ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮನೆಮನೆಗೂ ಬಂದು ಮರುಬಳಕೆಯ ವಸ್ತುಗಳನ್ನು ಸಂಗ್ರಹಿಸಿದ ನಗರಸಭೆ ಸಿಬ್ಬಂದಿ

Published 25 ಮೇ 2023, 14:08 IST
Last Updated 25 ಮೇ 2023, 14:08 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ನಮ್ಮ ಮನೆಗಳಲ್ಲಿ ಎಷ್ಟೋ ಬಳಸದ, ಉಪಯೋಗಿಸದ ವಸ್ತುಗಳನ್ನು ಸುಮ್ಮನೆ ಇಟ್ಟುಕೊಂಡಿರುತ್ತೇವೆ. ಪರಿಸರವನ್ನು ರಕ್ಷಿಸುವ ಉದ್ದೇಶದಿಂದ ಈ ರೀತಿಯ ವಸ್ತುಗಳ ಬಳಕೆ ಕಡಿಮೆ ಮಾಡುವುದು, ಮರುಬಳಕೆ ಹಾಗೂ ಪುನರ್ಬಳಕೆ ಮಾಡಬೇಕಿದೆ ಎಂದು ನಗರಸಭಾ ಸದಸ್ಯ ಎಲ್.ಅನಿಲ್ ಕುಮಾರ್ ತಿಳಿಸಿದರು.

ನಗರಸಭೆಯಿಂದ 11 ನೇ ವಾರ್ಡಿನಲ್ಲಿ ಗುರುವಾರ “ನನ್ನ ಜೀವನ ನನ್ನ ಸ್ವಚ್ಛ ನಗರ” ಯೋಜನೆಯಡಿ ಮರುಬಳಕೆ ಮತ್ತು ಪುನರ್ ಬಳಕೆ ವಸ್ತುಗಳಾದ ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಆಟಿಕೆ ವಸ್ತುಗಳು, ಬಳಸಿದ ಬಟ್ಟೆ, ದಿನ ಪತ್ರಿಕೆಗಳು, ಹಳೆಯ ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳನ್ನು ಮನೆಮನೆಗೂ ತೆರಳಿ ಸಂಗ್ರಹಿಸುವಾಗ ಅವರು ಮಾತನಾಡಿದರು.

ತಮಗೆ ಬೇಡವಾದ, ಮರುಬಳಕೆಗೆ ಬರುವ ಹಾಗೂ ಮತ್ತೊಬ್ಬರಿಗೆ ಉಪಯೋಗಕ್ಕೆ ಬರುವಂತಹ ಸಾಮಾನು, ಸಲಕರಣೆ, ಬಟ್ಟೆ, ಪುಸ್ತಕ, ದಿನಪತ್ರಿಕೆ ಮತ್ತಿತರ ವಸ್ತುಗಳನ್ನು ನಗರಸಭೆಯ ಮರುಬಳಕೆ ಮತ್ತು ಪುನರ್ ಬಳಕೆ ಕೇಂದ್ರಗಳಿಗೆ ನೀಡಿದಲ್ಲಿ ನಮ್ಮ ಸುತ್ತಮುತ್ತಲಿನ ಪರಿಸರ ಮಾಲಿನ್ಯ ತಡೆಗಟ್ಟುವುದೇ ಅಲ್ಲದೇ ನಗರವನ್ನು ಸ್ವಚ್ಚವಾಗಿಡಬಹುದು ಎಂದರು.

ನಗರಸಭೆ ವ್ಯಾಪ್ತಿಯಲ್ಲಿ ನಗರದ ಪ್ರಮುಖ ಸ್ಥಳಗಳಲ್ಲಿ ವಸ್ತು ಮರು ಪಡೆಯುವ ಸೌಲಭ್ಯ ಕೇಂದ್ರಗಳನ್ನು ರೆಡ್ಯೂಸ್(ಕಡಿಮೆ ಮಾಡುವುದು), ರೀಯೂಸ್(ಮರುಬಳಕೆ) ಮತ್ತು ರೀಸೈಕಲ್(ಪುನರ್ಬಳಕೆ) ಸ್ಥಾಪಿಸಲಾಗಿದೆ. ಆದರೂ ನಮ್ಮ ವಿನಂತಿಯ ಮೇರೆಗೆ ನಗರಸಭೆಯಿಂದ ಮನೆಮನೆಗೂ ಬಂದು ಸಂಗ್ರಹಿಸುತ್ತಿದ್ದಾರೆ. ಪ್ಲಾಸ್ಟಿಕ್ ಕ್ಯಾರಿ ಬ್ಯಾಗ್, ಆಟಿಕೆ ವಸ್ತುಗಳು, ಬಳಸಿದ ಬಟ್ಟೆ, ದಿನ ಪತ್ರಿಕೆಗಳು, ಹಳೆಯ ಪುಸ್ತಕಗಳು ಹಾಗೂ ಎಲೆಕ್ಟ್ರಾನಿಕ್ ವಸ್ತುಗಳಂತಹ ಆರು ಬಗೆಯ ನವೀಕರಿಸಿ ಮರುಬಳಸಬಹುದಾದಂತಹ ವಸ್ತುಗಳನ್ನು ನೀಡಿ, ಪರಿಸರ ಸಂರಕ್ಷಣೆಯ ನಗರಸಭೆಯ ಅಭಿಯಾನವನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕರಿಸಬೇಕೆಂದು ಕೋರಿದರು.

ನಗರಸಭೆ ಪೌರಾಯುಕ್ತ ಶ್ರೀಕಾಂತ್ ಮಾತನಾಡಿ, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ವತಿಯಿಂದ ಸ್ವಚ್ಛ ಭಾರತ್ ಮಿಷನ್ ನಗರ 2.0 ಯೋಜನೆಯಡಿ ನವೀಕರಿಸಿ ಮರುಬಳಸಬಹುದಾದಂತಹ ವಸ್ತುಗಳ ಉತ್ಪಾದನೆಯನ್ನು ಕಡಿಮೆಗೊಳಿಸಲು ಮತ್ತು ಸುಸ್ಥಿರ ಜೀವನ ಪದ್ಧತಿಗಳನ್ನು ಅಳವಡಿಸಿಕೊಳ್ಳುವ ಮೂಲಕ ಪರಿಸರವನ್ನು ರಕ್ಷಿಸುವ ಉದ್ದೇಶದಿಂದ “ನನ್ನ ಜೀವನ ನನ್ನ ಸ್ವಚ್ಛ ನಗರ” ಯೋಜನೆಯನ್ನು ರೂಪಿಸಿದೆ.

ಈ ಕಾರ್ಯಕ್ರಮದಡಿ ಮರುಬಳಕೆ ಮತ್ತು ಪುನರ್ ಬಳಕೆ ಕೇಂದ್ರಗಳನ್ನು, ಶಿಡ್ಲಘಟ್ಟ ನಗರಸಭಾ ವ್ಯಾಪ್ತಿಯಲ್ಲಿ ಮೇ 20 ರಿಂದ ಜೂನ್ 4 ರ ವರೆಗೆ ನಗರದ ಪ್ರಮುಖ ಸ್ಥಳಗಳಲ್ಲಿ ವಸ್ತು ಮರು ಪಡೆಯುವ ಸೌಲಭ್ಯ ಕೇಂದ್ರಗಳನ್ನು ಸ್ಥಾಪಿಸಿದ್ದೇವೆ. ತಮ್ಮಲ್ಲಿ ಬಳಸದ ವಸ್ತುಗಳನ್ನು ಸಾರ್ವಜನಿಕರು ತಂದುಕೊಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಹನ್ನೊಂದನೇ ವಾರ್ಡಿನ ಎಲ್ಲಾ ಮನೆಯವರೂ ತಮ್ಮಲ್ಲಿರುವ ಬಳಸದಿರುವ ಬಟ್ಟೆ, ಆಟಿಕೆಗಳು, ಪುಸ್ತಕಗಳು ಮುಂತಾದ ವಸ್ತುಗಳನ್ನು ನೀಡಿದರು.

ನಗರಸಭೆ ಸಿಬ್ಬಂದಿ, ಪೌರಕಾರ್ಮಿಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT