ಬುಧವಾರ, ಅಕ್ಟೋಬರ್ 28, 2020
18 °C

ಸರಿಯಾದ ಆಟೋ ನಿಲ್ದಾಣಗಳು ಇಲ್ಲದ ಚೇಳೂರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಚೇಳೂರು: ಸಾರಿಗೆ ಸಂಸ್ಥೆಯ ನಿರ್ಲಕ್ಷ್ಯವೋ ಅಥವಾ ಅಧಿಕಾರಿಗಳ ಬೇಜವಾಬ್ದಾರಿಯೋ ಒಟ್ಟಾರೆ ಚೇಳೂರು ಬಸ್‌ ನಿಲ್ದಾಣಗಳು ಆಟೊ ನಿಲ್ದಾಣಗಳೇನೋ ಎಂಬಂತೆ ಕಾಣುತ್ತಿವೆ.

ಬಸ್‌ ನಿಲ್ದಾಣಗಳಲ್ಲಿ ಆಟೊ ಸೇರಿದಂತೆ ಎಲ್ಲ ಖಾಸಗಿ ವಾಹನಗಳಿಗೆ ಪ್ರವೇಶ ನಿರ್ಬಂಧ ಇದ್ದರೂ, ಇಲ್ಲಿಯ ಬಸ್‌ ನಿಲ್ದಾಣಗಳಲ್ಲಿ ರಾಜಾರೋಷವಾಗಿ ಆಟೊಗಳು ಓಡಾಡುತ್ತವೆ.

ಅದರಲ್ಲೂ ಇಲ್ಲಿಯ ಪಟ್ಟಣದ ಬಸ್‌ ನಿಲ್ದಾಣ ದಲ್ಲಂತೂ ಆಟೋಗಳದ್ದೇ ದರ್ಬಾರ ನಡೆಯುತ್ತಿದೆ. ಇದರಿಂದಾಗಿ ಬಸ್‌ಗಳ ಓಡಾಟಕ್ಕೂ ತೀವ್ರ ತೊಂದರೆ ಉಂಟಾಗುತ್ತಿದೆ. ಅಲ್ಲದೇ, ಇದೇ ಕಾರಣಕ್ಕಾಗಿ ಬಸ್‌ ನಿಲ್ದಾಣದ ಆಗಮನ ಮತ್ತು ನಿರ್ಗಮನ ಸ್ಥಳದಲ್ಲಿಟ್ರಾಫಿಕ್‌ ಸಮಸ್ಯೆ ಸಹ ಉಂಟಾಗುತ್ತಿದೆ. ಬಾಗೇಪಲ್ಲಿ ರಸ್ತೆಯಲ್ಲಂತು ಬಸ್‌ಗಳ ಓಡಾಟಕ್ಕೆ ತೊಂದರೆ ಉಂಟಾದ ಸಂದರ್ಭದಲ್ಲಿಸ್ಟೇಷನ್‌ ರಸ್ತೆ, ಸೇರಿದಂತೆ ಸುತ್ತಲಿನ ಪ್ರದೇಶದಲ್ಲಿತೀವ್ರ ಟ್ರಾಫಿಕ್‌ ಸಮಸ್ಯೆ ಉಂಟಾಗುವುದು ಸಾಮಾನ್ಯವಾಗಿದೆ.

ಇನ್ನು ಇಲ್ಲಿಯ ಆಂದ್ರ ಬಸ್‌ ನಿಲ್ದಾಣದಲ್ಲಿಯೇ ಆಟೋ ನಿಲ್ದಾಣವಿದ್ದರೂ, ಕೆಲ ಆಟೊ ಚಾಲಕರು ಎಲ್ಲ ರಸ್ತೆ ಗಳಲ್ಲಿ ಬಸ್‌ಗಳ ನಿಲ್ದಾಣದಲ್ಲಿಆಟೊಗಳನ್ನು ನಿಲ್ಲಿಸುತ್ತಾರೆ. ಅಲ್ಲದೇ, ಅಲ್ಲಿರುವ ಸಿಬ್ಬಂದಿ ಮತ್ತು ಪೊಲೀಸರಿಗೂ ಕ್ಯಾರೆ ಎನ್ನದೇ ಪ್ರಯಾಣಿಕರನ್ನು ಸೆಳೆಯಲು ಅಲ್ಲಿಯೇ ಇನ್ನಿಲ್ಲದ ಪ್ರಯತ್ನ ಮಾಡುತ್ತಿರುವುದು ಕಂಡು ಬರುತ್ತದೆ.

ಬಸ್‌ ನಿಲ್ದಾಣದೊಳಗೆ ಆಟೋಗಳ ಪ್ರವೇಶವನ್ನು ತಡೆಯಲು ಅಲ್ಲಿನ ಸಿಬ್ಬಂದಿ ಪ್ರಯತ್ನಿಸಿದರೆ, ಕೆಲ ಆಟೊ ಚಾಲಕರು ಯಾಮಾರಿಸಿ ಆಟೋಗಳನ್ನು ನಿಲ್ಲಿಸುತ್ತಿರುತ್ತಾರೆ. ಹೀಗಾಗಿ ಸಿಬ್ಬಂದಿ ಮತ್ತು ಸಾರ್ವಜನಿಕರು ಆಟೊ ಚಾಲಕರ ಗೊಡವೆಗೆ ಹೋಗುವುದೇ ಇಲ್ಲ. ಇನ್ನು ನಿಲ್ದಾಣಗಳ ಬಳಿಯೇ ಪೊಲೀಸ್‌ ಸಿಬ್ಬಂದಿ ಇದ್ದರೂ, ಅದನ್ನು ತಡೆಯುವ ಪ್ರಯತ್ನ ಮಾಡದಿರುವುದು ಇದೀಗ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ.

ಸಾರ್ವಜನಿಕರಿಂದ ನಿಲ್ದಾಣದಲ್ಲಿಆಟೊ ಸೇರಿದಂತೆ ಖಾಸಗಿ ವಾಹನಗಳ ಪ್ರವೇಶಕ್ಕೆ ನಿರ್ಬಂಧ ಹೇರುವಂತೆ ನಿರಂತರವಾಗಿ ಅಧಿಕಾರಿಗಳ ಪತ್ರ, ಒತ್ತಡ ಬಂದೇ ಬರುತ್ತಿವೆ. ಹೆಚ್ಚು ಒತ್ತಡ ಬಂದ ಸಂದರ್ಭದಲ್ಲಿಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡುತ್ತಾರೆ. ಅಲ್ಲದೇ, ಪೊಲೀಸರಿಗೆ ದೂರು ಸಹ ನೀಡುತ್ತಾರೆ. ಆ ವೇಳೆ ಒಂದೆರಡು ದಿನಗಳ ಮಟ್ಟಿಗೆ ಇಬ್ಬರು ಪೊಲೀಸ್‌ ಸಿಬ್ಬಂದಿ ನಿಯೋಜಿಸಿ ಕಟ್ಟುನಿಟ್ಟಿನ ಕ್ರಮ ಜರುಗಿಸಲಾಗುತ್ತದೆ.

ಆದರೆ, ನಂತರದಲ್ಲಿಬಸ್‌ ನಿಲ್ದಾಣಗಳಲ್ಲಿಮತ್ತದೇ ಸ್ಥಿತಿ ನಿರ್ಮಾಣವಾಗುತ್ತದೆ. ಇದರಿಂದಾಗಿ ಸಾರಿಗೆ ಸಂಸ್ಥೆ ಸಿಬ್ಬಂದಿಯಿಂದ ಹಿಡಿದು ಪ್ರಯಾಣಿಕರು, ಪಾದಚಾರಿಗಳು ನಿರಂತರ ತೀವ್ರ ತೊಂದರೆ ಅನುಭವಿಸಬೇಕಿದೆ. ಹೀಗಾಗಿ ಚೇಳೂರಿನ ಆಟೋ ಗಳಿಗೆ ಒಂದು ಪ್ರತ್ಯೇಕ ನಿಲ್ದಾಣ ಬೇಕೆಂದು ಸಾರ್ವಜನಿಕ ಹಾಗೂ ಅಂಗಡಿ ವ್ಯಾಪಾರಿಗಳಾ ಹಂಬಲ. ಇದಕ್ಕೆ ಶಾಶ್ವತ ಪರಿಹಾರ ನೀಡಬೇಕೆಂಬುದು ಸಾರಿಗೆ ಸಂಸ್ಥೆ ಸಿಬ್ಬಂದಿ ಮತ್ತು ಸಾರ್ವಜನಿಕರ ಒತ್ತಾಯವಾಗಿದೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು