ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಜ್ಞಾನಿಗಳ ಜೀವನದಿಂದ ನಮ್ಮ ಬದುಕಿಗೆ ಪಾಠ: ಸಾಹಿತಿ ನೇಮಿಚಂದ್ರ

Last Updated 18 ಡಿಸೆಂಬರ್ 2021, 8:20 IST
ಅಕ್ಷರ ಗಾತ್ರ

ಶಿಡ್ಲಘಟ್ಟ: ವಿಜ್ಞಾನಿಗಳ ಜೀವನ ಚರಿತ್ರೆ ನಮ್ಮ ಬದುಕಿಗೆ ಪಾಠ ಕಲಿಸುತ್ತದೆ. ಅವರ ಅನುಭವಗಳು ನಮ್ಮ ಜೀವನದ ದಿಕ್ಕು ಬದಲಿಸಬಹುದು ಎಂದು ನಿವೃತ್ತ ವಿಜ್ಞಾನಿ, ಸ್ತ್ರೀವಾದಿ ಚಿಂತಕಿ ಹಾಗೂ ಸಾಹಿತಿ ನೇಮಿಚಂದ್ರ ತಿಳಿಸಿದರು.

ನಗರದ ನಾಗಾರ್ಜುನ ಕಾಲೇಜ್ ಆಫ್ ಮ್ಯಾನೇಜ್ ಮೆಂಟ್ ಸ್ಟಡೀಸ್ ನ ಭೌತಶಾಸ್ತ್ರ ವಿಭಾಗದ “ವಿಜ್ಞಾನ್” ಕ್ಲಬ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ “ಮೇರಿ ಕ್ಯೂರಿ ಮತ್ತು ಸರ್ ಸಿ.ವಿ.ರಾಮನ್” ಜೀವನದ ಕುರಿತಾಗಿ ಉಪನ್ಯಾಸ ನೀಡಿ ಅವರು ಮಾತನಾಡಿದರು.

ನಮ್ಮ ಶಾಲಾದಿನಗಳಲ್ಲಿ ಗಂಡು ಮಕ್ಕಳಿಗೆ ಸಾಮಾನ್ಯ ವಿಜ್ಞಾನ ಹೇಳಿಕೊಡುತ್ತಿದ್ದು, ಹೆಣ್ಣು ಮಕ್ಕಳು ಗೃಹ ವಿಜ್ಞಾನ ಮಾತ್ರ ಓದಲು ಅವಕಾಶವಿತ್ತು. ವಿಜ್ಞಾನ ಕಲಿಯಲೂ ಕೂಡ ಆಗ ತಾರತಮ್ಯವಿತ್ತು. ಆದರೆ ಈಗಿನ ಪೀಳಿಗೆಯವರಿಗೆ ಅದರಲ್ಲೂ ಹೆಣ್ಣು ಮಕ್ಕಳಿಗೆ ಎಲ್ಲಾ ರಂಗದಲ್ಲೂ ಸಮಾನ ಅವಕಾಶವಿದೆ. ಇಂದಿನ ತಂತ್ರಜ್ಞಾನದ ಯುಗದಲ್ಲಿ ಮಾಹಿತಿಯು ಯಥೇಚ್ಛವಾಗಿ ಅಂತರ್ಜಾಲದಲ್ಲಿ ಸುಲಭವಾಗಿ ದೊರಕುತ್ತದೆ ಅದನ್ನು ಜ್ಞಾನವನ್ನಾಗಿ ಪರಿವರ್ತಿಸುವುದು ಮುಖ್ಯ ಎಂದು ಹೇಳಿದರು.

ಯುರೇನಿಯಂ ಅದಿರನ್ನು ಜಗತ್ತಿಗೆ ಪರಿಚಯಿಸಿದ ಪೋಲ್ಯಾಂಡಿನ ಖ್ಯಾತ ಮಹಿಳೆ, ವಿಜ್ಞಾನಿ ಮೇರಿ ಕ್ಯೂರಿ. ಪರಾಡಳಿತದ ಪದತಳದಲ್ಲಿ ತುಳಿಯಲ್ಪಟ್ಟ ಸಣ್ಣ ದೇಶ ಪೋಲೆಂಡಿನಲ್ಲಿ ಮಹಿಳೆಯಾಗಿ ಸಾಧಿಸುವುದು ಸುಲಭದ ಹಾದಿಯಾಗಿರಲಿಲ್ಲ. ಜೊತೆಗೆ ಎರಡು ಬಾರಿ ನೋಬಲ್ ಪ್ರಶಸ್ತಿ ಪಡೆದ ಮೊದಲ ಮಹಿಳಾ ವಿಜ್ಞಾನಿ ಎಂಬ ಹೆಗ್ಗಳಿಕೆ ಇವರಿಗೆ ಸಲ್ಲುತ್ತದೆ. ಅವರ ಬದುಕು - ಜೀವಮಾನ ಸಾಧನೆ - ವಿಜ್ಞಾನ ಕ್ಷೇತ್ರಕ್ಕೆ ನೀಡಿದ ಕೊಡುಗೆಯನ್ನು ತಿಳಿದುಕೊಳ್ಳಬೇಕು. ಈಕೆಯ ಬದುಕೇ ದೊಡ್ಡ ಪ್ರೇರಣೆ ನೀಡಬಲ್ಲದು ಎಂದರು.

ಮೇಡಂ ಕ್ಯೂರಿ ಹಾಗು ಸರ್.ಸಿ.ವಿ. ರಾಮನ್ ಇಬ್ಬರೂ ಮಹಾನ್ ಚೇತನಗಳು ಮತ್ತು ಮನವತಾ ವಾದಿಗಳು. ಇಬ್ಬರೂ ತಮ್ಮ ಜೀವನದಲ್ಲಿ ಹಲವು ಸೋಲುಗಳನ್ನು ಕಂಡವರು. ಆದರೆ ಸೋಲೆಂಬುವುದು ಅಲ್ಪವಿರಾಮವಿದ್ದಂತೆ. ಅವರ ಅನುಭವಗಳು ನಮಗೆ ಮಾರ್ಗದರ್ಶನವಿದ್ದಂತೆ ಎಂದು ಹೇಳಿದರು

ಪ್ರಾಂಶುಪಾಲರು ಡಾ.ಎನ್.ಆನಂದಮ್ಮ ಅವರು ಭೌತವಿಜ್ಞಾನದ ಫೋರಂ ಅನ್ನು ಉದ್ಘಾಟಿಸಿ ಮಾತನಾಡಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಂದಿನ ನಮ್ಮ ಜೀವನದ ಬಹು ಮುಖ್ಯ ಅಂಗವಾಗಿದೆ. ವಿದ್ಯಾರ್ಥಿಗಳು ವೈಜ್ಞಾನಿಕ ಮನೋಭಾವ ಬೇಳಸಿಕೊಳ್ಳಬೇಕು, ವಿಜ್ಞಾನಿಗಳ ಜೀವನ ಚರಿತ್ರೆ ಪುಸ್ತಕಗಳನ್ನು ಓದಬೇಕು, ಅವರಿಂದ ಪ್ರೇರಣೆ ಪಡೆಯಬೇಕು ಎಂದು ಹೇಳಿದರು.

ವಿಜ್ಞಾನ ವಿಭಾಗದ ಡಾ.ಟಿ.ಸಿ.ಎಂ.ಸಂತೋಷ್ ಮಾತನಾಡಿ, ನೇಮಿಚಂದ್ರರ ವೈಜ್ಞಾನಿಕ ಬರಹಗಳಲ್ಲಿ ಜೀವನ ಚರಿತ್ರೆಗಳು ವಿಶೇಷವಾಗಿವೆ. ಮೇರಿ ಕ್ಯೂರಿ, ವೆಲ್ಲೂರು ಆಸ್ಪತ್ರೆಯ ಸಂಸ್ಥಾಪಕಿ ಡಾ.ಇಡಾಸ್ಕಡರ್, ಥಾಮಸ್ ಆಲ್ವ ಎಡಿಸನ್, ನೊಬೆಲ್ ವಿಜೇತ ಮಹಿಳೆಯರು, ಮಹಿಳಾ ವಿಜ್ಞಾನಿಗಳು ಮುಂತಾದ ಜನಪ್ರಿಯ ಪುಸ್ತಕಗಳನ್ನು ನೇಮಿಚಂದ್ರ ಬರೆದಿದ್ದಾರೆ. ನೇಮಿಚಂದ್ರರ ವೈವಿಧ್ಯಪೂರ್ಣ ಹಾಗೂ ಚಿಂತನಶೀಲ ಮನಸ್ಸು ಸಾಮಾಜಿಕ ಚಿಂತನೆಗಳಲ್ಲಿಯೂ ಗಮನಾರ್ಹ ಪಾತ್ರ ನಿರ್ವಹಿಸಿವೆ. ನೋವಿಗದ್ದಿದ ಕುಂಚ- ಪ್ರಸಿದ್ಧ ಚಿತ್ರಕಾರ ವ್ಯಾನ್ ಗೋ ಜೀವನ ಚಿತ್ರ, ಬೆಳಕಿಗೊಂದು ಕಿರಣ ಮೇರಿ ಕ್ಯೂರಿ, ಥಾಮಸ್ ಆಲ್ವಾ ಎಡಿಸನ್, ಡಾ.ಈಡಾ ಸ್ಕಡರ್, ನನ್ನ ಕಥೆ- ನಮ್ಮ ಕಥೆ, ಮಹಿಳಾ ವಿಜ್ಞಾನಿಗಳ ಸಾಧನೆಯನ್ನು ಬಿಂಬಿಸುವ ಕಾಲು ಹಾದಿಯ ಕೋಲ್ಮಿಂಚುಗಳು, ಇತ್ಯಾದಿ ಪುಸ್ತಕಗಳು ಅವರ ನಿರಂತರ ಸಾಹಿತ್ಯ ಕೃಷಿಯ ಸಾಕ್ಷಿಯ ಕುರುಹುಗಳು ಎಂದು ಹೇಳಿದರು.

ವಿಜ್ಞಾನ ವಿಭಾಗದ ಮುಖ್ಯಸ್ಥೆ ಅರುಣ ಹಾಗೂ ಉಪನ್ಯಾಸಕರು ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT