ಗುರುವಾರ , ಜನವರಿ 30, 2020
18 °C
ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿ ತಾಲ್ಲೂಕಿಗೆ ಭೇಟಿ ನೀಡುವಂತೆ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಸೂಚನೆ

ಆಡಳಿತ ಯಂತ್ರ ಮತ್ತಷ್ಟು ಚುರುಕುಗೊಳ್ಳಬೇಕು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚಿಕ್ಕಬಳ್ಳಾಪುರ: ‘ಅಧಿಕಾರಿಗಳು, ಜನಪ್ರತಿನಿಧಿಗಳಾದವರು ಜನರ ಸಮಸ್ಯೆಗಳಿಗೆ ಸ್ಪಂದಿಸುವ ಜತೆಗೆ ಜನಸೇವೆ ಮಾಡಬೇಕು. ಜಿಲ್ಲಾ ಮಟ್ಟದ ಅಧಿಕಾರಿಗಳು ಪ್ರತಿ ತಾಲ್ಲೂಕಿಗೆ ಭೇಟಿ ನೀಡಿ ಆಡಳಿತ ಯಂತ್ರವನ್ನು ಚುರುಕುಗೊಳಿಸಬೇಕು. ಮುಂದಿನ ದಿನಗಳಲ್ಲಿ ಖುದ್ದು ನಾನೇ ಇಲಾಖೆಗಳಿಗೆ ಭೇಟಿ ನೀಡಿ ಪರಿಶೀಲನೆ ಕಾರ್ಯ ನಡೆಸುತ್ತೇನೆ’ ಎಂದು ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ ಹೇಳಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಶುಕ್ರವಾರ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳನ್ನು ಉದ್ದೇಶಿಸಿ ಮಾತನಾಡಿದ ಅವರು, ‘ಇತ್ತೀಚೆಗೆ ಕೆಲ ಅಧಿಕಾರಿಗಳು 11.30 ಆದರೂ ಕಚೇರಿಗೆ ಬರುತ್ತಿಲ್ಲ. ಜಿಲ್ಲಾ ಪಂಚಾಯಿತಿ ಬೆಂಗಳೂರಿನ ಎಂ.ಎಸ್.ಬಿಲ್ಡಿಂಗ್‌ ರೀತಿ ಆಗಬಾರದು. ಪ್ರತಿಯೊಬ್ಬ ಅಧಿಕಾರಿ ಬೆಳಿಗ್ಗೆ 10ರ ಒಳಗೆ ಕಚೇರಿಯಲ್ಲಿರಬೇಕು. ಜನರನ್ನು ವಿನಾಕಾರಣ ಕಚೇರಿಗೆ ಅಲೆದಾಡಿಸುವ ಪ್ರವೃತ್ತಿ ಬಿಡಬೇಕು’ ಎಂದು ಸೂಚಿಸಿದರು.

ಸಭೆಗೆ ಮಾಹಿತಿ ನೀಡಿದ ಸಾರ್ವಜನಿಕ ಶಿಕ್ಷಣ ಇಲಾಖೆ ಉಪ ನಿರ್ದೇಶಕ ನಾಗೇಶ್, ‘ಪ್ರಸಕ್ತ ಸಾಲಿನಲ್ಲಿ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಪಡಿಸಲು ಅನೇಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಅದರಲ್ಲಿ ಜಿಲ್ಲಾ ಶೈಕ್ಷಣಿಕ ಕಾರ್ಯಪಡೆಯ ಸಲಹೆಯಂತೆ ಜಿಲ್ಲಾ ವಯಸ್ಕರ ಶಿಕ್ಷಣಾಧಿಕಾರಿಯನ್ನು ಒಳಗೊಂಡಂತೆ 42 ಅಧಿಕಾರಿಗಳ ಕಾರ್ಯಪಡೆ ರಚಿಸಲಾಗಿದೆ. ಪ್ರತಿ ವಿಷಯಕ್ಕೆ ತಾಲ್ಲೂಕಿಗೆ ಇಬ್ಬರಂತೆ 12 ಜನ ಸಂಪನ್ಮೂಲ ಶಿಕ್ಷಕರನ್ನು ಗುರುತಿಸಲಾಗಿದೆ. ಅದರಲ್ಲಿ 6 ವಿಷಯಗಳಿಗೆ 72 ಸಂಪನ್ಮೂಲ ಶಿಕ್ಷಕರ ತಂಡ ರಚಿಸಲಾಗಿದೆ’ ಎಂದು ಮಾಹಿತಿ ನೀಡಿದರು.

ಈ ವೇಳೆ ಮಾತನಾಡಿದ ಅಧ್ಯಕ್ಷರು, ‘ಜನವರಿ ಮೊದಲ ಭಾನುವಾರ ಜಿಲ್ಲೆಯ ಎಲ್ಲಾ ಮುಖ್ಯಶಿಕ್ಷಕರ ಸಭೆ ಏರ್ಪಡಿಸಬೇಕು. ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಸಂಜೆ ವಿಶೇಷ ಬೋಧನೆ ಏರ್ಪಡಿಸುತ್ತಿರುವುದಿಂದ ಅಕ್ಷರ ದಾಸೋಹ ಅಧಿಕಾರಿಗಳೊಂದಿಗೆ ಚರ್ಚಿಸಿ ವಿದ್ಯಾರ್ಥಿಗಳಿಗೆ ಸಂಜೆ ಉಪಾಹಾರ ವ್ಯವಸ್ಥೆ ಮಾಡಬೇಕು. ಈ ಬಾರಿಯೂ ಎಸ್ಸೆಸ್ಸೆಲ್ಸಿ ಫಲಿತಾಂಶ ಉತ್ತಮ ಮಟ್ಟಕ್ಕೆ ಏರಬೇಕು. ಜನವರಿ ನಂತರ ಶಿಕ್ಷಕರು ಯಾವುದೇ ಸಭೆ, ಸಮಾರಂಭಗಳಿಗೆ ಭಾಗವಹಿಸದೇ ವಿದ್ಯಾರ್ಥಿಗಳಿಗೆ ವಿಶೇಷ ತರಗತಿಗಳನ್ನು ತೆಗೆದುಕೊಳ್ಳಬೇಕು. ಡಿ.30ರ ಒಳಗೆ ಎಲ್ಲಾ ಪ್ರವಾಸ ಕಾರ್ಯಕ್ರಮಗಳು ಮುಕ್ತಾಯ ಮಾಡಬೇಕು’ ಎಂದು ಹೇಳಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ.ಯೋಗೇಶ್ ಗೌಡ ಮಾತನಾಡಿ, ‘ಜಿಲ್ಲೆಯಲ್ಲಿ 15 ಜನ ತಜ್ಞ ವೈದ್ಯರು ಹಾಗೂ 6 ಸಾಮಾನ್ಯ ಕರ್ತವ್ಯ ವೈದ್ಯರ ಹುದ್ದೆಗಳು ಹಾಗೂ ನಗು ಮಗು ಹಾಗೂ ಇತರೆ ಕಾರ್ಯಕ್ರಮದಡಿ ವಾಹನ ಚಾಲಕರ ಹುದ್ದೆಗಳು ಖಾಲಿ ಇವೆ’ ಎಂದು ಸಭೆಗೆ ಮಾಹಿತಿ ನೀಡಿದರು.

ಆಗ ಚಿಕ್ಕನರಸಿಂಹಯ್ಯ ಅವರು, ‘ಇತ್ತೀಚೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಹೆಚ್ಚುವರಿ ಜಿಲ್ಲಾಧಿಕಾರಿ ಮತ್ತು ಡಿವೈಎಸ್ಪಿ ಎದುರೇ ಒಬ್ಬ ವೈದ್ಯರು ರೌಡಿ ರೀತಿ ವರ್ತನೆ ಮಾಡಿದ್ದಾರೆ. ಅವರ ವಿರುದ್ಧ ಏನು ಕ್ರಮ ತೆಗೆದುಕೊಂಡಿದ್ದೀರಿ? ಮುಂದಿನ ದಿನಗಳಲ್ಲಿ ಯಾವುದೇ ವೈದ್ಯರು ಇಂತಹ ವರ್ತನೆ ತೋರಿದರೆ ಸುಮ್ಮನಿರಲು ಸಾಧ್ಯವಿಲ್ಲ. ಜಿಲ್ಲಾ ಶಸ್ತ್ರಚಿಕಿತ್ಸಕರ ಮೇಲೆ ಕ್ರಮ ತೆಗೆದುಕೊಳ್ಳಲಾಗುತ್ತದೆ. ಸಾದಲಿಯಲ್ಲಿ ಬೆಳಿಗ್ಗೆ10 ಗಂಟೆಯಾದರೂ ಆಸ್ಪತ್ರೆ ಬೀಗ ತೆಗೆಯುವುದಿಲ್ಲ. ಅಲ್ಲಿ ಸಿಬ್ಬಂದಿ ಇದ್ದಾರೆಯೇ? ಇದ್ದರೆ ಯಾಕೆ ? ಬಾಗಿಲು ತೆಗೆಯುವುದಿಲ್ಲ? ಹೆಸರಿಗೆ ಮಾತ್ರದ ದಿನದ 24 ಗಂಟೆ ಸೇವೆ ಎಂದು ಬೋರ್ಡ್‌ ಹಾಕಿದ್ದಿರಿ. ಅದನ್ನೂ ತೆಗೆದುಬಿಡಿ’ ಎಂದು ಕಿಡಿಕಾರಿದರು.

ಬಳಿಕ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಅಧಿಕಾರಿಗಳನ್ನು ಕುರಿತು, ‘ನಗರದಲ್ಲಿ ಬಹುತೇಕ ಅಂಗನವಾಡಿ ಕಟ್ಟಡಗಳು ಬಾಡಿಗೆ ಕಟ್ಟಡಗಳಲ್ಲಿ ಕಾರ್ಯನಿರ್ವಹಿಸುತ್ತಿವೆ. ಇದರ ಬಗ್ಗೆ ಸ್ವಲ್ಪ ಗಮನ ಹರಿಸಿ. ಕೆಲ ಅಂಗನವಾಡಿಗಳಲ್ಲಿ ಮೂರು ಮಕ್ಕಳು ಇರುತ್ತಾರೆ ಆದರೆ ಹಾಜರಾತಿ ನೋಡಿದರೆ ಎಲ್ಲಾ ಮಕ್ಕಳಿಗೆ ಕೊಟ್ಟಿರುತ್ತಾರೆ. ಅನೇಕ ಅಂಗನವಾಡಿ ಕೇಂದ್ರಗಳಲ್ಲಿ ಮಕ್ಕಳ ಆಟಿಕೆಗಳೇ ಇಲ್ಲ ಎಂದು ದೂರುಗಳು ಬಂದಿವೆ. ಇದರ ಬಗ್ಗೆ ಗಮನ ಹರಿಸಬೇಕು’ ಎಂದು ಸೂಚಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪನಿರ್ದೇಶಕ ಎನ್.ನಾರಾಯಣಸ್ವಾಮಿ, ‘ಜಿಲ್ಲೆಯಲ್ಲಿ 44 ಅಂಗನವಾಡಿ ಕಟ್ಟಡಗಳ ನಿರ್ಮಾಣ ಕಾಮಗಾರಿಗಳು ಪ್ರಗತಿಯಲ್ಲಿವೆ. 111 ಕಟ್ಟಡಗಳ ಕಾಮಗಾರಿ ಮುಗಿದಿದೆ. ನಗರ ಪ್ರದೇಶದಲ್ಲಿ ಅಂಗನವಾಡಿಗಳಿಗೆ ಕಟ್ಟಡ ನಿರ್ಮಿಸಲು ನಿವೇಶನಗಳ ಕೊರತೆ ಇದೆ’ ಎಂದು ಹೇಳಿದರು.

ಮೀನುಗಾರಿಕೆ ಇಲಾಖೆ ಅಧಿಕಾರಿಗಳನ್ನು ಕುರಿತು ಅಧ್ಯಕ್ಷರು, ‘ಮಾರುಕಟ್ಟೆಯಲ್ಲಿ ಮಾಂಸದ ಬೆಲೆಯ ದಿನೇ ದಿನೇ ಏರಿಕೆಯಾಗಿರುವುದರಿಂದ ಜಿಲ್ಲೆಯಲ್ಲಿ ಮೀನಿನ ಬೇಡಿಕೆ ಅಧಿಕವಾಗಿದೆ. ಮೀನು ತಿನ್ನುವ ಗ್ರಾಹಕರ ಅನುಕೂಲಕ್ಕೆಂದು ಸೂಕ್ತ ಮಾರುಕಟ್ಟೆ ನಿರ್ಮಿಸಿ ತಾಜಾ ಮೀನುಗಳ ಮಾರಾಟಕ್ಕೆ ವ್ಯವಸ್ಥೆ ಮಾಡಬೇಕು. ಇದರಿಂದ ಮೀನುಗಾರರಿಗೆ ಸೂಕ್ತ ಮಾರುಕಟ್ಟೆ, ಉದ್ಯೋಗ ದೊರೆತಂತೆ ಆಗುತ್ತದೆ’ ಎಂದರು.

ಸಮಾಜ ಕಲ್ಯಾಣ ಇಲಾಖೆ ಅಧಿಕಾರಿಗಳನ್ನು ಕುರಿತು, ‘ಈಗಿನ ವಿದ್ಯಾರ್ಥಿಗಳು ಉತ್ತಮ ಜೀವನಮಟ್ಟವನ್ನು ಅನುಭವಿಸುವ ಮನೋಭಾವ ಉಳ್ಳವರು. ಆದ್ದರಿಂದ ಸರ್ಕಾರಿ ವಿದ್ಯಾರ್ಥಿನಿಲಯಗಳಲ್ಲಿ ಶುಚಿತ್ವ ಕಾಪಾಡಬೇಕು. ತಟ್ಟೆ, ಲೋಟ, ಶೌಚಾಲಯ, ಉತ್ತಮ ಮಟ್ಟದ ವಸತಿ ವ್ಯವಸ್ಥೆಯನ್ನು ಕಲ್ಪಿಸಿಕೊಡಬೇಕು. ಆಗ ಮಾತ್ರ ಸರ್ಕಾರಿ ವಿದ್ಯಾರ್ಥಿನಿಲಯಗಳಿಗೆ ಹೆಚ್ಚು ವಿದ್ಯಾರ್ಥಿಗಳು ಪ್ರವೇಶ ಪಡೆಯುತ್ತಾರೆ’ ಎಂದು ತಿಳಿಸಿದರು.

ಉಪಾಧ್ಯಕ್ಷೆ ನಿರ್ಮಲಾ ಮುನಿರಾಜು, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಫೌಜಿಯಾ ತರನ್ನುಮ್, ಯೋಜನಾಧಿಕಾರಿ ಮಾಧುರಾಮ್ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು