ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೌತಿ ಖಾತೆ: ದೊರೆಯದ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್’ ಯೋಜನೆ

ಜಮೀನಿಗೆ ಸಂಬಂಧಿಸಿದ ದಾಖಲೆಗಳಿಲ್ಲ l ಪೂರ್ಣ ಪ್ರಮಾಣದಲ್ಲಿ ತಲುಪದ ಯೋಜನೆ
Last Updated 23 ಅಕ್ಟೋಬರ್ 2021, 6:14 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಮ್ಮ ಹೆಸರಿನಲ್ಲಿ ಜಮೀನಿನ ಖಾತೆಗಳು ಇಲ್ಲದಿರುವುದು, ಅಜ್ಜ, ಅಪ್ಪಂದಿರ ಹೆಸರಿನಲ್ಲಿಯೇ ದಾಖಲೆಗಳು ಇರುವುದು, ಪೌತಿ ಖಾತೆ ಮಾಡಿಸಿಕೊಳ್ಳದಿರುವುದು... ಹೀಗೆ ದಾಖಲೆಗಳು ತಮ್ಮ ಹೆಸರಿನಲ್ಲಿ ಇಲ್ಲದ ಕಾರಣ ಇಂದಿಗೂ ಜಿಲ್ಲೆಯಲ್ಲಿ ಬಹಳಷ್ಟು ಬಡ, ಮಧ್ಯಮ ವರ್ಗದ ರೈತರು ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್’ ಯೋಜನೆಯಿಂದ ಹೊರಗೆ ಉಳಿದಿದ್ದಾರೆ.

ಕೃಷಿ ಇಲಾಖೆಯ ಮಾಹಿತಿ ಪ್ರಕಾರ ಜಿಲ್ಲೆಯಲ್ಲಿ 2,12,000 ರೈತರು ಇದ್ದಾರೆ. ಇವರಲ್ಲಿ 1,20,885 ರೈತರಿಗೆ ‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್’ ಯೋಜನೆಯ ಸೌಲಭ್ಯ ದೊರೆಯುತ್ತಿದೆ. ಯೋಜನೆಯಡಿ ಕೇಂದ್ರ ಸರ್ಕಾರದ ₹ 6 ಸಾವಿರ ಮತ್ತು ರಾಜ್ಯ ಸರ್ಕಾರದ ₹ 4 ಸಾವಿರ ರೈತರ ಖಾತೆಗಳಿಗೆ ಜಮೆ ಆಗುತ್ತಿದೆ.

ಈ 2,12,000 ರೈತರಲ್ಲಿ ಗರಿಷ್ಠ 15 ಸಾವಿರ ಮಂದಿ ಆದಾಯ ತೆರಿಗೆ ಪಾವತಿದಾರರಾಗಿದ್ದಾರೆ. 30 ಸಾವಿರಕ್ಕೂ ಹೆಚ್ಚು ಮಂದಿ ದೊಡ್ಡ ಪ್ರಮಾಣದ ಹಿಡುವಳಿ ಹೊಂದಿರುವ ರೈತರು ಇದ್ದಾರೆ. ಉಳಿದಂತೆ 40,000 ಸಾವಿರಕ್ಕೂ ಹೆಚ್ಚು ಮಂದಿ ಬಡ ಮತ್ತು ಮಧ್ಯಮ ವರ್ಗದ ರೈತರು ದಾಖಲೆಗಳ ಕಾರಣದಿಂದ ಯೋಜನೆಯಿಂದ ವಂಚಿತರಾಗಿದ್ದಾರೆ ಎನ್ನುತ್ತವೆ ಕೃಷಿ ಇಲಾಖೆಯ
ಮೂಲಗಳು.

ಜಿಲ್ಲೆಯಲ್ಲಿ ಪೌತಿ ಖಾತೆಗಳು ಸಮರ್ಪಕವಾಗಿ ಆಗಿಲ್ಲ. ಈ ಕಾರಣದಿಂದಲೇ ರೈತರು ಸೌಲಭ್ಯದಿಂದ ವಂಚಿತರಾಗಿದ್ದಾರೆ. ಕೃಷಿಯು ಕಂದಾಯ ಇಲಾಖೆ ಸಹಯೋಗದಲ್ಲಿ ಈ ಬಗ್ಗೆ ಪ್ರಚಾರ ನಡೆಸಿ ರೈತರಿಗೆ ಸೌಲಭ್ಯಗಳ ಬಗ್ಗೆ ತಿಳಿವಳಿಕೆ ನೀಡಿದರೂ ಖಾತೆಗಳನ್ನು ಬಹಳಷ್ಟು ಮಂದಿ ಮಾಡಿಸಿಕೊಂಡಿಲ್ಲ.

ನಗರ ಪ್ರದೇಶಗಳಲ್ಲಿ ವಾಸಿಸುತ್ತಿರುವುದು, ಅಣ್ಣ– ತಮ್ಮಂದಿರ ನಡುವಿನ ಹೊಂದಾಣಿಕೆ ಕೊರತೆಯೂ ಖಾತೆ ಮಾಡಿಸಿಕೊಳ್ಳಲು ಅಡ್ಡಿಯಾಗಿವೆ. ಈ ಕಾರಣದಿಂದಲೂ ಕೆಲವರು ಸಮ್ಮಾನ್ ಸೌಲಭ್ಯದಿಂದ ವಂಚಿತರಾಗಿದ್ದಾರೆ.

ಇತ್ತೀಚೆಗೆ ಜಿಲ್ಲಾಡಳಿತ ಪೌತಿ ಖಾತೆ, ಪಿಂಚಣಿ ಅದಾಲತ್‌ಗೆ ಸಂಬಂಧಿಸಿದಂತೆ ಜಿಲ್ಲೆಯಲ್ಲಿ ನಡೆಸಿದ ಆಂದೋಲನದಲ್ಲಿ 6,500ಕ್ಕೂ ಹೆಚ್ಚು ಅರ್ಜಿಗಳು ಪೌತಿ ಖಾತೆಗೆ ಸಂಬಂಧಿಸಿದಂತೆ ಸಲ್ಲಿಕೆ ಆಗಿವೆ.

‘ಪ್ರಧಾನ ಮಂತ್ರಿ ಕಿಸಾನ್ ಸಮ್ಮಾನ್’ ಯೋಜನೆಯ ಪ್ರಯೋಜನವನ್ನು ಎಲ್ಲ ರೈತರಿಗೆ ತಲುಪಿಸಬೇಕು ಎನ್ನುವ ಉದ್ದೇಶದಿಂದ 2019ರಲ್ಲಿ ರಾಜ್ಯದಲ್ಲಿಯೇ ಮಾದರಿ ಎನ್ನುವಂತೆ ತುಮಕೂರು ಜಿಲ್ಲೆಯ ಕುಣಿಗಲ್‌ ತಾಲ್ಲೂಕಿನಲ್ಲಿ ‘ಕಂದಾಯ ಇಲಾಖೆ ನಡಿಗೆ ಜನರ ಮನೆ ಬಾಗಿಲ ಬಳಿಗೆ’ ಎನ್ನುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಈ ಮೂಲಕ ಪೌತಿ ಖಾತೆ ಸೇರಿದಂತೆ ಅಗತ್ಯ ದಾಖಲೆಗಳನ್ನು ಮಾಡಿಕೊಡಲಾಗಿತ್ತು. ಈ ಮೂಲಕ ಸಮ್ಮಾನ್ ಯೋಜನೆಯನ್ನು ದೊಡ್ಡ ಮಟ್ಟದಲ್ಲಿ ರೈತರಿಗೆ ತಲುಪಿಸಲು ಸಾಧ್ಯವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT