ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ತಮಿಳರ ಶಕ್ತಿ ನಮಗೆ ಬರಲಿಲ್ಲ

ಚಿಕ್ಕಬಳ್ಳಾಪುರದಲ್ಲಿ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ರೋಡ್‌ ಶೋ
Last Updated 30 ನವೆಂಬರ್ 2019, 15:41 IST
ಅಕ್ಷರ ಗಾತ್ರ

ಚಿಕ್ಕಬಳ್ಳಾಪುರ: ‘ಒಂದು ಪ್ರಾದೇಶಿಕ ಪಕ್ಷ ಗಟ್ಟಿಯಾಗಿದ್ದರೆ ಆ ರಾಜ್ಯಕ್ಕೆ ಆಗಬೇಕಾದ ಎಲ್ಲಾ ಕೆಲಸಗಳನ್ನು ಕೇಂದ್ರದಲ್ಲಿ ಆಡಳಿತ ನಡೆಸುವವರು ನಮ್ಮ ಮನೆ ಬಾಗಿಲಿಗೆ ಬಂದು ಮಾಡಿಕೊಡುತ್ತಾರೆ. ಅಂತಹ ಶಕ್ತಿಯನ್ನು ತಮಿಳರು ಇಟ್ಟುಕೊಂಡಿದ್ದಾರೆ. ನಾವು ತಮಿಳರಿಗೆ ಕಡಿಮೆ ಇಲ್ಲ. ನಮ್ಮ ಮನೆ ಬಾಗಿಲಿಗೆ ಏಕೆ ರಾಷ್ಟ್ರೀಯ ಪಕ್ಷಗಳ ನಾಯಕರು ಬರಬಾರದು? ಆ ಶಕ್ತಿಯನ್ನು ಮತದಾರರು ಕೊಡುವುದಾದರೆ ನಾಳೆ ಯಾರಾದರೂ ಜೆಡಿಎಸ್ ಅಧ್ಯಕ್ಷರಾಗಲಿ’ ಎಂದು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ ಹೇಳಿದರು.

ನಗರದಲ್ಲಿ ಶನಿವಾರ ಜೆಡಿಎಸ್ ಅಭ್ಯರ್ಥಿ ಎನ್.ರಾಧಾಕೃಷ್ಣ ಅವರ ಪರ ರೋಡ್ ಶೋ ನಡೆಸಿ ಮಾತನಾಡಿದ ಅವರು, ‘ಯು.ಪಿ.ಸಿಂಗ್, ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಲು ಮತ್ತು ಮನಮೋಹನ್ ಸಿಂಗ್‌ ಅವರನ್ನು ಪ್ರಧಾನಿಯನ್ನಾಗಿ ಮಾಡಲು ಸೋನಿಯಾ ಗಾಂಧಿ ಅವರು ಕರುಣಾನಿಧಿ ಮನೆಗೆ ಬಾಗಿಲಿಗೆ ಹೋಗುತ್ತಾರೆ. ಮೊನ್ನೆ ಮಹಾರಾಷ್ಟ್ರದಲ್ಲಿ ಪ್ರಾದೇಶಿಕ ಪಕ್ಷವಾದ ಶಿವಸೇನೆಯವರ ಮನೆ ಬಾಗಿಲಿಗೆ ನೀವು ಮುಖ್ಯಮಂತ್ರಿಯಾಗಿ ಎಂದು ಸೋನಿಯಾಗಾಂಧಿ, ಶರದ್ ಪವಾರ್ ಅವರು ಹೋಗುತ್ತಾರೆ. ನಮಗೆ ಇನ್ನೂ ಆ ಶಕ್ತಿ ಬಂದಿಲ್ಲ’ ಎಂದು ತಿಳಿಸಿದರು.

‘ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಾಗ ಕೇಂದ್ರ ಸಚಿವ ಗಡ್ಕರಿ ಅವರ ಬಳಿ ಕರೆದುಕೊಂಡು ಹೋಗಿ ಮೇಕೆದಾಟು ಯೋಜನೆ ಮಂಜೂರು ಮಾಡಿಸಿಕೊಂಡು ಬಂದಿದ್ದೆ. ಆದರೆ ಇತ್ತೀಚೆಗೆ ಪ್ರಧಾನಿ ನರೇಂದ್ರ ಮೋದಿ ಅವರು ಅಣ್ಣಾ ಡಿಎಂಕೆ ಪಕ್ಷದ ಮುಖ್ಯಮಂತ್ರಿ ಸಹಾಯ ಯಾಚಿಸಿ, ಮೇಕೆದಾಟು ಯೋಜನೆ ಮಂಜೂರಾತಿ ರದ್ದು ಮಾಡಿದ್ದಾರೆ. ತಮಿಳರಂತೆ ಕನ್ನಡಾಂಭೆ ಮಕ್ಕಳಿಗೆ ಒಂದುಗೂಡಿ ಬಾಳುವ ಯೋಗ್ಯತೆ ಇಲ್ಲ. ನಾವು ಒಡೆದು ಛಿದ್ರ, ಛಿದ್ರವಾಗಿ ತೊಟ್ಟು ನೀರು ಬಳಸಿಕೊಳ್ಳದಂತಾಗಿ ರಾಜ್ಯ ಬರಡಾಗಿದೆ’ ಎಂದು ಹೇಳಿದರು.

‘ಇವತ್ತು ನಮ್ಮ ಶಕ್ತಿಯನ್ನು ನಾವು ಅರ್ಥ ಮಾಡಿಕೊಳ್ಳದೆ ಬೇರೆಯವರಿಗೆ ಧಾರೆ ಎರೆಯುತ್ತಿದ್ದೇವೆ. ನೆಲ, ಜಲ ನಮ್ಮ ಹಕ್ಕು. ನಮ್ಮ ಹಕ್ಕನ್ನು ನಾವು ಕಾಪಾಡಿಕೊಳ್ಳುವ ಯೋಗ್ಯತೆ ಇಲ್ಲದಂತಾಗಿದೆ. ಮಹಾದಾಯಿ, ಕಾವೇರಿ ವಿಚಾರದಲ್ಲಿ ಏನಾಯಿತು? ನಾನು ಮತ್ತೊಮ್ಮೆ ಪ್ರಧಾನಿಯಾಗಲು ಹೋರಾಟ ಮಾಡುತ್ತಿಲ್ಲ. ರಾಜ್ಯದಲ್ಲಿ ಒಂದು ಪ್ರಾದೇಶಿಕ ಪಕ್ಷವನ್ನು ಉಳಿಸಿ, ನನ್ನ ನೆಲ, ಜಲಕ್ಕೆ ಹೋರಾಟ ಮಾಡಲು ಬಡಿದಾಡುತ್ತಿರುವೆ’ ಎಂದು ತಿಳಿಸಿದರು.

‘ರಾಜ್ಯದಲ್ಲಿ ಅನೇಕರು ಪ್ರಾದೇಶಿಕ ಪಕ್ಷಗಳನ್ನು ಕಟ್ಟಿದರೂ ಅವುಗಳನ್ನು ಉಳಿಸಿಕೊಳ್ಳಲು ಆಗಲಿಲ್ಲ. ಆದರೆ ಸಾಮಾನ್ಯ ರೈತನ ಮಗನಾದ ನಾನು 45 ವರ್ಷಗಳಿಂದ ಎರಡು ರಾಷ್ಟ್ರೀಯ ಪಕ್ಷಗಳ ನಡುವೆ ಜೆಡಿಎಸ್ ಉಳಿಸಿಕೊಂಡು ಬಂದಿದ್ದೆನೆ. ನಾನು ಸಂಸತ್ತಿಗೆ ಹೋಗಬಾರದು ಎಂದು ತುಮಕೂರಿನಲ್ಲಿ ಸೋಲಿಸಿದರು. ಚಿಂತೆ ಇಲ್ಲ. ಸೋತಿದ್ದಾನೆ, ವಯಸ್ಸಾಗಿದೆ ಮನೆಯಲ್ಲಿ ಮಲಗುತ್ತಾರೆ ಎಂದು ಅವರು ತಿಳಿದುಕೊಂಡಿದ್ದಾರೆ. ಆದರೆ ನಾನು ಮನೆಯಲ್ಲಿ ಮಲಗುವವನಲ್ಲ. ಕೊನೆಯ ಉಸಿರಿರುವವರೆಗೂ ದಿಟ್ಟ ಹೋರಾಟ ಮಾಡುತ್ತೇನೆ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT