ ಸವಾಲಾಗಿದೆ. ಸಹಕಾರ ಕ್ಷೇತ್ರದಲ್ಲಿ ಯಾವುದೇ ಚುನಾವಣೆಗಳಲ್ಲಿ ಅಭ್ಯರ್ಥಿಗಳಿಗೆ ಪಕ್ಷದ ಚಿಹ್ನೆ ಇರುವುದಿಲ್ಲ. ಕಳೆದ ಐದು ವರ್ಷಗಳಲ್ಲಿ ಪಿಎಲ್‌ಡಿ ಬ್ಯಾಂಕಿನಲ್ಲಿ ಕೊಟ್ಟ ಮಾತಿನಂತೆ ಜನಪರವಾಗಿ ಕೆಲಸ ಮಾಡಿದ್ದೇವೆ. ಆದ್ದರಿಂದ, ನಮ್ಮ ಮುಖಂಡರು, ಕಾರ್ಯಕರ್ತರು ನಮ್ಮ ಸಾಧನೆಗಳನ್ನು ಮತದಾರರಿಗೆ ತಿಳಿಸುವ ಕೆಲಸ ಮಾಡಬೇಕು’ ಎಂದರು.

‘ಹಿಂದೆ ಪಿಎಲ್‌ಡಿ ಬ್ಯಾಂಕಿನಲ್ಲಿ ಚೀಟಿ ವ್ಯವಹಾರವಿತ್ತು. ಚೀಟಿ ಬರೆಯಿಸಿಕೊಂಡು ಹೋದವರಿಗೆ ಮಾತ್ರ ಪ್ರವೇಶವಿತ್ತು. ಆದರೆ ಬ್ಯಾಂಕ್‌ ನಮ್ಮ ವಶಕ್ಕೆ ಬಂದ ಬಳಿಕ ಆ ಚಿತ್ರಣ ಬದಲಾಗಿದೆ. ನಾಗೇಶ್‌ ಅವರ ನೇತೃತ್ವದಲ್ಲಿ ಆಡಳಿತ ಮಂಡಳಿ ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಬಿಜೆಪಿಯ ಎಲ್ಲ ನಾಯಕರಿಗೆ ಗೌರವ ತಂದು ಕೊಡುವ ರೀತಿ ಕೆಲಸ ಮಾಡಿದೆ. 500 ಸದಸ್ಯರಿಗೆ ಸಾಲ ಮಂಜೂರು ಮಾಡಲಾಗಿದೆ. ಸುಸಜ್ಜಿತವಾದ ಕಟ್ಟಡ ನಿರ್ಮಿಸಿ, ಪ್ರತಿ ತಿಂಗಳು 10 ಲಕ್ಷ ಬಾಡಿಗೆ ಬರುವಂತಹ ಶಾಶ್ವತ ಕೆಲಸ ಮಾಡುತ್ತಿದ್ದೇವೆ. ಈ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕು’ ಎಂದು ಹೇಳಿದರು.

ಸಭೆಯ ಬಳಿಕ ಅಭ್ಯರ್ಥಿಗಳ ಆಯ್ಕೆ, ಚುನಾವಣೆ ತಂತ್ರಗಾರಿಕೆ ಕುರಿತಂತೆ ಆಯ್ದ ಮುಖಂಡರು ರಹಸ್ಯ ಸಭೆ ನಡೆಸಿ ಚರ್ಚೆ ನಡೆಸಿದರು. ಜಿಲ್ಲಾ ಪಂಚಾಯಿತಿ ಸದಸ್ಯ ಪಿ.ಎನ್.ಕೇಶವರೆಡ್ಡಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಬಿ.ಎಂ.ರಾಮಸ್ವಾಮಿ, ಪಿಎಲ್‌ಡಿ ಬ್ಯಾಂಕ್ ಅಧ್ಯಕ್ಷ ನಾಗೇಶ್‌, ಎಪಿಎಂಸಿ ಅಧ್ಯಕ್ಷ ನಾರಾಯಣಸ್ವಾಮಿ, ಮುಖಂಡರಾದ ಕೆ.ವಿ.ನಾಗರಾಜ್, ಮರುಳಕುಂಟೆ ಕೃಷ್ಣಮೂರ್ತಿ, ಗರಿಗರೆಡ್ಡಿ, ರವೀಂದ್ರ ರೆಡ್ಡಿ, ಮೋಹನ್, ಚಂದ್ರಶೇಖರ್, ಕೃಷ್ಣಾರೆಡ್ಡಿ, ವೆಂಕಟನಾರಾಯಣಪ್ಪ ಸಭೆಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT