ಶುಕ್ರವಾರ, ಏಪ್ರಿಲ್ 3, 2020
19 °C
ನಗರದಲ್ಲಿ ಏಳು ವರ್ಷಗಳಾದರೂ ಪೂರ್ಣಗೊಳ್ಳದ ಯುಜಿಡಿ ಕಾಮಗಾರಿ, ತ್ಯಾಜ್ಯ ನೀರು ಸೃಷ್ಟಿಸುವ ಅವಾಂತರಗಳಿಂದ ನಾಗರಿಕರಿಗೆ ತಪ್ಪದ ಕಿರಿಕಿರಿ

ಕೋಟಿಗಟ್ಟಲೇ ಹರಿದರೂ, ಒಳಚರಂಡಿ ಹರಿಯಲಿಲ್ಲ!

ಪಿ.ಎಸ್.ರಾಜೇಶ್ Updated:

ಅಕ್ಷರ ಗಾತ್ರ : | |

Prajavani

ಬಾಗೇಪಲ್ಲಿ: ಪಟ್ಟಣ ವ್ಯಾಪ್ತಿಯ ಪ್ರದೇಶಕ್ಕೆ ಸಮಗ್ರ ಒಳಚರಂಡಿ (ಯುಜಿಡಿ) ವ್ಯವಸ್ಥೆಯನ್ನು ಕಲ್ಪಿಸುವ ಯೋಜನೆ ಇಂದು ಮುಗಿಬಹುದು, ನಾಳೆ ಮುಗಿಯಬಹುದು ಎಂದು ಜನರು ಏಳು ವರ್ಷಗಳಿಂದ ಚಾತಕ ಪಕ್ಷಿಯಂತೆ ಕಾಯುತ್ತಲೇ ಇದ್ದಾರೆ. ಪೂರ್ವತಯಾರಿ ಇಲ್ಲದೆ ಆರಂಭವಾದ ಕಾಮಗಾರಿ ಸ್ಪಷ್ಟ ಗೊತ್ತು ಗುರಿ ಇಲ್ಲದೆ ಸಾಗುತ್ತಿದೆ. ಆಮೆ ನಡಿಗೆಯಲ್ಲಿ ಸಾಗುತ್ತಿರುವ ಕಾಮಗಾರಿಯಿಂದಾಗಿ ಪಟ್ಟಣದ ಜನರು ನಿತ್ಯವೂ ಹೈರಾಣಾಗುತ್ತಿದ್ದಾರೆ.

2013 ರಲ್ಲಿ ₹17.73 ಕೋಟಿ ವೆಚ್ಚದಲ್ಲಿ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೈಗೆತ್ತಿಕೊಂಡ ಚಳಚರಂಡಿ ನಿರ್ಮಾಣ ಕಾಮಗಾರಿ ಈವರೆಗೆ ಪೂರ್ಣಗೊಂಡಿಲ್ಲ. ಇದರಿಂದ ಜನರು ಅಗೆದ ಹಾಕಿದ ರಸ್ತೆಗಳಲ್ಲಿ ಧೂಳು, ಎಲ್ಲೆಂದರಲ್ಲಿ ಹರಿಯುವ ತ್ಯಾಜ್ಯ ನೀರಿನ ನಡುವೆ ಮೂಗು ಮುಚ್ಚಿಕೊಂಡು ಸಂಚರಿಸಬೇಕಾದ ಸ್ಥಿತಿ ಬಂದಿದೆ. ಅಲ್ಲಲ್ಲಿ ಮಡುಗಟ್ಟಿ ನಿಲ್ಲುವ ತ್ಯಾಜ್ಯ ನೀರು ಸಾಂಕ್ರಾಮಿಕ ರೋಗಗಳ ಭೀತಿ ಹುಟ್ಟಿಸುತ್ತಲೇ ಬಂದಿದೆ.

ಪಟ್ಟಣದ ಪುರಸಭಾ ವ್ಯಾಪ್ತಿ 23 ವಾರ್ಡ್‌ಗಳಲ್ಲಿ ನ್ಯಾಷನಲ್ ಕಾಲೇಜಿನಿಂದ ಚಿತ್ರಾವತಿ ಮೇಲು ಸೇತುವೆವರೆಗೆ ಹಾಗೂ ಕೊತ್ತಪಲ್ಲಿಯಿಂದ ರಾಮಸ್ವಾಮಿಪಲ್ಲಿ ಗ್ರಾಮದವರಿಗೂ ವ್ಯಾಪಿಸಿದೆ. ಬಹುತೇಕವಾಗಿ ಪಟ್ಟಣದ ಹೊರವಲಯದ ನಿವೇಶನಗಳಲ್ಲಿ ಹೆಚ್ಚಾಗಿ ಮನೆಗಳು ನಿರ್ಮಿಸುತ್ತಿದ್ದಾರೆ. ಆದರೆ, ಅಪೂರ್ಣಗೊಂಡ ಯುಜಿಡಿ ಕಾಮಗಾರಿಯಿಂದಾಗಿ ಮೂಲಸೌಕರ್ಯದ ಕೊರತೆ ಉಲ್ಭಣಸಿದೆ.

ಪಟ್ಟಣದ 23 ವಾರ್ಡ್‌ಗಳ ವ್ಯಾಪ್ತಿಯಲ್ಲಿ ಒಳಚರಂಡಿ ನಿರ್ಮಿಸುವ ಕಾಮಗಾರಿ 2013 ರಿಂದ 2016ರ ವರೆಗೆ ನಡೆಯಿತು. ಕಾಮಗಾರಿಗಾಗಿ ರಸ್ತೆಗಳನ್ನು ನಡುಮಧ್ಯದಲ್ಲಿ ಸೀಳಿ, ಮಣ್ಣನ್ನು ತೆಗೆದು ಪೈಪುಗಳನ್ನು ಹೂಳಲಾಯಿತು. ಅಲ್ಲಲ್ಲಿ ಮ್ಯಾನ್‌ಹೋಲ್‌ ನಿರ್ಮಿಸಲಾಯಿತು. ಆದರೆ ಈವರೆಗೆ ಸಂಪೂರ್ಣ ಕಾಮಗಾರಿ ಮುಗಿಸಿ, ಜನರಿಗೆ ನೆಮ್ಮದಿ ಕಲ್ಪಿಸುವ ಕೆಲಸವಾಗಲಿಲ್ಲ ಎನ್ನುವುದು ಪ್ರಜ್ಞಾವಂತರ ಬೇಸರ.

ಒಳಚರಂಡಿಯಲ್ಲಿ ಹರಿಯುವ ತ್ಯಾಜ್ಯ ನೀರು ಸಂಗ್ರಹಿಸಿ ಶುದ್ಧಕರಿಸುವ ಘಟಕ (ಎಸ್‌ಟಿಪಿ) ಸ್ಥಾಪಿಸಲು ಪಟ್ಟಣದ ಕೊಡಿಕೊಂಡ ರಸ್ತೆಯಲ್ಲಿ ಮೂರು ಎಕರೆ ಎರಡು ಗುಂಟೆ ಸರ್ಕಾರಿ ಜಮೀನು ನೀಡಲಾಗಿದೆ. ಅದು ಸಾಲದ್ದಕ್ಕೆ ಪಕ್ಕದ ರೈತರ ಜಮೀನುಗಳ ಪೈಕಿ ಮೂರು ಎಕರೆ 32 ಗುಂಟೆ ಭೂಮಿ ಖರೀದಿಸಲಾಗಿದೆ. ಆದರೆ ಈವರೆಗೆ ಎಸ್‌ಟಿಪಿ ನಿರ್ಮಾಣ ಕಾರ್ಯ ಮುಗಿದಿಲ್ಲ. ಇದರಿಂದಾಗಿ ಇಡೀ ಯೋಜನೆಗೆ ಗ್ರಹಣ ಹಿಡಿದಂತಾಗಿದೆ.

ಈ ಬಗ್ಗೆ ಕಾಮಗಾರಿಯನ್ನು ಕೈಗೆತ್ತಿಕೊಂಡ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯವರನ್ನು ವಿಚಾರಿಸಿದರೆ ಜಮೀನು ಹಸ್ತಾಂತರಿಸುವಂತೆ ಪುರಸಭೆಗೆ ಪತ್ರ ಬರೆದಿರುವುದಾಗಿ ತಿಳಿಸುತ್ತಾರೆ. ಪುರಸಭೆ ಅಧಿಕಾರಿಗಳನ್ನು ಪ್ರಶ್ನಿಸಿದರೆ, ಎಸ್‌ಟಿಪಿ ನಿರ್ಮಾಣ ಉದ್ದೇಶಿತ ಜಾಗದ ಗಡಿ ಗುರುತಿಸಿಕೊಡುವಂತೆ ಭೂದಾಖಲೆ ವಿಭಾಗದ ಸಹಾಯಕ ನಿರ್ದೇಶಕರಿಗೆ ಪತ್ರ ಬರೆಯಲಾಗಿದೆ ಎಂದು ಉತ್ತರಿಸುತ್ತಾರೆ. ಇಷ್ಟರ ನಡುವೆಯೇ ನಗರದ ನಾಗರಿಕರು ನರಕ ಅನುಭವಿಸುವುದು ಮುಂದುವರಿದುಕೊಂಡು ಬಂದಿದೆ.

ಇಂದಿಗೂ ನಗರದ ಯಾವುದೇ ವಾರ್ಡ್‌ ಒಳ ಹೊಕ್ಕು ನೋಡಿದರೂ ಒಳಚರಂಡಿ ಕಾಮಗಾರಿ ಸೃಷ್ಟಿಸಿದ ತರಹೇವಾರಿ ಸಮಸ್ಯೆಗಳು ಕಣ್ಣಿಗೆ ರಾಚುತ್ತವೆ. ಅನೇಕ ಕಡೆಗಳಲ್ಲಿ ತೆರೆದ ಮ್ಯಾನ್‌ಹೋಲ್‌ಗಳು ಸ್ಥಳೀಯರಿಗೆ ಕಸ ಸುರಿಯುವ ತೊಟ್ಟಿಗಳಾಗಿ ಬದಲಾಗಿ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಕೆಲವೆಡೆ ಮಡುಗಟ್ಟಿ ನಿಲ್ಲುವ ಕೊಚ್ಚೆ ನೀರು ಅಸಹ್ಯಕರ ವಾತಾವರಣದ ಜತೆಗೆ ಅನೈರ್ಮಲ್ಯ ಉಂಟು ಮಾಡಿ ಜನರ ಆರೋಗ್ಯದ ಮೇಲೆ ಪರಿಣಾಮ ಬೀರುತ್ತಿದೆ.

ಪಟ್ಟಣದ 3ನೇ ವಾರ್ಡ್‌ನ ಪಾತಬಾಗೇಪಲ್ಲಿ ರಸ್ತೆ ಹಾಗೂ 5ನೇ ವಾರ್ಡ್, ವಾಲ್ಮೀಕಿ ನಗರ, ಅಂಬೇಡ್ಕರ್ ನಗರ, ಕ್ರೀಡಾಂಗಣ, ನ್ಯಾಷನಲ್ ಕಾಲೇಜಿನ ಪಕ್ಕದಲ್ಲಿ ರಸ್ತೆಗಳಲ್ಲಿ ಒಳಚರಂಡಿ ಮಾರ್ಗ ಸೃಷ್ಟಿಸಿದ ಸಮಸ್ಯೆಗಳನ್ನು, ಅನುಭವಿಸುತ್ತಿರುವ ಬಾಧೆಗಳನ್ನು ಜನರು ನಿಟ್ಟುಸಿರಿನಿಂದ ಹೇಳುತ್ತಾರೆ.

ಈ ಬಗ್ಗೆ ಪುರಸಭೆ ಮುಖ್ಯಾಧಿಕಾರಿ ಎಂ.ಪಂಕಜಾರೆಡ್ಡಿ ಅವರನ್ನು ವಿಚಾರಿಸಿದರೆ, ‘ಯುಜಿಡಿ ಕಾಮಗಾರಿ ಪೂರ್ಣಗೊಳ್ಳದ ಕಾರಣ ನಗರದ ಕೆಲವೆಡೆ ಸಮಸ್ಯೆಗಳು ಕಾಣಿಸಿಕೊಂಡಿದ್ದು ಗಮನಕ್ಕೆ ಬಂದಿದೆ. ಎಸ್‌ಟಿಪಿ ನಿರ್ಮಾಣಕ್ಕೆ ಜಾಗದ ಕೊರತೆ ಉಂಟಾದ ಕಾರಣ ಕಾಮಗಾರಿ ಸ್ವಲ್ಪ ವಿಳಂಬವಾಗಿದೆ. ಆದಷ್ಟು ಬೇಗ ಕಾಮಗಾರಿ ಮುಗಿಸಲು ಕ್ರಮಕೈಗೊಳ್ಳುತ್ತೇವೆ’ ಎಂದು ತಿಳಿಸಿದರು.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು