ಶನಿವಾರ, 11 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾರ್ಯಕರ್ತರ ಒತ್ತಾಯದ ಮೇರೆಗೆ ಸ್ಪರ್ಧೆ: ಹಾಲನೂರು‌ ಎಸ್‌.ಲೇಪಾಕ್ಷ

ಬಿಜೆಪಿ ನಾಯಕರ ವಿರುದ್ಧ ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಹಾಲನೂರು‌ ಎಸ್‌.ಲೇಪಾಕ್ಷ ಆರೋಪ
Last Updated 26 ಅಕ್ಟೋಬರ್ 2020, 15:05 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಕೇಂದ್ರ ಸಚಿವ ಡಿ.ವಿ. ಸದಾನಂದಗೌಡ ಹಾಗೂ ವಿಧಾನ ಪರಿಷತ್‌ ಸದಸ್ಯ ವೈ.ಎ. ನಾರಾಯಣಸ್ವಾಮಿ ಅವರ ಸ್ವಜಾತಿ ಪ್ರೇಮದಿಂದಾಗಿ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಟಿಕೆಟ್‌ ಕೈತಪ್ಪಿದೆ. ಪಕ್ಷದ ನಿಷ್ಠಾವಂತ ಕಾರ್ಯಕರ್ತರ ಒತ್ತಾಯದ ಮೇರೆಗೆ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದೇನೆ’ ಎಂದು ವಿಧಾನ ಪರಿಷತ್ ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಬಂಡಾಯ ಅಭ್ಯರ್ಥಿ ಹಾಲನೂರು‌ ಎಸ್‌.ಲೇಪಾಕ್ಷ ತಿಳಿಸಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ‘2018ರಲ್ಲಿ ಶಿಕ್ಷಕರ ಕ್ಷೇತ್ರದ ಚುನಾವಣೆಗೆ ಬಿಜೆಪಿ ‘ಬಿ’ ಫಾರ್ಂ ನೀಡಿತ್ತು. ಎಂಟು ತಿಂಗಳು ಸಿದ್ಧತೆ ಮಾಡಿಕೊಂಡು ನಾಮಪತ್ರ ಸಲ್ಲಿಕೆಗೆ ಸಜ್ಜಾಗಿದ್ದೆ. ವಿಧಾನಸಭಾ ಚುನಾವಣೆಯಲ್ಲಿ ಸೋಲು ಕಂಡಿದ್ದ ವೈ.ಎ.ನಾರಾಯಣಸ್ವಾಮಿ ಅವರ ಅಧಿಕಾರದ ಆಸೆಗೆ ಕ್ಷೇತ್ರವನ್ನು ತ್ಯಾಗ ಮಾಡಬೇಕಾಯಿತು. ಪದವೀಧರ ಕ್ಷೇತ್ರಕ್ಕೆ ಟಿಕೆಟ್‌ ನೀಡುವ ಆಶ್ವಾಸನೆ ನೀಡಿದ್ದ ಬಿಜೆಪಿ ನಾಯಕರು ಮೋಸ ಮಾಡಿದ್ದಾರೆ’ ಎಂದು ಆರೋಪಿಸಿದರು.

‘ವಿಧಾನ ಪರಿಷತ್ ಸದಸ್ಯ ನಾರಾಯಣಸ್ವಾಮಿ ಅವರಿಂದ ಆಗ್ನೇಯ ಶಿಕ್ಷಕರ ಪದವೀಧರರ ಕ್ಷೇತ್ರ ಸಂಪೂರ್ಣ ಅಪವಿತ್ರಗೊಂಡಿದ್ದು, ಇಂತವರಿಗೆ ಕ್ಷೇತ್ರದ ಮತದಾರರು ತಕ್ಕ ಪಾಠ ಕಲಿಸಬೇಕು. ಈ ಬಾರಿ ಮತ್ತೊಮ್ಮೆ ನನಗಾದ ಮೋಸಕ್ಕೆ ಬಿಜೆಪಿ ಬಂಡಾಯ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧಿಸಿರುವೆ. ಹಾಗಾಗಿ ನನಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕು’ ಎಂದು ಮನವಿ ಮಾಡಿದರು.

‘30 ವರ್ಷ ಉಪನ್ಯಾಸಕನಾಗಿ ಕೆಲಸ ಮಾಡಿದ ಅನುಭವವಿದೆ. ಪದವೀಧರರು ಹಾಗೂ ಶಿಕ್ಷಕರ ಪರವಾಗಿ ದುಡಿದಿದ್ದೇನೆ. ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿ ಪಕ್ಷದ ಏಳಿಗೆಗೆ ಶ್ರಮಿಸಿದ್ದೇನೆ. ಈಗಲೂ ಪಕ್ಷದಲ್ಲೇ ಇದ್ದು ಕೆಲಸ ಮಾಡುತ್ತಿದ್ದೇನೆ. ಕೆಲವರ ಚಿತಾವಣೆಯಿಂದಾಗಿ ಮೂರು ಬಾರಿ ಪಕ್ಷದ ಟಿಕೆಟ್‌ ಕೈತಪ್ಪಿದೆ’ ಎಂದು ಹೇಳಿದರು.

‘ಆಗ್ನೇಯ ಪದವೀಧರ ಕ್ಷೇತ್ರ ಪ್ರತಿನಿಧಿಸಿದ್ದ ಚೌಡರೆಡ್ಡಿ ಅವರು ಮತದಾರರನ್ನು ಮರೆತಿದ್ದಾರೆ. ಆರು ವರ್ಷ ಕ್ಷೇತ್ರದ ಪರವಾಗಿ ಯಾವ ಕೆಲಸವನ್ನೂ ಮಾಡಿಲ್ಲ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡುವಂತೆ ಉಪನ್ಯಾಸಕರ ಸಮಸ್ಯೆಗೆ ಹೋರಾಟ ನಡೆಸಿದ ಅನುಭವ ಹೊಂದಿದ್ದೇನೆ. ಮತದಾರರು ಪ್ರಥಮ ಪ್ರಾಶಸ್ತ್ಯದ ಮತ ನೀಡುತ್ತಾರೆ ಎಂಬ ವಿಶ್ವಾಸವಿದೆ’ ಎಂದರು.

ಉಪನ್ಯಾಸಕ ನರಸಿಂಹಮೂರ್ತಿ, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷ ಭಾಸ್ಕರ್, ಪದವೀಧರರ ಒಕ್ಕೂಟದ ಕಾರ್ಯದರ್ಶಿ ಚೇತನ್ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT