ಶುಕ್ರವಾರ, 12 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ | ಶ್ರೀಗಂಧ ಮರಗಳ ಕಳ್ಳತನ: ಪೊಲೀಸ್ ಠಾಣೆ ಎದುರು ಬೆಳೆಗಾರರ ಪ್ರತಿಭಟನೆ

ಶ್ರೀಗಂಧ ಮರಗಳ ಕಳ್ಳತನ ಪ್ರಕರಣ ಭೇದಿಸಿ, ತಪ್ಪಿತಸ್ಥರಿಗೆ ಶಿಕ್ಷೆ ವಿಧಿಸಲು ಒತ್ತಾಯ
Published 25 ಫೆಬ್ರುವರಿ 2024, 14:10 IST
Last Updated 25 ಫೆಬ್ರುವರಿ 2024, 14:10 IST
ಅಕ್ಷರ ಗಾತ್ರ

ಚಿಂತಾಮಣಿ: ತಾಲ್ಲೂಕಿನಾದ್ಯಂತ ನಿರಂತರವಾಗಿ ನಡೆಯುತ್ತಿರುವ ಶ್ರೀಗಂಧದ ಮರಗಳ ಕಳ್ಳತನ ಪ್ರಕರಣಗಳನ್ನು ಭೇದಿಸಿ ತಪ್ಪಿತಸ್ಥರ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿ ಶ್ರೀಗಂಧ ಬೆಳೆಗಾರರು ಭಾನುವಾರ ಗ್ರಾಮಾಂತರ ಠಾಣೆ ಮುಂದೆ ಧರಣಿ ನಡೆಸಿದರು.

ಶ್ರೀಗಂಧ ಬೆಳೆಗಾರರ ಸಂಘದ ಅಧ್ಯಕ್ಷ ರಮೇಶ್ ಮಾತನಾಡಿ, ‘ಬಟ್ಲಹಳ್ಳಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಕಳೆದ 8–10 ದಿನಗಳಲ್ಲಿ ಆರು ತೋಟಗಳಿಂದ 150 ಮರಗಳು ಕಳ್ಳತನವಾಗಿವೆ. ಪೊಲೀಸ್ ಇಲಾಖೆ ಇದೆಯೇ ಅಥವಾ ಇಲ್ಲವೇ ಎಂಬ ಅನುಮಾನ ವ್ಯಕ್ತವಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು. 

ಗ್ರಾಮಾಂತರ ಠಾಣೆ ವ್ಯಾಪ್ತಿಯಲ್ಲಿ ಎರಡು ದಿನಗಳ ಹಿಂದೆ ಮೂರು ರೈತರ ತೋಟಗಳಲ್ಲಿ ಕಳ್ಳತನವಾಗಿದ್ದು, ಈ ಸಂಬಂಧ ದೂರನ್ನೂ ನೀಡಲಾಗಿದೆ. ಆದರೆ ಪೊಲೀಸರು ಮೂರು ದೂರುಗಳನ್ನು ಸೇರಿಸಿ ಒಂದು ಎಫ್ಐಆರ್ ದಾಖಲಿಸಿಕೊಂಡಿದ್ದಾರೆ. ಈ ಪ್ರಕರಣಗಳನ್ನು ಪ್ರತ್ಯೇಕವಾಗಿ ದಾಖಲಿಸಿಕೊಂಡಿಲ್ಲ ಏಕೆ ಎಂದು ಪ್ರಶ್ನಿಸಿದರು. ಈ ಎಲ್ಲ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿ ಕಳ್ಳರನ್ನು ಪತ್ತೆ ಮಾಡಬೇಕು ಎಂದು ಆಗ್ರಹಿಸಿದರು.

ಮೂರು ಪ್ರಕರಣಗಳನ್ನು ದಾಖಲಿಸಲು ಕಾನೂನು ತೊಡಕಿದೆ. ಅದನ್ನು ವಿಚಾರಿಸಿ ನಾಳೆ ತಿಳಿಸುವುದಾಗಿ ಪ್ರತಿಭಟನಕಾರರಿಗೆ ಪೊಲೀಸರು ತಿಳಿಸಿದರು. ಮೂರು ಎಫ್ಐಆರ್‌ಗಳನ್ನು ದಾಖಲಿಸಿಕೊಳ್ಳಲಿದ್ದರೆ, ಜಿಲ್ಲಾ ಎಸ್‌ಪಿ ಕಚೇರಿ ಎದುರು ಪ್ರತಿಭಟನೆ ನಡೆಸುವುದಾಗಿ ಶ್ರೀಗಂಧ ಬೆಳೆಗಾರರು ಎಚ್ಚರಿಕೆ ನೀಡಿದರು. 

ಸರ್ಕಾರ ಶ್ರೀಗಂಧದ ಮರ ಬೆಳೆಸಲು ಪ್ರೋತ್ಸಾಹ ನೀಡುತ್ತಿದೆ. ಅರಣ್ಯ ಇಲಾಖೆ ಮರಗಳನ್ನು ಬೆಳೆಸಲು ಅನುಮತಿ ನೀಡಿ, ಸಸಿಗಳನ್ನು ಒದಗಿಸುತ್ತಿದೆ. ರೈತರು 10–15 ವರ್ಷಗಳಿಂದ ಕಷ್ಟಪಟ್ಟು ಬೆಳೆದ ಮರಗಳು ರಾತ್ರೋರಾತ್ರಿ ಕಳ್ಳತನವಾಗುತ್ತಿವೆ. ಆದರೆ, ಈ ಸಂಬಂಧ ಪೊಲೀಸರು ಮಾತ್ರ ಕ್ರಮ ಕೈಗೊಳ್ಳುತ್ತಿಲ್ಲ ಎಂದು ರೈತರು ದೂರಿದರು. 

ಗ್ರಾಮಾಂತರ ಠಾಣೆಯ ಸರ್ಕಲ್ ಇನ್‌ಸ್ಪೆಕ್ಟರ್ ಎಸ್.ಶಿವರಾಜ್ ಬೆಳೆಗಾರರೊಂದಿಗೆ ಮಾತುಕತೆ ನಡೆಸಿ ಕಳ್ಳರ ಪತ್ತೆಗೆ ಶೀಘ್ರ ಕ್ರಮ ಕೈಗೊಳ್ಳಲಾಗುವುದು. ಎರಡು ದಿನಗಳ ಹಿಂದೆ ನಡೆದಿರುವ ಮೂರು ಪ್ರಕರಣಗಳ ಬಗ್ಗೆ ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. 

ಈ ಧರಣಿಯಲ್ಲಿ ಶ್ರೀಗಂಧದ ಬೆಳೆಗಾರರ ಸಂಘದ ಪದಾಧಿಕಾರಿಗಳು ಹಾಗೂ ಬೆಳೆಗಾರರು ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT