ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ: ಸರ್ಕಾರಿ ಕಟ್ಟಡಗಳ ಕಾಂಪೌಂಡ್‌ನಲ್ಲಿ ಪೋಸ್ಟರ್

ಚಿಕ್ಕಬಳ್ಳಾಪುರ ಎಸ್‌.ಪಿ ಮನೆ ಕಾಂಪೌಂಡ್‌ ಮೇಲೆಯೇ ರಾಜಕೀಯ ಬರಹ
Last Updated 10 ಮಾರ್ಚ್ 2023, 4:06 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ರಾಜ್ಯ ವಿಧಾನಸಭೆ ಚುನಾವಣೆಗೆ ಬೆರಳೆಣಿಕೆಯ ದಿನಗಳು ಬಾಕಿ ಇವೆ. ಈ ಸಮಯದಲ್ಲಿ ಎಲ್ಲ ರಾಜಕೀಯ ಪಕ್ಷಗಳು ಅಬ್ಬರದ ಪ್ರಚಾರದಲ್ಲಿ ತೊಡಗಿವೆ. ಪೋಸ್ಟರ್, ಬ್ಯಾನರ್‌ಗಳು, ಫ್ಲೆಕ್ಸ್‌ಗಳು ನಗರ, ಗ್ರಾಮೀಣ ಭಾಗಗಳಲ್ಲಿ
ರಾರಾಜಿಸುತ್ತಿವೆ.

ಈಗ ಮತ್ತೊಂದು ಹೆಜ್ಜೆ ಮುಂದೆ ಹೋಗಿರುವ ರಾಜಕೀಯ ಪಕ್ಷಗಳು ಮತ್ತು ಅವುಗಳ ಕಾರ್ಯಕರ್ತರು ಸರ್ಕಾರಿ ಕಟ್ಟಡಗಳ ಕಾಂಪೌಂಡ್‌ಗಳ ಮೇಲೆಯೂ ರಾಜಕೀಯ ಪೋಸ್ಟರ್‌ಗಳನ್ನು ಅಂಟಿಸುತ್ತಿದ್ದಾರೆ. ಈ ವಿಚಾರವಾಗಿ ಪ್ರಜ್ಞಾವಂತರು ಬೇಸರ ವ್ಯಕ್ತಪಡಿಸಿದರೆ, ಈ ಕಟ್ಟಡಗಳಿಗೆ ಸಂಬಂಧಿಸಿದ ಇಲಾಖೆ ಅಧಿಕಾರಿಗಳು ಮೌನವಾಗಿದ್ದಾರೆ. ಜಿಲ್ಲಾ ಕೇಂದ್ರ ಚಿಕ್ಕಬಳ್ಳಾಪುರ ನಗರದಲ್ಲಿಯೇ ಇಂತಹ ರಾಜಕೀಯ ಪೋಸ್ಟರ್‌ಗಳನ್ನು ಸರ್ಕಾರಿ ಕಟ್ಟಡಗಳ ಕಾಂಪೌಂಡ್‌ಗಳಲ್ಲಿ ಕಾಣಬಹುದು.

ಹೀಗೆ ಸರ್ಕಾರಿ ಕಟ್ಟಡಗಳ ಕಾಂಪೌಂಡ್ ಮೇಲೆ ಪೋಸ್ಟರ್ ಅಂಟಿಸುವ ವಿಚಾರದಲ್ಲಿ ಚಿಕ್ಕಬಳ್ಳಾಪುರದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ಪೈಪೋಟಿ ನಡೆಸಿದಂತೆ ಕಾಣುತ್ತದೆ. ಒಂದು ಬದಿಯಲ್ಲಿ ಕಾಂಗ್ರೆಸ್ ಪಕ್ಷದ ಪೋಸ್ಟರ್‌ಗಳು ಇದ್ದರೆ, ಮತ್ತೊಂದು ಬದಿಯಲ್ಲಿ ಬಿಜೆಪಿಯ ಬರಹಗಳಿವೆ.

ಜಿಲ್ಲಾಧಿಕಾರಿ ಸರ್ಕಾರಿ ನಿವಾಸದ ಪಕ್ಕದಲ್ಲಿಯೇ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರ ಸರ್ಕಾರಿ ನಿವಾಸವೂ ಇದೆ. ಈ ಮನೆಯ ಕಾಂಪೌಂಡ್ ಮೇಲೆ (ಸಿಟಿಜನ್ ಕ್ಲಬ್ ಎದುರು) ‘ಬಿಜೆಪಿಯೇ ಭರವಸೆ’ ಎನ್ನುವ ಪೋಸ್ಟರ್ ಅಂಟಿಸಲಾಗಿದೆ. ಬಿಜೆಪಿಯ ಈ ಪೋಸ್ಟರ್‌ನಲ್ಲಿ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್.ಯಡಿಯೂರಪ್ಪ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.‍ಪಿ.ನಡ್ಡಾ, ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್ ಅವರ ಚಿತ್ರಗಳಿವೆ.‌ ‘ಬಿಜೆಪಿಯ ಸದಸ್ಯರಾಗಿ ರಾಷ್ಟ್ರನಿರ್ಮಾಣದಲ್ಲಿ ಸಹಭಾಗಿಗಳಾಗಿ’ ಎನ್ನುವ ಬರಹ ಪೋಸ್ಟರ್‌ನಲ್ಲಿದೆ.

ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿಯು ರಾಜ್ಯದ ಎಲ್ಲೆಡೆ ಪೋಸ್ಟರ್ ಅಭಿಯಾನ ಸಹ ಹಮ್ಮಿಕೊಂಡಿದೆ. ಪಕ್ಷದ ಕಾರ್ಯಕರ್ತರು ತಮ್ಮ ಮನೆಗಳ ಮೇಲೆ ಪೋಸ್ಟರ್ ಹಾಕಿಕೊಳ್ಳಬೇಕು. ಬಿಜೆಪಿ ಬೆಂಬಲಿಸುವವರ ಮನೆಯ ಮೇಲೆ ಅಂಟಿಸಬೇಕು ಎಂದು ಪಕ್ಷದ ಮುಖಂಡರು ನಿರ್ದೇಶನ ನೀಡಿದ್ದಾರೆ. ಆ ಭಾಗವಾಗಿ ರಾಜ್ಯದಲ್ಲಿ ಈ ಪೋಸ್ಟರ್ ಅಭಿಯಾನ ನಡೆಯುತ್ತಿದೆ.

ಆದರೆ ಚಿಕ್ಕಬಳ್ಳಾಪುರದಲ್ಲಿ ಎಸ್‌ಪಿ ಮನೆಯ ಕಾಂಪೌಂಡ್, ಹಳೆ ಜಿಲ್ಲಾ ಆಸ್ಪತ್ರೆಯ ಹಿಂಭಾಗದ ಕಾಂಪೌಂಡ್, ಸಿಎಸ್‌ಐ ಆಸ್ಪತ್ರೆ ಮುಂಭಾಗದ ನಗರಸಭೆಗೆ ಸೇರಿದ ಶಿಶುವಿಹಾರದ ಕಾಂಪೌಂಡ್, ಮುನ್ಸಿಪಲ್ ಕಾಲೇಜು, ಲೋಕೋಪಯೋಗಿ ಇಲಾಖೆಯ ವಸತಿಗೃಹಗಳ ಕಾಂಪೌಂಡ್ ಮೇಲೆ ಕಾಂಗ್ರೆಸ್ ಮತ್ತು ಬಿಜೆಪಿಯ ಪೋಸ್ಟರ್‌ಗಳು ರಾರಾಜಿಸುತ್ತಿವೆ. ಇವೆಲ್ಲರೂ ಸರ್ಕಾರಿ ಕಟ್ಟಡಗಳೇ ಆಗಿವೆ.

ಬಿಜೆಪಿಯ ಈ ‍ಪೋಸ್ಟರ್ ಅಭಿಯಾನಕ್ಕೆ ವಿರುದ್ಧ ಎನ್ನುವಂತೆ ಕಾಂಗ್ರೆಸ್ ಸಹ ‘ಕಾಂಗ್ರೆಸ್ ಗ್ಯಾರೆಂಟಿ’ ಎನ್ನುವ ಪೋಸ್ಟರ್‌ಗಳನ್ನು ಅಂಟಿಸಿದೆ. ಗೃಹ ಲಕ್ಷ್ಮಿ ಪ್ರತಿ ಮನೆಯೊಡತಿಗೆ ಪ್ರತಿ ತಿಂಗಳು ₹2,000, ಗೃಹಜ್ಯೋತಿ ನಿಮ್ಮ ಮನೆಗೆ 200 ಯುನಿಟ್ ವಿದ್ಯುತ್ ಪ್ರತಿ ತಿಂಗಳು ಉಚಿತ ಎನ್ನುವ ಬರಹಗಳು ಈ ಪೋಸ್ಟರ್‌ನಲ್ಲಿವೆ. ಮಲ್ಲಿಕಾರ್ಜುನ ಖರ್ಗೆ, ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಚಿತ್ರಗಳಿವೆ.

ಆಯಾ ಕಟ್ಟಡಗಳು ಆಯಾ ಇಲಾಖೆಗಳ ವ್ಯಾಪ್ತಿಗೆ ಬರುತ್ತದೆ. ಹೀಗೆ ಕಟ್ಟಡಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸಿದರೆ ಇಲಾಖೆಯ ಅಧಿಕಾರಿಗಳು ದೂರು ನೀಡಬಹುದು. ಆದರೆ ಚಿಕ್ಕಬಳ್ಳಾಪುರದಲ್ಲಿ ರಾಜಕೀಯ ಪಕ್ಷಗಳು ಕಾಂಪೌಂಡ್‌ಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸಿದ್ದರೂ ಅವುಗಳ ತೆರವಿಗೆ ಅಥವಾ ದೂರು ನೀಡಲು ಅಧಿಕಾರಿಗಳು ಮುಂದಾಗಿಲ್ಲ.

ದೂರು ದಾಖಲಿಸಲು ಅವಕಾಶ

ಸಾರ್ವಜನಿಕ ಕಟ್ಟಡಗಳನ್ನು ವಿರೂಪಗೊಳಿಸಿದರೆ ಆ ಬಗ್ಗೆ ಆ ಇಲಾಖೆಯ ಅಧಿಕಾರಿಗಳು ಪೊಲೀಸರಿಗೆ ದೂರು ಸಹ ನೀಡಬಹುದು. ಸರ್ಕಾರಿ ಕಟ್ಟಡಗಳು ಅಥವಾ ಸರ್ಕಾರಿ ಕಟ್ಟಡಗಳ ಕಾಂಪೌಂಡ್‌ಗಳ ಮೇಲೆ ಪೋಸ್ಟರ್‌ಗಳನ್ನು ಅಂಟಿಸಿದರೆ ಅದು ನಿಯಮಗಳ ಉಲ್ಲಂಘನೆ ಆಗುತ್ತದೆ. ದೂರು ನೀಡಿದರೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆ ಬಗ್ಗೆ ತನಿಖೆ ಸಹ ನಡೆಸುವರು ಎಂದು ಅಧಿಕಾರಿಯೊಬ್ಬರು ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT