ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೋಟ್ಪಾ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೊಳಿಸಿ

ತಂಬಾಕು ನಿಯಂತ್ರಣ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಹೆಚ್ಚುವರಿ ಜಿಲ್ಲಾಧಿಕಾರಿ ಅಮರೇಶ್ ಸೂಚನೆ
Last Updated 8 ಸೆಪ್ಟೆಂಬರ್ 2020, 14:39 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ತಂಬಾಕು ಉತ್ಪನ್ನಗಳ ಸಾರ್ವಜನಿಕ ಬಳಕೆ ನಿಯಂತ್ರಣ ಕಾಯ್ದೆಯನ್ನು (ಕೋಟ್ಪಾ) ಜಿಲ್ಲೆಯಲ್ಲಿ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಈ ನಿಟ್ಟಿನಲ್ಲಿ ಆರೋಗ್ಯ ಮತ್ತು ಪೊಲೀಸ್ ಇಲಾಖೆ ಅಧಿಕಾರಿಗಳು ಜಂಟಿ ಕಾರ್ಯಾಚರಣೆ ನಡೆಸಬೇಕು’ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಅಮರೇಶ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ತಂಬಾಕು ನಿಯಂತ್ರಣ ಕಾರ್ಯಕ್ರಮದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ‘ಎಲ್ಲಾ ನಗರಸಭೆ ಹಾಗೂ ಪಟ್ಟಣ ಪಂಚಾಯಿತಿ ಕಸ ವಿಲೇವಾರಿ ವಾಹನಗಳಲ್ಲಿ ತಂಬಾಕು ನಿಷೇಧದ ಬಗ್ಗೆ ಧ್ವನಿವರ್ಧಕಗಳಲ್ಲಿ ಪ್ರಚಾರ ಮಾಡುವ ಮೂಲಕ ಸಾರ್ವಜನಿಕರಲ್ಲಿ ಅರಿವು ಮೂಡಿಸಬೇಕು’ ಎಂದು ಹೇಳಿದರು.

‘ಜಿಲ್ಲೆಯ ಎಲ್ಲಾ ಪ್ರವಾಸಿ ತಾಣಗಳಲ್ಲಿ, ಬಾರ್ ಮತ್ತು ರೆಸ್ಟೋರೆಂಟ್‌ಗಳಲ್ಲಿ, ಟೀ ಸ್ಟಾಲ್, ಕಾಂಡಿಮೆಂಟ್‌ಗಳಲ್ಲಿ, ಸರ್ಕಾರಿ ಕಚೇರಿಗಳಲ್ಲಿ ಕಡ್ಡಾಯವಾಗಿ ನಾಮಫಲಕಗಳನ್ನು ಅಳವಡಿಸಿಕೊಳ್ಳುವ ಜತೆಗೆ ಬಿಡಿ ಬಿಡಿಯಾಗಿ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡದಂತೆ ಕಟ್ಟುನಿಟ್ಟಿನ ಕ್ರಮಕೈಗೊಳ್ಳಬೇಕು. ನಗರಸಭೆ ಹಾಗೂ ಪುರಸಭೆ ವ್ಯಾಪಾರದ ಪರವಾನಗಿ ನೀಡುವಾಗ ಕೋಟ್ಪಾ ಕಾಯ್ದೆ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು’ ಎಂದರು.

‘ಸಾರ್ವಜನಿಕ ಶಿಕ್ಷಣ ಅಧಿಕಾರಿಗಳು ಶೈಕ್ಷಣಿಕ ಸಂಸ್ಥೆಗಳಲ್ಲಿ ಕೋಟ್ಪಾ- ಕಾಯ್ದೆಯ ಅನ್ವಯ ನಾಮಫಲಕ ಅಳವಡಿಸಬೇಕು. ಕೆಎಸ್ಆರ್‌ಟಿಸಿ ಬಸ್ ನಿಲ್ದಾಣಗಳಲ್ಲಿ ಧ್ವನಿವರ್ಧಕಗಳ ಮುಖಾಂತರ ತಂಬಾಕು ನಿಯಂತ್ರಣದ ಬಗ್ಗೆ ಪ್ರಚಾರ ಮಾಡಬೇಕು. ತಾಲ್ಲೂಕು ತನಿಖಾ ದಳ ಸದಸ್ಯರ ಕಾರ್ಯಾಚರಣೆ ವೇಳೆ ಅದರಲ್ಲಿ ಸಂಬಂಧಪಟ್ಟ ಠಾಣೆಯ ಪಿಎಸ್‌ಐ ಅಥವಾ ಎಸ್‌ಐ ಕಡ್ಡಾಯವಾಗಿ ಭಾಗವಹಿಸಬೇಕು’ ಎಂದು ಸೂಚಿಸಿದರು.

‘ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ಮತ್ತು ತಂಬಾಕು ಪದಾರ್ಥಗಳನ್ನು ಸೇವನೆ ಮಾಡಿ ಉಗುಳುವುದನ್ನು ಸಂಪೂರ್ಣವಾಗಿ ನಿಷೇದಿಸಲಾಗಿದ್ದು, ಯಾರಾದರೂ ತಂಬಾಕನ್ನು ಸೇವನೆ ಮಾಡಿ ಉಗುಳುವುದು ಹಾಗೂ ಧೂಮಪಾನ ಮಾಡಿದರೆ ₹200 ದಂಡ ವಿಧಿಸಬೇಕು. ಅದೇ ಚಾಳಿ ಮುಂದುವರಿಸಿದವರ ವಿರುದ್ಧ ಕಠಿಣ ಕ್ರಮ ಜರುಗಿಸಬೇಕು’ ಎಂದು ಹೇಳಿದರು.

‘ಪ್ರತಿ ತಾಲ್ಲೂಕಿನಲ್ಲಿ ಮೂರು ತಿಂಗಳಿಗೊಮ್ಮೆ ತಹಶೀಲ್ದಾರ್ ಅವರ ಅಧ್ಯಕ್ಷತೆಯಲ್ಲಿ ರಾಷ್ಟ್ರೀಯ ತಂಬಾಕು ನಿಯಂತ್ರಣ ಕಾರ್ಯಕ್ರಮದ ಅಂತರ ಇಲಾಖಾ ಪ್ರಗತಿ ಪರಿಶೀಲನಾ ಸಭೆಯನ್ನು ಏರ್ಪಡಿಸಬೇಕು. ಆ ಸಭೆಯಲ್ಲಿ ತಾಲ್ಲೂಕು ಆಡಳಿತ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ಸವಿವರವಾಗಿ ಪ್ರಗತಿ ಪರಿಶೀಲಿಸಬೇಕು’ ಎಂದು ಅಧಿಕಾರಿಗಳಿಗೆ ಸೂಚಿಸಿದರು.

‘ಶೈಕ್ಷಣಿಕ ಸಂಸ್ಥೆಗಳಲ್ಲಿ ಕೋಟ್ಪಾ ಕಾಯ್ದೆ ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಶಾಲೆ, ಕಾಲೇಜುಗಳನ್ನು ತಂಬಾಕು ಮುಕ್ತ ವಲಯಗಳನ್ನಾಗಿ ಮಾಡುವ ನಿಟ್ಟಿನಲ್ಲಿ ಅಧಿಕಾರಿಗಳು ಕಾರ್ಯಾಚರಣೆ ನಡೆಸಿ ಶಾಲಾ, ಕಾಲೇಜುಗಳ ಬಳಿ ತಂಬಾಕು ಮಾರಾಟ ಮಾಡುವುದು ಕಟ್ಟುನಿಟ್ಟಾಗಿ ನಿರ್ಬಂಧಿಸಬೇಕು’ ಎಂದು ತಿಳಿಸಿದರು.

ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ಎನ್.ನೋಮೇಶ್‍ಕುಮಾರ್, ಯೋಜನಾ ನಿರ್ದೇಶಕ ಗಿರಿಜಾಶಂಕರ್, ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ.ಯಲ್ಲಾ ರಮೇಶ್‍ ಬಾಬು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT