ಶುಕ್ರವಾರ, 1 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಕ್ಕಬಳ್ಳಾಪುರ | ಕೆ.ವಿ ಕ್ಯಾಂಪಸ್ ಬಳಿಯ ಜಮೀನು ಸರ್ವೆ

Published 20 ಡಿಸೆಂಬರ್ 2023, 7:25 IST
Last Updated 20 ಡಿಸೆಂಬರ್ 2023, 7:25 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ತಾಲ್ಲೂಕಿನ ನಂದಿ ಹೋಬಳಿ ಚೊಕ್ಕಹಳ್ಳಿ ಗ್ರಾಮದ ಸರ್ವೆ ನಂ.16ರ ಸರ್ಕಾರಿ ಜಮೀನು ಅಳತೆಗೆ ಶಾಸಕ ಪ್ರದೀಪ್ ಈಶ್ವರ್ ಅವರು ಸೂಚನೆ ನೀಡಿದ್ದು ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಸಂಚಲನಕ್ಕೆ ಕಾರಣವಾಗಿದೆ. 

ಸರ್ವೆ ನಂಬರ್ 16ರಲ್ಲಿ 42 ಎಕರೆ ಸರ್ಕಾರಿ ಭೂಮಿ ಇದೆ. ಚಿಕ್ಕಬಳ್ಳಾಪುರದ ಪ್ರತಿಷ್ಠಿತ ಶಿಕ್ಷಣ ಸಂಸ್ಥೆಗಳಲ್ಲಿ ಒಂದಾದ ಕೆ.ವಿ ಕ್ಯಾಂಪಸ್‌ ಆಸುಪಾಸಿನವರೆಗೂ ಈ ಜಮೀನು ಬರುತ್ತದೆ ಎನ್ನುತ್ತವೆ ಭೂ ದಾಖಲೆಗಳ ಇಲಾಖೆ ಮೂಲಗಳು. ಶಿಕ್ಷಣ ಸಂಸ್ಥೆಯ ಸಮೀಪ ಈ ಜಮೀನು ಒತ್ತುವರಿಯಾಗಿದೆಯೇ ಇಲ್ಲವೆ ಎನ್ನುವುದನ್ನು ಖಚಿತಪಡಿಸಿಕೊಳ್ಳಲು ಅಳತೆ ನಡೆಯುತ್ತಿದೆ. 

ಕೆ.ವಿ ಮತ್ತು ಪಂಚಗಿರಿ ಶಿಕ್ಷಣ ಸಂಸ್ಥೆ ಅಧ್ಯಕ್ಷರೂ ಆದ ಬಿಜೆಪಿ ಮುಖಂಡ ಕೆ.ವಿ.ನವೀನ್ ಕಿರಣ್ ಮತ್ತು ಶಾಸಕ ಪ್ರದೀಪ್ ಈಶ್ವರ್ ರಾಜಕೀಯವಾಗಿ ಕಡು ವಿರೋಧಿಗಳಾಗಿದ್ದಾರೆ. 

ಇತ್ತೀಚೆಗೆ ಚಿಕ್ಕಬಳ್ಳಾಪುರದಲ್ಲಿ ನಡೆದ ಕಂದಾಯ ಇಲಾಖೆ ಅಧಿಕಾರಿಗಳ ಸಭೆಯಲ್ಲಿ ಜಮೀನು ಅಳತೆ ಮಾಡಬೇಕು. ಸರ್ಕಾರಿ ಜಮೀನು ಒತ್ತುವರಿ ಆಗಿದ್ದರೆ ತೆರವುಗೊಳಿಸಬೇಕು ಎಂದು ಪ್ರದೀಪ್ ಈಶ್ವರ್ ಸೂಚನೆ ನೀಡಿದ್ದಾರೆ. ಶಾಸಕರು ಸೂಚನೆ ನೀಡಿದ ಎರಡು ಮೂರು ದಿನಗಳಲ್ಲಿಯೇ ಅಧಿಕಾರಿಗಳು ಅಳತೆಗೆ ಮುಂದಾಗಿದ್ದಾರೆ. ಶಾಸಕರು ಕೆ.ವಿ.ಕ್ಯಾಂಪಸ್ ದೃಷ್ಟಿಯಲ್ಲಿ ಇಟ್ಟುಕೊಂಡೇ ಈ ಅಳತೆಗೆ ಮುಂದಾಗಿದ್ದಾರೆ ಎನ್ನುತ್ತವೆ ಅಧಿಕಾರಿಗಳ ಮೂಲಗಳು. 

ಶಾಸಕರ ಮೌಖಿಕ ಆದೇಶದ ಮೇರೆಗೆ ಭೂ ದಾಖಲೆಗಳ ಸಹಾಯಕ ನಿರ್ದೇಶಕರ ಕಚೇರಿಯು ಸರ್ವೆಗೆ ಮುಂದಾಗಿದೆ. ಸದರಿ ಸರ್ವೆ ನಂಬರ್‌ಗೆ ಸಂಬಂಧಪಟ್ಟ ಮೂಲ ಮಂಜೂರಿ ಕಡತ ಹಾಗೂ 53, 57 ಅರ್ಜಿ ಸಲ್ಲಿಕೆಯ ಬಗ್ಗೆ ವಿವರ ಹಾಗೂ ಗುತ್ತಿಗೆ ನೀಡಿದ್ದಲ್ಲಿ ಆ ಬಗ್ಗೆ ದಾಖಲೆಗಳನ್ನು ಅಳತೆಗೆ ಮುನ್ನ  ಕಡತಗಳನ್ನು ಭೂ ಮಾಪಕರಿಗೆ ನೀಡುವುದು ಹಾಗೂ ಅಳತೆ ವೇಳೆ ಸಂಬಂಧಪಟ್ಟ, ಪಿಡಿಒ, ಗ್ರಾಮ ಆಡಳಿತಾಧಿಕಾರಿ ಹಾಗೂ ರಾಜಸ್ವ ನಿರೀಕ್ಷಕರು ಖುದ್ದು ಹಾಜರಿದ್ದು ಭೂಮಾಪಕರಿಗೆ ಮಾಹಿತಿ ಒದಗಿಸಲು ಕೋರಿದೆ ಎಂದು ಭೂ ದಾಖಲೆಗಳ ಸಹಾಯಕ ನಿರ್ದೇಶಕರು ಅಧಿಕಾರಿಗಳಿಗೆ ಲಿಖಿತವಾಗಿ ತಿಳಿಸಿದ್ದಾರೆ.

ರಾಜಕೀಯ ಜಟಾಪಟಿ

ರಾಜಕಾರಣ ನಿಂತ ನೀರಲ್ಲ. ಇಂದು ವಿರೋಧಿ ಎನಿಸಿದ್ದವರು. ನಾಳೆ ಅತ್ಯಾಪ್ತ ಎನಿಸಬಹುದು. ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಈ ಮಾತುಗಳು ಆಗಾಗ್ಗೆ ಸಾಬೀತಾಗುತ್ತಲೇ ಇದೆ. 2018ರ ವಿಧಾನಸಭೆ ಚುನಾವಣೆ ವೇಳೆ ಒಂದೇ ತೆಕ್ಕೆಯಲ್ಲಿದ್ದ ಕೆ.ವಿ.ನವೀನ್ ಕಿರಣ್ ಮತ್ತು ಇಂದಿನ ಶಾಸಕ ಹಾಗೂ ಅಂದಿನ ಉಪನ್ಯಾಸಕ ಪ್ರದೀ‍ಪ್ ಈಶ್ವರ್ 2023ರ ಚುನಾವಣೆಯ ವೇಳೆಗೆ  ವಿರೋಧಿಗಳಾಗಿದ್ದರು. 

2018ರ ಚುನಾವಣೆಯಲ್ಲಿ ಪಕ್ಷೇತರರಾಗಿ ಸ್ಪರ್ಧಿಸಿದ್ದ ಕೆ.ವಿ.ನವೀನ್ ಕಿರಣ್ ಪರವಾಗಿ ಅಂದು ಪ್ರದೀಪ್ ಈಶ್ವರ್ ಸ್ಟಾರ್ ಪ್ರಚಾರಕ ಎನಿಸಿದ್ದರು. ಬದಲಾದ ರಾಜಕೀಯ ವಿದ್ಯಮಾನದಲ್ಲಿ ಕೆ.ವಿ.ನವೀನ್ ಕಿರಣ್, ಡಾ.ಕೆ.ಸುಧಾಕರ್ ಅವರ ಮೂಲಕ ಬಿಜೆಪಿ ಸೇರಿದರು. ಬಲಿಜ ಸಮುದಾಯದ ಪ್ರಭಾವಿ ನಾಯಕ ಎನಿಸಿರುವ ನವೀನ್ ಕಿರಣ್  ಒತ್ತಡದಿಂದಲೇ ಬಿಜೆಪಿ ಸೇರಿದರು ಎನ್ನುವ ಮಾತುಗಳು ಆಗ ಚಿಕ್ಕಬಳ್ಳಾಪುರ ರಾಜಕಾರಣದಲ್ಲಿ ಜೋರಾಗಿದ್ದರು. ಅವರು ಬಸವರಾಜ ಬೊಮ್ಮಾಯಿ ಅವರ ಸರ್ಕಾರದಲ್ಲಿ ಬಿಎಂಟಿಸಿ ಉಪಾಧ್ಯಕ್ಷರೂ ಆದರು.

ನಂತರದ ದಿನಗಳಲ್ಲಿ ಈ ಇಬ್ಬರು ಬಲಿಜ ಮುಖಂಡರ ನಡುವೆ ಶೀತಲ ಸಮರ ಮುಂದುವರಿದಿತ್ತು. ಸಮುದಾಯದ ಕೆಲವರು ನವೀನ್ ಕಿರಣ್ ಪರ ನಿಂತರೆ ಕೆಲವರು ಪ್ರದೀಪ್ ಪರ ನಿಲುವು ತಾಳಿದ್ದರು.  2023ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದ ಪ್ರದೀಪ್ ಈಶ್ವರ್ ವಿರುದ್ಧ ನವೀನ್ ಕಿರಣ್ ಟೀಕಾಪ್ರಹಾರವನ್ನೇ ನಡೆಸಿದ್ದರು. ಪ್ರದೀಪ್ ಈಶ್ವರ್ ‍ಸಹ ನವೀನ್ ಕಿರಣ್ ಅವರ ವಿರುದ್ಧ ಗುಡುಗಿದ್ದರು. ಚುನಾವಣೆಯಲ್ಲಿ ಪ್ರದೀಪ್ ಈಶ್ವರ್ ಗೆಲುವು ಚಿಕ್ಕಬಳ್ಳಾಪುರದ ಬಲಿಜ ಸಮುದಾಯಲ್ಲಿನ ನಾಯಕತ್ವ ಪಲ್ಲಟಕ್ಕೂ ಕಾರಣವಾಗಿದೆ.

ಈ ಎಲ್ಲ ಬೆಳವಣಿಗೆಗಳ ನಡುವೆ ‘ಅಳತೆ’ಯ ಬಗ್ಗೆ ಚಿಕ್ಕಬಳ್ಳಾಪುರ ರಾಜಕೀಯವಷ್ಟೇ ಅಲ್ಲ ಜನಸಾಮಾನ್ಯರ ವಲಯದಲ್ಲಿಯೂ ತೀವ್ರ ಕುತೂಹಲ ಮೂಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT