ಸೋಮವಾರ, 22 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಅರಣ್ಯ ಇಲಾಖೆ ದೌರ್ಜನ್ಯ ಖಂಡಿಸಿ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ತಹಶೀಲ್ದಾರ್‌ಗೆ ಮನವಿ
Published 27 ಫೆಬ್ರುವರಿ 2024, 13:12 IST
Last Updated 27 ಫೆಬ್ರುವರಿ 2024, 13:12 IST
ಅಕ್ಷರ ಗಾತ್ರ

ಚಿಂತಾಮಣಿ: ರೈತರ ಮೇಲೆ ಅರಣ್ಯ ಇಲಾಖೆ ಅಧಿಕಾರಿಗಳ ದೌರ್ಜನ್ಯ ಖಂಡಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರುಸೇನೆ ತಾಲ್ಲೂಕು ಘಟಕದ ವತಿಯಿಂದ ಮಂಗಳವಾರ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿ ತಹಶೀಲ್ದಾರ್ ಮೂಲಕ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಲಾಯಿತು.

ರೈತಸಂಘದ ಪದಾಧಿಕಾರಿಗಳ ನೇತೃತ್ವದಲ್ಲಿ ರೈತರು ನಗರದ ಪ್ರಮುಖ ರಸ್ತೆಗಳ ಮೂಲಕ ಸಾಗಿ ತಾಲ್ಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಸುಮಾರು 80 ವರ್ಷಗಳಿಂದ ಉಳುಮೆ ಮಾಡಿಕೊಂಡು ಜೀವನ ನಡೆಸುತ್ತಿರುವ ರೈತರ ಜಮೀನನ್ನು ಅರಣ್ಯ ಇಲಾಖೆ ಅಧಿಕಾರಿಗಳು ಬಲವಂತವಾಗಿ ಅತಿಕ್ರಮಣ ಮಾಡಿ ಅಳತೆ ಮಾಡುತ್ತಿರುವುದು ಖಂಡನೀಯ. ರೈತರನ್ನು ಒಕ್ಕಲೆಬ್ಬಿಸಬಾರದು ಎಂದು ಕೇಂದ್ರ ಮತ್ತು ರಾಜ್ಯ ಸರ್ಕಾರದ ಆದೇಶವಿದ್ದರೂ ಅರಣ್ಯ ಇಲಾಖೆಯವರು ಅಳತೆ ಮಾಡುವ ನೆಪದಲ್ಲಿ ತೊಂದರೆ ಕೊಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

ನೂರಾರು ವರ್ಷಗಳಿಂದ ಉಳುಮೆ ಮಾಡಿಕೊಂಡು ಬದುಕು ಕಟ್ಟಿಕೊಂಡಿರುವ ರೈತರ ಮೇಲೆ ದಬ್ಬಾಳಿಜೆ ನಡೆಸುವುದು ಯಾವ ನ್ಯಾಯ? ರೈತರು ಜಮೀನುಗಳ ಮೇಲೆ ಟ್ರಾಕ್ಟರ್, ಬೆಳೆ ಮತ್ತು ಕೊಳವೆಬಾವಿಗಾಗಿ ಸಾಲ ಮಾಡಿಕೊಂಡು ಕೃಷಿ ನಡೆಸುತ್ತಿರುವ ಸಂದರ್ಭದಲ್ಲಿ ಏಕಾಏಕಿ ಅರಣ್ಯ ಇಲಾಖೆಯವರು  ಬಂದು ಇದು ಇಲಾಖೆಯ ಭೂಮಿ ಅಳತೆ ಮಾಡಬೇಕು ಎಂದರೆ ರೈತರು ಎಲ್ಲಿಗೆ ಹೋಗಬೇಕು ಎಂದು ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಕದಿರೇಗೌಡ ಪ್ರಶ್ನಿಸಿದರು.

ತಾಲ್ಲೂಕಿನಲ್ಲಿ ಈಗಾಗಲೇ ಶೆಟ್ಟಿನಾಯಕನಹಳ್ಳಿ, ಮೋಟಮಾಕಲಹಳ್ಳಿ, ಚೊಕ್ಕನಹಳ್ಳಿ, ಕಂಚೇಪಲ್ಲಿ, ಗುಂಡ್ಲಹಳ್ಳಿ, ಕಾಶಿಪಲ್ಲಿ, ಕೋನಪ್ಪಲ್ಲಿ, ಮಾದಮಂಗಲ, ಏಟಿಗಡ್ಡ ಗೊಲ್ಲಹಳ್ಳಿ, ಜುಂಜನಹಳ್ಳಿ, ಕೊಂಡ್ಲಿಗಾನಹಳ್ಳಿಗಳಲ್ಲಿ ಜಮೀನು ಅಳತೆ ಮಾಡಿದ್ದಾರೆ. ಜತೆಗೆ ತಾಲ್ಲೂಕಿನ ಇತರೆ ಹೋಬಳಿಗಳಲ್ಲೂ ತೊಂದರೆ ಕೊಡುತ್ತಿದ್ದಾರೆ ಎಂದು ದೂರಿದರು.

ಕಸಬಾ ಹೋಬಳಿ ಬಡಗವಾರಹಳ್ಳಿಯ ನೂರಾರು ಎಕರೆ ಫಲವತ್ತಾದ ಜಮೀನನ್ನು ಕೆಐಎಡಿಬಿ ವಶಪಡಿಸಿಕೊಳ್ಳಲು ಮುಂದಾಗಿದೆ. ಕೂಡಲೇ ಇದನ್ನು ನಿಲ್ಲಿಸಬೇಕು. ಮಸ್ತೇನಹಳ್ಳಿ ಕೈಗಾರಿಕಾ ಪ್ರದೇಶದಲ್ಲಿ ರೈತರ ಜಮೀನುಗಳಿಗೆ ಸಮರ್ಪಕವಾದ ಪರಿಹಾರ ನೀಡಿಲ್ಲ. ಮಾವಿನ ಗಿಡಗಳಿಗೂ ಪರಿಹಾರ ನೀಡಿಲ್ಲ. ಕೂಡಲೇ ಪರಿಹಾರ ನೀಡಲು ಕ್ರಮಕೈಗೊಳ್ಳಬೇಕೆಂದು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.

ತಹಶೀಲ್ದಾರ್ ಸುದರ್ಶನ ಯಾದವ್ ಮನವಿಯನ್ನು ಸ್ವೀಕರಿಸಿ ಜಿಲ್ಲಾಧಿಕಾರಿಗೆ ಕಳುಹಿಸಲಾಗುವುದು. ಹಿರಿಯ ಅಧಿಕಾರಿಗಳ ಆದೇಶದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.

ರಾಜ್ಯದ ವಲಯ ಘಟಕದ ಅಧ್ಯಕ್ಷ ರಘುನಾಥರೆಡ್ಡಿ, ಜಿಲ್ಲಾ ಘಟಕದ ಅಧ್ಯಕ್ಷ ಬಿ.ಕೆ.ಮುನಿಕೆಂಪಣ್ಣ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್, ತಾಲ್ಲೂಕು ಪ್ರಧಾನ ಕಾರ್ಯದರ್ಶಿ ಎನ್.ಆಂಜನಪ್ಪ, ವೆಂಕಟರಾಮಯ್ಯ, ರಾಮಾಂಜಿನಪ್ಪ, ನಾರಾಯಣಮೂರ್ತಿ, ನಾರಾಯಣಸ್ವಾಮಿ, ಮಂಜುನಾಥ್, ಶಂಕರಣ್ಣ, ಮುನಿರೆಡ್ಡಿ, ಗಂಗಿರೆಡ್ಡಿ, ರಾಜಣ್ಣ, ದೇವರಾಜ್, ರಂಗಪ್ಪ ಸೇರಿದಂತೆ ನೂರಾರು ರೈತರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT