ಚೇಳೂರು: ತಾಲ್ಲೂಕಿನ ಚಾಕವೇಲು ಸಮೀಪದ ದಿಗವಪ್ಯಾಯಲಪಲ್ಲಿಯಲ್ಲಿ ಗ್ರಾಮದ ಗದ್ದೆಯಲ್ಲಿ ಟ್ರ್ಯಾಕ್ಟರ್ ಕೆಳಗೆ ಸಿಕ್ಕಿಕೊಂಡು ಮಂಗಳವಾರ ರೈತ ಮೃತಪಟ್ಟಿದ್ದಾರೆ.
ರೈತ ಶಂಕರರೆಡ್ಡಿ (48) ಮೃತಪಟ್ಟ ರೈತ.
ಭತ್ತ ಬೆಳೆಯುವ ಸಲುವಾಗಿ ಜಮೀನು ಸಮತಟ್ಟು ಮಾಡಿ ನೀರು ಹಾಕಿ ಟ್ರ್ಯಾಕ್ಟರ್‌ನಿಂದ ಉಳುಮೆ ಮಾಡುತ್ತಿದ್ದಾಗ ಕೆಸರಿನಲ್ಲಿ ಟ್ರ್ಯಾಕ್ಟರ್ ಸಿಕ್ಕಿ ಹಾಕಿಕೊಂಡಿದೆ. ಇದನ್ನು ಹೊರ ತೆಗೆಯುವಾಗ ಟ್ರ್ಯಾಕ್ಟರ್ ತಿರುವಿ ರೈತನ ಮೇಲೆ ಬಿದ್ದ ಪರಿಣಾಮ ರೈತ ಕೆಸರಿನಲ್ಲೇ ಹೂತು ಹೋಗಿದ್ದಾರೆ.
ಇದನ್ನು ನೋಡಿದ ಮಕ್ಕಳು ಕೂಗಿಕೊಂಡಾಗ ಅಕ್ಕಪಕ್ಕದ ರೈತರು ಓಡಿಬಂದು ಹೊರ ತೆಗೆಯಲು ಯಂತ್ರ ತರಿಸಿದ್ದಾರೆ. ಅಷ್ಟೊತ್ತಿಗಾಗಲೇ ರೈತ ಮೃತಪಟ್ಟಿದ್ದಾರೆ.
ಚೇಳೂರು ತಹಶೀಲ್ದಾರ್ ಎ.ವಿ.ಶ್ರೀನಿವಾಸುಲುನಾಯುಡು, ಪ್ರಭಾರಿ ಉಪ-ತಹಶೀಲ್ದಾರ್ ಎಂ.ಎನ್.ಈಶ್ವರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಚೇಳೂರು ಪೋಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಪರಿಹಾರ ನೀಡಲು ಒತ್ತಾಯ: ಜಮೀನು ಹದಮಾಡಿ ಕೆಸರಿನಲ್ಲಿ ಸಿಕ್ಕಿ ಹಾಕಿಕೊಂಡ ರೈತ ಅಕಾಲಿಕ ದುರ್ಮರಣವಾಗಿದ್ದು ಆ ಕುಟುಂಬಕ್ಕೆ ಸರ್ಕಾರ ಪರಿಹಾರ ನೀಡಬೇಕೆಂದು ಸ್ಥಳೀಯ ರೈತರು ಗ್ರಾಮಸ್ಥರು ಮನವಿ ಮಾಡಿದರು.