ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೆ.ಪಿ ಬಚ್ಚೇಗೌಡ ಅಲ್ಲ, ಚಿಕ್ಕಬಳ್ಳಾಪುರಕ್ಕೆ ರಾಧಾಕೃಷ್ಣ ಜೆಡಿಎಸ್ ಅಭ್ಯರ್ಥಿ

ಜೆಡಿಎಸ್‌ನಿಂದ ಇಬ್ಬರು ಅಭ್ಯರ್ಥಿಗಳ ನಾಮಪತ್ರ: ಪತ್ರಿಕಾಗೋಷ್ಠಿ ಮೂಲಕ ಗೊಂದಲಕ್ಕೆ ತೆರೆ ಎಳೆದ ಜೆಡಿಎಸ್‌ ಮುಖಂಡರು
Last Updated 1 ಡಿಸೆಂಬರ್ 2019, 11:02 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಚಿಕ್ಕಬಳ್ಳಾಪುರ ವಿಧಾನಸಭೆ ಕ್ಷೇತ್ರದ ಉಪ ಚುನಾವಣೆಯಲ್ಲಿ ಜೆಡಿಎಸ್‌ ಪಕ್ಷದ ಆದ್ಯತೆಯ ಅಭ್ಯರ್ಥಿಯಾಗಿದ್ದ ರಾಧಾಕೃಷ್ಣ ಅವರ ನಾಮಪತ್ರ ಸಿಂಧುವಾಗಿದೆ. ಪರಿಣಾಮ, ಎರಡನೇ ಅಭ್ಯರ್ಥಿಯಾಗಿದ್ದ ಕೆ.ಪಿ.ಬಚ್ಚೇಗೌಡ ಉಮೇದುವಾರಿಕೆ ತಿರಸ್ಕೃತಗೊಂಡಿದೆ.

ಇಬ್ಬರು ಅಭ್ಯರ್ಥಿಗಳ ನಾಮಪತ್ರ ಸಲ್ಲಿಕೆ ಬೆನ್ನಲ್ಲೇ ಕ್ಷೇತ್ರದಲ್ಲಿ ಹರಿದಾಡುತ್ತಿದ್ದ ವದಂತಿಗಳಿಗೆ ತೆರೆ ಎಳೆಯುವ ನಿಟ್ಟಿನಲ್ಲಿ ಮಂಗಳವಾರ ಕೆ.ಪಿ.ಬಚ್ಚೇಗೌಡ ಮತ್ತು ರಾಧಾಕೃಷ್ಣ ಅವರು ಪತ್ರಿಕಾಗೋಷ್ಠಿ ನಡೆಸಿ, ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ನಾವೆಲ್ಲರೂ ಒಂದಾಗಿ ಉಪ ಚುನಾವಣೆ ಎದುರಿಸುತ್ತೇವೆ ಎಂದು ಘೋಷಿಸಿದರು.

ಕೆ.ಪಿ.ಬಚ್ಚೇಗೌಡ ಮಾತನಾಡಿ, ‘ನಾನು ಉಪ ಚುನಾವಣೆಯಲ್ಲಿ ಸ್ಪರ್ಧಿಸುವುದಿಲ್ಲ ಎಂದು ಮೊದಲಿನಿಂದಲೂ ಜೆಡಿಎಸ್ ವರಿಷ್ಠರಿಗೆ ಹೇಳುತ್ತ ಬಂದಿದ್ದೆ. ಆದರೂ ನನಗೆ ಸ್ಪರ್ಧಿಸುವಂತೆ ಒತ್ತಡ ಹಾಕಿ, ನನ್ನ ಹೆಸರು ಘೋಷಿಸಿದರು. ನಾನು ಸ್ಪರ್ಧಿಸುವುದೇ ಇಲ್ಲ ಎಂದು ಖಡಾಖಂಡಿತವಾಗಿ ಹೇಳಿದಾಗ ಕೊನೆಯ ಗಳಿಗೆಯಲ್ಲಿ ರಾಧಾಕೃಷ್ಣ ಅವರನ್ನು ಅಭ್ಯರ್ಥಿ ಮಾಡಲು ಒಪ್ಪಿದ್ದರು’ ಎಂದು ಹೇಳಿದರು.

‘ಕುಮಾರಸ್ವಾಮಿ ಅವರು ನನಗೆ ಖಾಲಿ ‘ಬಿ’ ಫಾರಂ ನೀಡಿದ್ದರು. ನಾನೇ ಮೊದಲ ಆದ್ಯತೆಯಾಗಿ ರಾಧಾಕೃಷ್ಣ ಅವರ ಹೆಸರು ಬರೆದಿದ್ದೆ. ತಾಂತ್ರಿಕವಾಗಿ ಅವರ ಉಮೇದುವಾರಿಕೆ ತಿರಸ್ಕೃತವಾದರೆ ಪಕ್ಷದ ಅಭ್ಯರ್ಥಿ ಇಲ್ಲದಂತಹ ಸ್ಥಿತಿ ಬಾರದಿರಲಿ ಎನ್ನುವ ಉದ್ದೇಶಕ್ಕೆ ಎರಡನೆಯದಾಗಿ ನನ್ನ ಹೆಸರು ಬರೆದಿದ್ದೆ. ಇದೀಗ ಅವರ ನಾಮಪತ್ರ ಸಿಂಧುವಾಗಿದೆ. ನಾನೇ ಮುಂದೆ ನಿಂತು ಜನರ ಬಳಿ ಹೋಗಿ ರಾಧಾಕೃಷ್ಣ ಅವರ ಪರ ಪ್ರಚಾರ ಮಾಡಿ ಈ ಚುನಾವಣೆ ಎದುರಿಸುತ್ತೇವೆ’ ಎಂದು ತಿಳಿಸಿದರು.

‘ಕೆಲ ಶಾಸಕರ ಪಿತೂರಿಯಿಂದ ಜನಪರವಾಗಿದ್ದ ಸಮ್ಮಿಶ್ರ ಸರ್ಕಾರ ಪತನವಾಗಿದೆ. ಅನಿವಾರ್ಯವಾಗಿ ಈ ಚುನಾವಣೆ ಬಂದಿದೆ. ಇದನ್ನು ಯಾರೂ ಊಹೆ ಮಾಡಿರಲಿಲ್ಲ. ಹೀಗಾಗಿ ನಾನು ಉಪ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ವರಿಷ್ಠರಿಗೆ ಹೇಳಿದ್ದೆ. ಅದೇ ಮಾತಿಗೆ ನಾನು ಈಗಲೂ ಬದ್ಧನಾಗಿರುವೆ. ರಾಧಾಕೃಷ್ಣ ಅವರಿಗೂ ಜಿಲ್ಲೆಯ ಜನರ ನೋವುಗಳ ಅರಿವಿದೆ. ಹೀಗಾಗಿ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಿದ್ದೇವೆ’ ಎಂದರು.

‘ನಮಗೆ ನಿಷ್ಠಾವಂತ ಕಾರ್ಯಕರ್ತರ ಪಡೆ ಇದೆ. ಹೀಗಾಗಿ ಪಕ್ಷ ಸದೃಢವಾಗಿದೆ. ಈ ಭಾಗದಲ್ಲಿ ಬಿಜೆಪಿಗೆ ನೆಲೆ ಇಲ್ಲ. ಕಾಂಗ್ರೆಸ್ ಇಬ್ಭಾಗವಾಗಿದೆ. ಹೀಗಾಗಿ ಈ ಬಾರಿ ಗೆಲುವು ನಮ್ಮದೆ. ನಮ್ಮೆಲ್ಲ ಕಾರ್ಯಕರ್ತರು ರಾಧಾಕೃಷ್ಣ ಅವರಿಗೆ ಬೆನ್ನೆಲುಬಾಗಿ ನಿಲ್ಲುತ್ತಾರೆ. ಚುನಾವಣೆಗೆ ಇನ್ನೂ ಸಮಯವಿದೆ. ಕಾರ್ಯಕರ್ತರು, ಮುಖಂಡರೆಲ್ಲ ಒಗ್ಗಟ್ಟಾಗಿ ಪ್ರಚಾರ ಕಾರ್ಯ ಕೈಗೊಳ್ಳುತ್ತೇವೆ’ ಎಂದು ಹೇಳಿದರು.

‘ಈ ಜಿಲ್ಲೆಯನ್ನು ರಚನೆ ಮಾಡಿರುವ ಕುಮಾರಸ್ವಾಮಿ ಅವರು ನಾನು ಶಾಸಕನಾಗಿದ್ದ ವೇಳೆ ಜಿಲ್ಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದಾರೆ. ಹೀಗಾಗಿ ಸುಧಾಕರ್ ಅವರ ಆರೋಪಗಳಿಗೆ ಬೆಲೆ ಇಲ್ಲ. ಪಕ್ಷದ್ರೋಹಿಗಳಿಗೆ ಜನ ಮಣೆ ಹಾಕುವುದಿಲ್ಲ. ಪಾಠ ಕಲಿಸುತ್ತಾರೆ. ಕುಮಾರಸ್ವಾಮಿ ಅವರು ಕೂಡ ಕ್ಷೇತ್ರಕ್ಕೆ ಮೂರು ದಿನ ಪ್ರಚಾರಕ್ಕೆ ಬರಲಿದ್ದಾರೆ’ ಎಂದು ತಿಳಿಸಿದರು.

ಜೆಡಿಎಸ್ ಅಭ್ಯರ್ಥಿ ರಾಧಾಕೃಷ್ಣ ಮಾತನಾಡಿ, ‘ನಾವು ಕೊನೆಯ ಹಂತದವರೆಗೂ ಬಚ್ಚೇಗೌಡ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡಲು ಪ್ರಯತ್ನಿಸಿದೆವು. ಅವರು ಒಪ್ಪದ ಕಾರಣ ಕೊನೆಯ ಗಳಿಗೆಯಲ್ಲಿ ಅನಿವಾರ್ಯವಾಗಿ ನಾನು ಸ್ಪರ್ಧಿಸಬೇಕಾಗಿದೆ. ಕುಮಾರಸ್ವಾಮಿ ಮತ್ತು ಬಚ್ಚೇಗೌಡ ಅವರ ಮಾರ್ಗದರ್ಶನದಲ್ಲಿ ನಾನು ಈ ಚುನಾವಣೆ ಎದುರಿಸುತ್ತೇನೆ’ ಎಂದು ಹೇಳಿದರು.

‘ನಾನು ಕೂಡ ರೈತ ಕುಟುಂಬದಿಂದ ಬಂದಿರುವುದರಿಂದ ರೈತರ ಕಷ್ಟಗಳು ತಿಳಿದಿದೆ. ಎದೆಗುಂದದೆ ಹೋರಾಟ ಮಾಡುತ್ತೇವೆ. ಸುಧಾಕರ್ ಅವರು ಕೂಡ ಆರಂಭದಲ್ಲಿ ನನ್ನಂತೆ ಕ್ಷೇತ್ರಕ್ಕೆ ಅಪರಿಚಿತರಾಗಿದ್ದರು. ನನಗೆ ಕುಮಾರಸ್ವಾಮಿ ಅವರ ಆಡಳಿತದಲ್ಲಿ ಜಾರಿಗೆ ತಂದ ಯೋಜನೆಗಳು ಶ್ರೀರಕ್ಷೆಯಾಗುತ್ತವೆ ಎಂಬ ನಂಬಿಕೆ ಇದೆ’ ಎಂದರು.

ಜೆಡಿಎಸ್ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿ ಕಾಕಲಚಿಂತೆ ರಾಜಣ್ಣ, ಕಾರ್ಯದರ್ಶಿ ಮುನಿಯಪ್ಪ, ಜಿಲ್ಲಾ ಪಂಚಾಯಿತಿ ಸದಸ್ಯ ಕೆ.ಸಿ.ರಾಜಾಕಾಂತ್, ಮುಖಂಡರಾದ ರವಿಕುಮಾರ್, ಕಿಸಾನ್ ಕೃಷ್ಣಪ್ಪ, ಬಂಡ್ಲು ಶ್ರೀನಿವಾಸ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT