ಬುಧವಾರ, ಜನವರಿ 22, 2020
25 °C

ಅತ್ಯಾಚಾರಿಗಳಿಗೆ ಗುಂಡು: ನಗರದಲ್ಲಿ ಸಂಭ್ರಮಾಚರಣೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ಪಶುವೈದ್ಯೆಯ ಮೇಲೆ ಅತ್ಯಾಚಾರ ನಡೆಸಿ ಭೀಕರವಾಗಿ ಹತ್ಯೆಗೈದಿದ್ದ ಆರೋಪಿಗಳಿಗೆ ಶುಕ್ರವಾರ ಸೈಬರಾಬಾದ್ ಪೊಲೀಸ್ ಆಯುಕ್ತ ವಿಶ್ವನಾಥ್ ಸಜ್ಜನರ ಅವರು ಗುಂಡಿಕ್ಕಿದ ಕಾರಣಕ್ಕೆ ನಗರದಲ್ಲಿ ಕೆಲವೆಡೆ ಸಿಹಿ, ಹಂಚಿ ಸಂಭ್ರಮಾಚರಣೆ ಮಾಡಲಾಯಿತು.

ನಗರದ ಗಾಂಧಿ ಕೊಳಾಯಿ ರಸ್ತೆಯಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಯುವಸೇನೆ ಮತ್ತು ಸ್ವಾಮಿ ವಿವೇಕಾನಂದ ಫೌಂಡೆಷನ್ ವತಿಯಿಂದ ಸಾರ್ವಜನಿಕರಿಗೆ ಸಿಹಿ ಹಂಚಿ, ವಿಶ್ವನಾಥ್ ಸಜ್ಜನರ ಅವರಿಗೆ ಜೈಕಾರ ಕೂಗುವ ಮೂಲಕ ಸಂಭ್ರಮಾಚರಣೆ ನಡೆಸಲಾಯಿತು.

ಈ ವೇಳೆ ಮಾತನಾಡಿದ ಕರವೇ ಯುವಸೇನೆ ಜಿಲ್ಲಾ ಘಟಕದ ಅಧ್ಯಕ್ಷ ಶ್ರೀರಾಮೇಗೌಡ ಮಾತನಾಡಿ, ‘ದೇಶವನ್ನೆ ತಲ್ಲಣಗೊಳಿಸಿದ್ದ ಪಶುವೈದ್ಯೆ ಮೇಲೆ ನಡೆಸಿದ ಹೀನ ಕೃತ್ಯಕ್ಕೆ ಪೊಲೀಸರು ಆರೋಪಿಗಳಿಗೆ ಗುಂಡಿಕ್ಕುವ ಮೂಲಕ ತಕ್ಕ ಉತ್ತರ ನೀಡಿದ್ದಾರೆ. ಅತ್ಯಾಚಾರ ಘಟನೆಗಳನ್ನು ತಡೆಗಟ್ಟುವ ನಿಟ್ಟಿನಲ್ಲಿ ಅತ್ಯಾಚಾರ ಮಾಡಿದ ಆರೋಪಿಗಳಿಗೆ ಸಾರ್ವಜನಿಕವಾಗಿ ಗಲ್ಲಿಗೇರಿಸಬೇಕು’ ಎಂದು ಹೇಳಿದರು.

‘ಇವತ್ತು ಸಮಾಜ ಘಾತುಕ ಶಕ್ತಿಗಳಿಗೆ ದೇಶದ ಕಾನೂನು ಸಶಕ್ತವಾಗಿದೆ ಎಂದು ತೋರಿಸುವ ಅವಶ್ಯಕತೆಯಿದೆ. ದೇಶದ ನ್ಯಾಯ ವ್ಯವಸ್ಥೆ ಬಿಗಿಯಾಗಬೇಕು. ದೇಶದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ಸೂಕ್ತ ಕಟ್ಟೆಚ್ಚರ ವಹಿಸಬೇಕು’ ಎಂದು ಆಗ್ರಹಿಸಿದರು.

ನಗರದ ಬ್ಲೂಮ್ಸ್ ಕಾಲೇಜಿನಲ್ಲಿ ವಿದ್ಯಾರ್ಥಿನಿಯರು ಪರಸ್ಪರ ಸಿಹಿ ತಿನ್ನಿಸುವ ಮೂಲಕ ಪೊಲೀಸರ ಕ್ರಮಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು. ಈ ವೇಳೆ ಮಾತನಾಡಿದ ಎಬಿವಿಪಿ ವಿಭಾಗೀಯ ಸಂಚಾಲಕ ಮಂಜುನಾಥರೆಡ್ಡಿ, ‘ಸಹಸ್ರಾರು ವರ್ಷಗಳಿಂದ ಹೆಣ್ಣನ್ನು ಮಾತೃ ಸ್ವರೂಪದಲ್ಲಿ ಪೂಜಿಸುತ್ತಾ ಬಂದಿರುವ ಪುಣ್ಯಭೂಮಿಯಾದ ದೇಶದಲ್ಲಿ ಪ್ರಜ್ಞಾವಂತ ನಾಗರಿಕ ಸಮಾಜ ತಲೆತಗ್ಗಿಸುವ ಘಟನೆಗೆ ಕಾರಣರಾದವರಿಗೆ ಪೊಲೀಸರು ತಕ್ಕ ಶಿಕ್ಷೆ ವಿಧಿಸುವ ಮೂಲಕ ದುಷ್ಟರಿಗೆ ಎಚ್ಚರಿಕೆಯ ಸಂದೇಶ ರವಾನಿಸಿದ್ದಾರೆ’ ಎಂದು ಹೇಳಿದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು