ಬುಧವಾರ, ಫೆಬ್ರವರಿ 1, 2023
16 °C
ಕೇಂದ್ರದ ಮಾಜಿ ಸಚಿವ ಡಾ.ಕೆ. ರೆಹಮಾನ್ ಖಾನ್ ಸಲಹೆ

‘ವಿದ್ಯಾರ್ಥಿಗಳಿಗೆ ಸಂಸ್ಕಾರ ಕಲಿಸಿ’

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಗೌರಿಬಿದನೂರು: ಗ್ರಾಮೀಣ ಭಾಗದಲ್ಲಿನ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಮತ್ತು‌‌ ಮೌಲ್ಯಾಧಾರಿತ ಶಿಕ್ಷಣ ನೀಡುವ ಮೂಲಕ ಜನಸಾಮಾನ್ಯರ ಬದುಕಿಗೆ ಬೆಳಕಾಗಬೇಕಾಗಿದೆ ಎಂದು ಕೇಂದ್ರದ ಮಾಜಿ ಸಚಿವ ಡಾ.ಕೆ. ರೆಹಮಾನ್ ಖಾನ್ ತಿಳಿಸಿದರು.

ತಾಲ್ಲೂಕಿನ ಅಲೀಪುರದ ‌ಜೆಮ್ ಇಂಟರ್ ನ್ಯಾಷನಲ್ ಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಶಾಲಾ ವಾರ್ಷಿಕೋತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ದಶಕಗಳ ‌ಹಿಂದೆಯೇ ಸಾಮಾನ್ಯ ಹಳ್ಳಿಯಲ್ಲಿ ಪ್ರತಿಷ್ಠಿತ ಶಾಲೆ ಆರಂಭಿಸಿ ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳಿಗೆ ಶಿಕ್ಷಣದ ಜತೆಗೆ ನಾಗರಿಕತೆ ಮತ್ತು ಸಂಸ್ಕಾರ ಕಲಿಸುತ್ತಿರುವ ಪ್ರಯತ್ನ ಉತ್ತಮವಾಗಿದೆ. ಪ್ರಸ್ತುತ ಸಮಾಜದಲ್ಲಿ ಶಿಕ್ಷಣವನ್ನು ವ್ಯಾಪಾರೀಕರಣ ಮಾಡದೆ ಮಾನವೀಯ ಮೌಲ್ಯಗಳನ್ನು ಉಳಿಸಿ ಬೆಳೆಸಬೇಕಿದೆ ಎಂದು ಸಲಹೆ ನೀಡಿದರು.

ಗುಣಾತ್ಮಕ ಶಿಕ್ಷಣದ ಜತೆಗೆ ಕಲೆ, ಸಾಹಿತ್ಯ, ಕ್ರೀಡೆ ಸೇರಿದಂತೆ ಇತರೇ  ಕ್ಷೇತ್ರದಲ್ಲಿ ವಿದ್ಯಾರ್ಥಿಗಳನ್ನು ಕ್ರಿಯಾಶೀಲವಾಗಿ ಮಾಡುವ ಜವಾಬ್ದಾರಿ ಶಿಕ್ಷಣ ಸಂಸ್ಥೆಗಳ ಮೇಲಿದೆ. ಈ ನಿಟ್ಟಿನಲ್ಲಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿರುವ ಜೆಮ್ ಶಾಲೆಯು ಮಕ್ಕಳ ಸರ್ವಾಂಗೀಣ ಅಭಿವೃದ್ಧಿಗೆ ಶ್ರಮಿಸುತ್ತಿರುವುದು ಶ್ಲಾಘನೀಯ ಎಂದು
ಹೇಳಿದರು.

ಶಾಲೆಯ ಮುಖ್ಯಸ್ಥ ಸಯ್ಯದ್ ಇಬ್ನಿ ಹುಸೇನ್ ಮಾತನಾಡಿ, ಮಕ್ಕಳಲ್ಲಿ ಸುಪ್ತ ಪ್ರತಿಭೆ ಅಡಗಿರುತ್ತದೆ. ಅದನ್ನು ಕಲಿಕಾ ಹಂತದಲ್ಲಿ ಗುರುತಿಸಿ ಪ್ರೋತ್ಸಾಹಿಸಿದರೆ ಅವರು ದೇಶದ ಆಸ್ತಿಯಾಗಲಿದ್ದಾರೆ ಎಂದು ತಿಳಿಸಿದರು.

ಮಕ್ಕಳಿಗೆ ಶಿಕ್ಷಣ ಕಲಿಸುವ ಜವಾಬ್ದಾರಿ ಕೇವಲ ಶಿಕ್ಷಕರದ್ದಲ್ಲ. ಮನೆ ಹಾಗೂ ಸಮಾಜದಲ್ಲಿ ಪೋಷಕರ ಹೊಣೆಗಾರಿಕೆಯೂ ಆಗಿದೆ. ಕಾಲಕಾಲಕ್ಕೆ ತಕ್ಕಂತೆ ಮಕ್ಕಳಲ್ಲಿನ ಕಲಿಕಾ ದಾಹಕ್ಕೆ ಅನುಗುಣವಾಗಿ ಕಲಿಸುವ ಪ್ರಯತ್ನ ಶಾಲೆಯಲ್ಲಿ ಶಿಕ್ಷಕರಿಂದ ನಡೆಯುತ್ತದೆ. ಇದಕ್ಕೆ ಪೂರಕವಾಗಿ ಪೋಷಕರು ಪ್ರೇರಣೆ ನೀಡಬೇಕಿದೆ ಎಂದು ಸಲಹೆ ನೀಡಿದರು.

ಇದೇ ವೇಳೆ ವಿದ್ಯಾರ್ಥಿಗಳು ವಿವಿಧ ಸಾಂಸ್ಕೃತಿಕ ನೃತ್ಯ ಪ್ರದರ್ಶಿಸಿದರು. ಶೈಕ್ಷಣಿಕ ಸಾಲಿನಲ್ಲಿ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗಣ್ಯರು ‌ಅಭಿನಂದಿಸಿದರು.

ಶಾಜಿಯಾ ಖಾನ್, ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮೀರ್ ಮಹಮದ್ ಘಜಂಫರ್(ಬಾಬು), ಖಜಾಂಚಿ ಮೀರ್ ಜಾವಿದ್ ಅಲಿ, ನಿರ್ದೇಶಕಿ ನಿಗಾರ್ ಬೇಗಂ, ಪ್ರಾಂಶುಪಾಲರಾದ ಎಸ್.ಎಚ್. ದೇಸಾಯಿ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.