ಕನಿಷ್ಠ ವೇತನ ನೀಡಲು ನೌಕರರ ಆಗ್ರಹ

7
ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ (ಸಿಐಟಿಯು) ಜಿಲ್ಲಾ ಘಟಕದ ವತಿಯಿಂದ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ

ಕನಿಷ್ಠ ವೇತನ ನೀಡಲು ನೌಕರರ ಆಗ್ರಹ

Published:
Updated:
ಗ್ರಾಮ ಪಂಚಾಯಿತಿ ನೌಕರರು ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು

ಚಿಕ್ಕಬಳ್ಳಾಪುರ: ‘ಗ್ರಾಮ ಪಂಚಾಯಿತಿಗಳಲ್ಲಿರುವ 51,114 ನೌಕರರಿಗೆ ರಾಜ್ಯ ಸರ್ಕಾರ ಕನಿಷ್ಠ ವೇತನ ನೀಡಲು ಕ್ರಮ ಕೈಗೊಳ್ಳಬೇಕು’ ಸೇರಿದಂತೆ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ಸದಸ್ಯರು ಬುಧವಾರ ಜಿಲ್ಲಾಡಳಿತ ಭವನದ ಎದುರು ಪ್ರತಿಭಟನೆ ನಡೆಸಿದರು.

ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಮಾರುತಿ ಮಾನ್ಪಡೆ ಮಾತನಾಡಿ, ‘ಪಂಚಾಯಿತಿ ನೌಕರರ ಬೇಡಿಕೆಗಳ ಈಡೇರಿಕೆ ವಿಚಾರವಾಗಿ ಕಳೆದ ವರ್ಷದ ಜುಲೈ 19ರಂದು ಮುಖ್ಯಮಂತ್ರಿ ಜತೆಗೆ ಸುದೀರ್ಘ ಸಭೆ ನಡೆಸಲಾಗಿತ್ತು. ಆದರೆ ಅದರ ಫಲ ಈವರೆಗೆ ಬರಲಿಲ್ಲ. ಅದಕ್ಕೆ ಏನು ತೊಂದರೆ ಇದೆ ಎನ್ನುವುದು ತಿಳಿಯಲು ಬಂದಿದ್ದೇವೆ’ ಎಂದು ಹೇಳಿದರು.

‘ಸರ್ಕಾರ ಕನಿಷ್ಠ ವೇತನಕ್ಕೆ ಸಂಬಂಧಿಸಿದ ಆದೇಶವನ್ನು 2012ರಲ್ಲಿ ಹೊರಡಿಸಿದೆ. ಆದರೆ ಅದನ್ನು ಈವರೆಗೆ ಜಾರಿಗೆ ತಂದಿಲ್ಲ. ಆದರೆ ಕಳೆದ ಜೂನ್ 5 ರಂದು ನಡೆದ ವಿಡಿಯೊ ಸಂವಾದದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ ಪ್ರಧಾನ ಕಾರ್ಯದರ್ಶಿ ಅವರು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ, ಪಿಡಿಒಗಳಿಗೆ ನೀಡಿದ ನಿರ್ದೇಶನ ಇದೀಗ ಗೊಂದಲ ಮೂಡಿಸಿದೆ’ ಎಂದು ತಿಳಿಸಿದರು.

‘ಪ್ರಧಾನ ಕಾರ್ಯದರ್ಶಿ ಅವರು ನೌಕರರ ನೇಮಕಾತಿ ದಿನಾಂಕ, ಹುಟ್ಟಿದ ದಿನಾಂಕ, ವಿದ್ಯಾರ್ಹತೆ ಆಧಾರದಲ್ಲಿ ಎರಡು ಪಟ್ಟಿ ಸಿದ್ಧಪಡಿಸಿ ಎಂದು ಹೇಳಿರುವುದರಿಂದ 51,114 ನೌಕರರ ಪೈಕಿ 18 ಸಾವಿರ ನೌಕರರಿಗೆ ಸರ್ಕಾರದ ವೇತನದಿಂದ ಕೈಬಿಡಲು ತೀರ್ಮಾನಿಸಲಾಗಿದೆ. ಈ ಅನ್ಯಾಯ, ತಾರತಮ್ಯವನ್ನು ಒಪ್ಪಲಾಗದು. ಪ್ರತಿಯೊಬ್ಬರಿಗೂ ಸರ್ಕಾರದಿಂದ ಕನಿಷ್ಠ ವೇತನ ಸಿಗುವವರೆಗೂ ನಮ್ಮ ಹೋರಾಟ ನಿರಂತರವಾಗಿರುತ್ತದೆ’ ಎಂದರು.

‘ಸರ್ಕಾರದ ಆದೇಶದಂತೆ ಗ್ರಾಮ ಪಂಚಾಯಿತಿಗಳಲ್ಲಿ ಕಾರ್ಯನಿರ್ವಹಿಸುತ್ತಿರುವ 51,114 ನೌಕರರಿಗೆ  'ಎಲೆಕ್ಟ್ರಾನಿಕ್ ಫಂಡ್ ಮ್ಯಾನೇಜ್‌ಮೆಂಟ್ ಸಿಸ್ಟಂ' (ಇ–ಎಫ್‌ಎಂಎಸ್‌) ಮೂಲಕ ವೇತನ ಪಾವತಿ ಮಾಡಲು ಕ್ರಮ ಕೈಗೊಳ್ಳಬೇಕು. ಒಂದು ಪಂಚಾಯಿತಿಯಲ್ಲಿ ಐದು ನೌಕರರಿಗೆ ಮಾತ್ರ ಕನಿಷ್ಠ ವೇತನಕ್ಕೆ ಪರಿಗಣಿಸುವುದಾಗಿ ಹೇಳಲಾಗುತ್ತಿದೆ. ಇದು ಅವೈಜ್ಞಾನಿಕ ಕ್ರಮ. ಉಳಿದ ನೌಕರರು ಎಲ್ಲಿಗೆ ಹೋಗಬೇಕು? ಆದ್ದರಿಂದ ಪ್ರತಿಯೊಬ್ಬರಿಗೂ ಕನಿಷ್ಠ ವೇತನ ನೀಡಬೇಕು. ಅದಕ್ಕಾಗಿ ಹೊಸ ಹುದ್ದೆಗಳನ್ನು ಸೃಜಿಸಬೇಕು’ ಎಂದು ಒತ್ತಾಯಿಸಿದರು.

‘ಗ್ರಾಮ ಪಂಚಾಯಿತಿ ನೌಕರರಿಗೆ ಪಿಂಚಣಿ, ವೈದ್ಯಕೀಯ ವೆಚ್ಚ, ಭವಿಷ್ಯ ನಿಧಿ ಸಿಗುವಂತೆ ಆದೇಶಿಸಬೇಕು. ನಗರಾಭಿವೃದ್ಧಿ ಇಲಾಖೆಯ ಮಾದರಿಯಲ್ಲಿ ಗ್ರಾಮ ಪಂಚಾಯಿತಿ ನೌಕರರಿಗೆ ಸೇವಾ ನಿಯಮಾವಳಿ ರಚಿಸುವುದು ಪ್ರಗತಿಯಲ್ಲಿದೆ. ಇದಕ್ಕೆ ಸೂಕ್ತ ಆದೇಶ ಹೊರಡಿಸಬೇಕು. 2011ರ ಜನಗಣತಿ ಆಧಾರದಲ್ಲಿ ಗ್ರೇಡ್‌ –2 ಗ್ರಾಮ ಪಂಚಾಯಿತಿಗಳನ್ನು ಗ್ರೇಡ್ –1ಕ್ಕೆ ಮೇಲ್ದರ್ಜೆಗೇರಿಸಬೇಕು’ ಎಂದು ಹೇಳಿದರು.

‘ಸರ್ಕಾರದ ಹೆಚ್ಚುವರಿ ಕಾರ್ಯದರ್ಶಿ ಎಂ.ಎಸ್.ಸ್ವಾಮಿ ಅವರ ಆಯೋಗ ನೀಡಿದ ವರದಿಯ ಶಿಫಾರಸಿನಂತೆ ಜನಸಂಖ್ಯೆಗೆ ಅನುಗುಣವಾಗಿ ಗ್ರಾಮ ಪಂಚಾಯಿತಿಗಳಲ್ಲಿ ಹುದ್ದೆಗಳನ್ನು ಸೃಜಿಸಬೇಕು. 60 ವರ್ಷಗಳನ್ನು ಪೂರೈಸಿ ನಿವೃತ್ತಿ ಹೊಂದಿದ ಸಿಬ್ಬಂದಿಗೆ ಸರ್ಕಾರದ ಆದೇಶದನ್ವಯ ಉಪಧಾನ ನೀಡಲು ಕ್ರಮಕೈಗೊಳ್ಳಬೇಕು’ ಎಂದು ತಿಳಿಸಿದರು.

ಸಂಘದ ಜಿಲ್ಲಾ ಘಟಕದ ಗೌರವಾಧ್ಯಕ್ಷ ಜಿ.ಸಿದ್ಧಗಂಗಪ್ಪ ಮಾತನಾಡಿ, ‘ಗ್ರಾಮ ಪಂಚಾಯಿತಿ ನೌಕರರು ರಾಜ್ಯದಲ್ಲಿ ತಮ್ಮ ಬೇಡಿಕೆಗಳ ಈಡೇರಿಕೆಗಾಗಿ 25 ವರ್ಷಗಳಿಂದ ಹೋರಾಟ ಮಾಡುತ್ತ ಬಂದಿದ್ದಾರೆ. ಕನಿಷ್ಠ ವೇತನ ಕಾನೂನು ತಂದರೂ ಅದು ಜಾರಿಯಾಗಿರಲಿಲ್ಲ. ಆ ವಿಚಾರದಲ್ಲಿ ಕಳೆದ ಸರ್ಕಾರದ ಮೇಲೆ ಒತ್ತಡ ಹಾಕಲಾಯಿತು. ಅದರ ಫಲವಾಗಿ ಕನಿಷ್ಠ ವೇತನ ಜಾರಿಗೆ ಬಂದಿದೆ’ ಎಂದು ಹೇಳಿದರು.

‘ಕಳೆದ ಮಾರ್ಚ್ 1ರಿಂದ ಕನಿಷ್ಠ ವೇತನ ನೀಡಬೇಕು ಎಂದು ಸರ್ಕಾರ ಆದೇಶಿಸಿದೆ. ಆದರೆ ಇವತ್ತಿನ ವರೆಗೂ ಜಿಲ್ಲೆಯ ಪಂಚಾಯಿತಿಗಳಲ್ಲಿ ನೌಕರರಿಗೆ ಕನಿಷ್ಠ ವೇತನ ಕೊಡುವ ಕೆಲಸವಾಗಿಲ್ಲ. ಇದು ನಮ್ಮ ದುರಂತ. ಈ ಬಗ್ಗೆ ಎಲ್ಲಾ ತಾಲ್ಲೂಕು ಪಂಚಾಯಿತಿ ಕಾರ್ಯನಿರ್ವಹಣಾಧಿಕಾರಿಗಳ ಬಳಿ ಚರ್ಚಿಸಲಾಗಿದೆ. ಅವರು ಆದೇಶಗಳನ್ನು ಹೊರಡಿಸಿದ್ದಾರೆ. ಆದರೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಆ ವೇತನ ನೀಡಲು ಹಿಂದುಮುಂದು ನೋಡುತ್ತಿದ್ದಾರೆ’ ಎಂದು ಆರೋಪಿಸಿದರು.

‘ಎಸ್‌.ಎಸ್‌.ಎಲ್‌.ಸಿ ವಿದ್ಯಾರ್ಹತೆ ಹೊಂದಿರುವ, 10 ವರ್ಷ ಸೇವೆ ಸಲ್ಲಿಸಿದ ಬಿಲ್ ಸಂಗ್ರಹಕಾರರಿಗೆ ಗ್ರೇಡ್‌ 2 ಕಾರ್ಯದರ್ಶಿ ಹುದ್ದೆಗೆ ಭಡ್ತಿ ನೀಡಬೇಕು ಎಂಬ ನಿಯಮಾವಳಿ ಬದಲಾಯಿಸಿ ವಿದ್ಯಾರ್ಹತೆ ಪಿಯುಸಿ ಎಂದು ಬದಲಾಯಿಸಲಾಗಿದೆ. ಇದರಿಂದ ಜಿಲ್ಲೆಯಲ್ಲಿ ಸುಮಾರು 75 ನೌಕರರು ಬಡ್ತಿಯಿಂದ ವಂಚಿತರಾಗುತ್ತಾರೆ. ಆದ್ದರಿಂದ ಈ ವಿಚಾರದಲ್ಲಿ ವಿದ್ಯಾರ್ಹತೆ ಮೊದಲಿನಂತೆ ಮುಂದುವರಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಗೋವಿಂದ ರೆಡ್ಡಿ, ಉಪಾಧ್ಯಕ್ಷ ಬಿ.ಎನ್.ಮುನಿಕೃಷ್ಣಪ್ಪ, ಪ್ರಧಾನ ಕಾರ್ಯದರ್ಶಿ ಪಾಪಣ್ಣ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಿವೃತ್ತಿ ಹೊಂದುವ ನೌಕರರಿಗೆ 15 ತಿಂಗಳ ಸಂಬಳವನ್ನು ಪಿಂಚಣಿಯಾಗಿ ನೀಡಬೇಕು.ಆದರೆ ಈ ಜಿಲ್ಲೆಯಲ್ಲಿ ಆ ವಿಚಾರದಲ್ಲಿ ತುಂಬಾ ಅನ್ಯಾಯವಾಗಿದೆ. ಇದನ್ನು ಸರಿಪಡಿಸಬೇಕಿದೆ
ಮಾರುತಿ ಮಾನ್ಪಡೆ, ಅಧ್ಯಕ್ಷ, ರಾಜ್ಯ ಗ್ರಾಮ ಪಂಚಾಯಿತಿ ನೌಕರರ ಸಂಘ

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !