ಗುರುವಾರ , ಆಗಸ್ಟ್ 18, 2022
24 °C
ಲಿಯೋ ಕ್ಲಬ್ ಆಫ್ ಮಾರ್ಗ್‌ನಿಂದ ದಿನಸಿ ಕಿಟ್ ವಿತರಣೆ

ಜನರ ಹಸಿವು ನೀಗಿಸಲು ಶ್ರಮಿಸಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಂತಾಮಣಿ: ‘ಸಮಾಜ ನಮಗೆ ಏನು ಕೊಟ್ಟಿದೆ ಎಂಬುದಕ್ಕಿಂತ ನಾವು ಸಮಾಜಕ್ಕೆ ಏನು ಕೊಟ್ಟಿದ್ದೇವೆ ಎಂದು ಪ್ರಶ್ನೆ ಮಾಡಿಕೊಳ್ಳಬೇಕು’ ಎಂದು ಆದಿಚುಂಚನಗಿರಿ ಚಿಕ್ಕಬಳ್ಳಾಪುರ ಶಾಖಾ ಮಠದ ಪೀಠಾಧ್ಯಕ್ಷ ಮಂಗಳನಾಥ ಸ್ವಾಮೀಜಿ ಹೇಳಿದರು.

ನಗರದ ಸರ್ಕಾರಿ ಪಾಲಿಟೆಕ್ನಿಕ್ ಕಾಲೇಜು ಹಿಂಭಾಗದ ಮೈದಾನದಲ್ಲಿ ಲಿಯೋ ಕ್ಲಬ್ ಆಫ್ ಮಾರ್ಗ್ ಹಮ್ಮಿಕೊಂಡಿದ್ದ ಪೌರಕಾರ್ಮಿಕರು ಮತ್ತು ಆಟೊ ಚಾಲಕರಿಗೆ ದಿನಸಿ ಕಿಟ್ ವಿತರಿಸಿ ಮಾತನಾಡಿದರು.

‘ಸಮಾಜದಲ್ಲಿ ಹಸಿವನ್ನು ನೀಗಿಸುವ ಅನ್ನದಾನ ಎಲ್ಲ ದಾನಗಳಿಗಿಂತ ಶ್ರೇಷ್ಠವಾದ ದಾನ. ಕೊರೊನಾ ಸಂಕಷ್ಟ ಸಮಯದಲ್ಲಿ ಆಟೊ, ಟ್ಯಾಕ್ಸಿ ಚಾಲಕರು, ಪೌರಕಾರ್ಮಿಕರು, ಅಂಗಡಿಗಳಲ್ಲಿ, ಚಲನಚಿತ್ರಮಂದಿರಗಳಲ್ಲಿ, ಹೋಟೆಲ್ ಸೇರಿದಂತೆ ವಿವಿಧ ವಾಣಿಜ್ಯ ಸಂಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದ ಸಾವಿರಾರು ಜನರು ಕೆಲಸ ಕಳೆದುಕೊಂಡಿದ್ದಾರೆ’ ಎಂದರು.

ಸಂಕಷ್ಟ ಸಮಯದಲ್ಲಿ ಮನುಷ್ಯ ಮಾನವೀಯತೆ ಮೆರೆಯಬೇಕು. ವಿವಿಧ ಸಂಘ ಸಂಸ್ಥೆಗಳು, ಉಳ್ಳವರು ಹಸಿದ ಜನರಿಗೆ ಸಹಾಯ ಮಾಡಲು ಧಾವಿಸಬೇಕು. ಲಿಯೋ ಕ್ಲಬ್‌ನ ಅಧ್ಯಕ್ಷ ನವೀನ್ ಕೃಷ್ಣ, ಚಿಕ್ಕ ವಯಸ್ಸಿನಲ್ಲೇ ಉತ್ತಮವಾದ ಕೆಲಸವನ್ನು ಮಾಡುತ್ತಿದ್ದಾರೆ. ಇತರರು ಇವರಿಂದ ಪ್ರೇರೇಪಣೆಗೊಳ್ಳಬೇಕು. ಕೈಲಾದ ಮಟ್ಟಿಗೆ ಸಹಾಯ ಮಾಡಬೇಕು ಎಂದು ಸಲಹೆ ನೀಡಿದರು.

ಶಾಸಕ ಎಂ.ಕೃಷ್ಣಾರೆಡ್ಡಿ ಮಾತನಾಡಿ, ಪ್ರತಿಯೊಬ್ಬ ಮನುಷ್ಯ ತಾನು ಗಳಿಸಿದ ಸಂಪಾದನೆಯಲ್ಲಿ ಸ್ವಲ್ಪ ಭಾಗವನ್ನು ಸಮಾಜಕ್ಕೆ ಹಿಂದಿರುಗಿಸುವ ಪದ್ಧತಿ ರೂಡಿಸಿಕೊಳ್ಳಬೇಕು. ಸಾಮಾನ್ಯ ವ್ಯಕ್ತಿಯಿಂದ ಹಿಡಿದು ದೊಡ್ಡ ದೊಡ್ಡ ಉದ್ಯಮಿಗಳವರೆಗೂ ತಮ್ಮ ಲಾಭದ ಸ್ವಲ್ಪ ಭಾಗವನ್ನು ದಾನ ಮಾಡುವ ಪ್ರವೃತ್ತಿ ಬೆಳೆಸಿಕೊಳ್ಳಬೇಕು. ಕೋವಿಡ್-19 ಇಡೀ ವಿಶ್ವವನ್ನೇ ಕಾಡುತ್ತಿದೆ. ಕೋವಿಡ್‌ನೊಂದಿಗೆ ಹೋರಾಡಲು ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದು ಮನವಿ ಮಾಡಿದರು.

ತಹಶೀಲ್ದಾರ್ ಹನುಮಂತರಾಯಪ್ಪ, ನಗರಸಭೆ ಸದಸ್ಯ ಮಂಜುನಾಥ್, ವಕೀಲ ಗೋಪಿ, ತಾಲ್ಲೂಕು ಪಂಚಾಯಿತಿ ಮಾಜಿ ಸದಸ್ಯ ರಾಜಣ್ಣ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.