ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸೋಲಾರ್‌ ಘಟಕ ಸ್ಥಾಪನೆ ಪಾರದರ್ಶಕ

ರೈತ ಸಭೆಯಲ್ಲಿ ಏಷಿಯನ್‌ ಪ್ಯಾಬ್‌ ಟೆಕ್‌ ಸೋಲಾರ್‌ ಘಟಕದ ಎಂಡಿ ಸ್ಪಷ್ಟನೆ
Last Updated 3 ಅಕ್ಟೋಬರ್ 2020, 15:47 IST
ಅಕ್ಷರ ಗಾತ್ರ

ಗೌರಿಬಿದನೂರು: ‘ಸರ್ಕಾರಿ ನಿಯಮಾವಳಿ ಪ್ರಕಾರ ಸೋಲಾರ್‌ ಘಟಕ ಸ್ಥಾಪಿಸಿದ್ದು, ಒಂದಿಂಚು ಭೂಮಿಯನ್ನೂ ಕಾನೂನುಬಾಹಿರವಾಗಿ ಪಡೆದುಕೊಂಡಿಲ್ಲ’ ಎಂದು ಅಲಕಾಪುರದ ಏಷಿಯನ್‌ ಪ್ಯಾಬ್‌ ಟೆಕ್‌ ಸೋಲಾರ್‌ ಘಟಕದ ವ್ಯವಸ್ಥಾಪಕ ನಿರ್ದೇಶಕ ಕೆ.ಎಚ್.ಪುಟ್ಟಸ್ವಾಮಿಗೌಡ ಹೇಳಿದರು.

ಸೋಲಾರ್‌ ಘಟಕದಲ್ಲಿ ಕರೆದಿದ್ದ ರೈತರ ಸಭೆಯಲ್ಲಿ ಮಾತನಾಡಿದ ಅವರು ಶಾಸಕ ಎನ್.ಎಚ್.ಶಿವಶಂಕರ ರೆಡ್ಡಿ ವಿರುದ್ಧ ವಾಗ್ದಾಳಿ ನಡೆಸಿದರು.

‘ಸೋಲಾರ್‌ ಘಟಕ ಪ್ರಾರಂಭವಾಗಿ 4 ವರ್ಷಗಳು ಕಳೆದಿವೆ. ಭೂಮಿ ಪೂಜೆ ಹಾಗೂ ಉದ್ಘಾಟನೆ ನೆರವೇರಿಸಲು ಖುದ್ದು ಶಾಸಕರೇ ಆಗಮಿಸಿದ್ದರು. ಬಳಿಕ ಕೂಡ ಎರಡು ಬಾರಿ ಘಟಕಕ್ಕೆ ಭೇಟಿ ನೀಡಿ ವಿದ್ಯುತ್‌ ಹೇಗೆ ಉತ್ಪಾದನೆ ಮಾಡಲಾಗುತ್ತದೆ ಎಂಬ ಮಾಹಿತಿಯನ್ನು ಪಡೆದುಕೊಂಡು ಹೋಗಿದ್ದರು. ಜತೆಗೆ ಅವರ ಚುನಾವಣೆಗಳಿಗೆ ಸಾಕಷ್ಟು ಸಹಕಾರವನ್ನು ಪಡೆದಿದ್ದಾರೆ. ಆಗ ಏನು ಅಪಸ್ವರ ಎತ್ತಲಿಲ್ಲ. ಅವರು ಮಾಡುತ್ತಿರುವ ಎಲ್ಲ ಆರೋಪಗಳು ನಿರಾಧಾರ‌ವಾಗಿವೆ’ ಎಂದರು.

ರಿಯಲ್‌ ಎಸ್ಟೇಟ್‌ ಮಾಡುತ್ತಿಲ್ಲ: ‘ರೈತರಿಂದ ನಾನು ಜಮೀನು ಪಡೆದು ರಿಯಲ್‌ ಎಸ್ಟೇಟ್‌ ಉದ್ಯಮ ಮಾಡುತ್ತಿಲ್ಲ. ಕರೆಂಟ್ ಉತ್ಪಾದನೆ ಮಾಡಿ ತಾಲ್ಲೂಕಿನ ಬೆಸ್ಕಾಂ ಘಟಕಕ್ಕೆ ನೀಡುವ ಮೂಲಕ ಈ ಭಾಗಕ್ಕೆ ಗುಣಮಟ್ಟದ ವಿದ್ಯುತ್‌ ಪೂರೈಕೆಯಾಗುತ್ತಿದೆ. ನಾನು ದಲಿತ ಸಮುದಾಯದ ಏಳಿಗೆಗಾಗಿ ಸದಾ ಶ್ರಮಿಸುತ್ತಿದ್ದೇನೆ. ಸಮುದಾಯ ಭವನ ನಿರ್ಮಾಣ, ಸ್ಮಶಾನಗಳ ಅಭಿವೃದ್ಧಿ, ಸಾಮೂಹಿಕ ವಿವಾಹಗಳನ್ನು ಮಾಡಿಸುತ್ತಿದ್ದೇನೆ. ಶಾಸಕರ ಬೆದರಿಕೆಗಳಿಗೆ ಬೆದರಿ ಓಡುವವನು ನಾನಲ್ಲ’ ಎಂದರು.

ಜಿ.ಪಂ.ಸದಸ್ಯ ಡಿ.ನರಸಿಂಹಮೂರ್ತಿ ಮಾತನಾಡಿ, ‘ಶಾಸಕರು ಒಂದೊಂದು ಕಡೆ ಒಂದೊಂದು ಮಾತು ಮಾತನಾಡುವ ಮೂಲಕ ಅನುಕೂಲ ಸಿಂಧು ರಾಜಕಾರಣ ಮಾಡುತ್ತಾರೆ. ಎಸಿಸಿ ಸಿಮೆಂಟ್ ಕಾರ್ಖಾನೆಯಲ್ಲಿ ಆಗಿರುವ
ಸರ್ಕಾರಿ ಜಮೀನು ದುರ್ಬಳಕೆ ಮತ್ತು ಒತ್ತುವರಿ ಬಗ್ಗೆ ಏನನ್ನು ಮಾತನಾಡುವುದಿಲ್ಲ. ಸರ್ಕಾರದ ಮಟ್ಟದಲ್ಲಿ ಹೋರಾಟ ಮಾಡಿ ಕಾರ್ಖಾನೆ ಪರ ನಿಲ್ಲುತ್ತಿದ್ದಾರೆ. ಆದರೆ ಪುಟ್ಟಸ್ವಾಮಿ ಗೌಡದ ಸೋಲಾರ್‌ ಘಟಕದ ಬಗ್ಗೆ ಮಾತ್ರ ಇಲ್ಲ ಸಲ್ಲದ ಖ್ಯಾತೆ ತೆಗೆಯುತ್ತಾರೆ. ಇದು ಶಾಸಕರ ಇಬ್ಬಗೆಯ ನೀತಿಗಳನ್ನು ತೋರಿಸುತ್ತದೆ’ ಎಂದರು.

‘ಸೋಲಾರ್ ಘಟಕಕ್ಕೆ ಜಮೀನು ನೀಡಿದ ರೈತರು ನಾವು. ಸ್ವಯಂಪ್ರೇರಣೆಯಿಂದ ಜಮೀನನ್ನು ಮಾರಾಟ ಮಾಡಿದ್ದೇವೆ ಹಾಗೂ ಕೆಲ ರೈತರು ಕ್ರಯ ಒಪ್ಪಂದ ಮಾಡಿಕೊಂಡಿದ್ದೇವೆ ಇದಕ್ಕೆ ನಮ್ಮ ತಕರಾರು ಏನೂ ಇಲ್ಲ. ನಾವು ಜಮೀನು ಮಾರಾಟ ಮಾಡಿ ಇತರೆ ಕಡೆ ಜಮೀನು ಖರೀದಿಸಿದ್ದೇವೆ’ ಎಂದು ಸಭೆಯಲ್ಲಿ ಸೋಲಾರ್ ಘಟಕಕ್ಕೆ ಜಮೀನು ನೀಡಿದ ರೈತರು ಹಾಗೂ ಮುಖಂಡರಾದ ಮಲ್ಲಸಂದ್ರ ಗಂಗಾಧರ, ಬಿ.ಕೆ.ನರಸಿಂಹಮೂರ್ತಿ, ಕಲ್ಲಿನಾಯಕನಹಳ್ಳಿ ಮುನಿಯಪ್ಪ, ಸೇರಿದಂತೆ ಇನ್ನಿತರ ದಲಿತ ಮುಖಂಡರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT