ಗುರುವಾರ , ಫೆಬ್ರವರಿ 20, 2020
22 °C
ಎಸ್‌ಜೆಸಿಐಟಿಯಲ್ಲಿ 22ನೇ ಭಾರತ ತಾಂತ್ರಿಕ ಶಿಕ್ಷಣ ಸಮಾಜದ (ಐಎಸ್‌ಟಿಇ) ಅಧ್ಯಾಪಕರ ರಾಜ್ಯಮಟ್ಟದ ಸಮಾವೇಶ

ಸಮಾಜಮುಖಿ ಆವಿಷ್ಕಾರಗಳಿಂದ ರಾಷ್ಟ್ರದ ಪ್ರಗತಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಶೈಕ್ಷಣಿಕ ಪ್ರಗತಿಯಿಂದ ದೇಶದ ಪ್ರಗತಿ ಸಾಧ್ಯ, ತಂತ್ರಜ್ಞಾನ ಆಧರಿತ ಶಿಕ್ಷಣ ವ್ಯವಸ್ಥೆ ಇಂದಿನ ಅಗತ್ಯಗಳಲ್ಲಿ ಒಂದಾಗಿದೆ. ಪ್ರತಿಯೊಂದು ಹೊಸ ಆವಿಷ್ಕಾರವೂ ಸಮಾಜಮುಖಿಯಾಗಿರಬೇಕು’ ಎಂದು ಕಲುಬುರ್ಗಿ ಕರ್ನಾಟಕ ಕೇಂದ್ರೀಯ ವಿಶ್ವವಿದಾಲಯದ ಕುಲಾಧಿಪತಿ ಪ್ರೋ.ಎನ್.ಆರ್.ಶೆಟ್ಟಿ ತಿಳಿಸಿದರು.

ನಗರದ ಹೊರವಲಯದ ಶ್ರೀಜಗದ್ಗುರು ಚಂದ್ರಶೇಖರನಾಥ ಸ್ವಾಮೀಜಿ ತಾಂತ್ರಿಕ ಸಂಸ್ಥೆಯಲ್ಲಿ (ಎಸ್‌ಜೆಸಿಐಟಿ) ಮಂಗಳವಾರ ‘ಎಂಜಿನಿಯರಿಂಗ್‌ನಲ್ಲಿ ಇತ್ತೀಚಿನ ಪ್ರಗತಿಗಳು ಮತ್ತು ಆವಿಷ್ಕಾರಗಳು’ ಎಂಬ ಶೀರ್ಷಿಕೆ ಅಡಿ ಆಯೋಜಿಸಿದ್ದ 22ನೇ ಭಾರತ ತಾಂತ್ರಿಕ ಶಿಕ್ಷಣ ಸಮಾಜದ (ಐಎಸ್‌ಟಿಇ) ಅಧ್ಯಾಪಕರ ರಾಜ್ಯಮಟ್ಟದ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಇವತ್ತು ಜ್ಞಾನದಿಂದ ಮಾತ್ರ ಉತ್ತಮ ರಾಷ್ಟ್ರ ನಿರ್ಮಿಸಲು ಸಾಧ್ಯ. ಹಾಗಾಗಿ ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕು. ವಿಜ್ಞಾನ, ತಂತ್ರಜ್ಞಾನ ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಆಸಕ್ತಿ ವಹಿಸಿದರೆ ಭವಿಷ್ಯ ಉಜ್ವಲವಾಗುತ್ತದೆ. ವಿದ್ಯಾರ್ಥಿಗಳು ಹೆಚ್ಚು ಪ್ರಶ್ನೆಗಳನ್ನು ಕೇಳಿ ತಾವು ಕಲಿಯುವ ವಿಷಯದ ಸ್ಪಷ್ಟನೆ ಪಡೆಯುವಂತೆ ಬೋಧನಾಕ್ರಮವನ್ನು ಬದಲಾಯಿಸಬೇಕಾದ ಅಗತ್ಯವಿದೆ’ ಎಂದು ಹೇಳಿದರು.

‘ಅಧ್ಯಾಪಕರು ಮೌಲ್ಯಧಾರಿತ ಶಿಕ್ಷಣವನ್ನು ವಿದ್ಯಾರ್ಥಿಗಳಿಗೆ ಹೇಳಿಕೊಟ್ಟಾಗ ಮಾತ್ರ ಉತ್ತಮ ದೇಶ ನಿರ್ಮಾಣವಾಗಲು ಸಾಧ್ಯ. ತಂತ್ರಜ್ಞಾನ ಕ್ಷೇತ್ರದಲ್ಲಿ ಹಲವು ಆವಿಷ್ಕಾರಗಳು ನಡೆಯುತ್ತಿವೆ. ಭಾರತದಂತಹ ಕೃಷಿ ಪ್ರಧಾನ ದೇಶದಲ್ಲಿ ತಂತ್ರಜ್ಞಾನಗಳ ಮೂಲಕ ರೈತರ ಜೀವನಮಟ್ಟ ಸುಧಾರಣೆಗೆ ಮುಂದಾಗಬೇಕು. ಆಗ ದೇಶ ಇನ್ನಷ್ಟು ಅಭಿವೃದ್ಧಿಯಾಗುವ ಜತೆಗೆ ಕೃಷಿಕರ ಬವಣೆ ಕೂಡ ನೀಗಲಿದೆ’ ಎಂದರು.

ಸುರತ್ಕಲ್‌ನ ರಾಷ್ಟ್ರೀಯ ತಂತ್ರಜ್ಞಾನ ಸಂಸ್ಥೆ (ಎನ್‌ಐಟಿಕೆ) ಪ್ರಾಧ್ಯಾಪಕ ಎಸ್‌.ಎನ್.ಸುರೇಶ್‌ ಮಾತನಾಡಿ, ‘ಎಂಜಿನಿಯರ್‌ಗಳು ದೇಶದ ಬೆನ್ನೆಲುಬು ಇದ್ದಂತೆ. ಸ್ಪರ್ಧಾತ್ಮಕ ಯುಗದಲ್ಲಿ ವಿದ್ಯಾರ್ಥಿಗಳು ಸದಾ ಕಾಲ ಅಧ್ಯಯನದಲ್ಲಿ ತೊಡಗಿಸಿಕೊಂಡರೆ ಜ್ಞಾನ ಸಂಪಾಧಿಸುವ ಮೂಲಕ ಸಮಾಜಕ್ಕೆ ಉತ್ತಮ ಕೊಡುಗೆ ನೀಡಬಹುದು. ವಿದ್ಯಾರ್ಥಿ ಜೀವನದಲ್ಲಿ ಪ್ರತಿಯೊಬ್ಬರೂ ಮಾನವೀಯ, ಸಾಮಾಜಿಕ ಕಳಕಳಿ ಬೆಳೆಸಿಕೊಳ್ಳಬೇಕು’ ಎಂದು ಹೇಳಿದರು.

ಸಮಾವೇಶದಲ್ಲಿ ಎಲ್‌.ಎಸ್‌.ಚಂದ್ರಕಾಂತ್ ಸ್ಮಾರಕ ಉಪನ್ಯಾಸ (ರಾಷ್ಟ್ರೀಯ ಸಾಂಸ್ಥಿಕ ಶ್ರೇಯಾಂಕ ಚೌಕಟ್ಟು) ಕೂಡ ನಡೆಯಿತು. ಸುಮಾರು 80ಕ್ಕೂ ಹೆಚ್ಚು ತಾಂತ್ರಿಕ ಸಂಶೋಧನಾ ಪ್ರಬಂಧಗಳು ಮಂಡನೆಯಾದವು. ಆದಿಚುಂಚನಗಿರಿಯ ಚಿಕ್ಕಬಳ್ಳಾಪುರ ಶಾಖಾ ಮಠದ ಕಾರ್ಯದರ್ಶಿ ಮಂಗಳಾನಂದನಾಥ ಸ್ಪಾಮೀಜಿ, ಐಎಸ್‌ಟಿಇ ಮಾಜಿ ಅಧ್ಯಕ್ಷ ಸಿ.ಕೆ.ಸುಬ್ಬರಾಯ, ಎಸ್‌ಜೆಸಿಐಟಿ ಪ್ರಾಂಶುಪಾಲ ಕೆ.ಎಂ.ರವಿಕುಮಾರ್ ಉಪಸ್ಥಿತರಿದ್ದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು