ಭಾನುವಾರ, 23 ಜೂನ್ 2024
×
ADVERTISEMENT
ಈ ಕ್ಷಣ :
ADVERTISEMENT

ಚಿಂತಾಮಣಿ: ಬಯಲುಸೀಮೆಯಲ್ಲಿ ಸಮೃದ್ಧ ಬಾಳೆ ಬೆಳೆ

Published 26 ಮೇ 2024, 5:50 IST
Last Updated 26 ಮೇ 2024, 5:50 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನ ಶೆಟ್ಟಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನಕಲ್ ಗ್ರಾಮದ ರೈತ ಎನ್.ಶಿವಾನಂದ ಕಳೆದ ವರ್ಷ ನಾಟಿ ಮಾಡಿದ್ದ ಬಾಳೆ ತೋಟ ಮಂದಹಾಸ ಮೂಡಿಸಿದೆ.

ಪದವೀಧರರಾದ ಶಿವಾನಂದ ಸರ್ಕಾರಿ ಕೆಲಸಕ್ಕೆ ಮಾರುಹೋಗದೆ ಕೃಷಿಯಲ್ಲಿ ಆಸಕ್ತಿ ಬೆಳೆಸಿಕೊಂಡವರು. ಬಾಳೆತೋಟ ಅವರ ಪರಿಶ್ರಮಕ್ಕೆ ತಕ್ಕ ಸಮೃದ್ಧವಾದ ಫಸಲು ನೀಡುತ್ತಿದೆ.

ಬಯಲುಸೀಮೆ, ಬರಡುಭೂಮಿ ಎಂದೆಲ್ಲ ಕಪ್ಪು ಅಂಟಿಸಿಕೊಂಡಿರುವ ಪ್ರದೇಶದಲ್ಲಿ ಬಾಳೆ ಬೆಳೆಯುವುದು ಕಷ್ಟದಾಯಕ. ವಿವಿಧ ಸಮಸ್ಯೆಗಳಿಂದಾಗಿ ಬೆಳೆ ನಿರ್ವಹಣೆ ತ್ರಾಸದಾಯಕ ಕೆಲಸ. ಅವರು ತಮ್ಮ 4 ಎಕರೆ ಜಮೀನಿನಲ್ಲಿ 2.5 ಎಕರೆಯಲ್ಲಿ ಕಳೆದ ವರ್ಷ ಬಾಳೆ ನಾಟಿ ಮಾಡಿದ್ದಾರೆ. ಮೊದಲ ಬೆಳೆಗೆ ಸರಿಸುಮಾರು ಒಂದು ವರ್ಷ ಬೇಕು. ನಂತರ 6-7 ತಿಂಗಳಿಗೆ ಬೆಳೆ ಕೊಯ್ಲಿಗೆ ಬರುತ್ತದೆ. ಬಾಳೆ ಒಮ್ಮೆ ನಾಟಿ ಮಾಡಿದರೆ ಮೂರು ವರ್ಷ ಇರುತ್ತದೆ.

ಗೌರಿಬಿದನೂರಿಂದ ಅರ್ಧ, ಮುಕ್ಕಾಲು ಅಡಿ ಸಸಿಗಳನ್ನು ತಂದು, ಟ್ರಂಚ್ ಹೊಡೆದು 6 ಅಡಿಗೆ ಒಂದರಂತೆ ಸಸಿ ನಾಟಿ ಮಾಡಿದ್ದಾರೆ. ಸಸಿ, ತಿಪ್ಪೆಗೊಬ್ಬರ, ರಸಗೊಬ್ಬರ, ಔಷಧಿ, ಕೂಲಿಯಾಳುಗಳು ಸೇರಿ ಅಂದಾಜು ₹2.5 ಲಕ್ಷ ಖರ್ಚು ಮಾಡಿದ್ದಾರೆ. ಪ್ರಥಮ ಬೆಳೆಯಲ್ಲೇ ಉತ್ತಮ ಫಸಲು ಬಂದಿದೆ. ಸುಮಾರು 40 ಟನ್ ಇಳುವರಿಯಾಗಿತ್ತು. ಮಾರಾಟದ ಖರ್ಚು ಕಳೆದು ಸರಾಸರಿ ಟನ್‌ಗೆ ₹20 ಸಾವಿರ ಬೆಲೆ ಸಿಕ್ಕಿದ್ದು ಸುಮಾರು ₹8 ಲಕ್ಷ ಆದಾಯ ಬಂದಿದೆ ಎನ್ನುತ್ತಾರೆ ಶಿವಾನಂದ.

ಎರಡನೆ ಬೆಳೆ ಈಗ ಕೊಯ್ಲಿಗೆ ಬಂದಿದೆ. ಎರಡನೇ ಬೆಳೆಗೆ ಖರ್ಚು ಕಡಿಮೆಯಾಗಿದೆ. ಈ ಬೆಳೆಯಲ್ಲಿ ಮೊದಲಿನ ಬೆಳೆಯ ಎರಡು ಪಟ್ಟು 70-80 ಟನ್ ಇಳುವರಿ ನಿರೀಕ್ಷಿಸಿದ್ದೇವೆ. ಈಗಾಗಲೇ ಹಾಪ್‌ಕಾಮ್ಸ್‌ಗೆ ಕೆ.ಜಿ ಗೆ ₹23ನಂತೆ ಮಾರಾಟ ಮಾಡುತ್ತಿದ್ದಾರೆ. ಉಳಿದ ಜಮೀನಿನಲ್ಲಿ ಕೊತ್ತುಂಬರಿ ಸೊಪ್ಪು ಬೆಳೆದಿದ್ದಾರೆ. ಅದು ಕೊಯ್ಲಿನ ಹಂತದಲ್ಲಿದೆ.

ಆಸಕ್ತಿಯಿಂದಲೇ ಕೃಷಿಯಲ್ಲಿ ತೊಡಗಿಸಿಕೊಂಡಿದ್ದೆವು. ಮೊದಲು ಚೆನ್ನಾಗಿತ್ತು, ಇತ್ತೀಚೆಗೆ ಕೃಷಿ ಕಷ್ಟದಾಯಕವಾಗುತ್ತಿದೆ. ಬಿತ್ತನೆ ಬೀಜ, ಸಸಿ, ಗೊಬ್ಬರ, ಔಷಧಿ ಬೆಲೆ ಗಗನಕ್ಕೇರಿದೆ. ಕೂಲಿಯಾಳುಗಳ ಸಮಸ್ಯೆ, ಯಂತ್ರೋಪಕರಣಗಳ ಬೆಲೆ ಅಧಿಕವಾಗಿರುವುದರಿಂದ ಕೃಷಿ ಲಾಭದಾಯಕವಾಗಿಲ್ಲ. ಅಲ್ಲೋಬ್ಬ-ಇಲ್ಲೊಬ್ಬ ಪ್ರಗತಿಪರ ರೈತರನ್ನು ಗುರುತಿಸಿ ಕೃಷಿಯನ್ನು ಅಳೆಯುವುದು ಸರಿಯಲ್ಲ. ಶೇ 70-80 ರೈತರಿಗೆ ಅನುಕೂಲವಾದರೆ ಮಾತ್ರ ಕೃಷಿ ಉಳಿಯುತ್ತದೆ ಎಂದು ಶಿವಾನಂದ ಅಭಿಪ್ರಾಯಪಡುತ್ತಾರೆ.

ಹಾಪ್‌ಕಾಮ್ಸ್‌ನಿಂದ ರೈತರಿಗೆ ಅನುಕೂಲವಿದೆ. ಬಾಳೆಯನ್ನು ಹಾಪ್‌ಕಾಮ್ಸ್‌ಗೆ ಮಾರಾಟ ಮಾಡುತ್ತಿದ್ದೇನೆ. ರೈತರು ಉತ್ಪನ್ನ ನೀಡಿದ 2-3 ತಿಂಗಳಿಗೆ ಹಣ ನೀಡುತ್ತಾರೆ. ಹೀಗಾಗಿ ಬಹುತೇಕ ರೈತರು ಹಾಪ್‌ಕಾಮ್ಸ್‌ ಕಡೆಗೆ ಮುಖ ಹಾಕುವುದಿಲ್ಲ. ಸರ್ಕಾರವೂ ಗಮನಹರಿಸುವುದಿಲ್ಲ. ಜನಪ್ರತಿನಿಧಿಗಳು ಕೇವಲ ಪ್ರಚಾರಕ್ಕೆ ಸೀಮಿತರಾಗುತ್ತಾರೆ ಎಂದು ಶಿವಾನಂದ ವಿಷಾದ ವ್ಯಕ್ತಪಡಿಸಿದರು.

ರೈತ ಎನ್.ಶಿವಾನಂದ
ರೈತ ಎನ್.ಶಿವಾನಂದ

ರೈತರ ಶೋಷಣೆ

ರೈತ ದೇಶದ ಬೆನ್ನೆಲಬು ಎಂದು ಹಳ್ಳಿಯಿಮದ ದಿಲ್ಲಿಯವರೆಗೂ ಪ್ರಚಾರ ಮಾಡುತ್ತಾರೆ. ಅಡಿಯಿಂದ ಮುಡಿಯವರೆಗೂ ರೈತನ ಬೆನ್ನೆಲಬನ್ನು ಮುರಿಯುತ್ತಿದ್ದಾರೆ. ಬೀಜ ಅಥವಾ ಸಸಿ ಖರೀದಿಯಿಂದ ಉತ್ಪನ್ನ ಮಾರಾಟದವರೆಗೂ ರೈತ ಶೋಷಣೆಗೆ ಒಳಗಾಗುತ್ತಾನೆ. ಕಂಪನಿಗಳು ಬೀಜ ಸಸಿಗಳನ್ನು ನೀಡುವುದರಲ್ಲೇ ಮೋಸ ಮಾಡುತ್ತಾರೆ. ಬೀಜೋತ್ಪಾದನೆಯ ಎಲ್ಲ ಹಂತಗಳಲ್ಲೂ ಸಮಗ್ರವಾದ ಪರಿಶೀಲನೆ ನಡೆಸುವುದಿಲ್ಲ. ಅದರಿಂದ ಮೋಸ ಹೋಗುವವನು ರೈತರು. 2 ವರ್ಷಗಳ ಹಿಂದೆ ಡ್ರಿಪ್ ಗೊಬ್ಬರ ಎಂದು ನೀಡಿದರು. ಅದು ನೀರಿನಲ್ಲಿ ಕರಗಲೇ ಇಲ್ಲ. ಕೃಷಿ ಇಲಾಖೆ ಮತ್ತು ಸರ್ಕಾರಕ್ಕೆ ಮನವಿ ಸಲ್ಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ತಮ್ಮ ಅನುಭವ ಹಂಚಿಕೊಂಡರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT