ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಪ್ರಜಾವಾಣಿ’ ವಾಕಥಾನ್‌: ಮೇರೆ ಮೀರಿದ ಉತ್ಸಾಹ

ಕನ್ನಡ ಸಾಹಿತ್ಯ ಕ್ಷೇತ್ರದ ಅಮೃತವಾಹಿನಿ l ಚುನಾವಣೆ, ಮತದಾನದ ಜಾಗೃತಿ
Last Updated 28 ಫೆಬ್ರುವರಿ 2023, 7:07 IST
ಅಕ್ಷರ ಗಾತ್ರ

ಗೌರಿಬಿದನೂರು (ಚಿಕ್ಕಬಳ್ಳಾಪುರ): ‘ಪ್ರಜಾವಾಣಿ’ ಅಮೃತ ಮಹೋತ್ಸವದ ಅಂಗವಾಗಿ ನಗರದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ವಾಕಥಾನ್‌ಗೆ ಉತ್ತಮ ಸ್ಪಂದನೆ ದೊರೆಯಿತು.

ಪ್ರಜಾಪ್ರಭುತ್ವದ ದೊಡ್ಡ ಹಬ್ಬವಾದ ಚುನಾವಣೆ ಮತ್ತು ಮತದಾನದ ಮಹತ್ವಗಳನ್ನು ಮನೆ, ಮನಗಳಿಗೆ ಮುಟ್ಟಿಸುವಲ್ಲಿ ವಾಕಥಾನ್‌ ಯಶಸ್ವಿಯಾಯಿತು.

ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಸ್ವೀಪ್ ಸಮಿತಿ ಹಾಗೂ ನಗರಸಭೆಯ ಸಹಯೋಗದಲ್ಲಿ ನಡೆದ ವಾಕಥಾನ್‌ಗೆ ಜಿಲ್ಲಾಧಿಕಾರಿ ಎನ್.ಎಂ.ನಾಗರಾಜ್ ಚಾಲನೆ ನೀಡಿದರು‌.

ಮುಂಜಾನೆ ನಗರದ ಡಾ. ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಆರಂಭವಾದ ವಾಕಥಾನ್‌ನಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ಬಿಸಿಲನ್ನೂ ಲೆಕ್ಕಿಸದೆ ಉತ್ಸಾಹದಿಂದ ಹೆಜ್ಜೆ ಹಾಕಿದರು.

ನೂರಾರು ಪ್ರಜಾವಾಣಿ ಓದುಗರು, ಅಧಿಕಾರಿಗಳು, ವಿವಿಧ ಶಾಲೆ, ಕಾಲೇಜುಗಳ ವಿದ್ಯಾರ್ಥಿಗಳು, ಶಿಕ್ಷಕರು, ವರ್ತಕರು, ಸಾಹಿತಿಗಳು, ವಿವಿಧ ಸಂಘ, ಸಂಸ್ಥೆ ಮತ್ತು ಸಂಘಟನೆಗಳ ಸದಸ್ಯರು ಮತ್ತು ಸಾರ್ವಜನಿಕರು ವಾಕಥಾನ್‌ ಮೆರುಗು ಹೆಚ್ಚಿಸಿದರು. ಜಿಲ್ಲಾಧಿಕಾರಿ ಜತೆಯಾಗಿ ಅಧಿಕಾರಿಗಳ ತಂಡ ಕೂಡ ನಡಿಗೆಯಲ್ಲಿ ಪಾಲ್ಗೊಂಡರು. ವಾಕಥಾನ್ ಮುಗಿಯುವವರೆಗೂ ಮಾರ್ಗಮಧ್ಯೆ ಸಾರ್ವಜನಿಕರು ಸೇರಿಕೊಳ್ಳುತ್ತಲೇ ಇದ್ದರು.

‘ಪ್ರಜಾಪ್ರಭುತ್ವದ ಸೌಂದರ್ಯವೇ ಚುನಾವಣೆ’, ‘ಚುನಾವಣೆ ಪ್ರಜಾತಂತ್ರದ ಹಬ್ಬ’, ‘ಪ್ರತಿಯೊಬ್ಬರ ಮತವೂ ದೊಡ್ಡ ಪ್ರಜಾಶಕ್ತಿ’ ಹೀಗೆ ಚುನಾವಣೆಯ ಬಗ್ಗೆ ಜಾಗೃತಿ ಮೂಡಿಸುವ ಫಲಕಗಳನ್ನು ಹಿಡಿದು ವಿದ್ಯಾರ್ಥಿಗಳು ಹೆಜ್ಜೆ ಹಾಕಿದರು. ದಾರಿಯುದ್ದಕ್ಕೂ ಮತದಾನಕ್ಕೆ ಸಂಬಂಧಿಸಿದ ಜಾಗೃತಿ ಗೀತೆ, ಘೋಷಣೆ ಮೊಳಗಿದವು.

ನಗರದ ಪ್ರಮುಖ ರಸ್ತೆಗಳ ಮೂಲಕ ತೆರಳಿದ ವಾಕಥಾನ್‌ಗೆ ಎಂ.ಜಿ ವೃತ್ತದಲ್ಲಿ ತೆರೆ ಬಿದ್ದಿತು. ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲಿ ಮಾತನಾಡಿದ ಜಿಲ್ಲಾಧಿಕಾರಿ ನಾಗರಾಜ್ ಅವರು, ‘ಪ್ರಜಾವಾಣಿ’ ಕನ್ನಡ ಸಾಹಿತ್ಯ ಕ್ಷೇತ್ರದ ಅಮೃತವಾಹಿನಿ ಎಂದು ಬಣ್ಣಿಸಿದರು.

ನಾಡಿಗೆ ‘ಪ್ರಜಾವಾಣಿ’ ಕೊಡುಗೆಗಳ ಬಗ್ಗೆ ತಹಶೀಲ್ದಾರ್ ಮಹೇಶ್ ಎಸ್. ಪತ್ರಿ, ತಾಲ್ಲೂಕು ಪಂಚಾಯಿತಿ ಇ.ಒ ಆರ್.ಹರೀಶ್, ನಗರಸಭೆ ಪೌರಾಯುಕ್ತೆ ಡಿ.ಎಂ.ಗೀತಾ ಮುಂತಾದವರು ಮನದುಂಬಿ ಶ್ಲಾಘಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT