ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಬೆಂಗಳೂರು ಚಲೋ’ : ಕಪ್ಪು ಬ್ಯಾಡ್ಜ್‌ ಧರಿಸಿ ಕೆಲಸ

ಹೋರಾಟ ಬೆಂಬಲಿಸಿ ಆ.19 ರಿಂದ 31ರ ವರೆಗೆ ಭೂಮಾಪನ ಇಲಾಖೆ ನೌಕರರ ಸಾಂಕೇತಿಕ ಪ್ರತಿಭಟನೆ
Last Updated 19 ಆಗಸ್ಟ್ 2019, 14:35 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ಭೂಮಾಪನ ಇಲಾಖೆ ನೌಕರರ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಸೆ.9 ರಂದು ಕರೆ ನೀಡಿರುವ ‘ಬೆಂಗಳೂರು ಚಲೋ’ ಹೋರಾಟ ಬೆಂಬಲಿಸಿ ಸೋಮವಾರದಿಂದ ರಾಜ್ಯ ಭೂಮಾಪನ, ಕಂದಾಯ ವ್ಯವಸ್ಥೆ ಮತ್ತು ಭೂದಾಖಲೆಗಳ ಕಾರ್ಯನಿರ್ವಾಹಕ ನೌಕರರ ಸಂಘದ ಪದಾಧಿಕಾರಿಗಳು ಸರ್ಕಾರದ ಗಮನ ಸೆಳೆಯಲು ಕಪ್ಪು ಬ್ಯಾಡ್ಜ್‌ ಧರಿಸಿ, ಸಾಂಕೇತಿಕವಾಗಿ ಪ್ರತಿಭಟಿಸಿ ಕೆಲಸ ನಿರ್ವಹಿಸಿದರು.

ಈ ವೇಳೆ ಮಾತನಾಡಿದ ಸಂಘದ ಜಿಲ್ಲಾ ಘಟಕದ ಅಧ್ಯಕ್ಷ ಎಂ.ಆನಂದ್‌ ಮಾತನಾಡಿ, ‘2017ರ ನವೆಂಬರ್ 4 ರಂದು ರಾಜ್ಯ ಸರ್ಕಾರ ಭೂಮಾಪಕರಿಗೆ ತಿಂಗಳಿಗೆ 30 ಕಡತಗಳ ಗುರಿ ನಿಗದಿಪಡಿಸಿ ಹೊರಡಿಸಿದ ಆದೇಶ ಅವೈಜ್ಞಾನಿಕವಾಗಿದೆ. ಅದನ್ನು ವಾಪಸ್‌ ಪಡೆಯಬೇಕು. ಅದಕ್ಕಿಂತಲೂ ಮೊದಲು ಜಾರಿಯಲ್ಲಿದ್ದ 18 ಕ್ಷೇತ್ರಕಾರ್ಯ ಮತ್ತು 5 ದುರಸ್ತಿ ಒಟ್ಟು 23 ಕಡತಗಳ ವಿಲೇವಾರಿ ಗುರಿ ನಿಗದಿಪಡಿಸಬೇಕು’ ಎಂದು ಆಗ್ರಹಿಸಿದರು.

‘2017ರ ನವೆಂಬರ್ 4ರ ಆದೇಶ ಆಧರಿಸಿ ಈವರೆಗೆ ಇಲಾಖೆಯ ಶೇ 80ರಷ್ಟು ನೌಕರರು, ಅಧಿಕಾರಿಗಳ ಮೇಲೆ ವಿಧಿಸಿರುವ ಶಿಸ್ತುಕ್ರಮಗಳನ್ನು ಹಾಗೂ ದಂಡನೆಯ ಆದೇಶಗಳನ್ನು ಕೂಡಲೇ ಹಿಂಪಡೆಯಬೇಕು. ಹೊರಗುತ್ತಿಗೆ ಬಾಂದು ಸಹಾಯಕರ ನೇಮಕಾತಿ ಕೈಬಿಟ್ಟು, ಭೂಮಾಪಕರ ಹುದ್ದೆಗಳ ಸಂಖ್ಯೆಗೆ ಅನುಗುಣವಾಗಿ ಬಾಂದು ಜವಾನರ ಕಾಯಂ ಹುದ್ದೆಗಳನ್ನು ಸೃಜಿಸಿ, ಅವುಗಳನ್ನು ಭರ್ತಿ ಮಾಡಬೇಕು’ ಎಂದು ಹೇಳಿದರು.

‘ಇಲಾಖೆಯ ಎಲ್ಲ ಕಚೇರಿಗಳಲ್ಲಿ ಸುಗಮ ಆಡಳಿತಕ್ಕೆ ಪೂರಕವಾಗುವಷ್ಟು ಸಂಖ್ಯೆಯಲ್ಲಿ ಕಚೇರಿ ಮತ್ತು ಕ್ಷೇತ್ರಕಾರ್ಯಕ್ಕೆ ಅಗತ್ಯವಾದ ಭೂಮಾಪಕರನ್ನು ನಿಯೋಜಿಸಬೇಕು. ಮೋಜಣಿ ಸರ್ವರ್‌ ಅನ್ನು ಬೆಳಿಗ್ಗೆ 10 ರಿಂದ ಸಂಜೆ 5.30ರ ವರೆಗೆ ಮಾತ್ರ ಚಾಲನೆಯಲ್ಲಿಡಬೇಕು. ಸ್ವಯಂಚಾಲಿತ ಕಡತ ಹಂಚಿಕೆ ವ್ಯವಸ್ಥೆ ಕೈಬಿಡಬೇಕು’ ಎಂದು ಒತ್ತಾಯಿಸಿದರು.

ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಪುಟ್ಟರಾಜು, ‘ಪರ್ಯಾವೇಕ್ಷಕರು ಮತ್ತು ಅಧಿಕ್ಷಕ ಹುದ್ದೆಗಳಿಗೆ ಮುಂಬಡ್ತಿ ಮೂಲಕವೇ ಬಡ್ತಿ ಮಾಡಲು ಇಲಾಖೆಯ ವೃಂದ ಮತ್ತು ನೇಮಕಾತಿ ನಿಯಮಗಳಿಗೆ ತಿದ್ದುಪಡಿ ತರಬೇಕು. ಸಮಾನ ವಿದ್ಯಾರ್ಹತೆ ಹೊಂದಿರುವ ಅನ್ಯ ಇಲಾಖೆಯ ಹುದ್ದೆಯಲ್ಲಿರುವ ಸರ್ಕಾರಿ ನೌಕರರಿಗೆ ನೀಡುತ್ತಿರುವ ವೇತನ ಶ್ರೇಣಿಯನ್ನು ಇಲಾಖೆಯ ನೌಕರರು, ಅಧಿಕಾರಿಗಳಿಗೆ ನೀಡಬೇಕು’ ಎಂದು ತಿಳಿಸಿದರು.

‘ಖಾಲಿ ಇರುವ ಎಲ್ಲಾ ಕಾರ್ಯನಿರ್ವಾಹಕ ಹುದ್ದೆಗಳಿಗೆ ಕೂಡಲೇ ಮುಂಬಡ್ತಿ ನೀಡಿ ಭರ್ತಿ ಮಾಡಬೇಕು. ಇಲಾಖೆಯ ಕಾರ್ಯನಿರ್ವಾಹಕ ನೌಕರರಿಗೆ ನೀಡುತ್ತಿರುವ ತಿಂಗಳ ಪ್ರಯಾಣ ಭತ್ಯೆ ₹600ರ ಬದಲಾಗಿ ₹2,000ಕ್ಕೆ ಹೆಚ್ಚಿಸಬೇಕು. ಈ ನಮ್ಮ ಹೋರಾಟದ ಬಗ್ಗೆ ಗಮನ ಸೆಳೆಯಲು ಆ.31ರ ವರೆಗೆ ಕಪ್ಪು ಬ್ಯಾಡ್ಜ್‌ ಧರಿಸಿ ಕೆಲಸ ಮಾಡುತ್ತೇವೆ’ ಎಂದರು.

ರಾಜ್ಯ ಘಟಕದ ಸದಸ್ಯರಾದ ಬಿ.ವಿ.ಹನುಮಂತರಾಯಪ್ಪ, ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ರಘುಪತಿ, ಪದಾಧಿಕಾರಿಗಳಾದ ಗಿರೀಶ್‌, ಕಲ್ಲೇಶ್‌, ಶಾಂತಪ್ಪ, ಕೆ.ಗಿರೀಶ್‌, ಪೂಜಾ, ಸುಷ್ಮಾ, ತ್ರಿವೇಣಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT