ಶನಿವಾರ, ಜೂನ್ 19, 2021
29 °C
ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ ಯೋಧ ರಫೀಕ್‌ವುಲ್ಲಾ ಕುಟುಂಬದ ಸ್ಥಿತಿ ಅತಂತ್ರ

ಬಾಗೇಪಲ್ಲಿ: ಯೋಧನ ಕುಟುಂಬಕ್ಕಿಲ್ಲ ನಿವೇಶನ, ಮನೆ

ಪಿ.ಎಸ್.ರಾಜೇಶ್ Updated:

ಅಕ್ಷರ ಗಾತ್ರ : | |

ಯೋಧ ರಫೀಕ್ ವುಲ್ಲಾ

ಬಾಗೇಪಲ್ಲಿ: ಕಾರ್ಗಿಲ್‌ನಲ್ಲಿ ನಡೆದ ಯುದ್ಧದಲ್ಲಿ ಮಂಜಿನಗಡ್ಡೆಗಳಲ್ಲಿ ಸಿಲುಕಿದ್ದ 4 ಮಂದಿ ಪ್ರಾಣ ರಕ್ಷಿಸಿದಕ್ಕೆ ಅಂದಿನ ರಕ್ಷಣಾ ಸಚಿವರಿಂದ ಶಹಬ್ಬಾಸ್ ಗಿರಿ ಪಡೆದಿದ್ದ ಪಟ್ಟಣದ ನಿವಾಸಿ ಬಿ.ಎಂ.ರಫೀಕ್‌ವುಲ್ಲಾ ಅವರು ನಿಧನರಾಗಿ 3 ವರ್ಷಗಳು ಕಳೆದಿದೆ. ಆದರೆ, ಇಂದಿಗೂ ಕುಟುಂಬದವರಿಗೆ ಸರ್ಕಾರದಿಂದ ನಿವೇಶನ, ಮನೆ ನೀಡಿಲ್ಲ.

ಸೈನಿಕನ ಪತ್ನಿ ಪರ್ವೀನಾ ಮತ್ತು ಮಗಳು ಇಂದಿಗೂ ಬಾಡಿಗೆ ಮನೆಯಲ್ಲಿ ವಾಸವಿದ್ದಾರೆ. ಜೀವನಾಧಾರಕ್ಕೆ ಯಾವುದೇ ಆರ್ಥಿಕ ಭದ್ರತೆಯೂ ಇಲ್ಲ. ಸರ್ಕಾರ ಸೌಲಭ್ಯಗಳನ್ನೂ ಕಲ್ಪಿಸಿಲ್ಲ. 

ಪಟ್ಟಣದ ಡಿಸಿಸಿ ಬ್ಯಾಂಕ್‌ನ ರಸ್ತೆಯ ನಿವಾಸಿ ಅಬ್ದುಲ್ ರೆಹಮಾನ್, ಬೀಬಿಜಾನ್ ಅವರ ಪುತ್ರ ರಫೀಕ್‌ವುಲ್ಲಾ 1985ರ ಆ. 21ರಂದು ದೇಶದ ಸೇನೆಗೆ ಆಯ್ಕೆಯಾಗಿದ್ದರು. ನಾಸಿಕ್, ಸ್ವರ್ಣಮಂದಿರ, ಜಮ್ಮು ಮತ್ತು ಕಾಶ್ಮೀರ, ಚೀನಾ, ಪಾಕಿಸ್ತಾನ, ಬಾಂಗ್ಲಾದೇಶದ ಗಡಿ ಪ್ರದೇಶಗಳಲ್ಲಿ ಸುಮಾರು 24 ವರ್ಷ ಸೇವೆ ಸಲ್ಲಿಸಿದ್ದಾರೆ.

1997ರ ಕಾರ್ಗಿಲ್‌ನಲ್ಲಿ ನಡೆದ ಯುದ್ಧದಲ್ಲಿ ಕೆಚ್ಚೆದೆಯಿಂದ ಹೋರಾಡಿದ್ದರು. ಮಂಜಿನಗಡ್ಡೆಗೆ ತನ್ನ ಸ್ನೇಹಿತರು ಸಿಲುಕಿದ್ದಾಗ, ಪ್ರಾಣ ಲೆಕ್ಕಿಸದೆ ನಾಲ್ವರನ್ನು ರಕ್ಷಣೆ ಮಾಡಿದ್ದರು. ಅಪರೇಷನ್ ಮೇಘದೂತ್, ಪರಾಕ್ರಮ್, ವಿಜಯ್ ಮೊದಲಾದ ಬಿರುದುಗಳನ್ನು ಪಡೆದಿದ್ದ ರಫೀಕ್‌ವುಲ್ಲಾ 2009ರಲ್ಲಿ ನಿವೃತ್ತಿ ಹೊಂದಿದ್ದರು. ನಂತರ ಆರೋಗ್ಯ ಸಮಸ್ಯೆ ಉಂಟಾಗಿ 2017ರಲ್ಲಿ ನಿಧನರಾದರು.

ಕಿತ್ತು ತಿನ್ನುವ ಬಡತನ, ತನ್ನ ಅಣ್ಣನ ಮನೆಯಲ್ಲಿ ವಾಸ. ಉದ್ಯೋಗ ಇಲ್ಲದೆ ಆರ್ಥಿಕ ಸಂಕಷ್ಟದಲ್ಲಿಯೇ ಯೋಧನ ಕುಟುಂಬ ನರಳುತ್ತಿದೆ.

ಯೋಧನ ಪತ್ನಿ ಎಂಬ ಹೆಮ್ಮೆ ಇಲ್ಲ

‘ನನ್ನ ಪತಿ 24 ವರ್ಷ ದೇಶ ಸೇವೆ ಮಾಡಿರುವ ಹೆಮ್ಮೆ ನನಗೆ ಇಲ್ಲ. ಕಾರ್ಗಿಲ್ ಯುದ್ಧದಲ್ಲಿ ಹೋರಾಡಿದ್ದಾರೆ. ಅವರ ಅಕಾಲಿಕ ಮರಣದಿಂದ ನಮ್ಮ ಕುಟುಂಬ ಬೀದಿಗೆ ಬಿದ್ದಿದೆ. ವಾಸ ಮಾಡಲು ಯೋಗ್ಯ ಮನೆ ಇಲ್ಲ. ಸರ್ಕಾರಿ ಸೌಲಭ್ಯ ಇಲ್ಲ. ನಿವೇಶನ, ಮನೆ ಕೊಡಿ ಎಂದು ಅಧಿಕಾರಿ, ಜನಪ್ರತಿನಿಧಿಗಳಿಗೆ ಅಂಗಲಾಚಿ ಬೇಡಿದರೂ ಗಮನ ಹರಿಸುತ್ತಿಲ್ಲ. ನಿವೇಶನ, ಮನೆ ಕೊಡಿ ಎಂದು ಅಂಗಲಾಚಿ ಬೇಡುವಂತೆ ಆಗಿದೆ’ ಎಂದು ನೋವಿನಿಂದ ನುಡಿದರು ಪತ್ನಿ ಪರ್ವೀನಾ.

ಕುಟುಂಬದ ಸ್ಥಿತಿ ಅತಂತ್ರ 

‘ದೇಶಸೇವೆಯಿಂದ ನಿವೃತ್ತಿ ಪಡೆದ ನಂತರ ಯೋಧರಿಗೆ, ಮೃತಯೋಧರಿಗೆ ಸರ್ಕಾರ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಬೇಕು. ಅದೆಷ್ಟು ಮಂದಿ ಬಡ ಕುಟುಂಬಗಳಿಗೆ ಇಂದಿಗೂ ಮನೆ ಲಭಿಸಿಲ್ಲ. ರಫೀಕ್‌ವುಲ್ಲಾ ಕುಟುಂಬ ಅತಂತ್ರ ಪರಿಸ್ಥಿತಿಯಲ್ಲಿ ಜೀವನ ಸಾಗಿಸುತ್ತಿದೆ. ಮಕ್ಕಳಿಗೆ ಉಚಿತ ಶಿಕ್ಷಣ, ಉದ್ಯೋಗ, ನಿವೇಶನ, ಮನೆ ವ್ಯವಸ್ಥೆ ಕಲ್ಪಿಸಬೇಕು’ ಎಂದು ಮಾಜಿ ಯೋಧ ಅಮರನಾಥಬಾಬು ಒತ್ತಾಯಿಸಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು