ಶನಿವಾರ, 9 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚಿಂತಾಮಣಿ: ಹೆಚ್ಚಾದ ಬೀದಿ ನಾಯಿಗಳ ಉಪಟಳ

Published 20 ನವೆಂಬರ್ 2023, 7:13 IST
Last Updated 20 ನವೆಂಬರ್ 2023, 7:13 IST
ಅಕ್ಷರ ಗಾತ್ರ

ಚಿಂತಾಮಣಿ: ನಗರದಾದ್ಯಂತ ಬೀದಿ ನಾಯಿಗಳ ಉಪಟಳ ಹೆಚ್ಚಾಗಿದ್ದು ಸಾರ್ವಜನಿಕರು ಭಯದ ವಾತಾವರಣದಲ್ಲಿ ಓಡಾಡುವಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ನಗರದ ಬಹುತೇಕ ರಸ್ತೆಗಳಲ್ಲಿ ನಾಯಿಗಳು ಜನರ ಮೈಮೇಲೆ ಎರಗುತ್ತಿದ್ದು ಶ್ವಾನಗಳ ಉಪಟಳಕ್ಕೆ ನಗರಸಭೆ ಅಧಿಕಾರಿಗಳು ಕಡಿವಾಣ ಹಾಕಬೇಕಾಗಿದೆ. ಚಿಂತಾಮಣಿ ನಗರದ ಸರ್ಕಾರಿ ಬಸ್ ನಿಲ್ದಾಣ, ಪ್ರಭಾಕರ್ ಬಡಾವಣೆ, ಅಂನಿ ಬಡಾವಣೆ, ಅಜಾದ್‌ಚೌಕ, ಟಿಪ್ಪುನಗರ, ಚೌಡರೆಡ್ಡಿಪಾಳ್ಯ, ಆಶ್ರಯ ಬಡಾವಣೆ, ಎಪಿಎಂಸಿ ಸುತ್ತಮುತ್ತಲಿನ ಪ್ರದೇಶ ಸೇರಿದಂತೆ ನಗರದ ಬಹುತೇಕ ರಸ್ತೆಗಳಲ್ಲಿ ಬೀದಿ ನಾಯಿಗಳ ಕಾಟ ಹೇಳತೀರದಾಗಿದೆ. ಗುಂಪು-ಗುಂಪಾಗಿ ಅಲೆದಾಡುವ ನಾಯಿಗಳು ಎಲ್ಲಿ ಕಚ್ಚುತ್ತವೆಯೋ ಎಂಬ ಭಯಭೀತಿಯಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ಎಚ್ಚರಿಕೆಯಿಂದ ತಿರುಗಾಡುವಂತಾಗಿದೆ.

ಶಾಲೆಗಳಿಗೆ ಹೋಗುವ ಮತ್ತು ಶಾಲೆಯಿಂದ ಮನೆಗೆ ಮರಳುವ ಮಕ್ಕಳ ಮೇಲೆ, ಕೆಲಸ ಮುಗಿಸಿಕೊಂಡು ಮನೆಗೆ ಬರುವ ಸಾರ್ವಜನಿಕರ ಮೇಲೆ ಶ್ವಾನಗಳು ಏಕಾಏಕಿ ಎರಗುವಂತಹ ಘಟನೆಗಳು ಅಲ್ಲಲ್ಲಿ ನಡೆಯುತ್ತಿರುವುದು ನಾಗರಿಕರ ಆತಂಕಕ್ಕೆ ಕಾರಣವಾಗಿದೆ. ವಿಶೇಷವಾಗಿ ರಾತ್ರಿ ತಡವಾಗಿ ಮನೆಗೆ ಮರಳುವ ಮತ್ತು ಬೆಳಿಗ್ಗೆ ಕತ್ತಲಲ್ಲೇ ಮನೆಯಿಂದ ತೆರಳುವವರಿಗೆ ಬೀದಿ ನಾಯಿಗಳ ಉಪಟಳ ಜಾಸ್ತಿಯಾಗಿದೆ.

ದ್ವಿಚಕ್ರವಾಹನಗಳಲ್ಲಿ ಹೋಗುವವರಿಗೂ ಹಿಂದೆ ಬಿದ್ದು ಅಟ್ಟಿಸಿಕೊಂಡು ಬರುತ್ತವೆ. ಶ್ವಾನಗಳ ದಾಳಿಗೆ ಹೆದರಿ ಬೈಕ್ ಸವಾರರು ಅಡ್ಡಾದಿಡ್ಡಿ ಚಲಿಸಿ ಬೇರೆ ವಾಹನಗಳಿಗೆ ಡಿಕ್ಕಿ ಹೊಡೆಯುವುದು, ಕೆಳಗೆ ಬಿದ್ದು ಗಾಯಗೊಂಡು ಆಸ್ಪತ್ರೆ ಸೇರುವ ಘಟನೆಗಳು ನಡೆಯುತ್ತಿವೆ.

ಬೀದಿ ನಾಯಿಗಳಿಂದ ಹೆಚ್ಚಿನ ತೊಂದರೆಗೆ ಒಳಗಾಗುವವರು ದ್ವಿಚಕ್ರವಾಹನ ಸವಾರರು. ರಸ್ತೆಯ ಯಾವುದೋ ಮೂಲೆಯಿಂದ ಏಕಾಏಕಿ ದಾಳಿಗೆ ಮುಂದಾಗುವ ನಾಯಿಗಳಿಂದ ತಪ್ಪಿಸಿಕೊಳ್ಳಲು ಹೋಗಿ ಗಾಬರಿಯಿಂದ ಅಪಘಾತಗಳಿಗೆ ತುತ್ತಾಗಿ ಜೀವಕ್ಕೆ ಕುತ್ತು ತಂದುಕೊಳ್ಳುತ್ತಿದ್ದಾರೆ. ಕೆಲವರು ಶಾಶ್ವತ ಅಂಗವೈಕಲ್ಯಕ್ಕೆ ಒಳಗಾಗಿದ್ದಾರೆ.

ನಗರದ ಮುಖ್ಯ ರಸ್ತೆ, ಒಳರಸ್ತೆಗಳಲ್ಲಿ ಹೆಚ್ಚಾಗಿ ಬೀದಿ ನಾಯಿಗಳು ಜನರ ಮೇಲೆ ಎರಗುತ್ತಿವೆ. ಕೆಲವು ಪ್ರದೇಶಗಳಲ್ಲಿ ಏಕಾಂಗಿಯಾಗಿ ತೆರಳಲು ಹೆದರುವಂತಹ ಸ್ಥಿತಿ ಇದೆ. ರಾತ್ರಿ ಮತ್ತು ಬೆಳಗಿನಜಾವ ಕತ್ತಲಲ್ಲಿ ಓಡಾಡುವುದು ಕಷ್ಟಕರವಾಗಿದೆ. ರಸ್ತೆ ಮತ್ತು ಹೆದ್ದಾರಿಯಲ್ಲಿ ಸಾಗುವ ವಾಹನಗಳಿಗೆ ಅಡ್ಡ ಬಂದು ನಾಯಿಗಳು ಬಲಿಯಾಗುತ್ತಿವೆ. ದ್ವಿಚಕ್ರವಾಹನ ಮತ್ತು ಕಾರುಗಳ ಹಿಂದೆ ಓಡಿಬರುವ ನಾಯಿಗಳು ಬೇರೆ ವಾಹನಗಳಿಗೆ ಸಿಲುಕಿ ಗಾಯಗೊಳ್ಳುವುದು, ಜೀವ ಕಳೆದುಕೊಳ್ಳುತ್ತವೆ.

ನಗರಕ್ಕೆ ಹೊಂದಿಕೊಂಡಿರುವ ಗ್ರಾಮಗಳಿಂದಲೂ ಬೀದಿ ನಾಯಿಗಳು ಹೆಚ್ಚಾಗಿ ನಗರ ಪ್ರವೇಶಿಸುತ್ತಿವೆ. ನಗರಸಭೆಯಿಂದ ನಾಯಿಗಳನ್ನು ಹಿಡಿಸಿ ಸಂತಾನಶಕ್ತಿ ಹರಣ ಚಿಕಿತ್ಸೆ ಮಾಡಿಸುತ್ತಿದ್ದರೂ ಸಮಸ್ಯೆ ನಿವಾರಿಸಲು ಸಾಧ್ಯವಾಗಿಲ್ಲ. 2 ವರ್ಷಗಳಿಂದ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ನಡೆಯದಿರುವುದು ನಾಯಿಗಳ ಸಂತಾನೋತ್ಪತ್ತಿ ಹೆಚ್ಚಾಗಿದೆ.

ಹೋಟೆಲ್, ಮಾಂಸದ ಅಂಗಡಿಗಳು ಇರುವ ಭಾಗಗಳಲ್ಲಿ ಸಮಸ್ಯೆ ಮತ್ತಷ್ಟು ಗಂಭೀರವಾಗಿದ್ದು ನಾಯಿ ಕಡಿತ ಪ್ರಕರಣ ಹೆಚ್ಚಾಗಿದೆ. ನಗರದ ವ್ಯಾಪ್ತಿಯಲ್ಲಿ ಎಲ್ಲೆಂದರಲ್ಲಿ ಕಸ ಮತ್ತು ಮಾಂಸದ ತ್ಯಾಜ್ಯ ಬಿಸಾಡುವುದು ಬೀದಿ ನಾಯಿಗಳ ಸಮಸ್ಯೆ ಬಿಗಡಾಯಿಸಲು ಕಾರಣವಾಗಿದೆ.

ನಾಗರಿಕರು ಕಸವನ್ನು ರಸ್ತೆ, ಚರಂಡಿಗಳಲ್ಲಿ ಎಸೆಯಬಾರದು. ಪ್ರತಿ ದಿನ ಕಸ ಸಂಗ್ರಹಕಾರರಿಗೆ ಕಸ ನೀಡಬೇಕು. ಕೆಲವರು ನಾಯಿಗಳನ್ನು ಸಾಕಲಾಗದೆ ಬೀದಿಗೆ ಬಿಡುವ ಪ್ರವೃತ್ತಿ ಬೆಳೆಸಿಕೊಂಡಿದ್ದಾರೆ. ಬೀದಿಗೆ ಬಿಡಬಾರದು ಮತ್ತು ಸಂತಾನೋತ್ಪತ್ತಿ ಹೆಚ್ಚಾಗದಂತೆ ನೋಡಿಕೊಳ್ಳಬೇಕು ಎನ್ನುತ್ತಾರೆ ಪೌರಾಯುಕ್ತ ಜಿ.ಎನ್.ಚಲಪತಿ.

ಬೀದಿ ನಾಯಿಗಳ ಬಗ್ಗೆ ಹಿಂದಿನಂತೆ ಕ್ರಮಕೈಗೊಳ್ಳಲು ಸಾಧ್ಯವಿಲ್ಲ. ಏನಾದರೂ ಕ್ರಮಕೈಗೊಳ್ಳಲು ಮುಂದಾದರೆ ಪ್ರಾಣಿದಯಾ ಸಂಘದವರು ಪ್ರತಿಭಟನೆಗೆ ಮುಂದಾಗುತ್ತಾರೆ. ನಗರಸಭೆಯಿಂದ ಬೀದಿ ನಾಯಿಗಳ ಸಂತಾನಶಕ್ತಿ ಹಗರಣ ಶಸ್ತ್ರಚಿಕಿತ್ಸೆ ಹಾಗೂ ರೇಬಿಸ್ ನಿರೋಧಕ ಲಸಿಕೆ ಹಾಕುವ ಕಾರ್ಯಕ್ರಮವನ್ನು ಪಶುಸಂಗೋಪನಾ ಇಲಾಖೆಯ ಸಹಕಾರದೊಂದಿಗೆ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡುತ್ತಾರೆ.

ಗ್ರಾಮಗಳಲ್ಲೂ ಬೀದಿ ನಾಯಿಗಳ ಕಾಟ ಹೆಚ್ಚಾಗಿದೆ. ಕುರಿ ಮತ್ತು ಮೇಕೆ ದೊಡ್ಡಿಗಳ ಮೇಲೆ ದಾಳಿ ಮಾಡಿ, ಅವುಗಳನ್ನು ಸಾಯಿಸಿ ಲಕ್ಷಾಂತರ ನಷ್ಟ ಉಂಟು ಮಾಡಿರುವ ದೂರುಗಳು ಬರುತ್ತಿವೆ.

ಬೀದಿನಾಯಿಗಳ ಹಾವಳಿ ಬಗ್ಗೆ ಗ್ರಾಮ ಸಭೆಗಳಲ್ಲೂ ಗ್ರಾಮಸ್ಥರಿಂದ ದೂರುಗಳು ಸಲ್ಲಿಕೆಯಾಗುತ್ತಿದ್ದರೂ ಗ್ರಾಮ ಪಂಚಾಯಿತಿಗಳು ಸಮಸ್ಯೆ ಬಗೆಹರಿಸಲು ಸಾಧ್ಯವಾಗುತ್ತಿಲ್ಲ. ನಾಯಿಗಳನ್ನು ಹಿಡಿಯುವ ಹಾಗೂ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡುವ ಏಜೆನ್ಸಿಗಳು ಬೆರಳೆಣಿಕೆಯಷ್ಟಿರುವುದರಿಂದ ಸಮಸ್ಯೆ ಹೆಚ್ಚಾಗಿದೆ ಎಂಬುದು ಸ್ಥಳೀಯ ಸಂಸ್ಥೆಗಳ ಆಡಳಿತಾಧಿಕಾರಿಗಳು ಅಭಿಪ್ರಾಯಪಡುತ್ತಾರೆ.

ಗ್ರಾಮೀಣ ಪ್ರದೇಶಗಳಲ್ಲಿ ಬೀದಿ ನಾಯಿಗಳ ಹಾವಳಿ ತಡೆಯುವಲ್ಲಿ ಗ್ರಾಮ ಪಂಚಾಯಿತಿಗಳ ಮೇಲಿರುವಷ್ಟೇ ಹೊಣೆಗಾರಿಕೆ ಸಾರ್ವಜನಿಕರ ಮೇಲೂ ಇದೆ. ನಾಯಿಗಳು ಮನುಷ್ಯರ ಮೇಲೆ ಎರಗಲು ಜನರ ನಡವಳಿಕೆಯೂ ಕಾರಣವಾಗುತ್ತದೆ. ನಾಯಿಗಳನ್ನು ಸಾಕುವ ಕೆಲವರು ಗಂಡು ಮರಿಯನ್ನು ಇಟ್ಟುಕೊಂಡು ಹೆಣ್ಣು ಮರಿಗಳನ್ನು ಬೀದಿಗೆ ಬಿಡುತ್ತಾರೆ. ಸಾಕು ನಾಯಿಗಳಿಗೂ ಕಡ್ಡಾಯವಾಗಿ ಸಂತಾನ ಹರಣ ಶಕ್ತಿ ಚಿಕಿತ್ಸೆ ಮಾಡಿಸಬೇಕು ಎಂದು ಅಧಿಕಾರಿಗಳು ಸಲಹೆ ನೀಡುತ್ತಾರೆ.

ನಾಯಿಗಳ ಬಗ್ಗೆಯೂ ಕನಿಕರ ತೋರಬೇಕು. ಅವುಗಳಿಗೂ ಬದುಕುವ ಹಕ್ಕಿದೆ. ಎಲ್ಲ ನಾಯಿಗಳು ಕಚ್ಚುವುದಿಲ್ಲ. ಮಾಂಸದ ತ್ಯಾಜ್ಯಗಳನ್ನು ಎಲ್ಲೆಂದರಲ್ಲಿ ಹಾಕುವುದರಿಂದ ಕೆಲವು ನಾಯಿಗಳು ಮಾಂಸ ಮತ್ತು ರಕ್ತದ ರುಚಿ ಕಂಡುಕೊಳ್ಳುತ್ತವೆ. ಅವುಗಳನ್ನು ಪ್ರೀತಿಯಿಂದ ನೋಡಿಕೊಂಡರೆ ಅವು ಕಚ್ಚುವುದಿಲ್ಲ.
ಸುರೇಶ್ ಪ್ರಾಣಿ ದಯಾಸಂಘ
ನಗರದಲ್ಲಿ ನಗರಸಭೆ ಹಾಗೂ ಗ್ರಾಮೀಣ ಭಾಗಗಳಲ್ಲಿ ಗ್ರಾಮ ಪಂಚಾಯಿತಿಗಳಿಂದ ಬೀದಿ ನಾಯಿಗಳಿಗೆ ಕಡಿವಾಣ ಹಾಕಬೇಕು. ಕಡ್ಡಾಯವಾಗಿ ಪ್ರತಿಯೊಂದು ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರ ಚಿಕಿತ್ಸೆ ನಡೆಸಬೇಕು. ನಂತರ ಸಾಧ್ಯವಾದಷ್ಟು ನಾಯಿಗಳನ್ನು ದೂರದ ಭಾಗಗಳಿಗೆ ಸ್ಥಳಾಂತರಿಸಬೇಕು.
ಮೋಹನ್ ಹಿರಿಯ ನಾಗರಿಕ
ಜನರ ಸಹಕಾರ ಅಗತ್ಯ
ನಗರಸಭೆ ತಾಲ್ಲೂಕು ಪಂಚಾಯಿತಿ ಸಂಯುಕ್ತವಾಗಿ ಪಶುಸಂಗೋಪನಾ ಇಲಾಖೆಯ ಸಹಕಾರದೊಂದಿಗೆ ಬೀದಿ ನಾಯಿಗಳ ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆಗೆ ಶೀಘ್ರದಲ್ಲೇ ಟೆಂಡರ್ ಕರೆಯಲಾಗುವುದು. ಸಂತಾನ ಶಕ್ತಿ ಹರಣ ಶಸ್ತ್ರಚಿಕಿತ್ಸೆ ಮಾಡಿಸಿ ಸಾಧ್ಯವಾದಷ್ಟು ನಾಯಿಗಳ ಹಾವಳಿಯನ್ನು ಕಡಿಮೆ ಮಾಡಲಾಗುವುದು. ನಗರಸಭೆಯ ಜತೆಗೆ ಜನರ ಸಹಕಾರವೂ ಬೇಕು ಜಿ.ಎನ್.ಚಲಪತಿ ಪೌರಾಯುಕ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT