ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದಿಬ್ಬೂರು ಗ್ರಾಮ ಪಂಚಾಯಿತಿ ಮುತ್ತಿಗೆ

ಸಾರ್ವಜನಿಕ ಶೌಚಾಲಯ ಮಂಜೂರಾದರೂ ಪಂಚಾಯಿತಿ ಅಧಿಕಾರಿಗಳು ರಾಜಕೀಯ ಒತ್ತಡದಿಂದ ಕಾಮಗಾರಿ ವಿಳಂಬ ಮಾಡುತ್ತಿರುವ ಆರೋಪ, ಸಮತಾ ಸೈನಿಕ ದಳದಿಂದ ಪ್ರತಿಭಟನೆ
Last Updated 7 ಜನವರಿ 2020, 15:10 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ದಿಬ್ಬೂರಿನಲ್ಲಿ ಗ್ರಾಮ ಪಂಚಾಯಿತಿ ಕೇಂದ್ರದಲ್ಲಿ ಸ್ವಚ್ಛ ಭಾರತ ಮಿಷನ್ ಅಡಿ ಸಾರ್ವಜನಿಕ ಶೌಚಾಲಯ ಮಂಜೂರಾದರೂ ಪಂಚಾಯಿತಿ ಅಧಿಕಾರಿಗಳು ರಾಜಕೀಯ ಒತ್ತಡದಿಂದಾಗಿ ಕಾಮಗಾರಿ ಕೈಗೆತ್ತಿಕೊಳ್ಳಲು ವಿಳಂಬ ಮಾಡುತ್ತಿದ್ದಾರೆ ಎಂದು ಆರೋಪಿಸಿ ಸಮತಾ ಸೈನಿಕ ದಳದ ಕಾರ್ಯಕರ್ತರು ಮಂಗಳವಾರ ದಿಬ್ಬೂರು ಗ್ರಾಮ ಪಂಚಾಯಿತಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಈ ವೇಳೆ ಮಾತನಾಡಿದ ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಜಿ.ಸಿ.ವೆಂಕಟರಮಣಪ್ಪ, ‘ದಿಬ್ಬೂರಿನಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೆ ಮಹಿಳೆಯರು ಸೇರಿದಂತೆ ಜನರು ಬಾಧೆಪಡುತ್ತಿದ್ದಾರೆ. ಹೀಗಾಗಿ ಗ್ರಾಮ ಪಂಚಾಯಿತಿ ಪಕ್ಕದಲ್ಲಿಯೇ ಇರುವ ಸಾರ್ವಜನಿಕ ಸ್ಥಳದಲ್ಲಿ ಸ್ವಚ್ಛ ಭಾರತ ಮಿಷನ್ ಅಡಿ ಸಾರ್ವಜನಿಕ ಶೌಚಾಲಯ ನಿರ್ಮಿಸಲು ಪಂಚಾಯಿತಿಯ 15 ಸದಸ್ಯರ ಪೈಕಿ 13 ಸದಸ್ಯರು ಒಪ್ಪಿಗೆ ಸೂಚಿಸಿದ್ದಾರೆ. ಆದರೆ, ಬರೀ ಇಬ್ಬರು ಸದಸ್ಯರ ವಿರೋಧಕ್ಕೆ ಮಣಿದು ಅಧಿಕಾರಿಗಳು ಶೌಚಾಲಯ ನಿರ್ಮಾಣ ಕೈಬಿಡಲು ಮುಂದಾಗಿದ್ದಾರೆ’ ಎಂದು ಆರೋಪಿಸಿದರು.

‘ಶೌಚಾಲಯ ನಿರ್ಮಿಸಲು ಉದ್ದೇಶಿಸಿರುವ ಜಾಗ ಪಂಚಾಯಿತಿಗೆ ಸೇರಿದೆ. ಆ ಜಾಗವನ್ನು ಇಬ್ಬರು ಸದಸ್ಯರು ಒತ್ತುವರಿ ಮಾಡಿಕೊಂಡು ಪೆಟ್ಟಿಗೆ ಅಂಗಡಿ ಇಟ್ಟಿದ್ದಾರೆ. ಅದನ್ನು ಮರೆ ಮಾಚಲು ಸಮೀಪದಲ್ಲಿರುವ ದೇವಾಲಯಕ್ಕೆ ಶೌಚಾಲಯ ನಿರ್ಮಾಣದಿಂದ ಸಮಸ್ಯೆ ಉಂಟಾಗಿದೆ ಎಂದು ಅರ್ಜಿ ಸಲ್ಲಿಸಿ ಶೌಚಾಲಯ ಕಾಮಗಾರಿಗೆ ಅಡ್ಡಿಪಡಿಸಿದ್ದಾರೆ. ಪಿಡಿಒ ಅವರು ಒತ್ತುವರಿ ತೆರವುಗೊಳಿಸಿ, ಕಾಮಗಾರಿ ನಡೆಸಲು ಮುಂದಾಗುತ್ತಿಲ್ಲ’ ಎಂದು ಆರೋಪಿಸಿದರು.

‘ಶೌಚಾಲಯ ನಿರ್ಮಾಣಕ್ಕೆ ಗುರುತಿಸಿದ ಜಾಗ ಪಂಚಾಯಿತಿಗೆ ಸೇರಿದೆಯೇ ಇಲ್ಲವೆ ಎಂದು ತಿಳಿಸಿ ಎಂದು ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಅವರು ತಹಶೀಲ್ದಾರ್‌ ಅವರಿಗೆ ಪತ್ರ ಬರೆದಿದ್ದಾರೆ. ಉದ್ದೇಶಿತ ಜಾಗ 30 ವರ್ಷಗಳ ಹಿಂದೆಯೇ ಪಂಚಾಯಿತಿಗೆ ಸೇರಿದ್ದು ಘೋಷಿಸಲಾಗಿದೆ. ಒತ್ತುವರಿ ಮಾಡಿಕೊಂಡವರು ಉಪ ಚುನಾವಣೆಯಲ್ಲಿ ಬಿಜೆಪಿ ಬೆಂಬಲಿಸಿದ್ದಾರೆ ಎಂಬ ಕಾರಣಕ್ಕೆ ಅಧಿಕಾರಿಗಳು ರಾಜಕೀಯ ಒತ್ತಡಕ್ಕೆ ಮಣಿದು ಕೈಗೊಂಬೆಯಂತೆ ವರ್ತಿಸುತ್ತ ವಿಳಂಬ ತಂತ್ರ ಅನುಸರಿಸುತ್ತಿದ್ದಾರೆ’ ಎಂದು ಹೇಳಿದರು.

ತಾಲ್ಲೂಕು ಪಂಚಾಯಿತಿ ಸದಸ್ಯ ಸುಬ್ಬರಾಯಪ್ಪ, ‘ಇಷ್ಟು ವರ್ಷ ನಾವು ಉಳಿಸಿಕೊಂಡು ಬಂದಿರುವ ಈ ಜಾಗದಲ್ಲಿ ಸಾರ್ವಜನಿಕ ಶೌಚಾಲಯ ಕಟ್ಟಲು ಕೆಲವರು ಉದ್ದೇಶಪೂರ್ವಕವಾಗಿ ಅಡ್ಡಿಪಡಿಸುತ್ತಿದ್ದಾರೆ. ದೇವಾಲಯ ಜಾಗಕ್ಕೂ, ಶೌಚಾಲಯ ನಿರ್ಮಾಣಕ್ಕೆ ಗುರುತಿಸಿದ ಜಾಗಕ್ಕೂ ಸಂಬಂಧವೇ ಇಲ್ಲ. ಆದರೂ ಅಧಿಕಾರಿಗಳು ಶೌಚಾಲಯ ನಿರ್ಮಿಸಲು ಹಿಂದೇಟು ಹಾಕುತ್ತಿದ್ದಾರೆ. ಇಲ್ಲಿ ಶೌಚಾಲಯ ನಿರ್ಮಿಸುವ ಉದ್ದೇಶದಿಂದ ಹಿಂದೆ ಸರಿಯುವ ಮಾತೇ ಇಲ್ಲ’ ಎಂದು ತಿಳಿಸಿದರು.

ಮುಖಂಡ ಮುನೇಗೌಡ, ‘ಪಂಚಾಯಿತಿಯ ಬಹುತೇಕ ಸದಸ್ಯರು ಶೌಚಾಲಯ ನಿರ್ಮಿಸುವ ತೀರ್ಮಾನದ ಪರವಾಗಿದ್ದಾರೆ. ಬರೀ ಇಬ್ಬರು ಮಾತಿಗೆ ಮಣೆ ಹಾಕಿ ಅಧಿಕಾರಿಗಳು ಇಲ್ಲದ ನೆಪಗಳನ್ನು ಹೇಳಿ ಕಾಲಹರಣ ಮಾಡುತ್ತಿದ್ದಾರೆ. ಪಂಚಾಯಿತಿಯ ತೀರ್ಮಾನದ ನಡುವೆ ತಾಲ್ಲೂಕು ಪಂಚಾಯಿತಿ ಅಧಿಕಾರಿಗಳು, ತಹಶೀಲ್ದಾರ್‌ ಅವರು ಮೂಗು ತೂರಿಸುವುದು ಎಷ್ಟು ಸರಿ’ ಎಂದು ಪ್ರಶ್ನಿಸಿದರು.

ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿದ ತಾಲ್ಲೂಕು ಪಂಚಾಯಿತಿ ಕಾರ್ಯ ನಿರ್ವಹಣಾಧಿಕಾರಿ ಹರ್ಷವರ್ಧನ್ ಅವರು, ‘ಎರಡು ದಿನ ಕಾಲಾವಕಾಶ ನೀಡಿ, ತಹಶೀಲ್ದಾರ್ ಅವರೊಂದಿಗೆ ಸಮಾಲೋಚನೆ ನಡೆಸಿ ಸಮಸ್ಯೆ ಬಗೆಹರಿಸುತ್ತೇನೆ’ ಎಂದು ಭರವಸೆ ನೀಡಿದರು. ಈ ವೇಳೆ ಪ್ರತಿಭಟನಾಕಾರರು, ‘ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸಿ, ಕಾಮಗಾರಿ ಆರಂಭಿಸದಿದ್ದರೆ ತಾಲ್ಲೂಕು ಪಂಚಾಯಿತಿಗೆ ಮುತ್ತಿಗೆ ಹಾಕುತ್ತೇವೆ’ ಎಂದು ತಿಳಿಸಿದರು.

ಮುಖಂಡ ಪುರದಗಡ್ಡೆ ಕೃಷ್ಣಪ್ಪ, ಸಮತಾ ಸೈನಿಕ ದಳದ ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT